ಬೆಂಗಳೂರು[ಅ.30]: ಪಕ್ಷದಲ್ಲಿ ಮೂಡಿರುವ ಅಸಮಾಧಾನ ಹೋಗಲಾಡಿಸಲು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆಯೋಜಿಸಿರುವ ಮಲೇಷ್ಯಾ ಪ್ರವಾಸಕ್ಕೆ ತೆರಳದಿರಲು ಜೆಡಿಎಸ್‌ನ ವಿಧಾನಪರಿಷತ್‌ ಸದಸ್ಯರು ಒಕ್ಕೊರಲ ತೀರ್ಮಾನಕ್ಕೆ ಬಂದಿದ್ದಾರೆ. ನೆರೆ ನೆಪವೊಡ್ಡಿ ವಿದೇಶ ಪ್ರವಾಸದಿಂದ ಹಿಂದೆ ಸರಿದಿರುವುದು ಕುಮಾರಸ್ವಾಮಿ ಅವರ ಪ್ರಯತ್ನಕ್ಕೆ ಹಿನ್ನಡೆಯಾದಂತಾಗಿದೆ.

ಬುಧವಾರ ವಿಧಾನಸೌಧದಲ್ಲಿ ಉಪಸಭಾಪತಿ ಧರ್ಮೇಗೌಡ ಕೊಠಡಿಯಲ್ಲಿ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಮನೆ ಸದಸ್ಯರಾದ ಮರಿತಿಬ್ಬೇಗೌಡ, ಟಿ.ಎ.ಶರವಣ, ಚೌಡರೆಡ್ಡಿ ತೂಪಲ್ಲಿ, ತಿಪ್ಪೇಸ್ವಾಮಿ, ಅಪ್ಪಾಜಿ ಗೌಡ, ಕೆ.ಟಿ. ಶ್ರೀಕಂಠೇಗೌಡ, ಸಿ.ಆರ್‌.ಮನೋಹರ್‌ ಭಾಗವಹಿಸಿದ್ದರು. ಪುಟ್ಟಣ್ಣ, ಸಂದೇಶ್‌ ನಾಗರಾಜ್‌, ಕಾಂತರಾಜು, ಭೋಜೇಗೌಡ, ರಮೇಶ್‌ಗೌಡ, ಧರ್ಮೇಗೌಡ, ಬಿ.ಎಂ.ಫಾರೂಕ್‌, ಕೆ.ವಿ.ನಾರಾಯಣ ಸ್ವಾಮಿ ಸಭೆಗೆ ಗೈರಾಗಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ, ಪಕ್ಷದ ನಾಯಕರಿಗೆ ಉತ್ತಮ ಸ್ಥಾನ-ಮಾನ ನೀಡದಿರುವುದು ಸೇರಿದಂತೆ ಇತರೆ ವಿಚಾರಗಳಿಗೆ ಜೆಡಿಎಸ್‌ ವರಿಷ್ಠರ ಮೇಲೆ ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ಸಭೆ ನಡೆಸಲಾಯಿತು. ಕಳೆದ ವಾರ ಅತೃಪ್ತರ ಸಭೆ ನಿಗದಿಯಾಗಿತ್ತು. ಆದರೆ, ಕಾರಣಾಂತರಗಳಿಂದಾಗಿ ಸಭೆಯನ್ನು ಮುಂದೂಡಲಾಗಿತ್ತು. ಹೀಗಾಗಿ ಬುಧವಾರ ಅತೃಪ್ತರೆಲ್ಲರೂ ಸೇರಿ ಸುಮಾರು ಮೂರು ತಾಸುಗಳ ಕಾಲ ಸಭೆ ನಡೆಸಿ ಮಲೇಷ್ಯಾ ಪ್ರವಾಸಕ್ಕೆ ತೆರಳದಿರಲು ನಿರ್ಧಾರ ಕೈಗೊಂಡರು.

ಸಭೆಯಲ್ಲಿ ನಡೆದ ವಿಚಾರಗಳನ್ನು ತಿಪ್ಪೇಸ್ವಾಮಿ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಗೆ ತಲುಪಿಸಲಿದ್ದಾರೆ. ತರುವಾಯ ದೇವೇಗೌಡ ಅವರು ಅತೃಪ್ತರ ಸಭೆ ಕರೆದರೆ ಆ ವೇದಿಕೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸುವ ಬಗ್ಗೆ ಚರ್ಚಿಸಲಾಗಿದೆ. ನಂತರದ ತೀರ್ಮಾನ ದೇವೇಗೌಡ ಅವರಿಗೆ ಬಿಡಲಾಗುವುದು. ಜೆಡಿಎಸ್‌ನಲ್ಲಿ ಅಸಮಾಧಾನಗೊಂಡಿದ್ದರೂ ಪಕ್ಷವನ್ನು ಬಿಡುವ ವಿಚಾರದ ಬಗ್ಗೆ ಮಾತುಕತೆ ನಡೆದಿಲ್ಲ. ಅಸಮಾಧಾನವನ್ನು ದೇವೇಗೌಡರು ಸರಿಪಡಿಸುವ ವಿಶ್ವಾಸ ಅತೃಪ್ತರಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷದಲ್ಲಿ ಅಸಮಾಧಾನ ಮೂಡಿರುವುದರಿಂದ ಅದನ್ನು ಶಮನ ಮಾಡಲು ಕುಮಾರಸ್ವಾಮಿ ನ.3 ರಿಂದ ಮಲೇಷ್ಯಾ ಪ್ರವಾಸ ಕೈಗೊಳ್ಳುವ ಉದ್ದೇಶವನ್ನು ಹೊಂದಿದ್ದರು. ಪಕ್ಷದ ಶಾಸಕರೆಲ್ಲರೂ ಒಟ್ಟಾಗಿ ಮಲೇಷ್ಯಾ ಪ್ರವಾಸದ ಪ್ರಸ್ತಾಪವನ್ನು ಕುಮಾರಸ್ವಾಮಿ ಮುಂದಿಟ್ಟಿದ್ದರು. ಆದರೆ, ಅದನ್ನು ಪರಿಷತ್‌ ಸದಸ್ಯರು ತಳ್ಳಿ ಹಾಕಿದ್ದಾರೆ. ಇದು ಪಕ್ಷದಲ್ಲಿ ಮತ್ತಷ್ಟು ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ, ಜೆಡಿಎಸ್‌ನಲ್ಲಿ ಎಂಎಲ್‌ಸಿಗಳನ್ನು ಕಡೆಗಣಿಸಿರುವ ಬಗ್ಗೆ ಅಸಮಾಧಾನ ಇದೆಯೇ ಹೊರತು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಬಗ್ಗೆಯಾಗಲಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಬಗ್ಗೆಯಾಗಲಿ ನಮಗೆ ವೈಯಕ್ತಿಕ ಬೇಸರ ಇಲ್ಲ. ನಮ್ಮ ಅಸಮಾಧಾನವನ್ನು ಪಕ್ಷದ ವೇದಿಕೆಯಲ್ಲಿ ಹೇಳಿಕೊಂಡಿದ್ದೇವೆ. ಒಗ್ಗಟ್ಟಾಗಿ ಮಲೇಷ್ಯಾಕ್ಕೆ ಹೋಗುವ ಪ್ರಸ್ತಾಪ ಬಂದಿದ್ದು, ಪಾಸ್‌ಪೋರ್ಟ್‌ ಕೇಳಿದ್ದರು. ಆದರೆ, ರಾಜ್ಯದಲ್ಲಿ ನೆರೆ ಪರಿಸ್ಥಿತಿ ಇರುವ ಕಾರಣ ಮಲೇಷ್ಯಾ ಪ್ರವಾಸ ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.