ಎಚ್‌ಎಎಲ್ ನಿರ್ಮಿತ ನಾಗರಿಕ ಬಳಕೆಯ ಧ್ರುವ ಎನ್‌ಜಿ ಹೆಲಿಕಾಪ್ಟರ್ ಯಶಸ್ವಿ ಉದ್ಘಾಟನಾ ಹಾರಾಟ ಪೂರ್ಣಗೊಳಿಸಿದೆ. ಇದೇ ವೇಳೆ, ದೇಶೀಯವಾಗಿ ತಯಾರಾದ 'ಶಕ್ತಿ ಸಿವಿಲ್ ಎಂಜಿನ್'ಗೆ ಡಿಜಿಸಿಎ ಪ್ರಮಾಣಪತ್ರ ದೊರೆತಿದ್ದು, ಇದು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಎಚ್‌ಎಎಲ್‌ನ ಮಹತ್ವದ ಹೆಜ್ಜೆಯಾಗಿದೆ.
ಬೆಂಗಳೂರು: ಎಚ್‌ಎಎಲ್ ನಿರ್ಮಿತ ನಾಗರಿಕ ಬಳಕೆಯ ಧ್ರುವ ಹೆಲಿಕಾಪ್ಟರ್ ನ್ಯೂ ಜನರೇಷನ್ (ಎನ್‌ಜಿ) ಯಶಸ್ವಿಯಾಗಿ ಉದ್ಘಾಟನಾ ಹಾರಾಟ ಪೂರ್ಣಗೊಳಿಸಿದೆ. ಮಂಗಳವಾರ ನಗರದ ಎಚ್‌ಎಎಲ್‌ನಲ್ಲಿ ಉದ್ಘಾಟನಾ ಹಾರಾಟಕ್ಕೆ ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹಸಿರು ನಿಶಾನೆ ತೋರಿದರು.
ವಿಐಪಿಗಳ ಹಾರಾಟಕ್ಕೆ ಪ್ರೀಮಿಯಂ ವರ್ಗದಲ್ಲಿ 4 ರಿಂದ 6 ಸೀಟು ಹಾಗೂ ಸಾಮಾನ್ಯ ದರ್ಜೆಯ ಗರಿಷ್ಠ 14 ಸೀಟುಗಳನ್ನು ಹೆಲಿಕಾಪ್ಟರ್ ಹೊಂದಿರಲಿದೆ. ಮುಂದಿನ ಮೂರ್ನಾಲ್ಕು ತಿಂಗಳುಗಳಲ್ಲಿ ಧ್ರುವ ಎನ್‌ಜಿ ಹೆಲಿಕಾಪ್ಟರ್‌ಗೆ ಡಿಜಿಸಿಎದಿಂದ ಪೂರ್ಣ ಪ್ರಮಾಣದ ಪ್ರಮಾಣಪತ್ರ ಸಿಗುವ ನಿರೀಕ್ಷೆ ಇದೆ. ಈ ಮೂಲಕ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಎಚ್‌ಎಎಲ್ ದೃಢವಾದ ಹೆಜ್ಜೆ ಇರಿಸಿದಂತಾಗಿದೆ ಎಂದು ಎಚ್‌ಎಎಲ್ ತಿಳಿಸಿದೆ.
ಶಕ್ತಿ ಎಂಜಿನ್‌ಗೆ ಪ್ರಮಾಣಪತ್ರ
ಇದೇ ವೇಳೆ ದೇಶಿಯವಾಗಿ ಎಚ್‌ಎಎಲ್‌ನಿಂದ ಉತ್ಪಾದಿಸಲಾಗುತ್ತಿರುವ ‘ಶಕ್ತಿ ಸಿವಿಲ್ ಎಂಜಿನ್’ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಪ್ರಮಾಣಪತ್ರ ವಿತರಿಸಲಾಯಿತು.
ದೇಶದಲ್ಲಿ ಉತ್ಪಾದನೆಯಾಗಿರುವ ಏರೋ ಎಂಜಿನ್‌ಗೆ ಇದೇ ಮೊದಲ ಬಾರಿಗೆ ಡಿಜಿಸಿಎದಿಂದ ಪ್ರಮಾಣಪತ್ರ ದೊರಕಿದೆ. ಈ ಮೂಲಕ ಹೆಲಿಕಾಪ್ಟರ್ ಎಂಜಿನ್ ನಿರ್ಮಾಣದಲ್ಲಿ ಪ್ರಮುಖವಾಗಿರುವ ತಂತ್ರಜ್ಞಾನ ಅಭಿವೃದ್ಧಿ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಭಾರತದ ಪಾಲಿಗಿದು ಮಹತ್ವದ ಹೆಜ್ಜೆಯಾಗಿದೆ. ಈ ಮಹತ್ವದ ಸಾಧನೆ ಸ್ಯಾಫ್ರನ್ ಎಂಜಿನ್ ಮತ್ತು ಡಿಜಿಸಿಎ ಜೊತೆಗಿನ ಸಹಕಾರದಿಂದ ಸಾಧ್ಯವಾಗಿದೆ ಎಂದು ಎಚ್‌ಎಎಲ್ ತಿಳಿಸಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ರಾಮ ಮೋಹನ ನಾಯ್ಡು, ಡೆಮೋ ಹಾರಾಟ ನಡೆಸಿದ ಒಂದೇ ವರ್ಷದಲ್ಲಿ ಉದ್ಘಾಟನಾ ಹಾರಾಟ ಯಶಸ್ವಿಯಾಗಿ ಎಚ್‌ಎಎಲ್ ಪೂರ್ಣಗೊಳಿಸಿರುವುದು ಭಾರತೀಯ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಮೈಲುಗಲ್ಲು ಎಂದರು.
ಎಚ್‌ಎಎಲ್ ಸಿಎಂಡಿ ಡಾ.ಡಿ.ಕೆ.ಸುನೀಲ್ ಮಾತನಾಡಿ, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಎಚ್‌ಎಎಲ್ ಹೆಜ್ಜೆ ವಿಸ್ತರಿಸುವುದಕ್ಕೆ ಧ್ರುವ ಎನ್‌ಜಿ ಹೆಲಿಕಾಪ್ಟರ್ ಅಡಿಗಲ್ಲು ಹಾಕಿದೆ. ಪರೀಕ್ಷಾರ್ಥ ಸರಣಿಯ ಧ್ರುವ ಎಂ.ಕೆ.1 ನಾಗರಿಕ ಹೆಲಿಕಾಪ್ಟರ್ 24,000 ತಾಸು ಹಾರಾಟ ನಡೆಸಿದೆ. ಜಾಗತಿಕ ನಾಗರಿಕ ವಿಮಾನಯಾನ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ಮಿಸಲಾಗಿದೆ. ಸುರಕ್ಷತೆ, ಉತ್ತಮ ಗುಣಮಟ್ಟ, ಕಡಿಮೆ ನಿರ್ವಹಣಾ ವೆಚ್ಚ ಇರುವುದರಿಂದ ಆಮದು ಹೆಲಿಕಾಪ್ಟರ್‌ಗಳಿಗೆ ಪರ್ಯಾಯವಾಗಲಿದೆ. ಜಾಗತಿಕ ಪ್ರಮಾಣಪತ್ರಕ್ಕಾಗಿ ಪ್ರಯತ್ನಗಳು ನಡೆದಿದೆ ಎಂದರು.
ಧ್ರುವ ಎನ್‌ಜಿ ವಿಶೇಷ
ಭಾರತದ ಭೂಪ್ರದೇಶಕ್ಕೆ ಸೂಕ್ತವಾಗಿರುವ 5.5 ಟನ್ ಗಾತ್ರದ ಈ ಹೆಲಿಕಾಪ್ಟರ್ ಎರಡು ಲಘು ಎಂಜಿನ್ ಹೊಂದಿದೆ. ವಿಶ್ವದರ್ಜೆಯ ‘ಗ್ಲಾಸ್ ಕಾಕ್‌ಪಿಟ್’ ಮತ್ತು ಆಧುನಿಕ ಏವಿಯಾನಿಕ್ಸ್ ವ್ಯವಸ್ಥೆ ಸೇರಿ ಜಾಗತಿಕ ಗುಣಮಟ್ಟದ ತಂತ್ರಜ್ಞಾನಗಳನ್ನು ಹೊಂದಿದೆ. ವಿಐಪಿ ಪ್ರಯಾಣ ಮತ್ತು ವೈದ್ಯಕೀಯ ತುರ್ತು ಸಾರಿಗೆಗೆ ಅತ್ಯಂತ ಸೂಕ್ತವಾಗಿದೆ.


