ರಾಜ್ಯದಲ್ಲಿ ನಂದಿನಿ ಹಾಲು, ಮೊಸರು ಮತ್ತು ಬಸ್ ದರ ಏರಿಕೆಯನ್ನು ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. 25 ಲಕ್ಷ ಹೈನುಗಾರರ ಹಿತರಕ್ಷಣೆ ಹಾಗೂ ಸಾರಿಗೆ ಸಂಸ್ಥೆಗಳ ಉಳಿವಿಗಾಗಿ ಈ ಕಠಿಣ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ನ.2): ರಾಜ್ಯದಲ್ಲಿ ನಂದಿನಿ ಹಾಲು, ಮೊಸರು ಹಾಗೂ ಸಾರಿಗೆ ಬಸ್ ದರ ಏರಿಕೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ತೀವ್ರ ಆಕ್ರೋಶದ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಅವರು ಬಸ್ಪಂದಿಸಿದ್ದಾರೆ. ಸಾರ್ವಜನಿಕರಲ್ಲಿ ಆಕ್ರೋಶ ಇರುವುದು ನಿಜವಾದರೂ, ರಾಜ್ಯದ 25 ಲಕ್ಷ ಹೈನುಗಾರ ರೈತರ ಹಿತರಕ್ಷಣೆ ಹಾಗೂ ಸಾರಿಗೆ ಸಂಸ್ಥೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಹಾಲು, ಮೊಸರು ಹಾಗೂ ಬಸ್ ದರ ಏರಿಕೆ ಕುರಿತಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಮೊಸರಿನ ಬೆಲೆಯನ್ನು ಒಂದೆರಡು ರೂಪಾಯಿ ಕಡಿಮೆ ಮಾಡುವಂತೆ ತಾವು ಸೂಚಿಸಿರುವುದಾಗಿ ತಿಳಿಸಿದರು. ಆದರೆ, ರಾಜ್ಯದಲ್ಲಿ ಒಂದು ಲೀಟರ್ ಮೊಸರಿನ ಬೆಲೆ ಬರೋಬ್ಬರಿ 14 ರೂಪಾಯಿ ಏರಿಕೆಯಾಗಿದ್ದು, ಒಂದೆರಡು ರೂಪಾಯಿ ಇಳಿಕೆಯಿಂದ ಜನಸಾಮಾನ್ಯರ ಹೊರೆ ಒಂಚೂರು ಕಡಿಮೆ ಆಗೋದಿಲ್ಲ
ಮೊಸರಿನ ಬೆಲೆ ಒಂದೆರಡು ರೂಪಾಯಿ ಮಾಡಲು ಸೂಚನೆ
ಹಾಲು ಹಾಗೂ ಮೊಸರಿನ ಬೆಲೆ ಏರಿಕೆಯಾಗಿದ್ದಕ್ಕೆ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶದ ಕುರಿತು ಮಾತನಾಡಿದ ಸಿಎಂ, ಖಂಡಿತವಾಗಿ, ಜನರಿಗೆ ಆಕ್ರೋಶ ಇದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ 8 ರೂಪಾಯಿ ಏರಿಕೆಯಾಗಿದೆ ಅನ್ನೋದನ್ನೇ ಹೇಳೋದು ಸರಿಯಲ್ಲ. ರೈತರಿಗೆ 7 ರೂಪಾಯಿ ಕೊಟ್ಟಿದ್ದೇವೆ, ಅದು ಬಹಳ ದೊಡ್ಡ ಮೊತ್ತವೇನೂ ಅಲ್ಲ. ಇದರ ಜೊತೆಗೆ ಮೊಸರಿನ ಬೆಲೆಯನ್ನು ಒಂದೆರಡು ರೂಪಾಯಿ ಕಡಿಮೆ ಮಾಡೋದಕ್ಕೆ ನಾನು ಸಂಬಂಧಪಟ್ಟವರಿಗೆ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು. ಆ ಮೂಲಕ ಜನರ ಆಕ್ರೋಶ ಸರ್ಕಾರಕ್ಕೆ ಒಂಚೂರು ತಟ್ಟಿಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗಿದೆ.
ಹಾಲು ಖರೀದಿ ದರ ಪರಿಷ್ಕರಣೆಯಾದ ನಂತರ ರಾಜ್ಯದ ಹಾಲಿನ ಪೂರೈಕೆಯಲ್ಲಿ ಮಹತ್ವದ ಬದಲಾವಣೆಯಾಗಿದೆ ಎಂದ ಸಿಎಂ, ಈ ಹಿಂದೆ ನಂದಿನಿ ಹಾಲು ಹೆಚ್ಚಿನ ಪ್ರಮಾಣದಲ್ಲಿ ಬೇರೆ ರಾಜ್ಯಕ್ಕೆ ಹೋಗುತ್ತಿತ್ತು. ಆದರೆ ಬೆಲೆ ಪರಿಷ್ಕರಣೆ ಆದ್ಮೇಲೆ ಬರೋಬ್ಬರಿ 10 ಲಕ್ಷದಷ್ಟು ಲೀಟರ್ ಹಾಲು ವಾಪಸ್ ಕರ್ನಾಟಕಕ್ಕೆ ಬರ್ತಿದೆ. ಇದು ನಿನ್ನೆ ಶುರುವಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ ಎಂದರು.
ಬೆಲೆ ಏರಿಕೆಯ ಹಿಂದಿರುವ ರೈತರ ಹಿತಾಸಕ್ತಿಯನ್ನು ಎತ್ತಿಹಿಡಿದ ಅವರು, ಈ ತೀರ್ಮಾನದಿಂದ ಸುಮಾರು 25 ಲಕ್ಷ ರೈತರಿಗೆ ಅನುಕೂಲ ಆಗುತ್ತದೆ. ಇತ್ತೀಚೆಗೆ ನೀರಿನ ಬಾಟಲ್ ಬೆಲೆ ಹೆಚ್ಚಾದಾಗ ಒಬ್ಬರೂ ಮಾತನಾಡಲಿಲ್ಲ, ಏಕೆಂದರೆ ಆ ಹಣ ಸೆಂಟ್ರಲ್ ಗವರ್ನಮೆಂಟ್ ಗೆ ಹೋಗುತ್ತದೆ ಅಲ್ವೇ? ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕೂಡ ಹೆಚ್ಚಾಗಿವೆ. ನಾವು ರೈತರ ಅನುಕೂಲಕ್ಕಾಗಿ ಈ ತೀರ್ಮಾನ ಮಾಡಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸ್ಗಳಿಗೆ ಡೀಸೆಲ್ ಕಾಸು ಕೊಡೋಕೆ ಹಣವಿರಲಿಲ್ಲ: ಬಸ್ ದರ ಏರಿಕೆ ಸಮರ್ಥನೆ
ಇದೇ ವೇಳೆ ಬಸ್ ದರ ಹೆಚ್ಚಳದ ನಿರ್ಧಾರವನ್ನು ಸ್ಪಷ್ಟವಾಗಿ ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್, "ಬಸ್ಗಳಿಗೆ ಡೀಸೆಲ್ ಕಾಸು ಕೊಡೋಕೆ ನಮಗೆ ಹಣ ಇರಲಿಲ್ಲ. ನಾವು ಫೈನಾನ್ಸ್ಗೆ ಸ್ವಲ್ಪ ಹಣ ಕೊಟ್ಟಿದ್ವು, ಸ್ಪೆಷಲ್ ಗ್ರ್ಯಾಂಟ್ಸ್ ಕೂಡ ಕೊಟ್ಟಿದ್ವು. ಆದರೂ ಬೇರೆ ಕಡೆ ನೋಡಿದರೆ ನಮ್ಮಲ್ಲೇ ಬಸ್ ದರ ಕಡಿಮೆ ಇದೆ. ಸಾರಿಗೆ ಸಂಸ್ಥೆಗಳ ಬಸ್ಗಳನ್ನು ಕೂಡ ಓಡಿಸಬೇಕಲ್ವೇ? ಅದಕ್ಕೆ ಅವರಿಗೆ ದರ ಹೈಕ್ ಮಾಡೋಕೆ ಬಿಟ್ಟಿದ್ದೇವೆ" ಎಂದು ಸಾರಿಗೆ ವ್ಯವಸ್ಥೆಯನ್ನು ಸರಿದೂಗಿಸಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ವಿವರಿಸಿದರು.






