Asianet Suvarna News Asianet Suvarna News

ಕೇಂದ್ರದಿಂದ ತಾರತಮ್ಯ: ತಮಿಳ್ನಾಡಲ್ಲಿ ಮೀಸಲು, ಕನ್ನಡಿಗರಿಗೆ ಯಾಕಿಲ್ಲ?

ನ್ಯಾಷನಲ್‌ ಲಾ ಸ್ಕೂಲ್‌ನಲ್ಲಿ ಕೇಂದ್ರದಿಂದ ತಾರತಮ್ಯ| ತಮಿಳರಿಗೆ ಶೇ.69 ಸೀಟು, ಕರ್ನಾಟಕದಲ್ಲಿ ಕನ್ನಡಿಗರಿಗೆ ಶೇ.0!| ಕನ್ನಡಿಗರಿಗೆ ಮಾತ್ರ  ಮೀಸಲು ಕೊಡಲು ಕೇಂದ್ರ ಒಪ್ಪುತ್ತಿಲ್ಲ| ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಅಂತಹ ಮೀಸಲಾತಿ ದೊರೆಕಿಸಿಕೊಡುವ ಇಚ್ಛಾಶಕ್ತಿ ನಮ್ಮ ಸರ್ಕಾರಕ್ಕೆ, ನಮ್ಮ ರಾಜಕಾರಣಿಗಳಿಗೂ ಇಲ್ಲ|

Discrimination From Central Government to Karnataka
Author
Bengaluru, First Published Nov 4, 2019, 7:27 AM IST

ಲಿಂಗರಾಜು ಕೋರಾ

ಬೆಂಗಳೂರು[ನ.4]: ಇದು ಉನ್ನತ ಶಿಕ್ಷಣದ ಐಕಾನ್‌ ಎನಿಸುವಂತಹ ಸಂಸ್ಥೆ. ಈ ಸಂಸ್ಥೆಯ ಸ್ಥಾಪನೆಗೆ ಕನ್ನಡದ ನೆಲ ಬೇಕು, ಜಲ ಬೇಕು. ಕನ್ನಡಿಗರ ತೆರಿಗೆ ಹಣವೂ ಬೇಕು. ಇಷ್ಟೆಲ್ಲ ಅನುಕೂಲತೆಗಳನ್ನು ಕನ್ನಡಿಗರಿಂದ ಪಡೆದಾಗ ನಮ್ಮ ಮಕ್ಕಳಿಗೆ ಕಲಿಯಲು ದೇಶದ ಇತರ ರಾಜ್ಯಗಳಲ್ಲಿ ನೀಡುತ್ತಿರುವಂತೆ ಮೀಸಲಾತಿ ಕೊಡಿ ಎಂದರೆ ಕೇಂದ್ರ ಸರ್ಕಾರ ಒಪ್ಪುತ್ತಲೇ ಇಲ್ಲ!

ಹೌದು, ಕರ್ನಾಟಕದಲ್ಲಿ ರಾಷ್ಟ್ರೀಯ ಲಾ ಸ್ಕೂಲ್‌ನಂತಹ ಕೇಂದ್ರೀಯ ಶಿಕ್ಷಣ ಸಂಸ್ಥೆಗಳು ಕನ್ನಡಿಗರ ನೆಲ, ಜಲ, ತೆರಿಗೆ ಹಣ ಎಲ್ಲವನ್ನೂ ಬಳಸಿಕೊಂಡು ನಿರ್ಮಾಣವಾಗಿವೆ. ಇದೇ ರೀತಿ ತಮಿಳುನಾಡಿನಲ್ಲಿ ಸ್ಥಾಪನೆಯಾಗಿರುವ ಕೇಂದ್ರೀಯ ಶಿಕ್ಷಣ ಸಂಸ್ಥೆಗಳು ತಮಿಳು ಮಕ್ಕಳಿಗೆ ಮೀಸಲಾತಿ ನೀಡುತ್ತಿವೆ. ಆದರೆ, ಕನ್ನಡಿಗರಿಗೆ ಮಾತ್ರ ಇಂತಹ ಮೀಸಲು ಕೊಡಲು ಕೇಂದ್ರ ಒಪ್ಪುತ್ತಿಲ್ಲ. ಜತೆಗೆ, ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಅಂತಹ ಮೀಸಲಾತಿ ದೊರೆಕಿಸಿಕೊಡುವ ಇಚ್ಛಾಶಕ್ತಿ ನಮ್ಮ ಸರ್ಕಾರಕ್ಕೆ, ನಮ್ಮ ರಾಜಕಾರಣಿಗಳಿಗೂ ಇಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಷ್ಟೇ ಅಲ್ಲ, ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಕೆಲ ವರ್ಷಗಳ ಹಿಂದೆ ಕೇಂದ್ರೀಯ ಪಠ್ಯಕ್ರಮ ಆಧಾರಿತ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್‌) ಜಾರಿ ಮಾಡಲಾಗಿದೆ. ಈಗ ಇಂಜಿನಿಯರಿಂಗ್‌ ಕೋರ್ಸುಗಳ ಪ್ರವೇಶಕ್ಕೂ ನೀಟ್‌ ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ರಾಜ್ಯದ ವಿದ್ಯಾರ್ಥಿಗಳು ಪಿಯುಸಿವರೆಗೆ ರಾಜ್ಯ ಪಠ್ಯಕ್ರಮದಲ್ಲೇ ವ್ಯಾಸಂಗ ಮಾಡಿರುತ್ತಾರೆ. ಇವರು ಕೇಂದ್ರೀಯ ಪಠ್ಯಕ್ರಮದ ಆಧಾರದಲ್ಲಿ ನಡೆಯುವ ನೀಟ್‌ ಪರೀಕ್ಷೆ ಬರೆಯಬೇಕಾಗಿ ಬಂದಿರುವುದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ರಾಜ್ಯಪಾಲರೇ ಅಡ್ಡಿ:

ದೇಶದಲ್ಲೇ ನಂ.1 ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯನ್‌ ಯೂನಿವರ್ಸಿಟಿಯಲ್ಲಿ ಇದುವರೆಗೂ ಸ್ಥಳೀಯರಿಗೆ ಅಂದರೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲು ನೀಡುತ್ತಿಲ್ಲ. ಬೆಂಗಳೂರು ವಿವಿ ಆವರಣದಲ್ಲಿ ರಾಜ್ಯ ಸರ್ಕಾರ ನೀಡಿದ ಹತ್ತಾರು ಎಕರೆ ಜಾಗದಲ್ಲಿ ನ್ಯಾಷನಲ್‌ ಲಾ ಸ್ಕೂಲ್‌ ನಿರ್ಮಾಣವಾಗಿದೆ. ದೇಶದಲ್ಲಿರುವ 22 ಲಾ ಸ್ಕೂಲ್‌ಗಳಲ್ಲಿ ಕೆಲ ರಾಜ್ಯಗಳು ಇಚ್ಛಾಶಕ್ತಿ ವಹಿಸಿ ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸಿಕೊಟ್ಟಿವೆ. ನೆರೆಯ ತಮಿಳುನಾಡು ಸರ್ಕಾರ ತನ್ನ ರಾಜ್ಯದ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಶೇ.69ರಷ್ಟು ಸೀಟುಗಳ ಮೀಸಲಾತಿಯನ್ನು ತಮಿಳುನಾಡು ವಿದ್ಯಾರ್ಥಿಗಳಿಗೆ ಒದಗಿಸಿದೆ. ಅಷ್ಟೇ ಅಲ್ಲ, ಅಲ್ಲಿನ ಬೋಧಕ ಹುದ್ದೆಗಳಿಲ್ಲೂ ಶೇ.69ರಷ್ಟು ಸ್ಥಳೀಯರಿಗೆ ಮೀಸಲಾತಿ ಇದೆ. ಆದರೆ, ರಾಜ್ಯದ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಕನ್ನಡಿಗ ವಿದ್ಯಾರ್ಥಿಗಳಿಗೆ ಮಿಸಲಾತಿ ಜಾರಿಯಾಗಿಲ್ಲ. ಇದರಿಂದ ಅಲ್ಲಿ ಪ್ರವೇಶ ಪಡೆಯುತ್ತಿರುವ ಬಹುತೇಕ ವಿದ್ಯಾರ್ಥಿಗಳು ಹೊರ ರಾಜ್ಯದವರಾಗಿದ್ದಾರೆ. ರಾಜ್ಯ ಸರ್ಕಾರ ಶೇ.50 ರಷ್ಟುಮೀಸಲಾತಿ ಜಾರಿಗೆ ನಿಯಮಾವಳಿ ರೂಪಿಸಿ ಅದನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಿರುವ ಕಡತಕ್ಕೆ ತಿಂಗಳುಗಳು ಉರುಳುತ್ತಿದ್ದರೂ ರಾಜಭವನದಿಂದ ಕಡತ ಹೊರಬರುತ್ತಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

ನೀಟ್‌ ಒಕ್ಕೂಟ ವ್ಯವಸ್ಥೆಗೇ ವಿರುದ್ಧ:

ವೈದ್ಯಕೀಯ ಶಿಕ್ಷಣ ಕೋರ್ಸುಗಳ ಪ್ರವೇಶಕ್ಕೆ ಆಯಾ ರಾಜ್ಯಗಳಲ್ಲಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರದ್ದುಪಡಿಸಿ, ಕೇಂದ್ರ ಸರ್ಕಾರ ದೇಶದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್‌) ಜಾರಿಗೊಳಿಸಿದೆ. ಇದರಿಂದ ಕರ್ನಾಟಕ ಮಾತ್ರವಲ್ಲ, ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೋಂದಿರುವ ರಾಜ್ಯಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೇ ಸೀಟು ಸಿಗದಂತಾಗಿದೆ.

ನೀಟ್‌ನಿಂದ ರಾಜ್ಯದ ವಿದ್ಯಾರ್ಥಿಗಳಿಗೂ ದೊಡ್ಡ ಮಟ್ಟದ ಅನ್ಯಾಯವೇ ಆಗುತ್ತಿದೆ. ರಾಜ್ಯದಲ್ಲಿ ಸುಮಾರು 60ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು, ಸುಮಾರು 48 ದಂತ ವೈದ್ಯಕೀಯ ಕಾಲೇಜುಗಳಿವೆ. ಇವುಗಳಲ್ಲಿ ಸುಮಾರು 8500ಕ್ಕೂ ಹೆಚ್ಚು ಎಂಬಿಬಿಎಸ್‌ ಮತ್ತು 3500ಕ್ಕೂ ಹೆಚ್ಚು ದಂತ ವೈದ್ಯಕೀಯ ಸೀಟುಗಳು ಪ್ರತಿ ವರ್ಷ ನೀಟ್‌ ಮೂಲಕ ಭರ್ತಿಯಾಗುತ್ತವೆ. ಕರ್ನಾಟದಲ್ಲಿ ಪ್ರತಿ ವರ್ಷ ಸುಮಾರು 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದು, ಇದರಲ್ಲಿ ಮೂರೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಈ ಪೈಕಿ ಸುಮಾರು ಒಂದೂವರೆ ಲಕ್ಷ ಜನ ವಿಜ್ಞಾನ ವಿಭಾಗದವರಾಗಿರುತ್ತಾರೆ. ಈ ಪೈಕಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್‌ ಪರೀಕ್ಷೆ ಬರೆಯುತ್ತಾರೆ. ಆದರೆ, ಅವರಲ್ಲಿ ನಮ್ಮ ರಾಜ್ಯದ ಶೇ.60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದಿಗೂ ರಾಜ್ಯ ಪಠ್ಯಕ್ರಮದಲ್ಲೇ ಪಿಯುಸಿ ವ್ಯಾಸಂಗ ಮಾಡಿದವರಾಗಿರುತ್ತಾರೆ. ಇವರು ಸಿಬಿಎಸ್‌ಇ ಪಠ್ಯಕ್ರಮದ ನೀಟ್‌ ಪರೀಕ್ಷೆಯನ್ನು ಇತರೆ ವಿದ್ಯಾರ್ಥಿಗಳಿಗೆ ಸಮನಾಗಿ ಎದುರಿಸುವುದು ಕಠಿಣವಾಗುತ್ತಿದೆ. ಇದರಿಂದ ಉತ್ತಮ ರಾರ‍ಯಂಕ್‌ನಿಂದ ವಂಚಿತರಾಗುತ್ತಿದ್ದು, ರಾಜ್ಯದ ಸಾಕಷ್ಟುವೈದ್ಯಕೀಯ ಸೀಟುಗಳು ಹೊರರಾಜ್ಯದವರ ಪಾಲಾಗಲು ಕಾರಣವಾಗುತ್ತಿದೆ. ಆದರೆ, ನಮ್ಮದೇ ಪಠ್ಯಕ್ರಮದ ಸಿಇಟಿ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸುವಾಗ ಈ ಸಮಸ್ಯೆಯಾಗುತ್ತಿರಲಿಲ್ಲ ಎನ್ನುತ್ತಾರೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು.

ಸರ್ಕಾರದ ವೈಫಲ್ಯವೂ ಕಾರಣ:

ಮತ್ತೊಂದೆಡೆ ರಾಜ್ಯದಲ್ಲಿ ಎಷ್ಟು ವರ್ಷದಿಂದ ವಾಸವಿರುವವರನ್ನು ಕನ್ನಡಿಗರೆಂದು ಪರಿಗಣಿಸಬೇಕೆಂಬ ವಿಚಾರದಲ್ಲಿ ಇನ್ನೂ ಸರ್ಕಾರ ಸ್ಪಷ್ಟ ಆದೇಶ ಮಾಡುವಲ್ಲಿ ವಿಫಲವಾಗಿರುವುದರಿಂದ, ಶಾಲಾ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಓದದಿದ್ದರೂ ಏಳು ವರ್ಷ ರಾಜ್ಯದಲ್ಲಿ ಇರುವ ಮಾತ್ರಕ್ಕೆ ಅಧಿಕಾರಿಗಳ ಕೃಪಾಕಟಾಕ್ಷದಿಂದ ರಾಜ್ಯ ಕೋಟಾದ ಸೀಟುಗಳನ್ನು ಕಬಳಿಸುತ್ತಿದ್ದಾರೆ. ಅಲ್ಲದೆ, ಗಡಿನಾಡಿನ ಕನ್ನಡಿಗರು ಕನ್ನಡ ಮಾಧ್ಯಮದಲ್ಲೇ 10ನೇ ತರಗತಿವರೆಗೆ ಓದಿದರೂ ಅವರನ್ನು ರಾಜ್ಯದ ವಿದ್ಯಾರ್ಥಿಗಳೆಂದು ಪರಿಗಣಿಸಲಾಗುತ್ತಿಲ್ಲ. ಆ ಮೂಲಕವೂ ರಾಜ್ಯದ ವಿದ್ಯಾರ್ಥಿಗಳು ತಮ್ಮ ಪಾಲಿನ ಸೀಟುಗಳಿಂದ ವಂಚನೆಗೊಳಗಾಗುತ್ತಿದ್ದಾರೆ.

ಉನ್ನತ ಶಿಕ್ಷಣಕ್ಕೆ ಸಿಗುತ್ತಿಲ್ಲ ಒತ್ತು!

ರಾಜ್ಯದಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ವಿದ್ಯಾರ್ಥಿಗಳು ಕಾಲೇಜು ಅಥವಾ ಉನ್ನತ ಶಿಕ್ಷಣ ಪ್ರವೇಶ ಪಡೆಯುವಂತೆ ಉತ್ತೇಜಿಸುವ ಕೆಲಸಗಳಾಗುತ್ತಿಲ್ಲ ಎನ್ನುತ್ತಾರೆ ತಜ್ಞರು.

ದೇಶದಲ್ಲೇ ಏಳನೇ ಅತಿ ಹೆಚ್ಚು ಕಾಲೇಜುಗಳನ್ನು 3,670 ಹೊಂದಿರುವ ರಾಜ್ಯವಾದ ಕರ್ನಾಟಕ, ಉನ್ನತ ಶಿಕ್ಷಣದ ನೋಂದಣಿ ಅನುಪಾತದಲ್ಲಿ ಮಾತ್ರ 18ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ದ್ವಿತೀಯ ಪಿಯುಸಿ ಹಂತದಲ್ಲೇ ಶೇ.35ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದರೆ, ಉತ್ತೀರ್ಣಗೊಳ್ಳುವ ಶೇ.65 ರಿಂದ 70ರಷ್ಟು ಜನರಲ್ಲಿ ಶೇ.30ರಷ್ಟು ಜನ ಪದವಿ ಪ್ರವೇಶ ಪಡೆಯದೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಇನ್ನು, 2018-19ನೇ ಅವಧಿಯಲ್ಲಿ ಕರ್ನಾಟಕದಲ್ಲಿ ಪದವಿ ಬಳಿಕ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದ ಒಟ್ಟು ನೋಂದಣಿ ಅನುಪಾತ ಕೇವಲ 28.8ರಷ್ಟಿದೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಅನುಪಾತ ಶೇ.1ರಷ್ಟು ಏರಿಕೆಯಾಗುತ್ತಾ ಬರುತ್ತಿರುವುದೇ ಸಮಾಧಾನಕರ ಸಂಗತಿ.

ಆದರೆ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಿಗೆ ಹೋಲಿಸಿದರೆ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಪ್ರಮಾಣ ರಾಜ್ಯದಲ್ಲಿ ತೀರಾ ಕಡಿಮೆ ಇದೆ. ಆದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಪ್ರವೇಶ ಅನುಪಾತ ಹೆಚ್ಚಿಸಲು ಹಾಗೂ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ಮೆಟ್ಟಿಲು ಹತ್ತುವಂತೆ ಮಾಡಲು ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎಂಬ ಆರೋಪವಿದೆ.

ಐಐಎಸ್ಸಿ, ಐಐಟಿ, ಐಐಎಂನಲ್ಲೂ ಮೀಸಲಿಗೆ ಆಗ್ರಹ

ರಾಜ್ಯದ ಭೂಮಿ, ಅನುದಾನ ಬಳಸಿ ನಿರ್ಮಿಸಲಾಗುವ ಐಐಎಸ್ಸಿ, ಐಐಟಿ, ಐಐಎಂಬಿ ಮತ್ತಿತರ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲೂ ಕನ್ನಡಿಗ ವಿದ್ಯಾರ್ಥಿಗಳಿಗೆ ಮೀಸಲಾತಿ ಜಾರಿಯಾಗಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿದೆ. ಸದ್ಯದವರೆಗೆ ಯಾವುದೇ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ರಾಜ್ಯ ಮೀಸಲಾತಿ ಇಲ್ಲ. ಆದರೆ, ಕೇಂದ್ರ ಸರ್ಕಾರದ ಮೂಲಕ ನಿರ್ಮಾಣವಾಗುವ ಈ ಸಂಸ್ಥೆಗಳಿಗೆ ಆಯಾ ರಾಜ್ಯ ಸರ್ಕಾರಗಳೇ ಅಗತ್ಯ ಭೂಮಿ ನೀಡುತ್ತವೆ. ಜತೆಗೆ ಕಟ್ಟಡ ನಿರ್ಮಾಣದಿಂದ ಹಿಡಿದು ಸಂಪೂರ್ಣ ಸಂಸ್ಥೆ ಆರಂಭವಾಗುವವರೆಗೂ ನಿರ್ದಿಷ್ಟಅನುಪಾತದಲ್ಲಿ ರಾಜ್ಯದ ಅನುದಾನವನ್ನೂ ನೀಡಲಾಗುತ್ತದೆ. ಹಾಗಾಗಿ ಕರ್ನಾಟಕದ ಐಐಟಿ, ಐಐಎಂಬಿ, ಐಐಎಸ್ಸಿಗಳಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುವುದರಲ್ಲಿ ತಪ್ಪಿಲ್ಲ ಎನ್ನುತ್ತಾರೆ ಕೆಲ ಶಿಕ್ಷಣ ತಜ್ಞರು.

ಕೇಂದ್ರ ಶಿಕ್ಷಣ ಸಂಸ್ಥೆಗಳಾಗಲಿ, ರಾಜ್ಯ ಶಿಕ್ಷಣ ಸಂಸ್ಥೆಗಳಾಗಲಿ ರಾಜ್ಯದಲ್ಲಿ ಸ್ಥಾಪನೆಯಾಗಿರುವ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ, ಮೀಸಲಾತಿ ಸಿಗಬೇಕು. ನಮ್ಮ ರಾಜಕಾರಣಿಗಳು ಹಾಗೂ ಆಳುವ ವರ್ಗಕ್ಕೆ ಅಂತಹ ಇಚ್ಛಾಶಕ್ತಿ ಇದ್ದಿದ್ದರೆ ಯಾವಾಗಲೋ ಆಗುತ್ತಿತ್ತು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios