ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (DCRE) ಇನ್ಸ್‌ಪೆಕ್ಟರ್ ಶ್ರೀನಿವಾಸ್, ತಮ್ಮ ಮೇಲಾಧಿಕಾರಿಗಳಾದ ಎಸ್‌ಪಿ ಕರಿಬಸನಗೌಡ ಮತ್ತು ಡಿವೈಎಸ್‌ಪಿ ಮಹೇಶ್ವರಗೌಡ ವಿರುದ್ಧ ಜಾತಿ ನಿಂದನೆ ಮತ್ತು ಮಾನಸಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. 

ಬೆಂಗಳೂರು (ಏ.20): ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸುವ ಜವಾಬ್ದಾರಿ ಹೊಂದಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲೇ (DCRE) ಈಗ ಜಾತಿ ನಿಂದನೆ ಮತ್ತು ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ. ಮೇಲ್ಜಾತಿ ಅಧಿಕಾರಿಗಳು ತಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಪಶ್ಚಿಮ ವಲಯದ ಡಿ.ಸಿ.ಆರ್.ಇ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಅವರು ಇಲಾಖೆಯ ಡಿಜಿ ಉಮೇಶ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಕೇಂದ್ರ ಕಚೇರಿಯ ಎಸ್‌ಪಿ ಕರಿಬಸನಗೌಡ ಹಾಗೂ ಡಿವೈಎಸ್‌ಪಿ ಮಹೇಶ್ವರಗೌಡ ವಿರುದ್ಧ ಇನ್ಸ್‌ಪೆಕ್ಟರ್ ಶ್ರೀನಿವಾಸ್ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ, ವೀಡಿಯೋ ಒಂದನ್ನು ಮಾಡುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ದೂರಿನಲ್ಲಿರುವ ಪ್ರಮುಖ 18 ಅಂಶಗಳು

ಆದೌರ್ಜನ್ಯ ಎಸಗಿದ ಮೇಲ್ವರ್ಗದ ಆರೋಪಿಗಳ ಪರವಾಗಿ ತನಿಖಾ ವರದಿ ಸಲ್ಲಿಸುವಂತೆ ಎಸ್‌ಪಿ ಮತ್ತು ಡಿವೈಎಸ್‌ಪಿ ಒತ್ತಡ ಹೇರುತ್ತಿದ್ದರು ಎಂದು ಇನ್ಸ್‌ಪೆಕ್ಟರ್ ಆರೋಪಿಸಿದ್ದಾರೆ. ಆರೋಪಿಗಳ ಪರ ಅಂತಿಮ ವರದಿ ನೀಡಲು ನಿರಾಕರಿಸಿದಾಗಿನಿಂದ ಅಧಿಕಾರಿಗಳು ಕಿರುಕುಳ ನೀಡಲು ಆರಂಭಿಸಿದ್ದಾರೆ. ದೂರುದಾರರಿಂದಲೇ ಇನ್ಸ್‌ಪೆಕ್ಟರ್ ವಿರುದ್ಧ ಸುಳ್ಳು ಅರ್ಜಿಗಳನ್ನು (Petition) ಕೊಡಿಸಿ, ತನಿಖೆಯ ಹೆಸರಿನಲ್ಲಿ ಟಾರ್ಚರ್ ನೀಡುತ್ತಿದ್ದಾರೆ ಎನ್ನಲಾಗಿದೆ.

ಕಳೆದ ತಿಂಗಳು ಶ್ರೀನಿವಾಸ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಿಂದ (KAT) ತಡೆಯಾಜ್ಞೆ ತಂದಿದ್ದರು. ಆದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಷಡ್ಯಂತ್ರ ರೂಪಿಸಿ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಶ್ರೀನಿವಾಸ್ ಆರೋಪಿಸಿದ್ದಾರೆ.

"ಇಲಾಖೆಯ ಹಿರಿಯ ಅಧಿಕಾರಿಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಕಿರುಕುಳ ಮತ್ತು ತಾರತಮ್ಯ ನಿಲ್ಲದಿದ್ದರೆ ನಾನು ಆ*ತ್ಮಹ*ತ್ಯೆ ಮಾಡಿಕೊಳ್ಳುತ್ತೇನೆ" ಎಂದು ಶ್ರೀನಿವಾಸ್ ಪತ್ರದಲ್ಲಿ ಎಚ್ಚರಿಸಿದ್ದಾರೆ.

ದೌರ್ಜನ್ಯ ತಡೆಯಬೇಕಾದ ಇಲಾಖೆಯಲ್ಲೇ ದಲಿತ ಅಧಿಕಾರಿಗೆ ಇಂತಹ ಪರಿಸ್ಥಿತಿ ಬಂದಿರುವುದು ಪೊಲೀಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.