Actor Darshan First Look After 81 Days ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 81 ದಿನಗಳ ಬಳಿಕ ನಟ ದರ್ಶನ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ದೋಷಾರೋಪವನ್ನು ನಿರಾಕರಿಸಿದ ದರ್ಶನ್ ಮತ್ತು ಇತರ ಆರೋಪಿಗಳ ವಿಚಾರಣೆಯನ್ನು ನ.10 ರಿಂದ ಆರಂಭಿಸಲು ನ್ಯಾಯಾಲಯ ಆದೇಶಿಸಿದೆ.
ಬೆಂಗಳೂರು (ನ.3): ಬರೋಬ್ಬರಿ 81 ದಿನಗಳ ಬಳಿಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಿಲ್ಲಿಂಗ್ ಸ್ಟಾರ್ ದರ್ಶನ್‌ಗೆ ಹೊರಜಗತ್ತಿನ ದರ್ಶನವಾಗಿದೆ. ಹಾಗಂತ ಅವರಿಗೇನೂ ಜಾಮೀನು ಸಿಕ್ಕಿಲ್ಲ. ಜೈಲಿನ ನಾಲ್ಕು ಗೋಡೆಗಳ ಮಧ್ಯೆ ವಿಲಿವಿಲಿ ಅಂತಾ ಒದ್ದಾಡುತ್ತಿದ್ದ ನಟ ದರ್ಶನ್ ತೂಗುದೀಪ ಅವರನ್ನು ಇಂದು ಸಿಟಿ ಸಿವಿಲ್ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆ ನಿಟ್ಟಿನಲ್ಲಾದರೂ ಹೊರಜಗತ್ತಿನ ದರ್ಶನವಾಗಲಿದೆ ಅನ್ನೋ ನಿಟ್ಟಿನಲ್ಲಿ ಬೂದು ಬಣ್ಣದ ಪುಲ್‌ಓವರ್ ನೀಲಿ ಬಣ್ಣದ ಜೀನ್ಸ್ ತೊಟ್ಟು ದರ್ಶನ್ ಪೊಲೀಸ್ ವಾಹನದಲ್ಲಿ ಕೋರ್ಟ್‌ಗೆ ಆಗಮಿಸಿದ್ದರು. ಸದಾಕಾಲ ಬಾಡಿಗಾರ್ಡ್‌ಗಳ ಜೊತೆಯೇ ತಿರುಗಾಡುತ್ತಿದ್ದ ದರ್ಶನ್‌ಗೆ ಅಂದೂ ಕೂಡ ಪೊಲೀಸ್ ಭದ್ರತೆ ಕೊಡುತ್ತಿದ್ದರು. ಈಗಲೂ ಕೂಡ ಪೊಲೀಸ್ ಭದ್ರತೆ ಕೊಟ್ಟಿದ್ದಾರೆ. ಆದರೆ ಅಂದು ದರ್ಶನ್ ಸ್ಟಾರ್ ಹೀರೋ ಆಗಿದ್ದ. ಆದರೆ, ಈಗ ಕೊಲೆ ಪ್ರಕರಣದ ಆರೋಪಿ.
ಮಧ್ಯಾಹ್ನದ ವೇಳೆ ದರ್ಶನ್ ಕೋರ್ಟ್‌ಗೆ ಆಗಮಿಸಿದಾಗ ಅದಾಗಲೇ ಅಲ್ಲಿ ಜನಜಂಗುಳಿ. ದರ್ಶನ್‌ನ ಫ್ಯಾನ್ಸ್‌ಗಳು ಒಂದಡೆಯಾದರೆ, ಇನ್ನೊಂದೆಡೆ ಲೆಕ್ಕವಿಲ್ಲದಷ್ಟು ವಕೀಲರು. ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಎ2 ಆರೋಪಿ ದರ್ಶನ್‌ರನ್ನು ಭಿನ್ನ ವಾಹನಗಳಲ್ಲಿ ಕರೆತರಲಾಗಿತ್ತು. ಪೊಲೀಸರ ಭದ್ರತೆಯ ನಡುವೆ ಕೋರ್ಟ್‌ನ ಆವರಣದ ಒಳಗೆ ಹೋದ ದರ್ಶನ್‌ಗೆ ಕೆಲ ಹೊತ್ತು ಅಲ್ಲಿಯೇ ಕಾಯುವಂತೆ ತಿಳಿಸಲಾಯಿತು.
ಬಳಿಕ ದರ್ಶನ್ ಮೇಲೆ ದೋಷಾರೋಪ ಮಾಡುವ ಮುನ್ನ ಕೆಲವು ಡ್ರಾಮಾ ಕೂಡ ನಡೆಯಿತು. 17 ಮಂದಿ ಆರೋಪಿಗಳು ಕೋರ್ಟ್‌ನ ಒಳಗೆ ನಿಲ್ಲಲು ಜಾಗವೇ ಇದ್ದಿರಲಿಲ್ಲ. ಕೊನೆಗೆ ಸ್ವತಃ ಜಡ್ಜ್ ಪ್ರಕರಣಕ್ಕೆ ಸಂಬಂಧಪಟ್ಟ ವಕೀಲರು ಬಿಟ್ಟು ಬೇರೆಯಾರೂ ಇಲ್ಲಿರಕೂಡದು ಎಂದು ಹೇಳಿಬಿಟ್ಟರು. ಅಲ್ಲಿದ್ದ ಪೊಲೀಸರು ಕೂಡ ವಕೀಲರಿಗೆ ಹೊರಹೋಗುವಂತೆ ಮನವಿ ಮಾಡಿದರು. ಜಡ್ಜ್ ಹಾಗೂ ಪೊಲೀಸರು ಮನವಿಯ ಬಳಿಕ ಕೆಲ ಹೊತ್ತಿಗೆ ಕೊಂಚ ಪ್ರಮಾಣದಲ್ಲಿ ಜನಜಂಗುಳಿ ಖಾಲಿಯಾಯಿತು. ಜಡ್ಜ್ ದರ್ಶನ್ ಹಾಗೂ ಇತರ 16 ಮಂದಿಯ ಕುರಿತಾಗಿ ದೋಷಾರೋಪ ಮಾಡಿದರೆ, ಎಲ್ಲರೂ ಕೂಡ ಅದನ್ನು ತಿರಸ್ಕರಿಸಿದರು. ಕೊನೆಗೆ ಜಡ್ಜ್ ನ.10ರಿಂದ ಪ್ರಕರಣದ ವಿಚಾರಣೆ ಆರಂಭ ಮಾಡುವುದಾಗಿ ಆದೇಶ ನೀಡಿದರು.
ವೈರಲ್ ಆದ ದರ್ಶನ್ ಫೋಟೋ
81 ದಿನಗಳ ಕಾಲ ಹೊರಜಗತ್ತನ್ನು ಕಾಣದೇ ದರ್ಶನ್ ಹೇಗಿರಬಹುದು ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಈ ವೇಳೆ ಕೋರ್ಟ್ ಒಳಗೆ ದರ್ಶನ್ ಕುಳಿತಿರುವ ಫೋಟೋ ವೈರಲ್ ಆಗಿದೆ. ಮುಖ ಸಂಪೂರ್ಣವಾಗಿ ಬಾಡಿ ಹೋಗಿದ್ದರೆ, ಕಣ್ಣಿನಲ್ಲಿ ಮುಂದೇನಾಗಬಹುದು ಎನ್ನುವ ಆತಂಕ ಕಂಡಿದೆ. ಎರಡು ಕೈಗಳನ್ನು ಜೋಡಿಸಿ ದರ್ಶನ್ ದೇವರನ್ನು ಬೇಡಿಕೊಳ್ಳುತ್ತಿರುವ ರೀತಿ ಕಂಡಿದೆ. ಒಟ್ಟಿನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಸೊರಗಿ ಸುಣ್ಣವಾಗಿರುವುದು ಈ ಫೋಟೋದಲ್ಲಿ ಕಂಡಿದೆ.
ಕೋರ್ಟ್ ಅನುಮತಿ ಪಡೆದು ಮನೆ ಊಟ ತಿಂದ ದರ್ಶನ್
ಒಂದು ಸಮಯದಲ್ಲಿ ಬೇಕೆಂದಾಗ ಬೇಕಾಗುವ ಆಹಾರ ತಿನ್ನುತ್ತಿದ್ದ ದರ್ಶನ್, ಈಗ ಕನಿಷ್ಠ ಮನೆ ಊಟ ಮಾಡಲು ಕೂಡ ಕೋರ್ಟ್ ಅನುಮತಿ ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಯಿತು. ಇಂದು ಕೋರ್ಟ್‌ಗೆ ಬರುವ ಖುಷಿಯಲ್ಲಿ ದರ್ಶನ್ ಬೆಳಗ್ಗೆ ಇಂದ ಏನನ್ನೂ ತಿಂದಿರಲಿಲ್ಲ. ಇದನ್ನೇ ಜಡ್ಜ್ ಮುಂದೆ ತಿಳಿಸಲಾಯಿತು. 'ದರ್ಶನ್ ಮಾಡಿಲ್ಲ.. ಊಟ ಕೊಡಬಹುದೇ' ಎಂದು ವಕೀಲರು ನ್ಯಾಯಾಧೀಶರನ್ನು ಹೇಳಿದರು. ಅವರಿನ್ನೂ ಊಟ ಮಾಡಿಲ್ಲವೇ ಎಂದು ಜಡ್ಜ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಬರುವ ವಾಹನದಲ್ಲಿ ಊಟ ಕೊಟ್ಟೆವು ಆದರೆ ತಿಂದಿಲ್ಲ ಎಂದು ಅಧಿಕಾರಿ ತಿಳಿಸಿದರು.
ಅವರ ಪತ್ನಿ ವಿಜಯಲಕ್ಷ್ಮೀ ಮನೆಯಿಂದ ಊಟ ತಂದಿದ್ದಾರೆ. ಅದನ್ನು ಕೊಡಬಹುದೇ ಎಂದು ಕೇಳಿದಾಗ 'ಮನೆ ಊಟವನ್ನು ಪರಿಶೀಲನೆ ಮಾಡಿ ಕೊಡಿ' ಎಂದಿ ಜೈಲಧಿಕಾರಿಗೆ ಜಡ್ಜ್ ಸೂಚನೆ ನೀಡಿದರು.
ಜೈಲಿನಲ್ಲೇ ಮನೆ ಊಟ ಸವಿದ ಬಳಿಕ ದರ್ಶನ್ ಅಲ್ಲಿಂದ ಪರಪ್ಪನ ಅಗ್ರಹಾರ ಕಡೆ ಹೊರಟರು. ಕೋರ್ಟ್‌ನಿಂದ ಹೊರಹೋಗುವ ವೇಳೆ ಮುಂದೆ ಪವಿತ್ರಾ ಗೌಡ ಹೋದರೆ, ಆಕೆಯ ಹಿಂದೆ ದರ್ಶನ್ ಹೋದರು. ಈ ವೇಳೆ ಕೆಲ ಅಭಿಮಾನಿಗಳಿಗೆ ಸೆಲ್ಯೂಟ್ ಹೊಡೆದ ದರ್ಶನ್ ಇನ್ನೂ ಕೆಲವರಿಗೆ ಕೈ ನೀಡಿದರು. ದರ್ಶನ್ ಕಂಡ ಕಡೆಯಲ್ಲೆಲ್ಲಾ ಆತನ ಅಭಿಮಾನಿಗಳು ಬಾಸ್ ಬಾಸ್ ಎಂದು ಕೂಗಲು ಆರಂಭಿಸಿದರು. ಕೋರ್ಟ್ ಆವರಣದಲ್ಲಿ ಡಿ ಬಾಸ್ ಎಂದು ಕಿರುಚಾಡಿ, ಕೂಗಾಡಿದರೆ ಬಳಿಕ ಆತನನ್ನು ಕರೆದುಕೊಂಡು ಹೋದ ಬಸ್‌ನ ಹಿಂದೆಯೇ ಓಡಲು ಆರಂಭಿಸಿದರು. ಸಂಜೆ 5.30ರ ವೇಳೆ ಡಿಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿಗೆ ವಾಪಸಾಯಿತು.
