Congress campaign against BJP: ಬಿಜೆಪಿ ವಿರುದ್ಧ ಕಾಂಗ್ರೆಸ್‌ ಮತ್ತೊಂದು ಅಭಿಯಾನ ಆರಂಭಿಸಿದ್ದು ಸರಿಯಾದ ರಸ್ತೆ ನೀಡದಿದ್ದರೆ ತೆರಿಗೆ ಕಟ್ಟುವುದಿಲ್ಲ, ಮತ ಹಾಕುವುದಿಲ್ಲ ಎಂದು ಹೇಳಿದ್ದಾರೆ. 

ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮತ್ತೊಂದು ಅಭಿಯಾನ ಆರಂಭಿಸಿದ್ದು ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿದ್ದಾರೆ. ರಸ್ತೆ ಗುಂಡಿಗೆ ಸಾರ್ವಜನಿಕರು ಬಲಿಯಾಗ್ತಿರುವ ಹಿನ್ನೆಲೆ ಪೋಸ್ಟರ್ ಅಭಿಯಾನ ಆರಂಭಿಸಲಾಗಿದೆ. ಎನ್ಎಸ್‌ಯುಐ ವತಿಯಿಂದ ಪೋಸ್ಟರ್ ಅಭಿಯಾನ ಶುರುವಾಗಿದ್ದು ನಗರದೆಲ್ಲೆಡೆ ಪೋಸ್ಟರ್‌ ಅಂಟಿಸಲಾಗಿದೆ. #ನೋ ರೋಡ್ #ನೋ ಓಟ್ #ನೋ ಟ್ಯಾಕ್ಸ್ ಎಂದು ಅಭಿಯಾನ ಮಾಡಲಾಗುತ್ತಿದೆ. ರಸ್ತೆಗುಂಡಿಗಳನ್ನ ಮುಚ್ಚಿ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ತನಕ ಟ್ಯಾಕ್ಸ್ ಕಟ್ಟೋದಿಲ್ಲ. ಚುನಾವಣೆ ವೇಳೆ ಓಟ್ ಕೂಡ ಹಾಕೋದಿಲ್ಲ ಎಂದು ಅಭಿಯಾನ ಮಾಡಲಾಗುತ್ತಿದೆ. 

ಬಿಬಿಎಂಪಿ ಮುಖ್ಯ ಕಚೇರಿ ಸೇರಿದಂತೆ ಬೆಂಗಳೂರಿನ ಹಲವೆಡೆ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದಾರೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಫ್ಲೈ ಓವರ್ ಗಳ ಬಳಿ ಪೋಸ್ಟರ್ ಅಂಟಿಸಿರುವ NSUI ಕಾರ್ಯಕರ್ತರು ಬಿಜೆಪಿ ಸರ್ಕಾರವನ್ನು ಖಂಡಿಸಿದ್ದಾರೆ. ಈ ಹಿಂದೆ ಪೇಸಿಎಂ ಅಭಿಯಾನ ಕಾಂಗ್ರೆಸ್‌ ನಡೆಸಿತ್ತು. ಇದರಿಂದ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಭಾರಿ ಮುಜುಗರಕ್ಕೆ ಒಳಗಾಗಿದ್ದರು. ಜತೆಗೆ ಪೋಸ್ಟರ್‌ ಅಂಟಿಸಿದ ಹಲವು ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸಲಾಗಿತ್ತು 

ಇದನ್ನೂ ಓದಿ: ಪೇಸಿಎಂ ಟೀ ಶರ್ಟ್‌ ಧರಿಸಿದ್ದ ಯುವಕ ವಶಕ್ಕೆ, ಬಂಧನಕ್ಕೂ ಮುನ್ನ ಪೊಲೀಸರು ಹೊಡೆದ ವಿಡಿಯೋ ವೈರಲ್

ವಿಧಾನ ಸಭೆಯಲ್ಲೂ ಪೇಸಿಎಂ ಅಭಿಯಾನದ ಕುರಿತು ಚರ್ಚೆಯಾಗಿತ್ತು. ಬಸವರಾಜ್‌ ಬೊಮ್ಮಾಯಿ ಅವರ ಫೋಟೊ ಬಳಸಿ ಪೇಸಿಎಂ ಎಂದು ನಲವತ್ತು ಪರ್ಸೆಂಟ್‌ ಭ್ರಷ್ಟಾಚಾರ ಆರೋಪವನ್ನು ಕಾಂಗ್ರೆಸ್‌ ಮಾಡಿತ್ತು. ಇದು ಅತ್ಯಂತ ಹೀನ ಕೆಲಸ ಎಂದು ಬಿಜೆಪಿ ನಾಯಕರು ಖಂಡಿಸಿದ್ದರು. ಆದರೆ ಕಾಂಗ್ರೆಸ್‌ ನಾಯಕರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ಧರು. ಭ್ರಷ್ಟಾಚಾರ ಪಡೆಯುತ್ತಿರುವುದು ತಪ್ಪಲ್ಲ, ನಾವು ಅದನ್ನು ಖಂಡಿಸುತ್ತಿರುವುದು ತಪ್ಪೇ ಎಂದು ಕಾಂಗ್ರೆಸ್‌ ನಾಯಕರು ಪ್ರಶ್ನಿಸಿದ್ದರು. 

ಇದನ್ನೂ ಓದಿ: ಕಾಂಗ್ರೆಸ್ ಪೇ ಸಿಎಂ ಅಭಿಯಾನದ ವಿರುದ್ದ ಹಾವೇರಿ ಮಠಾಧೀಶರ ಆಕ್ರೋಶ

ಅದಾದ ನಂತರ ಚಿಕ್ಕಬಳ್ಳಾಪುರದ ಜನ ಸಂಕಲ್ಪ ಯಾತ್ರೆಯಲ್ಲಿ ಬಸವರಾಜ್‌ ಬೊಮ್ಮಾಯಿ ಉಗ್ರ ರೂಪದ ಭಾಷಣ ಮಾಡಿದ್ದರು. ಧಮ್‌ ಇದ್ದರೆ, ತಾಕತ್‌ ಇದ್ದರೆ ಭ್ರಷ್ಟಾಚಾರವನ್ನು ಸಾಬೀತುಮಾಡಿ ಎಂದು ಬಸವರಾಜ್‌ ಬೊಮ್ಮಾಯಿ ಹೇಳಿದ್ದರು. ಇದಾದ ನಂತರ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಕೂಡ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಪೇಸಿಎಂ ಅಭಿಯಾನದ ವೃತ್ತಾಂತದ ಬಳಿಕ ನೋ ರೋಡ್‌ ನೋ ಟ್ಯಾಕ್ಸ್‌ ನೋ ವೋಟ್‌ ಎಂಬ ಹೊಸ ಅಭಿಯಾನ ಆರಂಭವಾಗಿದ್ದು, ಬಿಜೆಪಿ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕು.