ಸ್ನೇಹಿತನಿಂದ ಪಡೆದು ಆರೈಕೆ ಮಾಡುತ್ತಿದ್ದ ಅಂಗವಿಕಲ 'ಆಫ್ರಿಕನ್ ಗ್ರೇ ಗಿಳಿ'ಯನ್ನು ಸಿಐಡಿ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡಿದೆ. ಇದನ್ನು ಪ್ರಶ್ನಿಸಿ ಪಕ್ಷಿಪ್ರೇಮಿ ಮಹೇಶ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗಿಳಿಯನ್ನು ಮರಳಿಸುವ ವಿಚಾರವಾಗಿ ನ್ಯಾಯಾಲಯವು ಸರ್ಕಾರ ಮತ್ತು ಸಿಐಡಿಗೆ ನೋಟಿಸ್ ಜಾರಿ ಮಾಡಿದೆ.

ಬೆಂಗಳೂರು: ನಗರದ ನಿವಾಸಿಯೊಬ್ಬರಿಂದ ಸಿಐಡಿ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡಿರುವ ‘ಆಫ್ರಿಕನ್ ಗ್ರೇ ಗಿಳಿ’ಯನ್ನು ಮರಳಿಸುವ ವಿಚಾರ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್ ಜಾರಿ ಮಾಡಿದೆ.

ವಶಪಡಿಸಿಕೊಂಡಿರುವ ‘ಆಫ್ರಿಕನ್ ಗ್ರೇ’ ಸಾಕು ಗಿಳಿಯನ್ನು ಮರಳಿಸಲು ಸರ್ಕಾರ ಮತ್ತು ಸಿಐಡಿ ಅರಣ್ಯ ಸಂಚಾರಿ ದಳಕ್ಕೆ ನಿರ್ದೇಶಿಸುವಂತೆ ಕೋರಿ ರಾಜಾಜಿನಗರದ ನಿವಾಸಿ ಆರ್. ಮಹೇಶ್‌ ಕುಮಾರ್ ಸಲ್ಲಿಸಿರುವ ತಕರಾರು ಅರ್ಜಿ, ನ್ಯಾಯಮೂರ್ತಿ ಸಿ.ಎಂ. ಪೂಣಚ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಕೆಲಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಸಿಐಡಿ ಅರಣ್ಯ ಸಂಚಾರಿ ದಳಕ್ಕೆ ನೋಟಿಸ್‌ ಜಾರಿ ಮಾಡಿತು. ಅಲ್ಲದೆ, ಅರ್ಜಿ ಕುರಿತು ಪ್ರತಿವಾದಿಗಳಿಂದ ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ನ.3ಕ್ಕೆ ಮುಂದೂಡಿದೆ.

ಪ್ರಕರಣವೇನು? 

ನಾನು ಪಕ್ಷಿ ಪ್ರೇಮಿ. ನನಗೆ 2018ರಲ್ಲಿ ಸ್ನೇಹಿತರೊಬ್ಬರು ಅಂಗವೈಕಲ್ಯದ ‘ಆಫ್ರಿಕನ್‌ ಗ್ರೇ ಗಿಳಿ’ (ಸಿಟಾಕಸ್‌ ಎರಿಥಕಸ್‌) ಅನ್ನು ನೀಡಿದ್ದರು. ಒಂದು ರೆಕ್ಕೆಯಿಲ್ಲದಕ್ಕೆ ಆ ಗಿಳಿಗೆ ಹಾರಲು ಸಾಧ್ಯವಾಗುತ್ತಿರಲಿಲ್ಲ. ಪ್ರೀತಿ ಹಾಗೂ ಮಾನವೀಯತೆಯಿಂದ ಆ ಗಿಳಿಗೆ ವೈದ್ಯಕೀಯ ಚಿಕಿತ್ಸೆ ಕಲ್ಪಿಸಿ ಆರೈಕೆ ಮಾಡಿದೆ. ಆದರೆ, ಸಿಐಡಿ ಅರಣ್ಯ ಸಂಚಾರಿ ದಳ ಅಧಿಕಾರಿಯು 2026ರ ಜು.27ರಂದು ಆ ಗಿಳಿಯನ್ನು ತಮ್ಮ ವಶಕ್ಕೆ ಪಡೆದರು. ನಂತರ ಗಿಳಿಯನ್ನು ಸುಪರ್ದಿಯಲ್ಲಿಟ್ಟುಕೊಂಡಿರುವ ಬಗ್ಗೆ ವಿವರಣೆ ನೀಡುವಂತೆ ನನಗೆ ನೋಟಿಸ್‌ ನೀಡಿದರು ಎಂದು ಅರ್ಜಿದಾರ ವಿವರಿಸಿದ್ದಾರೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಸೆಕ್ಷನ್‌ 35(3)

ಅಲ್ಲದೆ, 2026ರ ಜು.31ರಂದು ನನ್ನ ವಿರುದ್ಧ ಸೂಚನಾ ಪತ್ರ ಹೊರಡಿಸಿ, ಪ್ರಕರಣದ ತನಿಖೆಗೆ ಸಹಕರಿಸಬೇಕು. ಅಗತ್ಯ ದಾಖಲೆ ಹಾಜರುಪಡಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯ ನಾಶ ಮಾಡಬಾರದು. ಈ ನಿರ್ದೇಶನ ಉಲ್ಲಂಘಿಸಿದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಸೆಕ್ಷನ್‌ 35(3) ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿದ್ದಾರೆ. ವಾಸ್ತವವಾಗಿ ನಾನು ಆ ಗಿಳಿಯನ್ನು ಖರೀದಿಸಿಲ್ಲ ಹಾಗೂ ಮಾರಾಟಕ್ಕೆ ಯತ್ನಿಸಿಲ್ಲ. ಅಂಗವೈಕಲ್ಯದ ಆ ಗಿಳಿಯನ್ನು ಆರೈಕೆ ಮಾಡುತ್ತಿದ್ದೇನೆ. ಆದ್ದರಿಂದ ಶೋಕಾಸ್‌ ನೋಟಿಸ್‌ ರದ್ದುಪಡಿಸಿ, ನನ್ನ ಸುಪರ್ದಿಗೆ ಗಿಳಿಯನ್ನು ಮರಳಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರ ಕೋರಿದ್ದಾರೆ.