ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ 11 ಮಂದಿ ಸಾವು. ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಸಂತಾಪ, ಸರ್ಕಾರದ ವಿರುದ್ಧ ಜನಾಕ್ರೋಶ.
ಬೆಂಗಳೂರು (ಜೂ.4): ಚಿನ್ನಸ್ವಾಮಿ ಮೈದಾನದಲ್ಲಿ ಇಂದು ನಡೆಯಬೇಕಿದ್ದ ಆರ್‌ಸಿಬಿಯ ವಿಜಯೋತ್ಸವ ಆಚರಣೆಯ ವೇಳೆ ಸಂಭವಿಸಿದ ಭಾರೀ ಕಾಲ್ತುಳಿತದಲ್ಲಿ 11 ಮಂದಿ ಸಾವು ಕಂಡಿದ್ದಾರೆ. ಈ ಘಟನೆಗೆ ರಾಜ್ಯ ಹಾಗೂ ದೇಶಾದ್ಯಂತ ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ. ಕೆಎಸ್‌ಸಿಎ, ಆರ್‌ಸಿಬಿ ಮ್ಯಾನೇಜ್‌ಮೆಂಟ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಜನರು ಕಿಡಿಕಾರಿದ್ದು, ಇವರುಗಳು ಮಾಡಿದ್ದ ಅವ್ಯವಸ್ಥೆಯಿಂದ 11 ಮಂದಿ ಅಮಾಯಕರು ಸಾವು ಕಂಡಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. 'ಬೆಂಗಳೂರಿನಲ್ಲಿ ನಡೆದ ಅಪಘಾತ ನಿಜಕ್ಕೂ ಹೃದಯವಿದ್ರಾವಕ. ಈ ದುರಂತದ ಸಮಯದಲ್ಲಿ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೆ ನನ್ನ ಸಂತಾಪಗಳಿವೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಪಿಎಂಓ ಇಂಡಿಯಾ ಟ್ವೀಟ್ ಮಾಡಿದೆ.

ಇನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಆಘಾತ ವ್ಯಕ್ತಪಡಿಸಿದ್ದು, ಸರ್ಕಾರವನ್ನು ಟೀಕಿಸಿದ್ದಾರೆ. 'ಐಪಿಎಲ್ ನಲ್ಲಿ ಆರ್ ಸಿಬಿ ತಂಡ ಜಯ ಗಳಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯಾವುದೇ ಸರಿಯಾದ ಸಿದ್ದತೆ ಇಲ್ಲದೇ ತರಾತುರಿಯಲ್ಲಿ ಏರ್ಪಡಿಸಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಹತ್ತಕ್ಕೂ ಹೆಚ್ಚು ಜನ ಅಮಾಯಕರು ಕಾಲ್ತುಳಿತದಲ್ಲಿ ಸಾವಿಗೀಡಾಗಿದ್ದು ಅತ್ಯಂತ ದುಃಖದ ಸಂಗತಿ' ಎಂದು ಬರೆದುಕೊಂಡಿದ್ದಾರೆ.
ಯಾವುದೇ ಪೂರ್ವ ತಯಾರಿ ಇಲ್ಲದೆ ಅವಸರದಲ್ಲಿ ಎರಡು ಕಾರ್ಯಕ್ರಮ ಮಾಡಿದ್ದು, ಅದರಲ್ಲೂ ಎರಡೂ ಕಾರ್ಯಕ್ರಮಗಳಲ್ಲಿ ಅಷ್ಡೊಂದು ಜನ ಸೇರಲು ಅವಕಾಶ ಮಾಡಿಕೊಟ್ಟಿದ್ದು, ರಾಜ್ಯ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ. ಹಿಂದೆ ವಿಶ್ವ ಕಪ್ ಮತ್ತು ಇತರ ಕಪ್ ಗೆದ್ದಾಗ ಮುಂಬೈನಲ್ಲಿ ಮೆರವಣಿಗೆ ಮಾಡುವ ಮುಖಾಂತರ ಜನರಿಗೆ ಅಲ್ಲಲ್ಲಿ ಕ್ರಿಕೆಟ್ ಆಟಗಾರರನ್ನು ನೋಡಲು ಅವಕಾಶ ಕಲ್ಪಿಸಿದ್ದು ಸಾಕಷ್ಟು ಉದಾಹರಣೆ ಇದೆ.
ಈ ವಿಚಾರದಲ್ಲಿ ಜನರ ಸಂಖ್ಯೆಯ ಅಂದಾಜು ಇಲ್ಲದೆ ಆರ್ ಸಿಬಿ ಪರವಾಗಿರುವ ಜನರ ಭಾವನಾತ್ಮಕ ಸಂಬಂಧ ಅರಿಯದೆ ಪೊಲಿಸರು ಮತ್ರು ಆಯೋಜಕರ ನಡುವೆ ಹೊಂದಾಣಿಕೆ ಇಲ್ಲದಿರುವುದು ಸ್ಪಷ್ಟ. ರಾಜ್ಯ ಸರ್ಕಾರವೇ ಇದಕ್ಕೆ ಕಾರಣ ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ತಪಿತಸ್ಥರಿಗೆ ಶಿಕ್ಷೆಯಾಗಬೇಕು' ಎಂದು ಬರೆದುಕೊಂಡಿದ್ದಾರೆ.
"ಇದು ತುಂಬಾ ದುರದೃಷ್ಟಕರ ಮತ್ತು ಹೃದಯವಿದ್ರಾವಕ. ಸಂತೋಷದ ಸಂದರ್ಭದಲ್ಲಿ, ಜನರು ಒಟ್ಟುಗೂಡಿದಾಗ, ಇದು ತುಂಬಾ ದುರದೃಷ್ಟಕರ ಸಂಗತಿ. ಇದನ್ನು ತಡೆಯಲು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಏಳು ಜನರು ಪ್ರಾಣ ಕಳೆದುಕೊಂಡಿದ್ದಾರೆ." ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
