ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮದ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ 7 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಬ್ಬನ್ ಪಾರ್ಕ್ ಮತ್ತು ವಿಧಾನಸೌಧ ಮೆಟ್ರೋ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾದ ಕಾರಣ ಮೆಟ್ರೋ ರೈಲುಗಳು ನಿಲ್ಲುವುದಿಲ್ಲ.
ಬೆಂಗಳೂರು (ಜೂ.4): ಆರ್‌ಸಿಬಿ ತಂಡದ ಐಪಿಎಲ್ ಗೆಲುವಿನ ಸಂಭ್ರಮದ ಮೇಲೆ ಸೂತಕ ಅವರಿಸಿದೆ. ಒಂಚೂರೂ ಪೂರ್ವಸಿದ್ಧತೆಯಿಲ್ಲದ ನಡೆದ ಕಾರ್ಯಕ್ರಮಲ್ಲಿ ಸಾವಿರಾರು ಆರ್‌ಸಿಬಿ ಅಭಿಮಾನಿಗಳೂ ಭಾಗವಹಿಸಿದ್ದರಿಂದ ಭಾರೀ ಕಾಲ್ತುಳಿತ ಉಂಟಾಗಿದ್ದು 7 ಜನರ ಸಾವಾಗಿದೆ ಎನ್ನುವ ಮಾಹಿತಿಗಳು ಇವೆ. ಕೆಲವು ಮಾಧ್ಯಮಗಳಲ್ಲಿ 4 ಮಂದಿ ಸಾವಿನ ಬಗ್ಗೆಯೂ ಮಾಹಿತಿ ಇದ್ದರೆ, ಇನ್ನೂ ಕೆಲವೆಡೆ 11 ಮಂದಿ ಸಾವು ಕಂಡಿದ್ದಾರೆ ಎನ್ನಲಾಗಿದೆ.
ಇನ್ನು ಕಬ್ಬನ್ ಪಾರ್ಕ್ ಹಾಗೂ ಡಾ.ಬಿಆರ್ ಅಂಬೇಡ್ಕರ್ ವಿಧಾನಸೌಧ ಮೆಟ್ರೋ ನಿಲ್ದಾಣದಲ್ಲಿ ನಿರೀಕ್ಷೆಗೂ ಮೀರಿ ಅಪಾರ ಪ್ರಮಾಣದ ಜನಸಂದಣಿ ಸೇರಿದೆ. ಮೆಟ್ರೋ ನಿಲ್ದಾಣದಲ್ಲೂ ಕಾಲ್ತುಳಿತವಾಗುವ ಸೂಚನೆ ಸಿಕ್ಕ ಹಿನ್ನಲೆಯಲ್ಲಿ ಕಬ್ಬನ್ ಪಾರ್ಕ್ ಹಾಗೂ ವಿಧಾನಸೌಧ ಸ್ಟೇಷನ್‌ನಲ್ಲಿ ಮೆಟ್ರೋ ರೈಲು ನಿಲ್ಲಿಸದೇ ಇರಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ.
ಈ ಬಗ್ಗೆ ಬಿಎಂಆರ್‌ಸಿಎಲ್ ಪ್ರಕಟಣೆ ನೀಡಿದ್ದು, 'ಆರ್‌ಸಿಬಿ ತಂಡದ ಅಭಿನಂದನಾ ಕಾರ್ಯಕ್ರಮಕ್ಕಾಗಿ ಮೆಟ್ರೋ ಸೇವೆಯಲ್ಲಿ ಬದಲಾವಣೆ ಆಗಿದೆ. ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಭಿನಂದನಾ ಸಮಾರಂಭಕ್ಕೆ ಅಪಾರ ಜನಸಂದಣಿ ಸೇರಿದೆ. ಈ ಕಾರಣಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಇಂದು ಸಂಜೆ 4:30 ರಿಂದ ಕಬ್ಬನ್ ಪಾರ್ಕ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ವಿಧಾನಸೌಧ ನಿಲ್ದಾಣಗಳಲ್ಲಿ ಮುಂದಿನ ಸೂಚನೆ ಬರುವವರೆಗೂ ಮೆಟ್ರೋ ರೈಲುಗಳು ನಿಲ್ಲುವುದಿಲ್ಲ ಎಂದು ಘೋಷಿಸಿದೆ. ಅದರಂತೆ ಈ ನಿಲ್ದಾಣಗಳಲ್ಲಿ ಟೋಕನ್ ಮತ್ತು ಕ್ಯೂಆರ್ ಟಿಕೆಟ್ ವಿತರಣಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಎಲ್ಲಾ ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಗಳನ್ನು ಗಮನಿಸಿ ಸುಗಮ ಪ್ರಯಾಣಕ್ಕಾಗಿ ಮೆಟ್ರೋ ಸಿಬ್ಬಂದಿಯೊಂದಿಗೆ ಸಹಕರಿಸಬೇಕೆಂದು ಬಿಎಂಆರ್‌ಸಿಎಲ್ ಒತ್ತಾಯಿಸುತ್ತದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಅದಕ್ಕೆ ತಕ್ಕಂತೆ ಯೋಜಿಸಿಕೊಳ್ಳುವಂತೆ ಮತ್ತು ತಮ್ಮ ಪ್ರಯಾಣದ ಅಗತ್ಯಗಳಿಗಾಗಿ ಪರ್ಯಾಯ ಮೆಟ್ರೋ ನಿಲ್ದಾಣಗಳನ್ನು ಬಳಸುವಂತೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
