ವಿಯೆಟ್ನಾಂ ಮೂಲದ ಗ್ರೀನ್ ಎಸ್‌ಎಂ (GSM) ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆ ಇದೀಗ ಬೆಂಗಳೂರಿಗೆ ಲಗ್ಗೆಯಿಟ್ಟಿದೆ. ಈ ಅಗ್ಗದ ದರದ ಕ್ಯಾಬ್ ಸೇವೆಯಿಂದ ಸ್ಥಳೀಯ ಚಾಲಕರು ತಮ್ಮ ಭವಿಷ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ವಿಯೆಟ್ನಾಂ ಮೂಲದ ವಿನ್‌ಗ್ರೂಪ್ ಸಂಸ್ಥೆಗೆ ಸೇರಿದ 'ಗ್ರೀನ್ ಎಸ್‌ಎಂ' (GSM) ಸಂಪೂರ್ಣ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಯು ದೆಹಲಿ ಮತ್ತು ಹೈದರಾಬಾದ್ ಬೆನ್ನಲ್ಲೇ ಇದೀಗ ಬೆಂಗಳೂರಿಗೆ ಲಗ್ಗೆಯಿಟ್ಟಿದೆ. ನಗರದ ಇಂದಿರಾನಗರ ಆರ್‌ಟಿಒ ಕಚೇರಿಯಲ್ಲಿ ಈಗಾಗಲೇ 100 ಇವಿ ವಾಹನಗಳು ನೋಂದಣಿಯಾಗಿದ್ದು, ಕಂಪನಿಯು ಚಾಲಕರಿಗೆ ಮಾಸಿಕ ಸಂಬಳ ನೀಡಿ ಈ ಕ್ಯಾಬ್ ಸೇವೆ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಈ ಹೊಸ ಎಲೆಕ್ಟ್ರಿಕ್ ಟ್ಯಾಕ್ಸಿಗಳ ಪ್ರವೇಶದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಓಲಾ, ಉಬರ್ ಮತ್ತು ರ್ಯಾಪಿಡೋ ಸಂಸ್ಥೆಗಳಿಗೆ ತೀವ್ರ ಪೈಪೋಟಿ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

₹8 ರಷ್ಟು ಕನಿಷ್ಠ ದರ ನಿಗದಿಪಡಿಸಲು ಮುಂದಾಗಿರೋ ಗ್ರೀನ್ ಎಎಸ್‌ಎಂ

ಪ್ರಸ್ತುತ ಬೆಂಗಳೂರಿನಲ್ಲಿ ಆಟೋ ದರ ಪ್ರತಿ ಕಿ.ಮೀ.ಗೆ ₹13-15, ಕ್ಯಾಬ್ ದರ ₹20-23 ಹಾಗೂ ರ್ಯಾಪಿಡೋ ಬೈಕ್ ದರ ₹10 ಇದೆ. ಆದರೆ, ಗ್ರೀನ್ ಎಸ್‌ಎಂ ಸಂಸ್ಥೆಯು ಪ್ರತಿ ಕಿ.ಮೀ.ಗೆ ಸುಮಾರು ₹8 ರಷ್ಟು ಕನಿಷ್ಠ ದರ ನಿಗದಿಪಡಿಸಲು ಮುಂದಾಗಿದೆ. ಈ ಕಾರಣದಿಂದ ಇನ್ನುಳಿದ ಆಪ್ ಆಧರಿತ ಸಾರಿಗೆ ಸೇವೆಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ.

ಸ್ಥಳೀಯ ಚಾಲಕರಿಂದ ವಿರೋಧ

ಈ ಭಾರಿ ದರ ಸಮರವು ಗ್ರಾಹಕರಿಗೆ ಹೆಚ್ಚಿನ ಅನುಕೂಲ ನೀಡಲಿದೆಯಾದರೂ, ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ವಾಹನ ಖರೀದಿಸಿರುವ ಸ್ಥಳೀಯ ಆಟೋ ಹಾಗೂ ಕ್ಯಾಬ್ ಚಾಲಕರಲ್ಲಿ ತಮ್ಮ ಭವಿಷ್ಯದ ಕುರಿತು ತೀವ್ರ ಆತಂಕ ಮೂಡಿಸಿದೆ. ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಆಡಳಿತ ಮತ್ತು ಕಡಿಮೆ ದರದ ಪೈಪೋಟಿಯಿಂದಾಗಿ ತಮ್ಮ ಜೀವನೋಪಾಯಕ್ಕೆ ಕುತ್ತು ಬರಲಿದೆ ಎಂದು ಸ್ಥಳೀಯ ಚಾಲಕರು ಈ ಸೇವೆಗೆ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಲಗೇಜ್ ಎತ್ತಿಟ್ಟ ಬೆಂಗಳೂರು ಕ್ಯಾಬ್ ಡ್ರೈವರ್ ನಿಂದ ಬದಲಾಯ್ತು ಟೆಕ್ಕಿ ಮನಸ್ಸು

ಇದನ್ನೂ ಓದಿ: ಬೆಂಗಳೂರಿನ ರಾಜಕಾಲುವೆಗಳ ಬ್ಲಾಕೇಜ್, ಪ್ರವಾಹ ಸಮಸ್ಯೆಗೆ ರೊಬೊಟಿಕ್ ಯಂತ್ರದ ಪರಿಹಾರ