ಬೆಂಗಳೂರು ಉದ್ಯಮಿ ಸಿಜೆ ರಾಯ್ ಸಾವಿಗಿದೆಯಾ ಕೇರಳ ಎಲೆಕ್ಷನ್ ಲಿಂಕ್? ಸ್ಫೋಟಕ ತಿರುವು? ಐಟಿ ಅಧಿಕಾರಿಗಳು ಕಳೆದ ಒಂದು ತಿಂಗಳಿನಿಂದ ಸಿಜೆ ರಾಯ್ ಪ್ರತಿ ಟ್ರಾನ್ಸಾಕ್ಷನ್ ಮೇಲೆ ಕಣ್ಣಿಟ್ಟಿದ್ದರು. ದಾಳಿ ವೇಳೆ ಪತ್ತೆಯಾಗಿರುವ ದಾಖಲೆಗಳು ಕೆಲ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದೆ. 

ಬೆಂಗಳೂರು (ಜ.31) ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಚೇರ್ಮೆನ್ ಸಿಜೆ ರಾಯ್ ದುರಂತ ಅಂತ್ಯ ಕುರಿತು ಪೊಲೀಸ್ ತನಿಖೆಗಳು ಚುರುಕುಗೊಂಡಿದೆ. ಐಟಿ ಅಧಿಕಾರಿಗಳ ದಾಳಿ ನಡುವೆ ಎದೆಗೆ ಗುಂಡು ಹಾರಿಸಿಕೊಂಡು ಸಿಜೆ ರಾಯ್ ಬದುಕು ಅಂತ್ಯಗೊಳಿಸಿದ್ದಾರೆ. ಸಿಜೆ ರಾಯ್ ಸಾವಿಗೆ ಕಾರಣಗಳೇನು ಅನ್ನೋ ಕುರಿತು ಭಾರಿ ಚರ್ಚೆಯಾಗುತ್ತಿದೆ. ಸಿಜೆ ರಾಯ್ ಸಾವಿಗೆ ಇದೀಗ ಕೇರಳ ಲಿಂಕ್ ಇದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಮುಂಬರುವ ಎಪ್ರಿಲ್ ತಿಂಗಳಿನಲ್ಲಿ ಕೇರಳ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಸಿಜೆ ರಾಯ್ ಹಣದ ನೆರವು ನೀಡುತ್ತಿದ್ದಾರೆ ಅನ್ನೋ ಕುರಿತ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿದೆ.

ಕೇರಳ ಚುನಾವಣೆ ಕಾರಣ ಐಟಿ ಅಧಿಕಾರಿಗಳ ಸರ್ಚ್

ಸಿಜೆ ರಾಯ್ ಬೆಂಗಳೂರಿನ ಕಚೇರಿಯಲ್ಲಿ ಪಿಸ್ತೂಲ್ ಮೂಲಕ ಗುಂಡು ಹಾರಿಸಿಕೊಂಡು ಬದುಕು ಅಂತ್ಯಗೊಳಿಸಿದ್ದರು. ಬೆಂಗಳೂರಿನ ಲ್ಯಾಂಡ್‌ಫೋರ್ಡ್ ಕಚೇರಿಗೆ ಕೇರಳ ಐಟಿ ಅಧಿಕಾರಿಗಳು ದಾಳಿ ಮಾಡಿ ತಲಾಶ್ ಮಾಡಿದ್ದರು. ಮೂರು ದಿನಗಳಿಂದ ಸತತವಾಗಿ ಕಾನ್ಫಿಡೆಂಟ್ ಗ್ರೂಪ್ ಕಚೇರಿಗಳು, ಆಸ್ತಿಗಳ ಮೇಲೆ ಕೇರಳ ಐಟಿ ಅಧಿಕಾರಿಗಳು ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದರು. ಇದೇ ಕೇರಳ ಐಟಿ ತಂಡ ಕಳೆದ ಒಂದು ತಿಂಗಳಿನಿಂದ ಕೇರಳದಲ್ಲಿ ಸಿಜೆ ರಾಯ್ ಅವರ ವ್ಯವಹಾರ, ಹಣ ವರ್ಗಾವಣೆ ಕುರಿತು ಸಂಪೂರ್ಣ ನಿಗಾ ಇಟ್ಟಿತ್ತು. ಕಾರಣ ಕೇರಳ ಚುನಾವಣೆಗೆ ಸಿಜೆ ರಾಯ್ ಅವರಿಂದ ರಾಜಕೀಯ ನಾಯಕರು, ಪಕ್ಷಗಳು ಫಂಡಿಂಗ್ ಪಡೆದುಕೊಳ್ಳುತ್ತಿದೆ ಅನ್ನೋ ಆರೋಪ ಕೇಳಿಬಂದಿತ್ತು. ಹೀಗಾಗಿ ಕೇರಳ ಐಟಿ ಅಧಿಕಾರಿಗಳು ಸತತವಾಗಿ ಶೋಧ ಕಾರ್ಯ ಆರಂಭಿಸಿದ್ದರು.

ಕಳೆದ ಕೆಲ ಚುನಾವಣೆಗೆ ಫಂಡಿಂಗ್ ಮಾಡಿರುವ ಕುರಿತು ಅನುಮಾನ

ಕಳೆದ ಕೆಲ ಚುನಾವಣೆಗಳಿಗೆ ಉದ್ಯಮಿ ಸಿಜೆ ರಾಯ್ ರಾಜಕೀಯ ನಾಯಕರು, ಪಕ್ಷಗಳಿಗೆ ಫಂಡಿಂಗ್ ಮಾಡಿರುವುದಾಗಿ ವರದಿಯಾಗಿದೆ. ಇದೇ ಕಾರಣದಿಂದ ಈ ಬಾರಿಯ ಚುನಾವಣೆಗೂ ಸಿಜೆ ರಾಯ್ ಮೂಲಕ ಫಂಡಿಂಗ್ ಸಾಧ್ಯತೆಗಳ ಕುರಿತು ಮಾಹಿತಿಗಳು ಐಟಿ ಅಧಿಕಾರಿಗಳಿಗೆ ರವಾನೆಯಾಗಿತ್ತು. ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಐಟಿ ಅಧಿಕಾರಿಗಳ ದಾಖಲೆ ಪತ್ರಗಳ ಪರಿಶೋಧನೆ ತೀವ್ರಗೊಳಿಸಿದ್ರು.

ಕೇರಳದಲ್ಲಿ ಕಾನ್ಫಿಡೆಂಟ್ ಗ್ರೂಪ್ ನಿರ್ಮಾಣ ಮಾಡಿದ ಫ್ಲ್ಯಾಟ್‌ಗಳನ್ನು ಅತೀ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದಾಗಿ ದಾಖಲೆಗಳಲ್ಲಿ ನಮೂದಾಗಿದೆ. ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಯಲ್ಲಿ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಕೇರಳ ಚುನಾವಣೆ ಸಮೀಪಿಸುತ್ತಿದ್ದಂತೆ ಈ ನಡೆ ಅನುಮಾನ ಮೂಡಿಸಿದೆ. ಇನ್ನು ಮಾರಾಟ ಮಾಡುವಾಗ ಹಣ ವ್ಯವಹಾರಗಳು ಬಹುತೇಕ ನಗದು ಮೂಲಕ ನಡೆದಿದೆ. ಇದು ಕೂಡ ಐಟಿ ಅಧಿಕಾರಿಗಳ ಅನುಮಾನ ಹೆಚ್ಚಿಸಿದೆ. ತೆರಿಗೆ ವಂಚಿಸಲು ಸಿಜೆ ರಾಯ್ ನಗದು ವ್ಯವಹಾರ ಮಾಡಿದ್ದಾರೆ ಅನ್ನೋದರ ಜೊತೆಗೆ ಕೇರಳ ಚುನಾವಣೆ ಲಿಂಕ್ ಕೂಡ ಇದರ ಹಿಂದಿತ್ತಾ ಅನ್ನೋ ಕುರಿತು ಐಟಿ ಅಧಿಕಾರಿಗಳು ತನಿಖೆ ಚುರುಗೊಳಿಸಿದ್ದಾರೆ.

ಬೆಂಗಳೂರು ಪೊಲೀಸರ ತನಿಖೆ ಚುರುಕು

ಉದ್ಯಮಿ ಸಿಜೆ ರಾಯ್ ಸಾವು ಪ್ರಕರಣದ ಕುರಿತು ಬೆಂಗಳೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಸಿಜೆ ರಾಯ್ ಕಚೇರಿಯ ಕೋಣೆಯೊಳಗೆ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಎದೆ ಮೇಲೆ ಗನ್ ಇಟ್ಟು ಶೂಟ್ ಮಾಡಿರುವುದು ವರದಿಯಲ್ಲಿ ಪತ್ತೆಯಾಗಿದೆ. ಎದೆಯ ಮೇಲ್ಬಾಗದ ಮಾಸಖಂಡಗಳು ಚದುರಿಲ್ಲ. ಇದು ಕ್ಲೋಸ್ ಡಿಸ್ಟೆನ್ಸ್‌ನಿಂದ ಗುಂಡು ಹಾರಿಸಿದ್ದಾರೆ. ಗುಂಡು ಎದೆಯ ಒಳಭಾಗಕ್ಕೆ ಇಳಿದಿದೆ. ಸಿಜೆ ರಾಯ್ ಬಲಗೈಯಲ್ಲಿ ಗನ್ ಹಿಡಿದು ಎದೆಯ ಮೇಲಿಟ್ಟು ಗುಂಡು ಹಾರಿಸಿದ್ದಾರೆ ಎಂದು ವೈದ್ಯರ ವರದಿಗಳು ಹೇಳುತ್ತಿದೆ.ವೈದ್ಯರು ಹಾಗೂ ಎಫ್ಎಸ್ಎಲ್ ತಂಡದಿಂದ ಮೃತದೇಹ‌ ಪರಿಶೀಲನೆ ಮಾಡಿ ವರದಿ ತಯಾರಿಸಿದ್ದಾರೆ.

ಸಿಜೆ ರಾಯ್ ಫೈರಿಂಗ್ ಮಾಡಿರುವ ಪಿಸ್ತೂಲ್ ಲೈಸೆನ್ಸ್ ಗನ್. ಯಾವತ್ತೂ ಈ ಪಿಸ್ತೂಲ್ ಸಿಜೆ ರಾಯ್ ಇಟ್ಟುಕೊಂಡಿರುತ್ತಿದ್ದರು. ಶ್ರೀಮಂತ ಉದ್ಯಮಿಯಾಗಿರುವ ಕಾರಣ ಲೈಸೆನ್ಸ್ ಪಿಸ್ತೂಲ್ ಪಡೆದುಕೊಂಡಿದ್ದಾರೆ. NP bore 0.25 ಪಿಸ್ತೂಲ್‌ ಮೂಲಕ ಗುಂಡು ಹಾರಿಸಿದ್ದಾರೆ. ಈ ಪಿಸ್ತೂಲ್‌ನ್ನು ಎಫ್ಎಸ್ಎಲ್ ಗೆ ರವಾನೆ ಮಾಡಲಾಗಿದೆ.

ಸಿಜೆ ರಾಯ್ ಯಾತ ಜೊತೆಗೆಲ್ಲ ಸಂಪರ್ಕ ಹೊಂದಿದ್ದರು. ಯಾರ ಜೊತೆ ಉದ್ಯಮ ನಡೆಸುತ್ತಿದ್ದರು, ಯಾರೆಲ್ಲಾ ಇತ್ತೀಚಿನ ದಿನಗಳಲ್ಲಿ ಸಿಜೆ ರಾಯ್ ಜೊತೆ ಸಂಪರ್ಕ ಹೊಂದಿದ್ದರು ಅನ್ನೋ ಕುರಿತು ಬೆಂಗಳೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.