ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತವು (BSWML) ಕಸ ವಿಲೇವಾರಿ ಮೂಲಸೌಕರ್ಯ ವಿಸ್ತರಿಸಲು 37 ಭೂ ಭಾಗಗಳನ್ನು ಕೋರಿದೆ. ಮಾವಳ್ಳಿಪುರ, ಮಂಡೂರು ಸೇರಿ ಕಲ್ಲು ಕ್ವಾರಿಗಳಲ್ಲೂ ಘಟಕ ಸ್ಥಾಪಿಸಲು ಚಿಂತನೆ ನಡೆದಿದ್ದು, ಕೆಲವೆಡೆ ಗ್ರಾಮಸ್ಥರ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು (ನ.24): ನಗರದ ಘನತ್ಯಾಜ್ಯ ನಿರ್ವಹಣಾ ಮೂಲಸೌಕರ್ಯವನ್ನು ವಿಸ್ತರಿಸುವ ಉದ್ದೇಶದಿಂದ 'ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ' (BSWML), ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ಪತ್ರ ಬರೆದು ಒಟ್ಟು 37 ಭೂ ಭಾಗಗಳನ್ನು (Land parcels) ನೀಡುವಂತೆ ಕೋರಿದೆ. ಈ ಪ್ರಮುಖ ಆಸ್ತಿಗಳಲ್ಲಿ ಆನೇಕಲ್‌ನಲ್ಲಿ 207 ಎಕರೆ, ಮಂಡೂರಿನಲ್ಲಿ 169 ಎಕರೆ, ಮಾವಳ್ಳಿಪುರದಲ್ಲಿ 100 ಎಕರೆ ಮತ್ತು ಗೊಲ್ಲಹಳ್ಳಿಯಲ್ಲಿ 84 ಎಕರೆ ಭೂಮಿ ಸೇರಿದೆ. ದಾಖಲೆಗಳ ಪ್ರಕಾರ, BSWML ಒಟ್ಟು 11 ಭೂ ಭಾಗಗಳ ಹಸ್ತಾಂತರ, 17 ಆಸ್ತಿಗಳ ಕಂದಾಯ ದಾಖಲೆಗಳನ್ನು (RTCs) ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಹೆಸರಿಗೆ ಖಾತೆ ಬದಲಾವಣೆ (Mutation) ಮಾಡುವುದು ಹಾಗೂ ಸರ್ಕಾರಿ ಗೋಮಾಳ ಜಮೀನಿನಲ್ಲಿರುವ ಒಂಬತ್ತು ಪಾಳುಬಿದ್ದ ಕಲ್ಲು ಕ್ವಾರಿಗಳನ್ನು ಜಂಟಿ ಪರಿಶೀಲನೆಯ ನಂತರ GBAಗೆ ವರ್ಗಾಯಿಸುವಂತೆ ಕೋರಿದೆ.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲೂ ಈ ಪ್ರಸ್ತಾವನೆಯ ಕುರಿತು ಚರ್ಚಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳೊಂದಿಗೆ (Deputy Commissioner) ಮತ್ತೊಂದು ಸಭೆ ಕರೆಯುವಂತೆ ಸಚಿವರು GBA ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಆ ಸಭೆಯ ದಿನಾಂಕ ಇನ್ನೂ ನಿಗದಿಯಾಗಬೇಕಿದೆ.

ಹಿಂದಿನ ಗುತ್ತಿಗೆ ಷರತ್ತುಗಳಿಲ್ಲದೆ ಭೂಮಿ ಹಸ್ತಾಂತರಕ್ಕೆ ಮನವಿ & ಹೊಸ ಘಟಕಗಳ ಯೋಜನೆ

GBA ಮತ್ತು BSWML ಕೋರಿರುವ ಕೆಲವು ಭೂ ಭಾಗಗಳು ಈ ಹಿಂದೆ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಗುತ್ತಿಗೆಯಲ್ಲಿದ್ದವು. ಉದಾಹರಣೆಗೆ, ಪಾಲಿಕೆಯು ಮಾವಳ್ಳಿಪುರದಲ್ಲಿ ಸುಮಾರು 100 ಎಕರೆ ಭೂಮಿಯನ್ನು ವಾರ್ಷಿಕ ಪ್ರತಿ ಎಕರೆಗೆ ₹1,000 ದರದಲ್ಲಿ ಗುತ್ತಿಗೆಗೆ ಪಡೆದಿತ್ತು. ಈಗ ಹಿಂದಿನ ಗುತ್ತಿಗೆ ಷರತ್ತುಗಳಿಲ್ಲದೆ ಆ ಭೂಮಿಯನ್ನು ನೀಡುವಂತೆ BSWML ಕೋರಿದೆ. ಚಿಕ್ಕನಾಗಮಂಗಲ, ಬಿಂಗೀಪುರ, ಮಂಡೂರು ಮತ್ತು ಬಿದರಹಳ್ಳಿಯಲ್ಲಿರುವ ಭೂ ಭಾಗಗಳಿಗೂ ಇದೇ ರೀತಿಯ ಮನವಿಗಳನ್ನು ಸಲ್ಲಿಸಲಾಗಿದೆ.

ಯಲಹಂಕದ ದೊಡ್ಡಬಿದರಕಲ್ಲು ಮತ್ತು ಮಾರೇನಹಳ್ಳಿಯಲ್ಲಿ ಕಟ್ಟಡ ಮತ್ತು ನೆಲಸಮ (C&D) ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕೆಲವು ಭೂ ಭಾಗಗಳನ್ನು ಕೋರಲಾಗಿದೆ. ಅಲ್ಲದೆ, ಬ್ಯಾಟರಾಯನಪುರದ ಚೊಕ್ಕನಹಳ್ಳಿಯಲ್ಲಿ ತ್ಯಾಜ್ಯ ವರ್ಗಾವಣೆ ಕೇಂದ್ರವನ್ನು (Waste transfer station) ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.

ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳು, ಸಂಸ್ಕರಣಾ ಘಟಕಗಳು, ಎಲೆ ಗೊಬ್ಬರ (Leaf composting) ಘಟಕಗಳು ಮತ್ತು ತೆಂಗಿನಕಾಯಿ ತ್ಯಾಜ್ಯ ಸಂಸ್ಕರಣಾ ಘಟಕಗಳಂತಹ ತ್ಯಾಜ್ಯ ನಿರ್ವಹಣಾ ಸೌಲಭ್ಯಗಳನ್ನು ನಿರ್ಮಿಸಲು ನಮಗೆ ಭೂಮಿಯ ಅಗತ್ಯವಿದೆ. ಈ ವಿಷಯದ ಕುರಿತು ನಾವು ಜಿಲ್ಲಾಡಳಿತದೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದೇವೆ ಎಂದು BSWML ಸಿಇಒ ಕರೀಗೌಡ ತಿಳಿಸಿದ್ದಾರೆ.

ಪಾಳುಬಿದ್ದ ಕಲ್ಲು ಕ್ವಾರಿಗಳ ಜಂಟಿ ಪರಿಶೀಲನೆಗೆ ಮನವಿ; ತರಹುಣಸೆ ಗ್ರಾಮಸ್ಥರ ವಿರೋಧ

ತ್ಯಾಜ್ಯ ನಿರ್ವಹಣಾ ಸೌಲಭ್ಯಗಳಿಗೆ ಸೂಕ್ತವೇ ಎಂಬುದನ್ನು ಮೌಲ್ಯಮಾಪನ ಮಾಡಲು ಕಂದಾಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳಿಂದ ಒಂಬತ್ತು ಪಾಳುಬಿದ್ದ ಕಲ್ಲು ಕ್ವಾರಿಗಳ ಜಂಟಿ ಪರಿಶೀಲನೆ ನಡೆಸುವಂತೆಯೂ BSWML ಕೋರಿದೆ. ಯಲಹಂಕದ ಮಾರೇನಹಳ್ಳಿ (32 ಎಕರೆ) ಮತ್ತು ತರಹುಣಸೆ (19 ಎಕರೆ); ಆನೇಕಲ್‌ನ ಹುಲಿಮಂಗಲ (18 ಎಕರೆ 21 ಗುಂಟೆ); ಹಾಗೂ ಬೆಂಗಳೂರು ಪೂರ್ವದ ಯರಪ್ಪನಹಳ್ಳಿ (16 ಎಕರೆ 18 ಗುಂಟೆ) ಕ್ವಾರಿಗಳು ಇದರಲ್ಲಿ ಸೇರಿವೆ. ಇದಲ್ಲದೆ, ತಿಪ್ಪಗೊಂಡನಹಳ್ಳಿ ಜಲಾಶಯದ (TG Halli Reservoir) ಜಲಾನಯನ ಪ್ರದೇಶದಲ್ಲಿರುವ ಮೂರು ಕ್ವಾರಿಗಳೂ ಈ ಪಟ್ಟಿಯಲ್ಲಿವೆ.

ಇತ್ತೀಚೆಗೆ ತರಹುಣಸೆ ಗ್ರಾಮಸ್ಥರು ನಗರದ ಕಸವನ್ನು ತಮ್ಮ ಗ್ರಾಮಕ್ಕೆ ಸಾಗಿಸುವ BSWML ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರು. ತಮ್ಮ ಗ್ರಾಮ ಪಂಚಾಯಿತಿಯು ತನ್ನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುತ್ತಿದೆ ಎಂದು ಹೇಳಿದ್ದ ಗ್ರಾಮಸ್ಥರು, ನಗರದ ಹೊರವಲಯಕ್ಕೆ ಕಸವನ್ನು ಸಾಗಿಸುವ ಬದಲು ಅದೇ ಪದ್ಧತಿಯನ್ನು ಅನುಸರಿಸುವಂತೆ ಸಂಸ್ಥೆಯನ್ನು ಒತ್ತಾಯಿಸಿದ್ದರು.