ಪ್ರಯಾಣ ದರ ರಹಿತ ಆದಾಯವನ್ನು ಹೆಚ್ಚಿಸಲು, ಬಿಎಂಟಿಸಿ ತನ್ನ ಬಸ್ ಟಿಕೆಟ್‌ಗಳ ಹಿಂಭಾಗದಲ್ಲಿ ಜಾಹೀರಾತುಗಳನ್ನು ಮುದ್ರಿಸಲು ಮತ್ತು ಸೀಟುಗಳ ಹಿಂದೆ ಕ್ಯೂಆರ್ ಕೋಡ್ ಅಳವಡಿಸಲು ಮುಂದಾಗಿದೆ. 'ಶಕ್ತಿ' ಯೋಜನೆಯ ಆರ್ಥಿಕ ಒತ್ತಡವನ್ನು ಸರಿದೂಗಿಸಲು ಸಂಸ್ಥೆಯು ಭೂಮಿ ನಗದೀಕರಣಕ್ಕೆ ಮುಂದಾಗುತ್ತದೆ.
ಬೆಂಗಳೂರು (ಮೇ.20): ರಾಜಧಾನಿ ಸಿಲಿಕಾನ್ ಸಿಟಿಯ ಸಾರಿಗೆ ಜೀವಾಳವಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ತನ್ನ ಬಸ್‌ಗಳ ಸಂಪೂರ್ಣ ಬಾಡಿಗೆ ಜಾಗವನ್ನು ಜಾಹೀರಾತುಗಳಿಗೆ ಬಳಸಿಕೊಂಡ ಬೆನ್ನಲ್ಲೇ, ಈಗ ಪ್ರಯಾಣಿಕರಿಗೆ ನೀಡುವ ದಿನನಿತ್ಯದ ಟಿಕೆಟ್‌ಗಳ ಮೂಲಕವೂ ಹೆಚ್ಚುವರಿ ಆದಾಯ ಗಳಿಸಲು ವಿನೂತನ ಮಾಸ್ಟರ್ ಪ್ಲಾನ್ ರೂಪಿಸಿದೆ. ಪ್ರಯಾಣ ದರವನ್ನು ಹೊರತುಪಡಿಸಿ ಇತರ ಮೂಲಗಳಿಂದ ಬರುವ ಆದಾಯವನ್ನು (Non-Fare Revenue) ವೃದ್ಧಿಸಿಕೊಳ್ಳಲು ಬಿಎಂಟಿಸಿ ಈಗ ಇವಿಎಂ ಟಿಕೆಟ್‌ಗಳ ಹಿಂಭಾಗವನ್ನು ವಾಣಿಜ್ಯೀಕರಣಗೊಳಿಸಲು ಮುಂದಾಗಿದ್ದು, ಇದಕ್ಕಾಗಿ ಜಾಗತಿಕ ಟೆಂಡರ್ ಆಹ್ವಾನಿಸಿದೆ.

ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ (ETM) ಮೂಲಕ ವಿತರಿಸಲಾಗುವ ಥರ್ಮಲ್ ಟಿಕೆಟ್‌ಗಳ ಹಿಂಭಾಗದಲ್ಲಿ ಇನ್ನು ಮುಂದೆ ಆಕರ್ಷಕ ಜಾಹೀರಾತುಗಳು ರಾರಾಜಿಸಲಿವೆ. ಪ್ರತಿದಿನ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವ ಸುಮಾರು 45 ಲಕ್ಷಕ್ಕೂ ಅಧಿಕ ಪ್ರಯಾಣಿಕರ ಬೃಹತ್ ಮಾರುಕಟ್ಟೆಯನ್ನು ತಲುಪಲು ಈ ಯೋಜನೆ ಜಾಹೀರಾತುದಾರರಿಗೆ ಸುವರ್ಣಾವಕಾಶ ಒದಗಿಸಲಿದೆ ಎಂದು ಸಂಸ್ಥೆ ತಿಳಿಸಿದೆ.
ಪ್ರತಿ ಸೀಟಿನ ಹಿಂದೆ ಕ್ಯುಆರ್ ಕೋಡ್
"ಬಿಎಂಟಿಸಿ ಇತಿಹಾಸದಲ್ಲೇ ಮೊದಲ ಬಾರಿಗೆ ಟಿಕೆಟ್‌ನ ಹಿಂಭಾಗದಲ್ಲಿ ಜಾಹೀರಾತು ಮುದ್ರಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಬಸ್‌ನ ಪ್ರತಿಯೊಂದು ಸೀಟಿನ ಹಿಂಭಾಗದಲ್ಲೂ ಕ್ಯುಆರ್ ಕೋಡ್ (QR Code) ಅಳವಡಿಸುವ ಹೊಸ ತಂತ್ರಜ್ಞಾನದ ಬಗ್ಗೆಯೂ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಪ್ರಯಾಣಿಕರು ಅದನ್ನು ಸ್ಕ್ಯಾನ್ ಮಾಡಿದ ತಕ್ಷಣ ಅದು ನೇರವಾಗಿ ಜಾಹೀರಾತುದಾರರ ಪೋರ್ಟಲ್‌ಗೆ ಕರೆದೊಯ್ಯುತ್ತದೆ. ಮುಂಬರುವ ದಿನಗಳಲ್ಲಿ ಇಂತಹ ಮತ್ತಷ್ಟು ನವೀನ ಕ್ರಮಗಳ ಮೂಲಕ ಪ್ರಯಾಣ ದರ ರಹಿತ ಆದಾಯವನ್ನು ಹೆಚ್ಚಿಸಲಾಗುವುದು" ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಂಸ್ಥೆಯು ವಾರ್ಷಿಕವಾಗಿ ಸುಮಾರು 72 ಲಕ್ಷ ಇಟಿಎಂ ಥರ್ಮಲ್ ರೋಲ್‌ಗಳನ್ನು ಬಳಸುತ್ತದೆ, ಅಂದರೆ ತಿಂಗಳಿಗೆ ಸುಮಾರು 6 ಲಕ್ಷ ರೋಲ್‌ಗಳ ಬಳಕೆ ಇರುತ್ತದೆ. ಪ್ರತಿ ರೋಲ್‌ನಿಂದ ಸರಾಸರಿ 3,750 ಟಿಕೆಟ್‌ಗಳನ್ನು ಮುದ್ರಿಸಬಹುದಾಗಿದ್ದು, ಇದು ಕಂಪನಿಗಳ ಬ್ರ್ಯಾಂಡಿಂಗ್‌ಗೆ ನಗರದಾದ್ಯಂತ ದಿನನಿತ್ಯ ಭಾರಿ ವಿಸಿಬಿಲಿಟಿ ತಂದುಕೊಡಲಿದೆ. ಪ್ರಸ್ತುತ ಬಿಎಂಟಿಸಿ 52 ಡಿಪೋಗಳ ಮೂಲಕ ಒಟ್ಟು 6,959 ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದ್ದು, ದಿನಕ್ಕೆ 6,275 ಕ್ಕೂ ಹೆಚ್ಚು ಶೆಡ್ಯೂಲ್‌ಗಳನ್ನು ಓಡಿಸುತ್ತಿದೆ. ಟೆಂಡರ್ ಪಡೆದ ಜಾಹೀರಾತು ಸಂಸ್ಥೆಯು ಕಲಾಕೃತಿಯನ್ನು (Artwork) ನೀಡಲಿದ್ದು, ಬಿಎಂಟಿಸಿಯ ಅಧಿಕೃತ ಇಟಿಎಂ ರೋಲ್ ಸರಬರಾಜುದಾರರು ಅದನ್ನು ಮುದ್ರಿಸಲಿದ್ದಾರೆ.
ಜಾಹೀರಾತುಗಳ ಮೇಲೆ ಬಿಎಂಟಿಸಿ ಫುಲ್ ಕಂಟ್ರೋಲ್
ಟಿಕೆಟ್‌ಗಳ ಮೇಲೆ ಮುದ್ರಿತವಾಗುವ ವಿಷಯದ ಸಂಪೂರ್ಣ ನಿಯಂತ್ರಣವನ್ನು ಬಿಎಂಟಿಸಿ ತನ್ನ ಬಳಿಯೇ ಉಳಿಸಿಕೊಂಡಿದೆ. ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವ ಅಥವಾ ಆಕ್ಷೇಪಾರ್ಹ ಜಾಹೀರಾತುಗಳನ್ನು ತಿರಸ್ಕರಿಸುವ ಅಧಿಕಾರ ಸಂಸ್ಥೆಗೆ ಇರುತ್ತದೆ. ಪ್ರಮುಖವಾಗಿ ತಂಬಾಕು, ಮದ್ಯ, ಮಾದಕ ದ್ರವ್ಯಗಳು, ಅಶ್ಲೀಲ ವಿಷಯಗಳು, ರಾಜಕೀಯ ಪ್ರಚಾರಗಳು ಮತ್ತು ಧಾರ್ಮಿಕ ಸಂದೇಶಗಳನ್ನೊಳಗೊಂಡ ನಿಷೇಧಿತ ವರ್ಗದ ಜಾಹೀರಾತುಗಳಿಗೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಇದಲ್ಲದೆ, ಒಟ್ಟು ಟಿಕೆಟ್ ದಾಸ್ತಾನಿನ ಪೈಕಿ ಶೇಕಡಾ 10 ರಷ್ಟು ಭಾಗವನ್ನು ಸರ್ಕಾರಿ ಅಭಿಯಾನಗಳು ಮತ್ತು ಸಾರ್ವಜನಿಕ ಜಾಗೃತಿ ಸಂದೇಶಗಳಿಗಾಗಿ ಬಿಎಂಟಿಸಿ ಕಾಯ್ದಿರಿಸಿದೆ.
ಶಕ್ತಿ ಯೋಜನೆ ಎಫೆಕ್ಟ್: ಆದಾಯ ಹೆಚ್ಚಳಕ್ಕೆ ಅನಿವಾರ್ಯ ಕಸರತ್ತು
ರಾಜ್ಯ ಸರ್ಕಾರದ 'ಶಕ್ತಿ' ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ನಿರಂತರ ಆರ್ಥಿಕ ಒತ್ತಡವನ್ನು ಎದುರಿಸುತ್ತಿದೆ. ಪ್ರಯಾಣಿಕರ ಟಿಕೆಟ್ ದರವನ್ನು ಹೆಚ್ಚಿಸದೆ ಸಂಸ್ಥೆಯ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಬ್ರ್ಯಾಂಡಿಂಗ್ ಮತ್ತು ಆಸ್ತಿ ವಾಣಿಜ್ಯೀಕರಣದ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಕಳೆದ ಕೆಲವು ವರ್ಷಗಳ ಬಿಎಂಟಿಸಿಯ ಸಂಚಾರ ಆದಾಯದ (Traffic Revenue) ವಿವರ
- 2018-19: ರೂ. 1,838.84 ಕೋಟಿ
- 2019-20: ರೂ. 1,807 ಕೋಟಿ
- 2020-21: ರೂ. 699.76 ಕೋಟಿ (ಕೋವಿಡ್ ವರ್ಷ)
- 2021-22: ರೂ. 922.49 ಕೋಟಿ
- 2022-23: ರೂ. 1,621.85 ಕೋಟಿ
- 2023-24: ರೂ. 2,024.21 ಕೋಟಿ
- 2024-25: ರೂ. 2,039.09 ಕೋಟಿ
- 2025-26: ರೂ. 2,677.51 ಕೋಟಿ
ಇದೇ ಅವಧಿಯಲ್ಲಿ ಸಂಸ್ಥೆಯ ವಾಣಿಜ್ಯ ಆದಾಯ (Commercial Revenue):
- 2018-19: ರೂ. 265.70 ಕೋಟಿ
- 2019-20: ರೂ. 131.22 ಕೋಟಿ
- 2020-21: ರೂ. 153.90 ಕೋಟಿ
- 2021-22: ರೂ. 154.69 ಕೋಟಿ
- 2022-23: ರೂ. 192.12 ಕೋಟಿ
- 2023-24: ರೂ. 182.05 ಕೋಟಿ
- 2024-25: ರೂ. 345.67 ಕೋಟಿ
- 2025-26: ರೂ. 240.81 ಕೋಟಿ
ಟಿಕೆಟ್ ಜಾಹೀರಾತು ಮಾತ್ರವಲ್ಲದೆ ಬಿಎಂಟಿಸಿ ಇನ್ನೂ ಎರಡು ಮಹತ್ತರ ಯೋಜನೆಗಳನ್ನು ಕೈಗೆತ್ತಿಕೊಂಡಿದೆ
ಸ್ಥಿರಾಸ್ತಿ ನಗದೀಕರಣ (Land Monetisation): ಹಂಚರಹಳ್ಳಿ ಮತ್ತು ದೊಂಬರಹಳ್ಳಿಯಲ್ಲಿರುವ ತನ್ನ ಎರಡು ಪ್ರಮುಖ ಭೂಮಿಯನ್ನು ಸಾರಿಗೆ ಆಧಾರಿತ ಮತ್ತು ವಾಣಿಜ್ಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಾಡಲು ಸಂಸ್ಥೆ ನಿರ್ಧರಿಸಿದೆ. ಮಾರುಕಟ್ಟೆ ಮೌಲ್ಯಮಾಪನ, ಪಿಪಿಪಿ (PPP) ಮಾದರಿ ಹಾಗೂ ಲೀಸಿಂಗ್ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ವಹಿವಾಟು ಸಲಹೆಗಾರರನ್ನು (Transaction Advisor) ನೇಮಿಸಿಕೊಳ್ಳಲಾಗುತ್ತಿದೆ.
ಕ್ಯಾಂಪ್ ಡಿಜಿಟಲ್ ಪ್ಲಾಟ್‌ಫಾರ್ಮ್ (CAMP): ಸಂಸ್ಥೆಯ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳು, ಮುಕ್ತ ಸ್ಥಳಗಳು, ಮೊಬೈಲ್ ಟವರ್‌ಗಳು, ಎಟಿಎಂ ಕೌಂಟರ್‌ಗಳು ಮತ್ತು ಜಾಹೀರಾತುಗಳಿಂದ ಬರುವ ಆದಾಯವನ್ನು ಪಾರದರ್ಶಕವಾಗಿ ಟ್ರ್ಯಾಕ್ ಮಾಡಲು 'ಕಮರ್ಷಿಯಲ್ ಅಸೆಟ್ ಮ್ಯಾನೇಜ್‌ಮೆಂಟ್ ಪ್ಲಾಟ್‌ಫಾರ್ಮ್' (CAMP) ಎಂಬ ಕೇಂದ್ರೀಕೃತ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ವೆಬ್ ಮತ್ತು ಮೊಬೈಲ್ ಆಧಾರಿತ ಈ ತಂತ್ರಜ್ಞಾನವು ಬಾಡಿಗೆ ಬಾಕಿ, ಒಪ್ಪಂದದ ಅವಧಿ ಮುಕ್ತಾಯ, ವಿಳಂಬ ಪಾವತಿಗೆ ಬಡ್ಡಿ ಲೆಕ್ಕಾಚಾರ ಹಾಗೂ ನ್ಯಾಯಾಲಯದ ವಿವಾದದಲ್ಲಿರುವ ಆಸ್ತಿಗಳ ನೈಜ ಸಮಯದ (Real-Time) ನಿಗಾ ವಹಿಸಲಿದೆ. ಇದನ್ನು ಮುಂದಿನ 5 ವರ್ಷಗಳ ಕಾಲ ನಿರ್ವಹಿಸಲು ಮೈಟಿ (MeitY) ಮಾನ್ಯತೆ ಪಡೆದ ಕ್ಲೌಡ್ ಸೇವೆಗೆ ಟೆಂಡರ್ ನೀಡಲಾಗುತ್ತಿದೆ


