ಬೆಂಗಳೂರು [ಅ.15]:  ವರ್ತೂರು ಮುಖ್ಯರಸ್ತೆಯ ವಿನಾಯಕ ಚಿತ್ರಮಂದಿರದ ಸಮೀಪ ಚಲಿಸುತ್ತಿದ್ದ ಶಾಲಾ ಬಸ್‌ ಹಾಗೂ ಟೆಂಪೋ ಮೇಲೆ ಬೃಹತ್‌ ಮರ ಬಿದ್ದಿದ್ದು, ಅದೃಷ್ಟವಶಾತ್‌ ಕೂದಲೆಳೆಯ ಅಂತರದಲ್ಲಿ ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಪಾರಾಗಿದ್ದಾರೆ.

ಘಟನೆಯಲ್ಲಿ ಶಾಲಾ ಬಸ್‌ ಹಾಗೂ ಟೆಂಪೋ ಜಖಂಗೊಂಡಿದ್ದು, ಶಾಲಾ ಬಸ್‌ನಲ್ಲಿದ್ದ ‘ದಿ ಇಂಟರ್‌ ನ್ಯಾಷನಲ್‌ ಸ್ಕೂಲ್‌ ಆಫ್‌ ಬೆಂಗಳೂರು’ ಶಾಲೆಯ 32 ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

ಸೋಮವಾರ ಮಧ್ಯಾಹ್ನ 3.45ರ ಸುಮಾರಿಗೆ 32 ಮಕ್ಕಳಿದ್ದ ಶಾಲಾ ಬಸ್‌ ವರ್ತೂರು ಕಡೆಗೆ ಸಂಚಾರಿಸುತ್ತಿತ್ತು. ವರ್ತೂರು ಮುಖ್ಯರಸ್ತೆಯ ವಿನಾಯಕ ಚಿತ್ರಮಂದಿರ ಮುಂಭಾಗ ಹೋಗುತ್ತಿದ್ದ ವೇಳೆ ಏಕಾಏಕಿ ಮೊದಲು ಬೃಹತ್‌ ಮರ ಟೆಂಪೋ ಮೇಲೆ ಬಿದ್ದಿದೆ. ಹಿಂದೆ ಬರುತ್ತಿದ್ದ ಶಾಲಾ ಬಸ್‌ನ ಚಾಲಕ ಕೂಡಲೇ ಸಮಯ ಪ್ರಜ್ಞೆ ಮೆರೆದಿದ್ದು ಬಸ್‌ ನಿಲ್ಲಿಸಿದ್ದಾರೆ. ಇದರಿಂದ ಮರ ಬಸ್‌ನ ಮುಂಭಾಗದ ಮೇಲೆ ಬಿದ್ದಿದೆ. ಪರಿಣಾಮ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆಯಿಂದ ಶಾಲಾ ಬಸ್‌ ಚಾಲಕ ಹಾಗೂ ಸಹಾಯಕಿಗೆ ಸಣ್ಣಪುಟ್ಟಗಾಯಗಳಾಗಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಸ್‌ ಮೇಲೆ ಮರ ಬೀಳುತ್ತಿದ್ದಂತೆ ವಿದ್ಯಾರ್ಥಿಗಳು ಚೀರಿಕೊಂಡಿದ್ದಾರೆ. ಶಬ್ದ ಕೇಳಿ ಅಕ್ಕಪಕ್ಕದ ಅಂಗಡಿಗಳ ವ್ಯಾಪಾರಿಗಳು ಮತ್ತು ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಚಾಲಕನ ಹಿಂಬದಿಯಲ್ಲಿರುವ ಗ್ಲಾಸ್‌ ಹೊಡೆದು ಮಕ್ಕಳನ್ನು ಬಸ್‌ನಿಂದ ಹೊರಗೆ ಇಳಿಸಿದ್ದಾರೆ. ಬಳಿಕ ಅದೇ ಶಾಲೆಗೆ ಸೇರಿದ ಮತ್ತೊಂದು ಬಸ್‌ನಲ್ಲಿ ಮಕ್ಕಳನ್ನು ಅವರವರ ಮನೆಗಳಿಗೆ ಕಳುಹಿಸಿ ಕೊಡಲಾಗಿದೆ ಎಂದು ಪೊಲೀಸರು ತಿಳಿಸಿದರು.

ಸಂಚಾರ ಅಸ್ತವ್ಯಸ್ತ

ರಸ್ತೆಗೆ ಅಡ್ಡವಾಗಿ ಮರ ಬಿದ್ದ ಕಾರಣ ಹೊಸಕೋಟೆ- ಸರ್ಜಾಪುರ ಮುಖ್ಯರಸ್ತೆಯಲ್ಲಿ ಸುಮಾರು ನಾಲ್ಕೈದು ಕಿ.ಮೀ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಗಂಟೆಗಟ್ಟಲೆ ಪರದಾಡುವಂತಾಯಿತು. ವಿಷಯ ತಿಳಿದು ಸ್ಥಳಕ್ಕೆ ಬಂದ ವೈಟ್‌ಫೀಲ್ಡ್‌ ಸಂಚಾರ ಠಾಣೆ ಪೊಲೀಸರು ಮರ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.