ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಶೇ. 98ರಷ್ಟು ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಭಾರಿ ಸಾಧನೆ ಮಾಡಿದೆ. ಈ 'ವೇಸ್ಟ್ ಟು ರಿಸೋರ್ಸ್ ಸೆಂಟರ್' ಯೋಜನೆಯಿಂದ ವಾರ್ಷಿಕ ₹7 ಕೋಟಿ ಆದಾಯ ಗಳಿಸುತ್ತಿದ್ದು, 5,600 ಟನ್ ಹಸಿರುಮನೆ ಅನಿಲ ತಡೆಗಟ್ಟಿದೆ.

ಬೆಂಗಳೂರು (ಅ.21): ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುವ 'ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್' (BIAL) ಪರಿಸರ ಸಂರಕ್ಷಣೆ ಹಾಗೂ ಸಸ್ಟೈನಬಿಲಿಟಿ (ಸುಸ್ಥಿರತೆ) ವಿಭಾಗದಲ್ಲಿ ಭಾರಿ ಸಾಧನೆ ಮಾಡಿದೆ. ವಿಮಾನ ನಿಲ್ದಾಣದಲ್ಲಿ ಉತ್ಪತ್ತಿಯಾಗುವ ಸುಮಾರು ಶೇಕಡಾ 98 ರಷ್ಟು ತ್ಯಾಜ್ಯವನ್ನು ಮರುಬಳಕೆ ಮಾಡಬಹುದಾದ ಸಂಪನ್ಮೂಲಗಳನ್ನಾಗಿ ಪರಿವರ್ತಿಸುತ್ತಿರುವ ಬಿಯಾಲ್‌ನ 'ವೇಸ್ಟ್ ಟು ರಿಸೋರ್ಸ್ ಸೆಂಟರ್' (Waste to Resource Centre) ಯೋಜನೆಗೆ 'ಸಿಐಐ ಗ್ರೀನ್‌ಕೊ ವೇಸ್ಟ್ ಅಂಡ್ ರಿಸೋರ್ಸ್ ಮ್ಯಾನೇಜ್‌ಮೆಂಟ್ ಸಮ್ಮಿಟ್ 2026' ರಲ್ಲಿ (Cll GreenCo Summit 2026) ಗೌರವಿಸಿ ಪ್ರಶಸ್ತಿ ನೀಡಲಾಗಿದೆ.

ಈ ಅತ್ಯಾಧುನಿಕ ತ್ಯಾಜ್ಯ ಸಂಸ್ಕರಣಾ ಕೇಂದ್ರವು ಜೈವಿಕ (Organic) ಮತ್ತು ಅಜೈವಿಕ (Inorganic) ತ್ಯಾಜ್ಯಗಳನ್ನು ಸಂಸ್ಕರಿಸಿ ಮರುಬಳಕೆ ಮಾಡುತ್ತದೆ. ಇದರಿಂದ ರಿಸೈಕ್ಲಿಂಗ್ ವಸ್ತುಗಳನ್ನು ಮರುಪಡೆಯುವುದಲ್ಲದೆ, ಜೈವಿಕ ಇಂಧನ (Bioenergy) ಮತ್ತು ಇತರ ಉಪಯುಕ್ತ ಸಂಪನ್ಮೂಲಗಳನ್ನು ಉತ್ಪಾದಿಸಲಾಗುತ್ತಿದೆ.

ವಾರ್ಷಿಕ ₹7 ಕೋಟಿ ಆದಾಯ ಹಾಗೂ 5,600 ಟನ್ ಹಸಿರುಮನೆ ಅನಿಲ ತಡೆ

ಬಿಯಾಲ್ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಕಳೆದೆರಡು ವರ್ಷಗಳಲ್ಲಿ ಈ ಕೇಂದ್ರವು ವಾರ್ಷಿಕವಾಗಿ 3,800 ಟನ್‌ಗಳಷ್ಟು ಅಜೈವಿಕ ವಸ್ತುಗಳನ್ನು ಮರುಬಳಕೆಗೆ ಕಳುಹಿಸಿದೆ ಹಾಗೂ 5,800 ಟನ್‌ಗಳಷ್ಟು ಹಸಿರು (ಜೈವಿಕ) ತ್ಯಾಜ್ಯವನ್ನು ಯಶಸ್ವಿಯಾಗಿ ಸಂಸ್ಕರಿಸಿದೆ.

ಹೀಗೆ ಸಂಸ್ಕರಿಸಿ ಪುನರ್ಬಳಕೆ ಮಾಡಿದ ವಸ್ತುಗಳ ಮಾರಾಟ ಮತ್ತು ಮರುಬಳಕೆಯಿಂದ ಬಿಯಾಲ್ ಸಂಸ್ಥೆಯು ವಾರ್ಷಿಕ ಸುಮಾರು ₹7 ಕೋಟಿ ರೂಪಾಯಿಗಳಷ್ಟು ಭಾರಿ ಆದಾಯವನ್ನು ಗಳಿಸುತ್ತಿದೆ. ಇದರ ಜೊತೆಗೆ, 2025 ರ ಸಾಲಿನಲ್ಲಿ ಬರೋಬ್ಬರಿ 5,600 ಟನ್‌ಗಳಷ್ಟು ಹಸಿರುಮನೆ ಅನಿಲ (Greenhouse Gas) ಹೊರಸೂಸುವಿಕೆಯನ್ನು ತಡೆಯುವ ಮೂಲಕ ಜಾಗತಿಕ ತಾಪಮಾನ ಏರಿಕೆಗೆ ಕಡಿವಾಣ ಹಾಕಲು ನೆರವಾಗಿದೆ.

ಈ ಸಾಧನೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿರುವ ಸಿಐಐ ಗ್ರೀನ್ ಬ್ಯುಸಿನೆಸ್ ಸೆಂಟರ್‌ನ ಹಸಿರು ಉತ್ಪಾದನೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಎನ್. ಮುತ್ತುಸೆಷಿಯನ್, "Circular Economy ತತ್ವಗಳನ್ನು ಅಳವಡಿಸಿಕೊಳ್ಳುವುದರಿಂದ ಪರಿಸರ ಸಂರಕ್ಷಣೆಯ ಜೊತೆಗೆ ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು ಎಂಬುದಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದ ಈ ತ್ಯಾಜ್ಯ ಸಂಸ್ಕರಣಾ ಕೇಂದ್ರವೇ ಜಗತ್ತಿಗೆ ಅತ್ಯುತ್ತಮ ಉದಾಹರಣೆಯಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.