ಬೆಂಗಳೂರು ಟ್ರಾಫಿಕ್‌ನಿಂದ ಬೇಸತ್ತ ಜನ: ಕೇವಲ 5 ಕಿ.ಮೀ. ಪಯಣಕ್ಕೆ ಬರೋಬ್ಬರಿ 3 ಗಂಟೆ
ಬೆಂಗಳೂರಿನಲ್ಲಿ ನಿನ್ನೆ ಕೇವಲ 5 ಕಿಲೋ ಮೀಟರ್ ಪ್ರಯಾಣಿಸಲು ಬರೋಬ್ಬರಿ 3 ಗಂಟೆ ಹಿಡಿದಿದೆ ಎಂದರೆ ನೀವೇ ಊಹೆ ಮಾಡಿ ಬೆಂಗಳೂರಿನ ಟ್ರಾಫಿಕ್ ಯಾವ ಕೆಟ್ಟ ಹಂತವನ್ನು ತಲುಪಿದೆ ಎಂದು.
ಗ್ಲೋಬಲ್ ಸಿಟಿಯಾಗಿರುವ ಬೆಂಗಳೂರಿನ ಟ್ರಾಫಿಕ್ ಇಡೀ ಜಗತ್ತಿಗೇ ಫೇಮಸ್. ಆದರೆ ಈಗ ಈ ಟ್ರಾಫಿಕ್ ಕಾಯುವಿಕೆಯನ್ನು ಮತ್ತಷ್ಟು ವಿಷಮಗೊಳಿಸಿದೆ ಬೆಂಗಳೂರಿನ ಮಳೆ. ಬೆಂಗಳೂರಿನಲ್ಲಿ ಧಾರಾಕಾರ ಮಳೆಯಿಂದಾಗಿ ಹಲವು ರಸ್ತೆಗಳಲ್ಲಿ ಮಳೆ ನಿಂತರು ಮಳೆಹನಿ ನಿಂತಿಲ್ಲ, ಎಂಬಂತೆ ಮಳೆಯಿಂದ ರಸ್ತೆಯಲ್ಲಿ ತುಂಬಿದ ನೀರು ಇನ್ನು ಇಳಿದಿಲ್ಲ, ಹೀಗಾಗಿ ಕಚೇರಿಯಿಂದ ಮನೆಗೆ ಮನೆಯಿಂದ ಕಚೇರಿಗೆ ಹೋಗುವವರ ಪರದಾಟ ಹೇಳತೀರದಾಗಿದೆ. ಮಾರ್ಗಮಧ್ಯೆಯೇ ಗಂಟೆಗಳ ಕಾಲ ಸಮಯ ಕಳೆಯುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ನಿನ್ನೆ ಕೇವಲ 5 ಕಿಲೋ ಮೀಟರ್ ಪ್ರಯಾಣಿಸಲು ಬರೋಬ್ಬರಿ 3 ಗಂಟೆ ಹಿಡಿದಿದೆ ಎಂದರೆ ನೀವೇ ಊಹೆ ಮಾಡಿ ಬೆಂಗಳೂರಿನ ಟ್ರಾಫಿಕ್ ಯಾವ ಕೆಟ್ಟ ಹಂತವನ್ನು ತಲುಪಿದೆ ಎಂದು.
ನಿನ್ನೆ ಇಡೀ ದಿನ ಬೆಂಗಳೂರಿನ ಹಲವು ರಸ್ತೆಗಳ ಸ್ಥಿತಿ ಇದೇ ಆಗಿತ್ತು. ಹೊರವರ್ತುಲ ರಸ್ತೆಯಲ್ಲಿ ಇಡೀ ದಿನ ಟ್ರಾಫಿಕ್‌ನಿಂದಾಗಿ ಸಂಚಾರ ಸ್ಥಗಿತಗೊಂಡಿತ್ತು. ಎಲ್ಲೆಡೆ ಟ್ರಾಫಿಕ್ ಪೊಲೀಸರ ದೊಡ್ಡಮಟ್ಟದ ನಿಯೋಜನೆಯ ಹೊರತಾಗಿಯೂ ಸಂಚಾರವನ್ನು ಸಹಜ ಸ್ಥಿತಿಗೆ ತರಲು ಸಾಧ್ಯವಾಗಲೇ ಇಲ್ಲ, ಟ್ರಾಫಿಕ್‌ನಿಂದ ಔಟರ್ ರಿಂಗ್ ರೋಡ್‌ನಲ್ಲಿ ಕೇವಲ ಐದು ಕಿಲೋ ಮೀಟರ್ ಸಂಚರಿಸಲು 3 ಗಂಟೆ ತೆಗೆದುಕೊಂಡಿತು.. ಇತರ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿಯೂ ಪರಿಸ್ಥಿತಿ ಅಷ್ಟೇ ಭೀಕರವಾಗಿತ್ತು.
ಬೆಂಗಳೂರು 1700 ರೂ.ಗೆ ಏರ್‌ಪೋರ್ಟ್ ಫ್ಲೈಯಿಂಗ್ ಟ್ಯಾಕ್ಸಿ : ಇಂದಿರಾನಗರ ಟು ವಿಮಾನ ನಿಲ್ದಾಣಕ್ಕೆ 5 ನಿಮಿಷ ಪ್ರಯಾಣ!
ಹಲವಾರು ಟೆಕ್ ಕಂಪನಿಗಳು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ನೆಲೆಯಾಗಿರುವ ಹೊರ ವರ್ತುಲ ರಸ್ತೆಯಲ್ಲಿ ಉಂಟಾದ ಈ ಟ್ರಾಫಿಕ್ ದುಸ್ತಿತಿಯ ಬಗ್ಗೆ ಮಾತನಾಡಿದ ಕಲ್ಯಾಣ್ ನಗರದ ನಿವಾಸಿ ಸುರೇಂದ್ರನ್ ಕೆ, ನಾನು ಟ್ರಾಪಿಕ್‌ನಲ್ಲಿ ಬಹಳ ಗಂಟೆಗಳಿಂದ ಸಿಲುಕಿಕೊಂಡಿದ್ದೆ. ನೇಚರ್ ಕಾಲ್‌ಗಾಗಿ ನನಗೆ ಎಲ್ಲಿ ನಿಲ್ಲಬೇಕೆಂದು ತಿಳಿಯುತ್ತಿರಲಿಲ್ಲ, ಸಂಜೆ ಆರು ಗಂಟೆಗೆ ಕಚೇರಿ ಬಿಟ್ಟ ನನಗೆ ಮನೆ ತಲುಪಲು ಕನಿಷ್ಠ ಮೂರು ಗಂಟೆ ಹಿಡಿಯಿತು ಎಂದು ಹೇಳಿದ್ದಾರೆ.
ಹಾಗೆಯೇ ವೈಟ್‌ಫೀಲ್ಡ್, ಮಾರತಹಳ್ಳಿ, ಬೆಳಂದೂರಿನಲ್ಲಿಯೂ ಎಂದಿನ ಟ್ರಾಫಿಕ್ ನಿನ್ನೆ ಮಾತ್ರ ತೀವ್ರವಾಗಿತ್ತು ಎಂದು ಪೂರ್ವ ಬೆಂಗಳೂರು ಭಾಗದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಹೇಳಿದ್ದಾರೆ. ದಕ್ಷಿಣ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸಹೋದ್ಯೋಗಿಗಳು ಸಂಜೆ 4.30ಕ್ಕೆ ಕಚೇರಿ ಬಿಟ್ಟಿದ್ದಾರೆ. ಆದರೆ ಅವರು ಎರಡೂವರೆ ಗಂಟೆಗಳನ್ನು ರಸ್ತೆಯಲ್ಲಿ ಕಳೆದರು ಅರ್ಧ ಹಾದಿಯನ್ನು ಕೂಡ ಕ್ರಮಿಸಲು ಸಾಧ್ಯವಾಗಲಿಲ್ಲ ಎಂದು ಜೆಪಿ ನಗರದ ನಿವಾಸಿಯೊಬ್ಬರು ಹೇಳಿದ್ದಾರೆ. ಮಾರ್ಗ ಬದಲಿಸಿ ಸಂಧಿಗೊಂದಿ ತಿರುವು ಮುರುವುಗಳಲ್ಲಿ ಸಾಗಿದರು ಯಾವುದೇ ಮಾರ್ಗವೂ ಟ್ರಾಫಿಕ್‌ನಿಂದ ಮುಕ್ತಿ ನೀಡಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡ ರೈಲು: ಅದು ಹಾಗಲ್ಲವೆಂದು ಅಸಲಿ ಸತ್ಯ ಬಿಚ್ಚಿಟ್ಟ ರೈಲ್ವೆ ಇಲಾಖೆ!
ಹಾಗೆಯೇ ಹೊಸಕೆರೆಹಳ್ಳಿ ಆರ್ ಆರ್ ನಗರದ ಮಧ್ಯೆ ಮೂರು ಕಿಲೋಮೀಟರ್ ದೂರ ಸಂಚರಿಸಲು ಒಂದೂವರೆ ಗಂಟೆ ಬೇಕಾಯ್ತು ಎಂದು ಮತ್ತೊಬ್ಬರು ತಮಗಾದ ಟ್ರಾಫಿಕ್‌ನ ಕರಾಳ ಅನುಭವವನ್ನು ಹೇಳಿಕೊಂಡಿದ್ದಾರೆ. ಹಾಗೆಯೇ ವೈಟ್‌ಫೀಲ್ಡ್, ಮಾರತಹಳ್ಳಿ, ಬೆಳಂದೂರು, ಸೇರಿದಂತೆ ಹೊರವರ್ತುಲ ರಸ್ತೆಯ ಹಲವು ಪ್ರದೇಶಗಳಲ್ಲಿ ಸರ್ವೀಸ್ ರಸ್ತೆಗಳು ಭಾಗಶಃ ಮುಳುಗಡೆಯಾಗಿವೆ. ಅಲ್ಲಿ ನಿಂತ ನೀರನ್ನು ಖಾಲಿ ಮಾಡುವ ಅಥವಾ ಚರಂಡಿ ಸರಿಪಡಿಸುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ,
ಸಂಚಾರ ದಟ್ಟಣೆ ತೀವ್ರವಾಗಿದ್ದರಿಂದ ಹಲವು ಟೆಕ್‌ಪಾರ್ಕ್‌ಗಳ ನಿರ್ಗಮನ ಗೇಟ್‌ಗಳನ್ನು ಟ್ರಾಫಿಕ್ ಪೊಲೀಸರ ವಿನಂತಿಯ ಮೇರೆಗೆ ಬಂದ್ ಮಾಡಲಾಗಿತ್ತು. ಹೊರವರ್ತುಲ ರಸ್ತೆಯ ಸುಮಾರು 60 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಜಲಾವೃತವಾಗಿದೆ ಎಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ. ಹೀಗಾಗಿ ನಗರದೆಲ್ಲೆಡೆ ಟ್ರಾಫಿಕ್ ದಟ್ಟಣೆ ತೀವ್ರವಾಗಿ ಹೆಚ್ಚಾಗಲು ಕಾರಣವಾಯ್ತು.