ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು ₹13,262.70 ಕೋಟಿ ವೆಚ್ಚದಲ್ಲಿ 75.60 ಕಿ.ಮೀ. ಉದ್ದದ 11 ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಪೈಕಿ ಆರು ಪ್ರಮುಖ ರಸ್ತೆಗಳಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿ-ಸ್ಮೈಲ್ ಟೆಂಡರ್ ಕರೆದಿದೆ.

ಬೆಂಗಳೂರು: ಸುರಂಗ ರಸ್ತೆ ಯೋಜನೆ, ಬೃಹತ್ ಫ್ಲೈಓವರ್ ಯೋಜನೆಗಳು, ರಸ್ತೆಗಳ ವೈಟ್ ಟಾಪಿಂಗ್ ಸೇರಿದಂತೆ ನಗರದ ಪ್ರಮುಖ ಯೋಜನೆಗಳನ್ನು ನಗರದಲ್ಲಿ ಅನುಷ್ಠಾನಗೊಳಿಸುತ್ತಿರುವ ಜಿಬಿಎ ಅಂಗ ಸಂಸ್ಥೆ ‘ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್’ (ಬಿ-ಸ್ಮೈಲ್) ತನ್ನ ‘ಕಾರ್ಯಕ್ಷಮತೆ’ಯನ್ನು ಹೆಚ್ಚಿಸಿಕೊಳ್ಳಲು, ಪ್ರತಿಷ್ಠಿತ ಖಾಸಗಿ ಸಲಹೆಗಾರರನ್ನು ನೇಮಿಸಿಕೊಳ್ಳಲು ಮುಂದಾಗಿತ್ತು. ಇತ್ತೀಚೆಗೆ ಸಾವಿರಾರು ಕೋಟಿ ರು. ವೆಚ್ಚದ 11 ಫ್ಲೈಓವರ್‌ಗಳ ಟೆಂಡರ್‌ ಕರೆಯುವುದರಲ್ಲಿ ಬಿ-ಸ್ಮೈಲ್ ಅನೇಕ ಎಡವಟ್ಟು, ಲೋಪದೋಷಗಳನ್ನು ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲಾ ಟೆಂಡರ್‌ಗಳನ್ನು ರದ್ದುಪಡಿಸಿ, ಹೊಸದಾಗಿ ಟೆಂಡರ್ ಕರೆಯಬೇಕು ಎಂಬ ಸಲಹೆ ನೀಡಿತ್ತು. ಬಿ -ಸ್ಮೈಲ್ ಕಾರ್ಯನಿರ್ವಹಣೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೂಡ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಮುಂದಿನ ದಿನಗಳಲ್ಲಿ ಮತ್ತೆ ಇಂತಹ ಲೋಪ-ದೋಷಗಳು ಉಂಟಾಗದಿರಲು ಖಾಸಗಿ ತಜ್ಞರ ಸಲಹೆ ಪಡೆಯಲು ಬಿ-ಸ್ಮೈಲ್ ಯೋಜಿಸಿತ್ತು. ಇದೀಗ ಸಂಸ್ಥೆಯ ಆ ಉದ್ದೇಶ ಈಡೇರಿದಂತಿದೆ.

ಯಾಕೆಂದರೆ ಈಗ ನಗರದ ಪ್ರಮುಖ 6 ರಸ್ತೆಗಳಲ್ಲಿ ಎಲಿವೇಟೆಡ್ ಕಾರಿಡಾರ್ (ಮೇಲ್ಸೇತುವೆ) ನಿರ್ಮಿಸಲು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ವತಿಯಿಂದ ಅಧಿಕೃತವಾಗಿ ಟೆಂಡರ್ ಆಹ್ವಾನಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಒಟ್ಟು 13,262.70 ಕೋಟಿ ರೂ. ವೆಚ್ಚದಲ್ಲಿ 75.60 ಕಿ.ಮೀ. ಉದ್ದದ 11 ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ 11 ಕಾರಿಡಾರ್‌ಗಳ ಪೈಕಿ 9 ಕಾರಿಡಾರ್‌ಗಳ ಹಳೆಯ ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸಿ, ಇದೀಗ ಹೊಸದಾಗಿ ಮರು ಟೆಂಡರ್ ಕರೆಯಲಾಗಿದೆ.

ನಗರದ ಪ್ರಮುಖ ರಸ್ತೆಗಳಿಗೆ ಎಲಿವೇಟೆಡ್ ಸಂಪರ್ಕ

ಹೊಸ ಯೋಜನೆಯಡಿ ನಗರದ ಅತ್ಯಂತ ಜನನಿಬಿಡ ರಸ್ತೆಗಳಾದ ಜೆ.ಸಿ. ರಸ್ತೆ, ಮೈಸೂರು ರಸ್ತೆ , ಶೇಷಾದ್ರಿ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಎಲಿವೇಟೆಡ್ ಕಾರಿಡಾರ್‌ಗಳು ತಲೆ ಎತ್ತಲಿವೆ. ಪ್ರಮುಖವಾಗಿ ಮಿನರ್ವ ವೃತ್ತದಿಂದ ಹಡ್ಸನ್ ಸರ್ಕಲ್ ಮೂಲಕ ಟೌನ್ ಹಾಲ್ ಬಳಿಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆವರೆಗೆ ಎಲಿವೇಟೆಡ್ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದ್ದು, ಇದರಿಂದ ನಗರದ ಹೃದಯ ಭಾಗದ ಸಂಚಾರ ಒತ್ತಡ ಗಣನೀಯವಾಗಿ ತಗ್ಗುವ ನಿರೀಕ್ಷೆಯಿದೆ.

ಹೊಸೂರು ರಸ್ತೆ ಮತ್ತು ಸರ್ಜಾಪುರ-ಎಲೆಕ್ಟ್ರಾನಿಕ್ ಸಿಟಿ ಕಾರಿಡಾರ್ ವಿಶೇಷತೆ

ಐಟಿ ಕಾರಿಡಾರ್ ಹಾಗೂ ದಕ್ಷಿಣ ಬೆಂಗಳೂರಿನ ಸಂಚಾರ ಸುಗಮಗೊಳಿಸಲು ಎರಡು ಬೃಹತ್ ಮಾರ್ಗಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ.

ಶೂಲೆ ಸರ್ಕಲ್ – ಸೇಂಟ್ ಜಾನ್ಸ್ ಆಸ್ಪತ್ರೆ ಮಾರ್ಗ: ಶೂಲೆ ಸರ್ಕಲ್‌ನಿಂದ ಹೊಸೂರು ರಸ್ತೆಯ ಸೇಂಟ್ ಜಾನ್ಸ್ ಆಸ್ಪತ್ರೆವರೆಗೆ 515.28 ಕೋಟಿ ರೂ. ವೆಚ್ಚದಲ್ಲಿ 5.30 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗಲಿದೆ. ಈ ಮೇಲ್ಸೇತುವೆಯು ಆನೆಪಾಳ್ಯ ಮತ್ತು ಆಡುಗೋಡಿ ಜಂಕ್ಷನ್‌ಗಳ ಮೂಲಕ ಹಾದುಹೋಗಲಿದ್ದು, ಈ ಭಾಗದ ದೀರ್ಘಕಾಲದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲಿದೆ.

ಸರ್ಜಾಪುರ ಜಂಕ್ಷನ್ – ಎಲೆಕ್ಟ್ರಾನಿಕ್ ಸಿಟಿ ಮಾರ್ಗ: ಸರ್ಜಾಪುರ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆವರೆಗೆ 7.59 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಈ ಮಾರ್ಗವು ಈಜಿಪುರ ಮೇಲ್ಸೇತುವೆ, ಮಡಿವಾಳ ಅಂಡರ್‌ಪಾಸ್, ಸೇಂಟ್ ಜಾನ್ಸ್ ಜಂಕ್ಷನ್ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್‌ಗಳಿಗೆ ನೇರ ಸಂಪರ್ಕ ಕಲ್ಪಿಸಲಿದೆ. ಈ ಪೈಕಿ ಈಜಿಪುರ ಸಂಪರ್ಕಿತ ಎಲಿವೇಟೆಡ್ ಕಾರಿಡಾರ್ ಕಾಮಗಾರಿಗೆ 500.03 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ

ಈ ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣದಲ್ಲಿ ಸಾಂಪ್ರದಾಯಿಕ ಪ್ರೀ-ಸ್ಟ್ರೆಸ್ಡ್ ಕಾಂಕ್ರೀಟ್ ತಂತ್ರಜ್ಞಾನದ ಬದಲಿಗೆ, ಅತ್ಯಾಧುನಿಕ 'ಹೈ ಪರ್ಫಾರ್ಮೆನ್ಸ್ ಫೈಬರ್ ರೀ-ಇನ್‌ಫೋರ್ಸ್ಡ್ ಕಾಂಕ್ರೀಟ್' ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಹೊಸ ತಂತ್ರಜ್ಞಾನದ ಬಳಕೆಗೆ ತಾಂತ್ರಿಕ ಸಲಹಾ ಸಮಿತಿಯು ಈಗಾಗಲೇ ಹಸಿರು ನಿಶಾನೆ ತೋರಿದೆ.

ಪ್ರತಿಯೊಂದು ಪಥವೂ 7.5 ಮೀಟರ್ ಅಗಲವಿರಲಿದ್ದು, ನೇರ ಮಾರ್ಗಗಳಲ್ಲಿ ವಾಹನಗಳು ಗಂಟೆಗೆ 60 ಕಿ.ಮೀ. ವೇಗದಲ್ಲಿ ಸುಗಮವಾಗಿ ಸಂಚರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ತಿರುವುಗಳಿರುವ ಕಡೆಗಳಲ್ಲಿ ಗಂಟೆಗೆ 30 ಕಿ.ಮೀ. ವೇಗ ಮಿತಿಯನ್ನು ನಿಗದಿಪಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ವೈಟ್ ಟಾಪಿಂಗ್ ರಸ್ತೆಗಳ ಹಾನಿ ಆತಂಕ

ಒಂದೆಡೆ ಬೃಹತ್ ಮೇಲ್ಸೇತುವೆ ಯೋಜನೆಗಳು ಸಂಚಾರ ದಟ್ಟಣೆ ನಿವಾರಿಸುವ ಭರವಸೆ ಮೂಡಿಸಿದ್ದರೆ, ಮತ್ತೊಂದೆಡೆ ಸಾರ್ವಜನಿಕರಲ್ಲಿ ಹಲವು ಆತಂಕಗಳೂ ಮನೆಮಾಡಿವೆ. ನಗರದಲ್ಲಿ ಇತ್ತೀಚೆಗಷ್ಟೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿರುವ ಹಲವು ರಸ್ತೆಗಳಲ್ಲಿಯೇ ಇದೀಗ ಎಲಿವೇಟೆಡ್ ಕಾರಿಡಾರ್ ಪಿಲ್ಲರ್‌ಗಳ ನಿರ್ಮಾಣಕ್ಕಾಗಿ ಮತ್ತೆ ಅಗೆಯುವ ಸಾಧ್ಯತೆಯಿದೆ. ಇದರಿಂದ ಸುಸ್ಥಿತಿಯಲ್ಲಿರುವ ವೈಟ್ ಟಾಪಿಂಗ್ ರಸ್ತೆಗಳಿಗೆ ಹಾನಿಯಾಗಿ ಸಾರ್ವಜನಿಕರ ತೆರಿಗೆ ಹಣ ಪೋಲಾಗುವ ಭೀತಿ ಎದುರಾಗಿದೆ.

ಇದರ ಜೊತೆಗೆ, ನಗರದಲ್ಲಿ ಈಗಾಗಲೇ ಕೈಗೆತ್ತಿಕೊಂಡಿರುವ ಈಜಿಪುರ, ರಾಜರಾಜೇಶ್ವರಿನಗರ, ಯಲಹಂಕ ಹಾಗೂ ಕೆಂಗೇರಿ ಮೇಲ್ಸೇತುವೆ ಕಾಮಗಾರಿಗಳು ಹಲವು ವರ್ಷಗಳಿಂದ ಕುಂಟುತ್ತಾ ಸಾಗಿವೆ. ಹಳೆಯ ಯೋಜನೆಗಳೇ ಇನ್ನೂ ಪೂರ್ಣಗೊಳ್ಳದಿರುವಾಗ, ಈ ಹೊಸ ಬೃಹತ್ ಎಲಿವೇಟೆಡ್ ಕಾರಿಡಾರ್ ಯೋಜನೆಗಳು ನಿಗದಿತ ಸಮಯದೊಳಗೆ ಪೂರ್ಣಗೊಳ್ಳಲಿವೆಯೇ ಎಂಬ ಪ್ರಶ್ನೆ ನಗರವಾಸಿಗಳದ್ದು.