ಬಸವನಗರ ಮುಖ್ಯ ರಸ್ತೆಯಲ್ಲಿ ವಿಭೂತಿಪುರ ಕೆರೆ ಕಾಲುವೆಗೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಅಕ್ಟೋಬರ್ 10 ರಿಂದ 20 ದಿನಗಳ ಕಾಲ ಸಂಚಾರ ಮಾರ್ಪಾಡು ಮಾಡಲಾಗಿದೆ. ವಾಹನ ಸವಾರರು ದಟ್ಟಣೆ ತಪ್ಪಿಸಲು ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ಸುರಂಜನ್‌ದಾಸ್ ರಸ್ತೆಯ ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ.
ಬೆಂಗಳೂರು: ಎಚ್.ಎ.ಎಲ್ (HAL) ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಗರ ಮುಖ್ಯ ರಸ್ತೆಯಲ್ಲಿ ವಿಭೂತಿಪುರ ಕೆರೆ ಕಾಲುವೆಗೆ ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವತಿಯಿಂದ ನಡೆಯಲಿರುವ ಈ ಕಾಮಗಾರಿಯ ಹಿನ್ನೆಲೆಯಲ್ಲಿ, ಸಾರ್ವಜನಿಕರು ಹಾಗೂ ವಾಹನ ಸವಾರರ ಹಿತದೃಷ್ಟಿಯಿಂದ ಅಕ್ಟೋಬರ್ 10 ರಿಂದ ಮುಂಬರುವ 20 ದಿನಗಳ ಕಾಲ ಬಸವನಗರ ಮುಖ್ಯ ರಸ್ತೆಯಲ್ಲಿ ಸಂಚಾರ ಮಾರ್ಪಾಡು ಮಾಡಿ ಆದೇಶ ಹೊರಡಿಸಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಹಾಗೂ ಸವಾರರು ಸಹಕರಿಸಬೇಕಾಗಿ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಸಂಚಾರ ನಿರ್ಬಂಧಿಸಲಾಗಿರುವ ರಸ್ತೆಗಳು
ಮಾರ್ಗ 1: ಮಾರತ್ತಹಳ್ಳಿ, ಎಚ್.ಎ.ಎಲ್, ವಿಭೂತಿಪುರ ಹಾಗೂ ಬಸವನಗರ ಕಡೆಯಿಂದ ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ ಮತ್ತು ಬಿ.ಇ.ಎಂ.ಎಲ್ (BEML) ಕಡೆಗೆ ಹೋಗುವ ಭಾರೀ ಸರಕು ವಾಹನಗಳು (HGV), ಬಿ.ಎಮ್.ಟಿ.ಸಿ (BMTC) ಬಸ್‌ಗಳು, ಶಾಲಾ ಬಸ್‌ಗಳು ಹಾಗೂ ಲಘು ಸರಕು ವಾಹನಗಳ (LGV) ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಮಾರ್ಗ 2: ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ ಹಾಗೂ ಬಿ.ಇ.ಎಂ.ಎಲ್ ಕಡೆಯಿಂದ ವಿಭೂತಿಪುರ, ಬಸವನಗರ, ಎಚ್.ಎ.ಎಲ್ ಮತ್ತು ಮಾರತ್ತಹಳ್ಳಿ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ವಾಹನ ಸವಾರರಿಗೆ ನಿಗದಿಪಡಿಸಲಾದ ಪರ್ಯಾಯ ಮಾರ್ಗಗಳು
ಕಾಮಗಾರಿ ನಡೆಯುವ ದಿನಗಳಲ್ಲಿ ಸಂಚಾರ ದಟ್ಟಣೆಯನ್ನು ತಪ್ಪಿಸಲು ಕೆಳಗಿನ ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ.
ಪರ್ಯಾಯ ಮಾರ್ಗ 1 (ಮಾರತ್ತಹಳ್ಳಿ / ಬಸವನಗರದಿಂದ ಕಗ್ಗದಾಸಪುರ / ವಿಜ್ಞಾನ ನಗರ ಕಡೆಗೆ):
ಮಾರತ್ತಹಳ್ಳಿ, ಎಚ್.ಎ.ಎಲ್, ವಿಭೂತಿಪುರ ಮತ್ತು ಬಸವನಗರ ಕಡೆಯಿಂದ ಬರುವ ಭಾರೀ ವಾಹನಗಳು, ಬಿ.ಎಂ.ಟಿ.ಸಿ ಬಸ್‌ಗಳು, ಶಾಲಾ ಬಸ್‌ಗಳು ಹಾಗೂ ಲಘು ವಾಹನಗಳು ಹಳೆ ವಿಮಾನ ನಿಲ್ದಾಣ ಮುಖ್ಯ ರಸ್ತೆಯ (Old Airport Road) ಮುಖಾಂತರ ಸಾಗಿ, ಸುರಂಜನ್‌ದಾಸ್ ರಸ್ತೆ ಬ್ರಿಡ್ಜ್ ಜಂಕ್ಷನ್ ಬಳಿ ಬಲ ತಿರುವು ಪಡೆಯಬೇಕು. ನಂತರ ಸುರಂಜನ್‌ದಾಸ್ ರಸ್ತೆಯ ಮೂಲಕ ಬಿ.ಇ.ಎಂ.ಎಲ್ ಜಂಕ್ಷನ್ ತಲುಪಿ, ಬಲ ತಿರುವು ಪಡೆದುಕೊಂಡು ಮಲ್ಲೇಶಪಾಳ್ಯ ಮುಖ್ಯ ರಸ್ತೆಯ ಮೂಲಕ ವಿಜ್ಞಾನ ನಗರ ಹಾಗೂ ಕಗ್ಗದಾಸಪುರ ಕಡೆಗೆ ತಲುಪಬಹುದು.
ಪರ್ಯಾಯ ಮಾರ್ಗ 2 (ಕಗ್ಗದಾಸಪುರ / ವಿಜ್ಞಾನ ನಗರದಿಂದ ಬಸವನಗರ / ಮಾರತ್ತಹಳ್ಳಿ ಕಡೆಗೆ):
ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ ಹಾಗೂ ಬಿ.ಇ.ಎಂ.ಎಲ್ ಕಡೆಯಿಂದ ವಿಭೂತಿಪುರ, ಬಸವನಗರ, ಎಚ್.ಎ.ಎಲ್ ಮತ್ತು ಮಾರತ್ತಹಳ್ಳಿ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಮಲ್ಲೇಶಪಾಳ್ಯ ಮುಖ್ಯ ರಸ್ತೆಯ ಮುಖಾಂತರ ಸಾಗಿ ಬಿ.ಇ.ಎಂ.ಎಲ್ ಜಂಕ್ಷನ್ ತಲುಪಬೇಕು. ಅಲ್ಲಿ ಎಡ ತಿರುವು ಪಡೆದು ಸುರಂಜನ್‌ದಾಸ್ ರಸ್ತೆಯ ಮೂಲಕ ಸಾಗಿ, ಸುರಂಜನ್‌ದಾಸ್ ಜಂಕ್ಷನ್‌ನಲ್ಲಿ ಮತ್ತೆ ಎಡ ತಿರುವು ಪಡೆದುಕೊಂಡು ಹಳೆ ವಿಮಾನ ನಿಲ್ದಾಣ ರಸ್ತೆಯ ಮುಖಾಂತರ ವಿಭೂತಿಪುರ, ಬಸವನಗರ, ಎಚ್.ಎ.ಎಲ್ ಹಾಗೂ ಮಾರತ್ತಹಳ್ಳಿ ಕಡೆಗೆ ಸುಗಮವಾಗಿ ಸಂಚರಿಸಬಹುದು.


