ಬೆಂಗಳೂರಿನ 148 ಕಿ.ಮೀ. ಉಪನಗರ ರೈಲು ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಸಿಬಿಟಿಸಿ ಸಿಗ್ನಲಿಂಗ್ ಬದಲು ಅತ್ಯಾಧುನಿಕ ಯುರೋಪಿಯನ್ ಟ್ರೈನ್ ಕಂಟ್ರೋಲ್ ಸಿಸ್ಟಮ್ (ETCS) ಅಳವಡಿಸಲಾಗುತ್ತಿದೆ. ಭವಿಷ್ಯದಲ್ಲಿ ಹೈ-ಸ್ಪೀಡ್ ಕಾರಿಡಾರ್‌ಗಳಾಗಿ ವಿಸ್ತರಿಸುವ ದೃಷ್ಟಿಯಿಂದ ಕೆ-ರೈಡ್ ಈ ನಿರ್ಧಾರ ಕೈಗೊಂಡಿದೆ.
ಬೆಂಗಳೂರು (ಜೂ.22): ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ 148 ಕಿಲೋಮೀಟರ್ ಉದ್ದದ 'ಬೆಂಗಳೂರು ಉಪನಗರ ರೈಲು ಯೋಜನೆ'ಯಲ್ಲಿ (Bengaluru Suburban Rail Project) ಮಹತ್ವದ ತಾಂತ್ರಿಕ ಬದಲಾವಣೆಯಾಗುತ್ತಿದೆ. ಯೋಜನೆಯ ವಿವರವಾದ ಯೋಜನಾ ವರದಿಯಲ್ಲಿ (DPR) ಮೊದಲು ಪ್ರಸ್ತಾಪಿಸಲಾಗಿದ್ದ ಮೆಟ್ರೋ ಮಾದರಿಯ ‘ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್’ (CBTC) ಸಿಗ್ನಲಿಂಗ್ ವ್ಯವಸ್ಥೆಯ ಬದಲಿಗೆ, ಈಗ ಅತ್ಯಾಧುನಿಕ ಯುರೋಪಿಯನ್ ಟ್ರೈನ್ ಕಂಟ್ರೋಲ್ ಸಿಸ್ಟಮ್ (ETCS) ಅನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯೋಜನೆಯನ್ನು ಜಾರಿಗೊಳಿಸುತ್ತಿರುವ ‘ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ’ (K-RIDE), ಭವಿಷ್ಯದಲ್ಲಿ ಉಪನಗರ ರೈಲು ಜಾಲವು ಬೆಂಗಳೂರಿನ ನಗರ ಮಿತಿಗಳನ್ನು ಮೀರಿ ನೆರೆಯ ಜಿಲ್ಲೆಗಳಿಗೆ ವಿಸ್ತರಣೆಯಾಗುವುದನ್ನು ಮತ್ತು ಅತಿ ವೇಗದ ರೈಲು ಕಾರಿಡಾರ್‌ಗಳ ಕಾರ್ಯಾಚರಣೆಯನ್ನು ಗಮನದಲ್ಲಿಟ್ಟುಕೊಂಡು ಈ ಇಟಿಸಿಎಸ್ (ETCS) ವ್ಯವಸ್ಥೆಯನ್ನು ಪ್ರಸ್ತಾಪಿಸಿದೆ.
ವೇಗ ಮತ್ತು ಇಂಟರ್-ಆಪರೇಬಿಲಿಟಿಗೆ ಯುರೋಪಿಯನ್ ಸಿಸ್ಟಮ್ ಬೆಸ್ಟ್!
ಈ ಕುರಿತು ಮಾಹಿತಿ ನೀಡಿರುವ ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಅವರು, "ನಾವು ಈಗ ಉಪನಗರ ರೈಲಿನ ಎಲ್ಲಾ ನಾಲ್ಕು ಕಾರಿಡಾರ್‌ಗಳಿಗೂ ಇಟಿಸಿಎಸ್ ಸಿಗ್ನಲಿಂಗ್ ವ್ಯವಸ್ಥೆಯನ್ನು ಪ್ರಸ್ತಾಪಿಸಿದ್ದೇವೆ. ಇದು ಹೆಚ್ಚಿನ ವೇಗದ ರೈಲು ಕಾರಿಡಾರ್‌ಗಳ ಕಾರ್ಯಾಚರಣೆಗೆ ಅತ್ಯಂತ ಸೂಕ್ತವಾಗಿದೆ. ನೆಟ್‌ವರ್ಕ್ ದೀರ್ಘಾವಧಿಯ ಹಾಗೂ ಹೈ-ಸ್ಪೀಡ್ ಕಾರಿಡಾರ್‌ಗಳಾಗಿ ವಿಸ್ತರಣೆಯಾಗುವಾಗ ಸಿಬಿಟಿಸಿ (CBTC) ವ್ಯವಸ್ಥೆ ಅಷ್ಟಾಗಿ ಹೊಂದಿಕೆಯಾಗುವುದಿಲ್ಲ. ಅಲ್ಲದೆ, ಒಂದು ದೊಡ್ಡ ಜಾಲದಲ್ಲಿ ಬಹು ಕಾರಿಡಾರ್‌ಗಳ ನಡುವೆ ರೈಲುಗಳು ಯಾವುದೇ ತಡೆ ಇಲ್ಲದೆ ಸಂಚರಿಸುವ ಇಂಟರ್-ಆಪರೇಬಿಲಿಟಿ (Interoperability) ಪ್ರಕ್ರಿಯೆಗೂ ಸಿಬಿಟಿಸಿ ಸೂಕ್ತವಲ್ಲ. ಆದರೆ, ನಮ್ಮ ಇಟಿಸಿಎಸ್ ಆಧಾರಿತ ಸಿಗ್ನಲಿಂಗ್ ವ್ಯವಸ್ಥೆಯು ಗಂಟೆಗೆ 200 ರಿಂದ 250 ಕಿಲೋಮೀಟರ್ ವೇಗವನ್ನು ಬೆಂಬಲಿಸುವ ಸಾಮರ್ಥ್ಯ ಹೊಂದಿದೆ," ಎಂದು ತಿಳಿಸಿದ್ದಾರೆ.
ಈ ಹಿಂದೆ ಡಿಪಿಆರ್‌ನಲ್ಲಿ ನಮ್ಮ ನಮ್ಮ ನಮ್ಮ ಮೆಟ್ರೋದ ಹಳದಿ ಲೈನ್ ಹಾಗೂ ಮುಂಬರುವ ಪಿಂಕ್ ಮತ್ತು ಬ್ಲೂ ಲೈನ್‌ಗಳಲ್ಲಿ ಬಳಸಲಾಗುವ ಸಿಬಿಟಿಸಿ ವ್ಯವಸ್ಥೆಯನ್ನೇ ಪ್ರಸ್ತಾಪಿಸಲಾಗಿತ್ತು. ಆದರೆ ಮೆಟ್ರೋ ರೈಲುಗಳು ನಗರದೊಳಗೆ ಪ್ರತಿ 1 ಅಥವಾ 2 ಕಿಲೋಮೀಟರ್‌ಗೆ ನಿಲ್ಲುವುದರಿಂದ ಅಲ್ಲಿ ಹೆಚ್ಚಿನ ವೇಗದ ಅಗತ್ಯವಿರುವುದಿಲ್ಲ. ಆದರೆ ಉಪನಗರ ರೈಲು ನಗರದ ಹೊರವಲಯ ಹಾಗೂ ನೆರೆಯ ಜಿಲ್ಲೆಗಳಿಗೆ ವಿಸ್ತರಣೆಯಾದಾಗ ವೇಗ ಅತ್ಯಂತ ಮುಖ್ಯವಾಗುತ್ತದೆ. ಹಾಗಾಗಿ ಭವಿಷ್ಯದ ದೃಷ್ಟಿಯಿಂದ ಈ ತಂತ್ರಜ್ಞಾನವನ್ನು ಅಪ್‌ಗ್ರೇಡ್ ಮಾಡಲಾಗುತ್ತಿದೆ.
ಪ್ರಸ್ತುತ, ಈ ಇಟಿಸಿಎಸ್ ಲೆವೆಲ್-2 (ETCS Level 2) ಸಿಗ್ನಲಿಂಗ್ ವ್ಯವಸ್ಥೆಯು ದೆಹಲಿ-ಘಾಜಿಯಾಬಾದ್-ಮೀರತ್ ನಡುವಿನ 82 ಕಿಮೀ ಉದ್ದದ ‘ನಮೋ ಭಾರತ್’ (Namo Bharat) ಕಾರಿಡಾರ್‌ನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ 508 ಕಿಮೀ ಉದ್ದದ ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆಗೂ ಇದೇ ತಂತ್ರಜ್ಞಾನವನ್ನು ಪ್ರಸ್ತಾಪಿಸಲಾಗಿದೆ.
ನಾಲ್ಕು ಕಾರಿಡಾರ್‌ಗಳ ವಿವರ ಇಲ್ಲಿದೆ
ಒಟ್ಟು 148 ಕಿಲೋಮೀಟರ್ ಉದ್ದದ ಉಪನಗರ ರೈಲು ಯೋಜನೆ ಪ್ರಮುಖವಾಗಿ ನಾಲ್ಕು ಕಾರಿಡಾರ್‌ಗಳನ್ನು ಒಳಗೊಂಡಿದೆ. ಸಂಪಿಗೆ ಲೈನ್ (41.4 ಕಿಮೀ) ಕೆಎಸ್‌ಆರ್ ಬೆಂಗಳೂರು ಸಿಟಿಯಿಂದ ಬೆಂಗಳೂರು ವಿಮಾನ ನಿಲ್ದಾಣ ಮತ್ತು ದೇವನಹಳ್ಳಿಗೆ ಸಂಪರ್ಕ ಕಲ್ಪಿಸಲಿದೆ. ಮಲ್ಲಿಗೆ ಲೈನ್ (25 ಕಿಮೀ) ಬೆನ್ನಿಗಾನಹಳ್ಳಿಯಿಂದ ಚಿಕ್ಕಬಾಣಾವರ, ಪಾರಿಜಾತ ಲೈನ್ (35.5 ಕಿಮೀ) ಕೆಂಗೇರಿಯಿಂದ ವೈಟ್‌ಫೀಲ್ಡ್ ಹಾಗೂ ಕನಕ ಲೈನ್ (46.25 ಕಿಮೀ): ಹೀಲಲಿಗೆಯಿಂದ ರಾಜಾನುಕುಂಟೆವರೆಗೆ ಇರಲಿದೆ.
ಭವಿಷ್ಯದ ವಿಸ್ತರಣೆ ಮತ್ತು ಆರ್‌ಆರ್‌ಟಿಎಸ್ (RRTS) ಕಾರಿಡಾರ್‌ಗಳು
ಕೆ-ರೈಡ್ ಸಂಸ್ಥೆಯು ಈ ಹಿಂದೆ ಪ್ರಸ್ತಾಪಿಸಿದ್ದ ಹೆಚ್ಚುವರಿ 146 ಕಿಮೀ ವಿಸ್ತರಣಾ ಯೋಜನೆಗಳನ್ನು (ದೇವನಹಳ್ಳಿ-ಚಿಕ್ಕಬಳ್ಳಾಪುರ, ಚಿಕ್ಕಬಾಣಾವರ-ಕುಣಿಗಲ್ ಸೇರಿದಂತೆ ಆರು ಮಾರ್ಗಗಳು) ನೈಋತ್ಯ ರೈಲ್ವೆಯು ತಿರಸ್ಕರಿಸಿತ್ತು. ಆದರೆ, ಕರ್ನಾಟಕ ಸರ್ಕಾರವು ಈಗ ದೆಹಲಿ ಮಾದರಿಯಲ್ಲೇ ಬೆಂಗಳೂರನ್ನು ನೆರೆಯ ನಗರಗಳಿಗೆ ಸಂಪರ್ಕಿಸುವ 5 ಸೆಮಿ-ಹೈಸ್ಪೀಡ್ ‘ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ’ (RRTS) ಕಾರಿಡಾರ್‌ಗಳಿಗೆ ಕೇಂದ್ರದ ಅನುಮತಿ ಕೋರಿದೆ. ಇವು ಬೆಂಗಳೂರನ್ನು ಮೈಸೂರು (ಬಿಡದಿ ಮಾರ್ಗ), ಕನಕಪುರ (ಹೇರೋಹಳ್ಳಿ ಮಾರ್ಗ), ತುಮಕೂರು (ನೆಲಮಂಗಲ ಮಾರ್ಗ), ಚಿಕ್ಕಬಳ್ಳಾಪುರ (ಏರ್‌ಪೋರ್ಟ್ ಮಾರ್ಗ) ಮತ್ತು ಕೋಲಾರ (ಹೊಸಕೋಟೆ ಮಾರ್ಗ) ನಗರಗಳಿಗೆ ಸಂಪರ್ಕಿಸಲಿವೆ.
ಇದು ಗಂಟೆಗೆ 160 ಕಿಮೀ ವೇಗವನ್ನು ಹೊಂದಿರಲಿದ್ದು, ಈ ಯೋಜನೆಯನ್ನು ಕೆ-ರೈಡ್ ಜಾರಿಗೊಳಿಸುತ್ತದೆಯೇ ಅಥವಾ ಬಿಎಂಆರ್‌ಸಿಎಲ್ ಮಾಡುತ್ತದೆಯೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ, ಕೆ-ರೈಡ್‌ನ ಮೂಲಸೌಕರ್ಯ ಮತ್ತು ಇಟಿಸಿಎಸ್ ಸಿಗ್ನಲಿಂಗ್ ವಿನ್ಯಾಸವು ಇಂತಹ ಹೈ-ಸ್ಪೀಡ್ ಆರ್‌ಆರ್‌ಟಿಎಸ್ ಯೋಜನೆಗಳಿಗೆ ಪೂರಕವಾಗಿರುವುದರಿಂದ, ಸರ್ಕಾರ ಜವಾಬ್ದಾರಿ ನೀಡಿದರೆ ತಾವು ಇದನ್ನು ಯಶಸ್ವಿಯಾಗಿ ಜಾರಿಗೊಳಿಸುವುದಾಗಿ ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 2028 ರ ಗಡುವಿನ ಮೇಲೆ ಸಂಪೂರ್ಣ ಗಮನ
2020 ರಲ್ಲಿ ಅನುಮೋದನೆ ಪಡೆದು, ಮೂಲತಃ ಅಕ್ಟೋಬರ್ 2026 ಕ್ಕೆ ಪೂರ್ಣಗೊಳ್ಳಬೇಕಿದ್ದ ಈ ಯೋಜನೆ ಈಗ ಮಾರ್ಚ್ 2030 ಕ್ಕೆ ಮುಂದೂಡಲ್ಪಟ್ಟಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಪ್ರಗತಿ’ (PRAGATI) ಪರಿಶೀಲನಾ ಸಭೆಯಲ್ಲಿ ಕೆ-ರೈಡ್ ಸಲ್ಲಿಸಿದ ಪರಿಷ್ಕೃತ ಗಡುವಿನ ಪ್ರಕಾರ, ಮಲ್ಲಿಗೆ ಲೈನ್ ಡಿಸೆಂಬರ್ 2028, ಕನಕ ಲೈನ್ ಜೂನ್ 2029, ಸಂಪಿಗೆ ಮತ್ತು ಪಾರಿಜಾತ ಲೈನ್ ಮಾರ್ಚ್ 2030ಕ್ಕೆ ಮುಕ್ತಾಯಗೊಳ್ಳಬೇಕಿದೆ.
ಪ್ರಧಾನಮಂತ್ರಿಯವರಿಗೆ ನೀಡಿರುವ ಭರವಸೆಯಂತೆ ಡಿಸೆಂಬರ್ 2028 ರ ಒಳಗೆ ಮಲ್ಲಿಗೆ ಲೈನ್‌ನ ಸಂಪೂರ್ಣ ಕಾಮಗಾರಿ ಮುಗಿಸಲು ಕೆ-ರೈಡ್ ಶ್ರಮಿಸುತ್ತಿದೆ. ಒಂದು ವೇಳೆ ಇಡೀ ಮಾರ್ಗ ಸಾಧ್ಯವಾಗದಿದ್ದರೂ, ಆದ್ಯತೆಯ ಮೇರೆಗೆ ಯಶವಂತಪುರ ಮತ್ತು ಚಿಕ್ಕಬಾಣಾವರ ನಡುವಿನ ಮಾರ್ಗದಲ್ಲಿ ರೈಲು ಕಾರ್ಯಾಚರಣೆಯನ್ನು ಖಂಡಿತವಾಗಿಯೂ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಯಶವಂತಪುರವು ಭಾರತೀಯ ರೈಲ್ವೆ, ನಮ್ಮ ಮೆಟ್ರೋ, ಉಪನಗರ ರೈಲು ಮತ್ತು ಬಿಎಂಟಿಸಿ ಸೇವೆಗಳನ್ನು ಒಳಗೊಂಡ ಬೆಂಗಳೂರಿನ ಪ್ರಮುಖ ಮಲ್ಟಿಮೋಡಲ್ ಸಾರಿಗೆ ಹಬ್ ಆಗಿ ಹೊರಹೊಮ್ಮುತ್ತಿರುವುದು ಈ ಯೋಜನೆಗೆ ಮತ್ತಷ್ಟು ಬಲ ತಂದಿದೆ.


