ವಿದ್ಯಾರ್ಥಿಗಳ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ದೊಡ್ಡ ವಿಚಾರವಲ್ಲ. ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಹೊಣೆ ಹೊತ್ತು ಗೃಹಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು. ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್‌ ಹಿಂಪಡೆಯಬೇಕು  ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಆಗ್ರಹಿಸಿದ್ದಾರೆ.

- ವಿದ್ಯಾರ್ಥಿಗಳ ಮೇಲಿನ ಕೇಸ್‌ ಹಿಂಪಡೆಯಲಿ

 ಬೆಂಗಳೂರು (ಜು.26): ವಿದ್ಯಾರ್ಥಿಗಳ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ದೊಡ್ಡ ವಿಚಾರವಲ್ಲ. ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಹೊಣೆ ಹೊತ್ತು ಗೃಹಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು. ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್‌ ಹಿಂಪಡೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ವಿದ್ಯಾರ್ಥಿಗಳು ಇಡೀ ಪ್ರಪಂಚಕ್ಕೆ ತಮ್ಮ ಶಕ್ತಿ ತೋರಿಸಿದ್ದಾರೆ. ಧರ್ಮೇಂದ್ರ ಪ್ರಧಾನ್‌ರಂಥವರು ಶಿಕ್ಷಣ ಸಚಿವರಾಗಿದ್ದು ದುರಂತ. ಇದೀಗ ರಾಜೀನಾಮೆ ಸಂದರ್ಭದಲ್ಲೂ ಸಾಧನೆ ಹೇಳಿಕೊಳ್ಳಲು ಹೋಗಿ ನಗೆಪಾಟಲಿಗೆ ಈಡಾಗಿದ್ದಾರೆ. ಅವರ ರಾಜೀನಾಮೆ ಜತೆಗೆ ಆತ್ಮಹತ್ಯೆ ಮಾಡಿಕೊಂಡ 22 ವಿದ್ಯಾರ್ಥಿಗಳಿಗೆ ಪರಿಹಾರ ನೀಡಬೇಕು. ಮುಖ್ಯವಾಗಿ ದೆಹಲಿ ಪೊಲೀಸರಿಗೆ ಎನ್ಎಸ್ಎ ಕಾಯ್ದೆಯಡಿ ಹೆಚ್ಚು ಅಧಿಕಾರ ನೀಡಿ ಯಾರನ್ನು ಬೇಕಾದರೂ ಬಂಧಿಸಬಹುದು ಎಂಬ ಹೆಚ್ಚುವರಿ ಅಧಿಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ನಮ್ಮ ವಿದ್ಯಾರ್ಥಿಗಳು ಇಡೀ ವಿಶ್ವಕ್ಕೆ ವಿದ್ಯಾರ್ಥಿಗಳ ಶಕ್ತಿ ಏನೆಂದು ಪರಿಚಯಿಸಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರೆಯಲಿದೆ ಎಂದರು.

ನೆಹರೂ ಅವರ ಕಾಲದಿಂದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿತ್ತು. ಪರಿಣಾಮ 1947ರಲ್ಲಿ 11% ಇದ್ದ ಸಾಕ್ಷರತೆ ಪ್ರಮಾಣ 76%ಗೆ ಏರಿಕೆಯಾಗಿದೆ. ಐಐಟಿ, ಐಐಎಂ, ಏಮ್ಸ್ ಸ್ಥಾಪಿಸಿ ಈ ದೇಶದ ಭವಿಷ್ಯವನ್ನು ಮಕ್ಕಳು ನಿರ್ಮಿಸಲು ಎಲ್ಲಾ ಸೌಕರ್ಯ ಕಲ್ಪಿಸಿದ್ದರು. ಈಗ ಶಿಕ್ಷಣ ಕ್ಷೇತ್ರದ ಮಹಾ ಅಭಿವೃದ್ಧಿ ಮಾಡುತ್ತೇವೆ ಎಂದು ಬಂದ ಮೋದಿ ಅವರು ರಾಜೀವ್ ಗಾಂಧಿ ಅವರು ಮಾಡಿದ್ದ ಮಾನವ ಸಂಪನ್ಮೂಲ ಇಲಾಖೆಯನ್ನು ಪುನಃ ಶಿಕ್ಷಣ ಇಲಾಖೆ ಎಂದು ನಾಮಕರಣ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ಕಿಡಿಕಾರಿದರು.

ನಾಗ್ಪುರ ವಿವಿಯ ಕ್ರಿಮಿನಲ್‌ಗಳು ಸೇರಿದ್ದರು:

ಪ್ರತಿಭಟನೆಯಲ್ಲಿ ಗೃಹ ಸಚಿವ ಅಮಿತ್‌ ಶಾ ಆದೇಶದ ಮೇರೆಗೆ ನಾಗ್ಪುರ ವಿಶ್ವವಿದ್ಯಾಲಯದಿಂದ 400 ಕ್ರಿಮಿನಲ್‌ಗಳು ದೆಹಲಿಗೆ ಬಂದು ಪೊಲೀಸರ ವಸ್ತ್ರದಲ್ಲಿ ಈ ಆಂದೋಲನ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದರು ಎಂದು ಹರಿಪ್ರಸಾದ್‌ ದೂರಿದರು.

ಪ್ರಧಾನಿ ಗುಟ್ಕಾ ಮಾಸ್ಟರ್‌: ಹರಿಪ್ರಸಾದ್

ರೀಲ್‌ ಮಾಡುವುದಾಗಿ ಪ್ರಧಾನಮಂತ್ರಿ ಗುಟ್ಕಾ ಮಾಸ್ಟರ್‌ ರೀಲ್‌ ಬಿಟ್ಟಿದ್ದಾರೆ. ಟೆಲಿಪ್ರಾಂಟರ್ ನೋಡಿ ರೀಲ್‌ ಮಾಡಿರುವುದಕ್ಕೆ ವಿದ್ಯಾರ್ಥಿಗಳು ಕ್ಯಾಕರಿಸಿ ಉಗಿದಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಅದನ್ನು ನೋಡಿದ ತಕ್ಷಣವೇ ಅಧಿಕಾರದಿಂದ ಕೆಳಗೆ ಇಳಿಯಬೇಕಾಗಿತ್ತು ಎಂದು ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ.

ಪ್ರಧಾನಿಗಳು ಗುಟ್ಕಾ ಹಾಕುತ್ತಾರಾ ಎಂಬ ಪ್ರಶ್ನೆಗೆ, ‘ಆ ರೀಲ್ ಗಳಲ್ಲಿ ಅವರ ಹಲ್ಲು ನೋಡಿ. ವಿಶ್ವಗುರು ಹಲ್ಲು ನೋಡಿದರೆ ಗೊತ್ತಾಗುತ್ತದೆ’ ಎಂದರು.