Bengaluru Rains: ಭಾರತದ ವೆನೀಸ್ ನಗರಕ್ಕೆ ಸ್ವಾಗತ ಸುಸ್ವಾಗತ!
ಇದ್ದಲ್ಲಿಯೇ ರೈನ್ ಡ್ಯಾನ್ಸ್ ಮಾಡುವ ಸೌಕರ್ಯ, ಕಚೇರಿಗೆ ಹೋಗುವಾಗಲೂ ದೋಣಿ ವಿಹಾರ, ಕಾರುಗಳ ಜೊತೆ ಸ್ವಿಮ್ ಮಾಡುವ ಸ್ಪೆಶಲ್ ಎಕ್ಸ್‌ಪೀರಿಯನ್ಸ್, ಒಂದು ಗಂಟೆಯ ದಾರಿಗೆ ಅರ್ಧ ದಿನ ಸವೆಸುವ ಸಾಹಸಮಯ ಡ್ರೈವಿಂಗ್ ಅನುಭವ.. ಬೆಂಗಳೂರಿಗರ ಭಾಗ್ಯವೋ ಭಾಗ್ಯ.. ಇದು ಮಳೆ ತಂದ ಸೌಭಾಗ್ಯ!
ಭಾರತದ ವೆನೀಸ್ ನಗರಕ್ಕೆ ಸ್ವಾಗತ ಸುಸ್ವಾಗತ!
ಬನ್ನಿ ಬನ್ನಿ.. ಭಾರತದ ತೇಲುವ ನಗರವನ್ನು ನೋಡಿ ಕಣ್ತುಂಬಿಕೊಳ್ಳಿ. ಅಷ್ಟೇ ಏಕೆ, ಈ ನಗರದಲ್ಲಿ ಕಾಲಿಟ್ಟು ನಿಮ್ಮ ಕಾರು, ಬೈಕು ಎಲ್ಲವನ್ನೂ ತುಂಬಿಕೊಳ್ಳಿ- ನೀರಿನಿಂದ! ಖರ್ಚಿಲ್ಲದೆ, ಅತ್ಯಂತ ಕಡಿಮೆ ಸಮಯದಲ್ಲಿ ತೇಲುವ ನಗರ ಸೃಷ್ಟಿಸಿದ ಖ್ಯಾತಿಗೆ ಭಾಜನವಾಗುತ್ತಿವೆ ಬಿಬಿಎಂಪಿ ಮತ್ತು ಕರ್ನಾಟಕ ರಾಜ್ಯ ಸರ್ಕಾರ.
ಹೌದು, ತನ್ನ ಹವಾಮಾನದ ಕಾರಣಕ್ಕೆ ನಾಕ ಎನಿಸಿಕೊಂಡಿದ್ದ ಬೆಂಗಳೂರು, ಜನರಿಗೆ ನಾಲ್ಕೇ ದಿನದಲ್ಲಿ ನರಕವನ್ನೂ ತೋರಿಸಿದೆ. ದೇಶದ ಬಹು ಭಾಗ ಬಿಸಿಲಿನಿಂದ ಬಳಲಿ ಬೆಂಡಾಗುತ್ತಿರುವ ಈ ಸಮಯದಲ್ಲಿ ನಮ್ಮ ಬೆಂಗಳೂರು ಮಾತ್ರ ಮೂಡಿಯಂತೆ ದಿನಕ್ಕೆ ಮೂರು ಅವತಾರವೆತ್ತಿ ಅಚ್ಚರಿಗೊಳಿಸುತ್ತಿದೆ. ಬೆಳಗ್ಗೆ ಬಿಸಿಲು, ಮಧ್ಯಾಹ್ನ ಮೋಡ, ಸಂಜೆಗೆ ಕೊಚ್ಚಿಕೊಂಡು ಹೋಗುವಂತೆ ಸುರಿವ ಮಳೆ.. ರಾತ್ರಿ ಬೆಳಗಾಗುವುದರೊಳಗೆ ತಮ್ಮ ಏರಿಯಾದ ಕಾರು, ಬಸ್ಸು, ಬೈಕುಗಳು ತೇಲುವುದನ್ನು ಅಸಹಾಯಕವಾಗಿ ನೋಡುತ್ತಾ ವಿಡಿಯೋ ಮಾಡುತ್ತಿದ್ದಾರೆ ಬೆಂಗಳೂರಿಗರು. ಹೆಜ್ಜೆಗೊಂದು ಹೊಂಡ ಇರುವ ಮಹಾನಗರದ ರಸ್ತೆಗಳು ನೀರಿನಲ್ಲಿ ಮುಚ್ಚಿರುವ ಈ ಸಮಯದಲ್ಲಿ ಮನೆಯೊಳಗೆ ಕುಳಿತು ವಿಡಿಯೋ ಮಾಡುವುದಷ್ಟೇ ಸುರಕ್ಷಿತ.
ಆದರೂ, ಬೆಂಗಳೂರಿನ ಟೆಕೀಸ್ ಸುಮ್ಮನೆ ಕೂರುವವರಲ್ಲ. ಅವರು ಟ್ರ್ಯಾಕ್ಟರ್‌ನಲ್ಲಾದರೂ ಸರಿ, ಜೆಸಿಬಿಯ ಮಣ್ಣಗೆಯುವ ಭಾಗದಲ್ಲಿ ನಿಂತಾದರೂ ಸರಿ ಕಚೇರಿಗೆ ಹೋಗುತ್ತಿದ್ದಾರೆ. ಬಿಬಿಎಂಪಿ ಕೊಟ್ಟ ಬೋಟ್ ಹಿಡಿದು ಕೆಲಸಕ್ಕೆ ಹೋಗಲು ನಿಂತಿದ್ದಾರೆ. ಕಚೇರಿಗೆ ಹೋಗಲು 2 ಗಂಟೆ ಟ್ರಾವೆಲ್ ಮಾಡಿ, 10 ನಿಮಿಷದಲ್ಲಿ ಮನೆಗೆ ಆಹಾರ ತಲುಪಿಸುವುದು ಹೇಗೆ ಎಂಬ ಆ್ಯಪ್ ಅಭಿವೃದ್ಧಿಪಡಿಸುವ ಟೆಕೀಗಳನ್ನೂ, ಟೆಕ್ ಹಬ್‌ಗಳನ್ನು ಹೊಂದಿರುವ ಖ್ಯಾತಿ ಬೆಂಗಳೂರಿನದ್ದು!
ವಿಶೇಷವಾಗಿ ನಗರದ ಬೆಳ್ಳಂದೂರು, ಮಾರತ್‌ಹಳ್ಳಿ ಸೇರಿದಂತೆ ಐಟಿ ಕಂಪನಿಗಳು ಇರುವಲ್ಲಿಯೇ ಕೆರೆ ಕೋಡಿ ಹರಿದು, ಆ ಪ್ರದೇಶ ಪೂರ್ತಿ ಹೊಳೆಯಾಗಿದೆ. ಖ್ಯಾತ ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ನಲ್ಲಿ ನಿಲ್ಲಿಸಿರುವ ಕಾರುಗಳು ನೀರಿನಲ್ಲಿ ಬಚ್ಚಿಕೊಂಡು ಕುಳಿತಿವೆ.. ಕುನ್ನಿಕುರಿಗಳ ಪಾಡಂತೂ ಕೇಳುವವರೇ ಇಲ್ಲ ಬಿಡಿ..
ಈ ದಾಖಲೆ ಮಳೆಯ ಬಗ್ಗೆ ಟ್ವಿಟ್ಟರ್, ಫೇಸ್‌ಬುಕ್, ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಟ್ರೋಲ್‌ಗಳು, ಮೀಮ್ಸ್ ಹಾಗೂ ಜೋಕ್‌ಗಳು ಪ್ರವಾಹದಷ್ಟೇ ಜೋರಾಗಿ ಹರಿದು ಬರುತ್ತಿವೆ.. ಇದಪ್ಪಾ ಬೆಂಗಳೂರಿಗರ ಕ್ರಿಯೇಟಿವಿಟಿ ಅಂದರೆ.. ಸಂಕಷ್ಟ ಕಾಲದಲ್ಲೂ ಸೆನ್ಸ್ ಆಫ್ ಹ್ಯೂಮರ್ ಕಳೆದುಕೊಳ್ಳದ ನೆಟಿಜನ್ಸ್ ಹೇಗೆಲ್ಲ ಮಜಮಜವಾಗಿ ಟ್ವೀಟ್ಸ್, ಮೀಮ್ಸ್, ಟ್ರೋಲ್ ಮಾಡಿದ್ದಾರೆ ನೋಡೋಣ ಬನ್ನಿ..