Bengaluru Rains: ವಿದ್ಯುತ್ ಸ್ಪರ್ಶಿಸಿ ಯುವತಿ ಬಲಿ; ಬೆಸ್ಕಾಂ, ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸಾವು..?
ಬೆಂಗಳೂರಿನ ಮಹಾಮಳೆಗೆ ಯುವತಿಯೊಬ್ಬಳು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಯುವತಿ ಬಲಿಯಾಗಿದ್ದಾಳೆ ಎಂಬ ಆರೋಪ ಕೇಳಿಬರುತ್ತಿದೆ.
ಬೆಂಗಳೂರಿನಲ್ಲಿ (Bengaluru) ಕಳೆದ 2 - 3 ದಿನಗಳಿಂದ ಭಾರಿ ಮಳೆ (Heavy Rain) ಸುರಿಯುತ್ತಿದೆ. ಇದರಿಂದ ರಸ್ತೆಗಳೆಲ್ಲ ಕೆರೆಗಳಂತಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿವೆ. ಇದರ ಜತೆಗೆ ಈಗ ಬೆಂಗಳೂರು ಮಹಾಮಳೆಗೆ ಯುವತಿಯೊಬ್ಬಳು ಬಲಿಯಾಗಿರುವ ಘಟನೆ ವರದಿಯಾಗಿದೆ. ಬೆಸ್ಕಾಂ (BESCOM), ಬಿಬಿಎಂಪಿ (BBMP) ನಿರ್ಲಕ್ಷ್ಯಕ್ಕೆ ಯುವತಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ವಿದ್ಯುತ್ ಸ್ಪರ್ಶಿಸಿ 23 ವರ್ಷದ ಅಖಿಲ ಬಲಿಯಾಗಿದ್ದು, ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಾಪುರದಲ್ಲಿ ಈ ಘಟನೆ ನಡೆದಿದೆ. ಮಾರತ್ತಹಳ್ಳಿಯಿಂದ ವರ್ತೂರು ಕೋಡಿ ಮಾರ್ಗ ಮಧ್ಯೆ ಇರುವ ಸಿದ್ದಾಪುರದಲ್ಲಿ ಸೋಮವಾರ ರಾತ್ರಿ 9.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಇನ್ನು, ಮೃತ ಯುವತಿ ಅಖಿಲಳನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
ರಸ್ತೆಯಲ್ಲಿ ಮಂಡಿಯುದ್ದಕ್ಕೆ ನೀರು ನಿಂತಿದ್ದಕ್ಕೆ ಹಾಗೂ ಬೆಸ್ಕಾಂನ ನಿರ್ಲಕ್ಷ್ಯವೇ ಅಖಿಲ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಬಿ.ಕಾಂ ಪದವೀಧರೆಯಾಗಿದ್ದ ಅಖಿಲ, ಖಾಸಗಿ ಖಾಲೆಯೊಂದರ ಅಡ್ಮಿನಿಸ್ಟ್ರೇಷನ್ ಡಿಪಾರ್ಟ್‌ಮೆಂಟ್‌ನಲ್ಲಿ (Administration Department) ಕೆಲಸ ಮಾಡ್ತಿದ್ದಳು. ಕಳೆದ 2 ವರ್ಷದಿಂದ ಕೆಲಸ ಮಾಡಿಕೊಂಡಿದ್ದ ಅಖಿಲ, ತಂದೆ ತಾಯಿ ಜೊತೆಗೆ ಸಿದ್ದಾಪುರದಲ್ಲಿರುವ ಮನೆಯಲ್ಲಿ ವಾಸವಿದ್ಳು. ನಿನ್ನೆ ರಾತ್ರಿ 8 ಗಂಟೆಗೆ ಶಾಲೆಯಲ್ಲಿ ಕೆಲಸ ಮುಗಿಸಿ ಹೊರಟಿದ್ದ ಯುವತಿ, ರಾತ್ರಿ 9.30 ಕ್ಕೆ ಸಿದ್ದಾಪುರ ಬಳಿ ಇರುವ ಮಯೂರ ಬೇಕರಿ (Bakery) ಸಮೀಪ ಬಂದಿದ್ದಾಳೆ.
BENGALURU FLOODS: ಕೆರೆಗಳ ಕೋಡಿ; ಐಟಿ ಸಿಟಿಗೆ ಕಣ್ಣೀರ ಕೋಡಿ!
ಆಕೆ ಆ್ಯಕ್ಟಿವಾ (Activa) ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದಳು, ಆದರೆ ರಸ್ತೆಯಲ್ಲಿ ಮಂಡಿಯುದ್ದಕ್ಕೆ ನೀರು ನಿಂತಿತ್ತು. ಆದರೂ, ನೀರಿನ ಮಧ್ಯೆಯೇ ಸ್ಕೂಟರ್ ಚಲಾಯಿಸಿಕೊಂಡು ಬಂದಿದ್ದಾಳೆ. ಆದರೆ, ನೀರು ಹೆಚ್ಚಾಗಿದ್ದರಿಂದ ಸ್ಕೂಟರ್ ಆಫ್ ಆಗಿ ಬೀಳುವ ಹಂತಕ್ಕೆ ತಲುಪಿದೆ. ಈ ಹಿನ್ನೆಲೆ ಸಹಾಯಕ್ಕೆ ಬಲ ಭಾಗದಲ್ಲೇ ಇದ್ದ ವಿದ್ಯುತ್ ಕಂಬವನ್ನು (Electric Pole) ಮುಟ್ಟಿದ್ದಾಳೆ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಅಖಿಲ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದುಬಂದಿದೆ.
ಬಲಿಗಾಗಿ ಕಾಯುತ್ತಿರುವ ವೈಯರ್‌ಗಳು..!
ನೀರಿನ ಒಳಗಡೆಯೇ ವಿದ್ಯುತ್ ವೈಯರ್‌ಗಳು ಬಿದ್ದಿದ್ದವು, ಈ ಹಿನ್ನೆಲೆ ಪೋಲ್‌ನ ಹೊರಗೆ ವೈಯರ್‌ಗಳು ಬಲಿಗಾಗಿ ಕಾಯುತ್ತಿದ್ದವು. ವಿದ್ಯುತ್ ಕಂಬಗಳ ಸರಿಯಾದ ನಿರ್ವಹಣೆ ಆಗದೇ ಇರೋದೇ ಸಾವಿಗೆ ಕಾರಣ ಎಂಬ ಆರೋಪ ವ್ಯಕ್ತವಾಗಿದೆ. ಕೆಳಗೆ ಬಿದ್ದ ಯುವತಿಯನ್ನ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಅಖಿಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ನೀರು ಹೋರಹೋಗದಂತೆ ವ್ಯವಸ್ಥೆ ಮಾಡದಿದ್ದದ್ದು, ಬೆಸ್ಕಾಂ ವಿದ್ಯುತ್ ಕಂಬಗಳ ಸರಿಯಾದ ನಿರ್ವಹಣೆ ಮಾಡದಿದ್ದದ್ದೇ ಸಾವಿಗೆ ನೇರ ಕಾರಣ ಎಂದು ಹೇಳಲಾಗಿದೆ. ಇನ್ನು, ಒಂದು ಜೀವ ಹೋಗಿದ್ರೂ ಘಟನಾ ಸ್ಥಳಕ್ಕೆ ಬಿಬಿಎಂಪಿ,ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿರಲಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಘಟನಾ ಸ್ಥಳಕ್ಕೆ ವೈಟ್ ಫೀಲ್ಡ್ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ವೈದೇಹಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ರೈನ್ ಬೋ ಲೇಔಟ್ ಮುಳುಗಡೆ: ಸ್ಥಳೀಯ ಶಾಸಕರು, ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ಇನ್ನೊಂದೆಡೆ, ಬೆಂಗಳೂರಿನ ರೈನ್‌ಬೋ ಲೇಔಟ್‌ನಲ್ಲಿ ಹೆಚ್ಚು ಮಳೆಯಾಗಿದ್ದು, ಪರಿಸ್ಥಿತಿ ಕೈ ಮೀರಿದ್ರು ನಮ್ಮನ್ನ ಕೇಳೋರೇ ಗತಿ ಇಲ್ಲ. ಘಟನೆಯಾಗಿ ಎರಡು ದಿನವಾದ್ರು ಯಾರೊಬ್ಬರೂ ಈ ಕಡೆ ತಲೆ ಹಾಕಿಲ್ಲ. ಚುನಾವಣೆ ಬಂದಾಗ ಓಡಿ ಬರ್ತಾರೆ ಅಷ್ಟೇ. ಸೌಜನ್ಯಕ್ಕೂ ಶಾಸಕರು ಇತ್ತ ತಲೆ ಹಾಕಿಲ್ಲ. ಲೇಔಟ್ ನಿವಾಸಿಗಳಿಗೆ ನೀರು ಬೇಕಾ ಅಂತಾ ಕೇಳೋರಿಲ್ಲ. ಬೆಳಗ್ಗೆಯಿಂದ ಹಾಲು, ನೀರು ಸಿಗದೇ ನಿವಾಸಿಗಳು ಒದ್ದಾಡುತ್ತಿದ್ದಾರೆ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Heavy Rain : ಅರ್ಧ ಶತಮಾನದ ದಾಖಲೆ ಮಳೆಗೆ ಕಂಗೆಟ್ಟ ಬೆಂಗಳೂರು
ಬೆಳ್ಳಂಬೆಳಗ್ಗೆ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ
ಬೆಂಗಳೂರಿನ ಸರ್ಜಾಪುರ - ಅಗರ ಮುಖ್ಯ ರಸ್ತೆ ಫುಲ್ ಜಾಮ್ ಆಗಿದ್ದು, ಬೆಳ್ಳಂಬೆಳಗ್ಗೆ ಕಿ.ಮಿ ಗಟ್ಟಲೆ ವಾಹನಗಳು ಕ್ಯೂ ನಿಂತಿವೆ. ಈ ಹಿನ್ನೆಲೆ ಟ್ರಾಫಿಕ್‌ನಿಂದ ಬೇಸತ್ತ ವಾಹನ ಸವಾರರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.