ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧ ಸಿಟಿಆರ್ ಹೋಟೆಲ್‌ನ ಮಸಾಲೆ ದೋಸೆಯಲ್ಲಿ ಜಿರಳೆ ಪತ್ತೆಯಾದ ವಿಡಿಯೋ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಹೋಟೆಲ್ ಆಡಳಿತ ಮಂಡಳಿಯು ಗ್ರಾಹಕರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದೆ.

ಬೆಂಗಳೂರು (ಅ.28): ಸಿಲಿಕಾನ್ ಸಿಟಿ ಬೆಂಗಳೂರಿನ ಅತ್ಯಂತ ಹಳೆಯ ಹಾಗೂ ಜನಪ್ರಿಯ ಉಪಾಹಾರ ತಾಣಗಳಲ್ಲಿ ಒಂದಾದ ಮಲ್ಲೇಶ್ವರಂನ ‘ಸಿಟಿಆರ್’ (Central Tiffin Room - CTR) ಹೋಟೆಲ್‌ನಲ್ಲಿ ಆಹಾರದ ನೈರ್ಮಲ್ಯ ಮತ್ತು ಸ್ವಚ್ಛತೆ ಕುರಿತಾಗಿ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದ ವಿವಾದ ಸೃಷ್ಟಿಯಾದ ಬೆನ್ನಲ್ಲೇ, ಹೋಟೆಲ್‌ ಅಧಿಕೃತವಾಗಿ ಗ್ರಾಹಕರಲ್ಲಿ ಬಹಿರಂಗ ಕ್ಷಮೆಯಾಚನೆ ಮಾಡಿದೆ.

ಮಲ್ಲೇಶ್ವರಂ ಔಟ್‌ಲೆಟ್‌ನಲ್ಲಿ ಮಸಾಲೆ ದೋಸೆ ಸೇವಿಸುವಾಗ ಅದರೊಳಗೆ ಜಿರಳೆ ಪತ್ತೆಯಾಗಿದೆ ಎಂದು ಗ್ರಾಹಕರೊಬ್ಬರು ದೂರಿದ್ದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಚಾರವಾಗಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತಕ್ಷಣವೇ ಪ್ರಕಟಣೆ ನೀಡಿರುವ 'ಟೀಮ್ ಸಿಟಿಆರ್' (Team CTR), ಆಗಿರುವ ಘಟನೆಗೆ ನಾವು ಕ್ಷಮೆ ಯಾಚಿಸುತ್ತೇವೆ. ನಮ್ಮಿಂದ ಯಾವುದೇ ನೆಪಗಳಿಲ್ಲ, ಆಹಾರ ಸುರಕ್ಷತೆ ಮತ್ತು ಸ್ವಚ್ಛತೆಯ ವಿಚಾರದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ.

ಬಹಿರಂಗ ಕ್ಷಮೆಯಾಚನೆಯಲ್ಲಿ ಸಿಟಿಆರ್ ಹೇಳಿದ್ದೇನು?

ಸಾಮಾಜಿಕ ಜಾಲತಾಣಗಳಲ್ಲಿ ಪತ್ರಿಕಾ ಪ್ರಕಟಣೆಯನ್ನು ಹಂಚಿಕೊಂಡಿರುವ ಹೋಟೆಲ್‌,

ಕ್ಷಮೆಯಾಚನೆ: ನಮ್ಮ ಮಲ್ಲೇಶ್ವರಂ ಶಾಖೆಯ ಆರೋಗ್ಯ ಮತ್ತು ನೈರ್ಮಲ್ಯದ ಮಾನದಂಡಗಳಿಗೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ನಮ್ಮ ಗಮನಕ್ಕೆ ಬಂದಿದೆ. ಇದರಿಂದ ಅಸಮಾಧಾನಗೊಂಡ ಪ್ರತಿಯೊಬ್ಬರಿಗೂ ನಾವು ಮೊದಲಿಗೆ ಕ್ಷಮೆ ಯಾಚಿಸುತ್ತೇವೆ.

ಯಾವುದೇ ನೆಪಗಳಿಲ್ಲ: ಈ ಘಟನೆಗೆ ನಮ್ಮ ಬಳಿ ಯಾವುದೇ ನೆಪಗಳಿಲ್ಲ. ಆಹಾರ ಸುರಕ್ಷತೆ ಮತ್ತು ಸ್ವಚ್ಛತೆ ನಮಗೆ ಅತ್ಯಂತ ಪ್ರಮುಖವಾದ ವಿಷಯ. ಘಟನೆ ಗಮನಕ್ಕೆ ಬಂದ ಕೂಡಲೇ ನಮ್ಮ ಅಡುಗೆಮನೆಯನ್ನು (Kitchen) ಸಂಪೂರ್ಣವಾಗಿ ಪರಿಶೀಲಿಸಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಎಂದಿಗೂ ಮರುಕಳಿಸದಂತೆ ನೋಡಿಕೊಳ್ಳಲು ಅಗತ್ಯ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಗ್ರಾಹಕರ ನಂಬಿಕೆ ಮುಖ್ಯ: "ದಶಕಗಳಿಂದ ಸಿಟಿಆರ್ ಕೇವಲ ದೋಸೆ ತಿನ್ನುವ ಜಾಗವಾಗಿ ಉಳಿದಿಲ್ಲ. ಅದು ನಿಮ್ಮ ಬೆಳಗಿನ ಜೀವನದ, ನಿಮ್ಮ ಒಡನಾಟದ ಒಂದು ಭಾಗವಾಗಿದೆ. ನಿರಾಶೆ ವ್ಯಕ್ತಪಡಿಸಿದ ಹಾಗೂ ನಮ್ಮ ಪರವಾಗಿ ನಿಂತ ಪ್ರತಿಯೊಬ್ಬರ ಧ್ವನಿಯನ್ನು ನಾವು ಆಲಿಸಿದ್ದೇವೆ. ನಿಮ್ಮ ನಂಬಿಕೆಯನ್ನು ನಾವು ಎಂದಿಗೂ ಹಗುರವಾಗಿ ಪರಿಗಣಿಸುವುದಿಲ್ಲ. ಅತ್ಯುನ್ನತ ಮಾನದಂಡ ಕಾಯ್ದುಕೊಳ್ಳಲು ನಮಗೆ ಎಚ್ಚರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಸಿಟಿಆರ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಿವಾದಕ್ಕೆ ಕಾರಣವಾದ ಘಟನೆಯೇನು?

ವೈರಲ್‌ ವಿಡಿಯೋದ ಪ್ರಕಾರ, ಗ್ರಾಹಕರೊಬ್ಬರು ಮಲ್ಲೇಶ್ವರಂ ಸಿಟಿಆರ್‌ನಲ್ಲಿ ಮಸಾಲೆ ದೋಸೆ ಸೇವಿಸುತ್ತಿದ್ದಾಗ ಅದರೊಳಗೆ ಜಿರಳೆ ಸಿಕ್ಕಿತ್ತು. ಈ ಬಗ್ಗೆ ಹೋಟೆಲ್ ಸಿಬ್ಬಂದಿಗೆ ದೂರಿದಾಗ, ಸಿಬ್ಬಂದಿ ಕೇವಲ ಮತ್ತೊಂದು ದೋಸೆಯನ್ನು ಬದಲಾಯಿಸಿಕೊಡುತ್ತೇವೆ ಎಂದು ಹೇಳಿದ್ದರು ಎನ್ನಲಾಗಿದೆ. ಆಹಾರದಲ್ಲಿ ಜಿರಳೆ ಸಿಕ್ಕಾಗ ಕೇವಲ ಮತ್ತೊಂದು ದೋಸೆ ನೀಡಿದರೆ ಸಾಲದು, ಆಹಾರ ತಯಾರಿಸುವ ಸ್ಥಳದ ಸ್ವಚ್ಛತೆ ಹಾಗೂ ಅಡುಗೆಮನೆಯ ನೈರ್ಮಲ್ಯದ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ರುಚಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಗ್ರಾಹಕರ ಆರೋಗ್ಯ ಮತ್ತು ನೈರ್ಮಲ್ಯಕ್ಕೂ ನೀಡಬೇಕು ಎಂದು ಹೇಳಿದ್ದರು.

ವಿರಾಟ್ ಕೊಹ್ಲಿ ದಂಪತಿಯೂ ಸವಿದಿದ್ದ ಸಿಟಿಆರ್ ದೋಸೆ

ಬೆಣ್ಣೆ ದೋಸೆ ಹಾಗೂ ಮಸಾಲೆ ದೋಸೆಗೆ ಭಾರಿ ಹೆಸರಾಗಿರುವ ಸಿಟಿಆರ್‌ಗೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಭೇಟಿ ನೀಡುತ್ತಾರೆ. ಸ್ಥಳೀಯರಷ್ಟೇ ಅಲ್ಲದೆ ದೇಶದ ಪ್ರಸಿದ್ಧ ಗಣ್ಯರೂ ಇಲ್ಲಿನ ದೋಸೆ ರುಚಿಗೆ ಫಿದಾ ಆಗಿದ್ದಾರೆ. ಕಳೆದ 2023 ರ ಏಪ್ರಿಲ್ 22 ರಂದು ಟೀಮ್ ಇಂಡಿಯಾ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಮಲ್ಲೇಶ್ವರಂನ ಇದೇ ಸಿಟಿಆರ್‌ಗೆ ಭೇಟಿ ನೀಡಿ ಮಸಾಲೆ ದೋಸೆ ಸವಿದಿದ್ದರು. ಆ ಸಮಯದಲ್ಲಿ ಈ ಭೇಟಿ ಭಾರಿ ಟ್ರೆಂಡ್ ಸೃಷ್ಟಿಸಿತ್ತು. ಇದೀಗ ಅಂತಹದೇ ಪ್ರತಿಷ್ಠಿತ ಹೋಟೆಲ್‌ನಲ್ಲಿ ಆಹಾರ ಭದ್ರತೆಯ ಲೋಪ ಕಂಡುಬಂದ ತಕ್ಷಣವೇ ಆಡಳಿತ ಮಂಡಳಿಯು ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳುವ ಮೂಲಕ ಗ್ರಾಹಕರ ನಂಬಿಕೆಯನ್ನು ಕಾಯ್ದುಕೊಳ್ಳುವ ಪ್ರಯತ್ನ ಮಾಡಿದೆ.