ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ಕೆಆರ್ ಮಾರ್ಕೆಟ್‌ನಲ್ಲಿ ಇದೀಗ ವಿಚಿತ್ರವೊಂದು ತಂತ್ರಜ್ಞಾನ ಪ್ರಯೋಗ ಎಲ್ಲರ ಗಮನ ಸೆಳೆಯುತ್ತಿದೆ. ಪ್ರತಿದಿನ ಹೂವು, ಹಣ್ಣು, ತರಕಾರಿ ಮಾರಾಟದಲ್ಲಿ ನಿರತರಾಗಿರುವ ವ್ಯಾಪಾರಿಗಳ ತಲೆಯ ಮೇಲೆ ಕ್ಯಾಮೆರಾಗಳನ್ನು ಅಳವಡಿಸಿರುವುದು ಕಂಡುಬಂದಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ಕೆಆರ್ ಮಾರ್ಕೆಟ್‌ನಲ್ಲಿ ಇದೀಗ ವಿಚಿತ್ರವೊಂದು ತಂತ್ರಜ್ಞಾನ ಪ್ರಯೋಗ ಎಲ್ಲರ ಗಮನ ಸೆಳೆಯುತ್ತಿದೆ. ಪ್ರತಿದಿನ ಹೂವು, ಹಣ್ಣು, ತರಕಾರಿ ಮಾರಾಟದಲ್ಲಿ ನಿರತರಾಗಿರುವ ವ್ಯಾಪಾರಿಗಳ ತಲೆಯ ಮೇಲೆ ಕ್ಯಾಮೆರಾಗಳನ್ನು ಅಳವಡಿಸಿರುವುದು ಕಂಡುಬಂದಿದೆ. ಎಂದಿನಂತೆ ವ್ಯಾಪಾರ ಮಾಡುತ್ತಿದ್ದವರ ತಲೆಯ ಮೇಲೆ ಇಂತಹ ಸಾಧನಗಳು ಕಾಣಿಸಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಈ ಕ್ಯಾಮೆರಾಗಳನ್ನು ಅಳವಡಿಸಿರುವುದರ ಹಿಂದಿನ ಉದ್ದೇಶವೇನು? ಮುಂದೆ ರೋಬೋಟ್‌ಗಳು ಕೂಡ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲಿವೆಯೇ ಎಂಬ ಚರ್ಚೆ ಶುರುವಾಗಿದೆ.

ವ್ಯಾಪಾರಿಗಳ ತಲೆಯ ಮೇಲೆ ಕ್ಯಾಮೆರಾ: ಏನಿದು ಹೊಸ ಪ್ರಯೋಗ?

ಇನ್‌ಸ್ಟಾಗ್ರಾಂನ 'Candid Bengaluru' ಪೇಜ್‌ನಲ್ಲಿ ಕೆಆರ್ ಮಾರ್ಕೆಟ್‌ನ ಈ ಅಪರೂಪದ ದೃಶ್ಯಗಳ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಪ್ರಶ್ನೆಗಳನ್ನು ಎತ್ತಿದ್ದಾರೆ.

ಫೋಟೋಗಳಲ್ಲಿ ಹೂವು ಮತ್ತು ತರಕಾರಿ ಮಾರಾಟ ಮಾಡುವ ವ್ಯಾಪಾರಿಗಳು ತಲೆಗೆ ಕ್ಯಾಮೆರಾ ಅಳವಡಿಸಿಕೊಂಡು ಎಂದಿನಂತೆ ತಮ್ಮ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಈ ಸಾಧನಗಳು ಅವರ ದೈನಂದಿನ ಚಟುವಟಿಕೆಗಳು, ಕೈಗಳ ಚಲನೆ, ವಸ್ತುಗಳನ್ನು ನಿರ್ವಹಿಸುವ ರೀತಿ ಹಾಗೂ ಗ್ರಾಹಕರೊಂದಿಗೆ ಸಂವಹನ ನಡೆಸುವ ವಿಧಾನಗಳನ್ನು ರೆಕಾರ್ಡ್ ಮಾಡುತ್ತವೆ ಎನ್ನಲಾಗಿದೆ.

ಇದು ಕೇವಲ ಸಾಮಾನ್ಯ ಕ್ಯಾಮೆರಾಗಳಲ್ಲ, ಮಾನವರ ಚಲನವಲನಗಳನ್ನು ದಾಖಲಿಸುವ ವೇಯರಬಲ್ ಮೋಷನ್ ಕ್ಯಾಪ್ಚರ್ ಸಾಧನಗಳಾಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

AI ರೋಬೋಟ್‌ಗಳಿಗೆ ತರಬೇತಿ ನೀಡಲು ಈ ಪ್ರಯೋಗವೇ?

ಈ ಕ್ಯಾಮೆರಾಗಳ ಹಿಂದಿನ ನಿಖರ ಉದ್ದೇಶದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇದು ಕೃತಕ ಬುದ್ಧಿಮತ್ತೆ (AI) ಮತ್ತು ಹ್ಯೂಮನಾಯ್ಡ್ ರೋಬೋಟ್‌ಗಳ ತರಬೇತಿಗೆ ಸಂಬಂಧಿಸಿದ ಪ್ರಯೋಗವಾಗಿರಬಹುದು ಎಂಬ ಚರ್ಚೆ ನಡೆಯುತ್ತಿದೆ.

ಮಾನವರು ದಿನನಿತ್ಯ ಮಾಡುವ ಸಣ್ಣಪುಟ್ಟ ಕೆಲಸಗಳು, ಕೈಗಳ ಚಲನೆ, ವಸ್ತುಗಳನ್ನು ಎತ್ತುವುದು, ಗ್ರಾಹಕರಿಗೆ ವಸ್ತುಗಳನ್ನು ನೀಡುವುದು ಸೇರಿದಂತೆ ಹಲವು ಚಟುವಟಿಕೆಗಳ ಮಾಹಿತಿಯನ್ನು ಸಂಗ್ರಹಿಸಿ ರೋಬೋಟ್‌ಗಳಿಗೆ ತರಬೇತಿ ನೀಡಲು ಬಳಸಬಹುದು ಎಂಬುದು ಕೆಲವರ ಊಹೆ.

ಭವಿಷ್ಯದಲ್ಲಿ ಮನುಷ್ಯರು ಮಾಡುವ ಕೆಲಸಗಳನ್ನು ರೋಬೋಟ್‌ಗಳು ಕೂಡ ನಿಖರವಾಗಿ ಅನುಕರಿಸುವಂತೆ ಮಾಡಲು ಇಂತಹ ಡೇಟಾ ಸಹಾಯ ಮಾಡಬಹುದು ಎನ್ನಲಾಗುತ್ತಿದೆ.

ನೆಟ್ಟಿಗರಿಂದ ತಮಾಷೆ, ಆತಂಕದ ಪ್ರತಿಕ್ರಿಯೆ!

ಕೆಆರ್ ಮಾರ್ಕೆಟ್‌ನ ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ತಂತ್ರಜ್ಞಾನದ ಬೆಳವಣಿಗೆಯನ್ನು ಕುತೂಹಲದಿಂದ ನೋಡಿದರೆ, ಇನ್ನು ಕೆಲವರು ಉದ್ಯೋಗಗಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

"ಹಾಗಾದರೆ ಮುಂದೊಂದು ದಿನ ರೋಬೋಟ್‌ಗಳೇ ನಮಗೆ ಪಾಲಕ್ ಸೊಪ್ಪು, ಈರುಳ್ಳಿ ಮಾರಾಟ ಮಾಡುತ್ತವೆಯೇ?" ಎಂದು ನೆಟ್ಟಿಗರೊಬ್ಬರು ತಮಾಷೆ ಮಾಡಿದ್ದಾರೆ.

ಮತ್ತೊಬ್ಬರು ಈ ತಂತ್ರಜ್ಞಾನದ ಬಗ್ಗೆ ವಿವರಿಸುತ್ತಾ, ಮಾನವರ ದೇಹದ ಚಲನವಲನಗಳನ್ನು ದಾಖಲಿಸುವ ಸಾಧನಗಳ ಮೂಲಕ ಹ್ಯೂಮನಾಯ್ಡ್ ರೋಬೋಟ್‌ಗಳಿಗೆ ತರಬೇತಿ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕೆಲವರು ಕಾರ್ಮಿಕರ ಶ್ರಮ ಮತ್ತು ಉದ್ಯೋಗದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ಕೆಲವೇ ಪೈಸೆಗಳಿಗಾಗಿ ಇಂತಹ ಸಾಧನಗಳನ್ನು ಬಳಸಿ ನಮ್ಮ ಕೆಲಸದ ಮಾಹಿತಿಯನ್ನು ನೀಡಬೇಡಿ. ಮುಂದೊಂದು ದಿನ ಇದೇ ತಂತ್ರಜ್ಞಾನ ನಮ್ಮನ್ನು ಕಾರ್ಮಿಕರನ್ನಾಗಿ ಅಥವಾ ಗುಲಾಮರನ್ನಾಗಿ ಮಾಡಬಹುದು" ಎಂದು ಬಳಕೆದಾರರೊಬ್ಬರು ಆತಂಕ ಹಂಚಿಕೊಂಡಿದ್ದಾರೆ.

ಇನ್ನೊಬ್ಬರು ಬೆಂಗಳೂರಿನ ಮಾರ್ಕೆಟ್‌ನ ವ್ಯಾಪಾರಿಗಳ ವಿಶಿಷ್ಟ ಕೂಗುವ ಶೈಲಿಯನ್ನೇ ಈ ಕ್ಯಾಮೆರಾಗಳು ರೆಕಾರ್ಡ್ ಮಾಡುತ್ತಿರಬಹುದು ಎಂದು ತಮಾಷೆ ಮಾಡಿದ್ದಾರೆ. "ಆಲೂ ಲೇಲೋ, ಕಂಡಾ ಲೇಲೋ, ಕಾಲ್ ಕೆಜಿ ಐವತ್ತು ರೂಪಾಯಿ ಎಂದು ಕೂಗುವುದನ್ನು ರೆಕಾರ್ಡ್ ಮಾಡುತ್ತಿದ್ದಾರಾ?" ಎಂದು ಕಾಮೆಂಟ್ ಮಾಡಿದ್ದಾರೆ.

ಒಟ್ಟಿನಲ್ಲಿ, ಹೂವು ಮತ್ತು ತರಕಾರಿ ವ್ಯಾಪಾರಿಗಳ ತಲೆಯ ಮೇಲೆ ಕಾಣಿಸಿಕೊಂಡಿರುವ ಈ ಕ್ಯಾಮೆರಾಗಳು ತಂತ್ರಜ್ಞಾನ ಮತ್ತು ಮಾನವ ಶ್ರಮದ ಭವಿಷ್ಯದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿವೆ. ಆದರೆ ಈ ಪ್ರಯೋಗದ ನಿಜವಾದ ಉದ್ದೇಶವೇನು ಎಂಬುದು ಅಧಿಕೃತವಾಗಿ ಸ್ಪಷ್ಟವಾಗಬೇಕಿದೆ.