1905ರಲ್ಲಿ ಬೆಂಗಳೂರಿನ ಇತಿಹಾಸದಲ್ಲಿ ಮಹತ್ವದ ಬದಲಾವಣೆಯೊಂದು ಸಂಭವಿಸಿತು. ಒಂದೇ ಒಂದು ಸ್ವಿಚ್ ಆನ್ ಆಗುತ್ತಿದ್ದಂತೆ ನಗರದ ಬೀದಿಗಳೆಲ್ಲ ವಿದ್ಯುತ್ ಬೆಳಕಿನಿಂದ ಕಂಗೊಳಿಸಿದವು. ಅಷ್ಟೇ ಅಲ್ಲ, ಏಷ್ಯಾದಲ್ಲೇ ವಿದ್ಯುತ್ ಬೀದಿ ದೀಪಗಳನ್ನು ಹೊಂದಿದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಯಿತು.
ಇಂದು ಭಾರತದ ಸಿಲಿಕಾನ್ ಸಿಟಿ, ಐಟಿ ಹಬ್ ಎಂದೇ ಗುರುತಿಸಿಕೊಂಡಿರುವ ಬೆಂಗಳೂರು ಒಂದು ಕಾಲದಲ್ಲಿ ಕತ್ತಲೆಯ ನಗರವಾಗಿತ್ತು. ಸಂಜೆ ಸೂರ್ಯ ಮುಳುಗುತ್ತಿದ್ದಂತೆ ನಗರದ ಬೀದಿಗಳಲ್ಲಿ ಕತ್ತಲು ಆವರಿಸುತ್ತಿತ್ತು. ಬೀದಿ ದೀಪಗಳನ್ನು ಬೆಳಗಿಸಲು ವಿಶೇಷ ಕೆಲಸಗಾರರು ಲ್ಯಾಂಟರ್ನ್ಗಳಿಗೆ ಸೀಮೆಎಣ್ಣೆ ತುಂಬಿ, ಗಾಜಿನ ಮೇಲಿದ್ದ ಮಸಿಯನ್ನು ಸ್ವಚ್ಛಗೊಳಿಸಿ, ಬೆಂಕಿ ಹಚ್ಚುತ್ತಿದ್ದರು. ಆದರೆ 1905ರಲ್ಲಿ ಬೆಂಗಳೂರಿನ ಇತಿಹಾಸದಲ್ಲಿ ಮಹತ್ವದ ಬದಲಾವಣೆಯೊಂದು ಸಂಭವಿಸಿತು. ಒಂದೇ ಒಂದು ಸ್ವಿಚ್ ಆನ್ ಆಗುತ್ತಿದ್ದಂತೆ ನಗರದ ಬೀದಿಗಳೆಲ್ಲ ವಿದ್ಯುತ್ ಬೆಳಕಿನಿಂದ ಕಂಗೊಳಿಸಿದವು. ಅಷ್ಟೇ ಅಲ್ಲ, ಏಷ್ಯಾದಲ್ಲೇ ವಿದ್ಯುತ್ ಬೀದಿ ದೀಪಗಳನ್ನು ಹೊಂದಿದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಯಿತು.
ಈ ಐತಿಹಾಸಿಕ ಬದಲಾವಣೆಯ ಹಿಂದೆ ಇದ್ದದ್ದು ಬೆಂಗಳೂರಿನಿಂದ ನೂರಾರು ಕಿಲೋಮೀಟರ್ ದೂರದಲ್ಲಿದ್ದ ಜಲಪಾತ. ಹಾಗಾದರೆ, ಜಲಪಾತದ ನೀರಿನಿಂದ ಬೆಂಗಳೂರಿನ ಬೀದಿಗಳು ಬೆಳಗಿದ್ದು ಹೇಗೆ? ಇದರ ಹಿಂದಿನ ಕಥೆ ನಿಜಕ್ಕೂ ಕುತೂಹಲಕಾರಿಯಾಗಿದೆ.
ಕೆಜಿಎಫ್ ಚಿನ್ನದ ಗಣಿಯಿಂದ ಶುರುವಾದ ಬೆಂಗಳೂರಿನ ವಿದ್ಯುತ್ ಬೆಳಕಿನ ಕಥೆ
1905ಕ್ಕೂ ಮುನ್ನ ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್) ಚಿನ್ನದ ಗಣಿಗಳಲ್ಲಿ ಚಿನ್ನದ ಉತ್ಪಾದನೆ ಭರದಿಂದ ಸಾಗುತ್ತಿತ್ತು. ಗಣಿಗಾರರು ಭೂಮಿಯ ಆಳಕ್ಕೆ ಇಳಿದು ಚಿನ್ನವನ್ನು ಹೊರತೆಗೆಯುತ್ತಿದ್ದರು. ಆದರೆ ಗಣಿಗಳಲ್ಲಿ ಕೆಲಸ ಮಾಡಲು ಸಾಕಷ್ಟು ಬೆಳಕಿನ ವ್ಯವಸ್ಥೆ ಇರಲಿಲ್ಲ. ಹೀಗಾಗಿ ರಾತ್ರಿ ವೇಳೆ ಗಣಿಗಾರಿಕೆ ನಡೆಸುವುದು ದೊಡ್ಡ ಸವಾಲಾಗಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಂಜಿನಿಯರ್ಗಳು ಶಿವನಸಮುದ್ರ ಜಲಪಾತದ ನೀರಿನಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ರೂಪಿಸಿದರು. ಅದರಂತೆ, ಶಿವನಸಮುದ್ರದಲ್ಲಿ ಜಲವಿದ್ಯುತ್ ಉತ್ಪಾದನಾ ಘಟಕ ನಿರ್ಮಿಸಿ, ಸುಮಾರು 150 ಕಿಲೋಮೀಟರ್ ದೂರದಲ್ಲಿದ್ದ ಕೆಜಿಎಫ್ ಚಿನ್ನದ ಗಣಿಗಳಿಗೆ ವಿದ್ಯುತ್ ಪೂರೈಸುವ ವ್ಯವಸ್ಥೆ ಮಾಡಲಾಯಿತು.
ಈ ಯೋಜನೆ ಯಶಸ್ವಿಯಾದ ಬಳಿಕ ಜಲಪಾತದಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗತೊಡಗಿತು. 1905ರ ವೇಳೆಗೆ ಸುಮಾರು 2,000 ಹಾರ್ಸ್ಪವರ್ನಷ್ಟು ಹೆಚ್ಚುವರಿ ವಿದ್ಯುತ್ ಲಭ್ಯವಾಯಿತು ಎಂದು ವರದಿಗಳು ಹೇಳುತ್ತವೆ.
ಬೆಂಗಳೂರಿನ ಬೀದಿಗಳಿಗೆ ವಿದ್ಯುತ್ ದೀಪ ಹಾಕುವ ಆಲೋಚನೆ ಬಂದಿದ್ದೇಗೆ?
ಶಿವನಸಮುದ್ರದಿಂದ ಕೆಜಿಎಫ್ಗೆ ವಿದ್ಯುತ್ ಸಾಗಿಸುವ ಮಾರ್ಗ ಬೆಂಗಳೂರಿನ ಮೂಲಕವೇ ಹಾದುಹೋಗುತ್ತಿತ್ತು. ಈ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಅನ್ನು ಬೆಂಗಳೂರಿನ ಬೀದಿ ದೀಪಗಳಿಗೆ ಬಳಸಬಹುದಲ್ಲವೇ ಎಂಬ ಆಲೋಚನೆ ಎಂಜಿನಿಯರ್ಗಳಿಗೆ ಬಂತು. ಅಂದಿನ ಮುಖ್ಯ ಎಂಜಿನಿಯರ್ ವಿಲಿಯಂ ಮೆಕ್ಹಚಿನ್ (William McHutchin) ಅವರು ಈ ಪ್ರಸ್ತಾವನೆಯನ್ನು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮುಂದಿಟ್ಟರು. ಮಹಾರಾಜರಿಂದ ಅನುಮತಿ ದೊರೆತ ಬೆನ್ನಲ್ಲೇ ಯೋಜನೆಗೆ ಚಾಲನೆ ಸಿಕ್ಕಿತು.
ಕೇವಲ ಒಂಬತ್ತು ತಿಂಗಳ ಅವಧಿಯಲ್ಲಿ ಸುಮಾರು 57 ಕಿಲೋಮೀಟರ್ ಉದ್ದದ ವಿದ್ಯುತ್ ಪ್ರಸರಣ ಮಾರ್ಗವನ್ನು ನಿರ್ಮಿಸಲಾಯಿತು. ಇಂದಿನ ಕನಕಪುರದ ಬಳಿಯ ಕನಕನಹಳ್ಳಿಯಿಂದ ಬೆಂಗಳೂರಿನ ಹೃದಯಭಾಗದವರೆಗೆ ವಿದ್ಯುತ್ ತಲುಪಿಸುವ ವ್ಯವಸ್ಥೆ ಮಾಡಲಾಯಿತು.
1905ರ ಆಗಸ್ಟ್ನಲ್ಲಿ ಬೆಂಗಳೂರಿನ ಬೀದಿಗಳಲ್ಲಿ ಬೆಳಕಿನ ಕ್ರಾಂತಿ
1905ರ ಆಗಸ್ಟ್ ತಿಂಗಳ ಒಂದು ಸಂಜೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಸುತ್ತಮುತ್ತ ಜನರು ಎಂದಿನಂತೆ ತಮ್ಮ ಕೆಲಸಗಳಲ್ಲಿ ತೊಡಗಿದ್ದರು. ಆದರೆ ಅಂದು ಸಂಜೆ 7 ಗಂಟೆಗೆ ನಡೆದ ಘಟನೆ ನಗರದ ಇತಿಹಾಸವನ್ನೇ ಬದಲಿಸಿತು.
ವೈಸರಾಯ್ ಕೌನ್ಸಿಲ್ ಸದಸ್ಯರಾಗಿದ್ದ ಸರ್ ಜಾನ್ ಹೆವಿಟ್ ಅವರು ಸ್ವಿಚ್ ಆನ್ ಮಾಡುತ್ತಿದ್ದಂತೆ ವಿದ್ಯುತ್ ಹರಿದು ಬೀದಿ ದೀಪಗಳು ಬೆಳಗಿದವು. ಕತ್ತಲಿನಿಂದ ಆವೃತವಾಗುತ್ತಿದ್ದ ಬೆಂಗಳೂರಿನ ರಸ್ತೆಗಳು ಮೊದಲ ಬಾರಿಗೆ ವಿದ್ಯುತ್ ಬೆಳಕಿನಲ್ಲಿ ಮಿನುಗಿದವು. ಈ ಮೂಲಕ ಏಷ್ಯಾದಲ್ಲೇ ವಿದ್ಯುತ್ ಬೀದಿ ದೀಪಗಳನ್ನು ಹೊಂದಿದ ಮೊದಲ ನಗರ ಎಂಬ ಹೆಗ್ಗಳಿಕೆಯನ್ನು ಬೆಂಗಳೂರು ಪಡೆದುಕೊಂಡಿತು.
861 ಬೀದಿ ದೀಪಗಳು, 1,639 ಮನೆಗಳಿಗೆ ವಿದ್ಯುತ್ ಸಂಪರ್ಕ
ಆರಂಭದಲ್ಲಿ ವಿದ್ಯುತ್ ಸಂಪರ್ಕ ಎನ್ನುವುದು ಶ್ರೀಮಂತರು ಮತ್ತು ಕೆಲವೇ ಕೆಲವು ಖಾಸಗಿ ಮನೆಗಳಿಗೆ ಸೀಮಿತವಾಗಿತ್ತು. ಆದರೆ ಕ್ರಮೇಣ ಸರ್ಕಾರಿ ಕಚೇರಿಗಳು, ವಾಣಿಜ್ಯ ಮಳಿಗೆಗಳು ಮತ್ತು ನೂರಾರು ಮನೆಗಳಿಗೂ ವಿದ್ಯುತ್ ಸಂಪರ್ಕ ವಿಸ್ತರಿಸಿತು. ಈ ಸಂಪೂರ್ಣ ವಿದ್ಯುದೀಕರಣ ಯೋಜನೆಗೆ ಆಗ ಸುಮಾರು 6 ಲಕ್ಷ ರೂಪಾಯಿ ವೆಚ್ಚವಾಗಿತ್ತು. ಇದರ ವಾರ್ಷಿಕ ನಿರ್ವಹಣೆಗೆ 50 ಸಾವಿರ ರೂಪಾಯಿ ಖರ್ಚಾಗುತ್ತಿತ್ತು ಎಂದು ವರದಿಗಳು ಉಲ್ಲೇಖಿಸುತ್ತವೆ.
1906ರ ಜೂನ್ ವೇಳೆಗೆ ಬೆಂಗಳೂರಿನಲ್ಲಿ 861 ಬೀದಿ ದೀಪಗಳು ಮತ್ತು 1,639 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು ಎನ್ನಲಾಗಿದೆ. ಅಲ್ಲದೆ, ತಿಂಗಳಿಗೆ ಒಂದು ರೂಪಾಯಿ ಪಾವತಿಸಿ ಒಂದು ಬಲ್ಬ್ ಬಳಸುವ ಯೋಜನೆಯನ್ನೂ ಸರ್ಕಾರ ಪರಿಚಯಿಸಿತ್ತು. ಈ ಯೋಜನೆ ಕೂಡ ಜನಪ್ರಿಯವಾಯಿತು.
ಒಂದು ಜಲಪಾತ ಬದಲಿಸಿತು ಬೆಂಗಳೂರಿನ ಭವಿಷ್ಯ
ಇಂದು ಬೆಂಗಳೂರು ಐಟಿ ಕಂಪನಿಗಳು, ಸ್ಟಾರ್ಟ್ಅಪ್ಗಳು, ಮೆಟ್ರೋ ರೈಲು, ಎತ್ತರದ ಕಟ್ಟಡಗಳು ಮತ್ತು ಆಧುನಿಕ ಜೀವನಶೈಲಿಗೆ ಹೆಸರುವಾಸಿಯಾಗಿದೆ. ಆದರೆ ನಗರದ ಆಧುನಿಕತೆಯ ಪಯಣದಲ್ಲಿ 1905ರ ವಿದ್ಯುತ್ ಕ್ರಾಂತಿಗೆ ವಿಶೇಷ ಸ್ಥಾನವಿದೆ. ಕೆಜಿಎಫ್ ಚಿನ್ನದ ಗಣಿಗಳಿಗೆ ವಿದ್ಯುತ್ ಒದಗಿಸಲು ಆರಂಭವಾದ ಯೋಜನೆ, ಹೆಚ್ಚುವರಿ ವಿದ್ಯುತ್ ಬಳಕೆಯ ಆಲೋಚನೆಯಿಂದ ಬೆಂಗಳೂರಿನ ಬೀದಿಗಳಿಗೂ ಬೆಳಕು ನೀಡಿತು. ನೂರಾರು ಕಿಲೋಮೀಟರ್ ದೂರದಲ್ಲಿದ್ದ ಶಿವನಸಮುದ್ರ ಜಲಪಾತದ ಶಕ್ತಿಯೇ ಬೆಂಗಳೂರಿನ ರಾತ್ರಿಗಳನ್ನು ಬೆಳಗಿಸಿತು.
ಹೀಗೆ, ಒಂದು ಜಲಪಾತದ ನೀರಿನಿಂದ ಉತ್ಪಾದನೆಯಾದ ವಿದ್ಯುತ್ ಬೆಂಗಳೂರಿನ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನೇ ಬರೆದಿತ್ತು.














