ಬೆಂಗಳೂರಿನ ಆರ್ಯನ್ ಹೋಮ್‌ಟೆಕ್ ಕಂಪನಿ ನಿರ್ದೇಶಕರಾದ ಭರತ್ ರೆಡ್ಡಿ ಮತ್ತು ರಶ್ಮೀ ಭರತ್ ರೆಡ್ಡಿಗೆ ಸಂಬಂಧಿಸಿದ ಮೂರು ಸ್ಥಳಗಳ ಮೇಲೆ ಇ.ಡಿ. ದಾಳಿ ನಡೆಸಿದೆ. ಅಪಾರ್ಟ್‌ಮೆಂಟ್ ಯೋಜನೆಗಳಿಗಾಗಿ ಸಂಗ್ರಹಿಸಿದ್ದ ₹90 ಕೋಟಿ ಹಣ ದುರ್ಬಳಕೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಬೆಂಗಳೂರು ವಲಯದ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ನಗರದ ‘ಆರ್ಯನ್‌ ಹೋಮ್‌ಟೆಕ್‌ ಪ್ರೈವೇಟ್‌ ಲಿಮಿಟೆಡ್‌’ ಕಂಪನಿ ಹಾಗೂ ಅದರ ನಿರ್ದೇಶಕರಾದ ಭರತ್‌ ರೆಡ್ಡಿ ಮತ್ತು ರಶ್ಮೀ ಭರತ್‌ ರೆಡ್ಡಿ ಅವರಿಗೆ ಸಂಬಂಧಿಸಿದ 3 ಸ್ಥಳಗಳ ಮೇಲೆ ದಾಳಿ ನಡೆಸಿ, ವಂಚನೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಭೂಮಾಲೀಕರು, ಮನೆ ಖರೀದಿದಾರರು ಮತ್ತು ಹಣಕಾಸು ಸಂಸ್ಥೆಗಳು ನೀಡಿದ ದೂರುಗಳ ಮೇರೆಗೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳನ್ನು ಆಧರಿಸಿ ಇ.ಡಿ. ತನಿಖೆ ಆರಂಭಿಸಿದೆ. ಕೆಲ ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ‘ಸಿ’ ರಿಪೋರ್ಟ್‌ ಸಲ್ಲಿಸಿದ್ದರು. ಈ ನಡುವೆ ಇ.ಡಿ. ಅಧಿಕಾರಿಗಳು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಇದೀಗ ದಾಳಿ ನಡೆಸಿದ್ದಾರೆ.

ಸಾಲಗಳಿಗೆ ಭೂ ಮಾಲೀಕರೇ ಗ್ಯಾರಂಟಿ:

ಈ ಆರ್ಯನ್‌ ಹೋಮ್‌ಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ನಿರ್ದೇಶಕರು ಭೂಮಾಲೀಕರಿಗೆ ಮೋಸ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಜಂಟಿ ಅಭಿವೃದ್ಧಿ ಒಪ್ಪಂದದ ಪ್ರಕಾರ ಭೂಮಾಲೀಕರಿಗೆ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಕೊಡದೆ, ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳಿಗೆ ಈ ಭೂ ಮಾಲೀಕರನ್ನು ಖಾತರಿದಾರರನ್ನಾಗಿ ಮಾಡಲಾಗಿದೆ. ಈ ಭೂಮಿ ಮಾಲೀಕರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ತಾವೇ ಸಾಲದ ಬಹುಭಾಗವನ್ನು ಮರು ಪಾವತಿ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.

ಈ ಆರ್ಯನ್‌ ಹೋಮ್‌ಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಭೂ ಮಾಲೀಕ ಬಿ.ಜಿ.ಅಂಜಿನಪ್ಪ ಅವರೊಂದಿಗೆ ಜಂಟಿ ಅಭಿವೃದ್ಧಿ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಪ್ರಕಾರ ಯೋಜನೆಯಲ್ಲಿನ ಕೆಲ ಅಪಾರ್ಟ್‌ಮೆಂಟ್‌ಗಳು ಮತ್ತು ಅದಕ್ಕೆ ಸಂಬಂಧಿಸಿದ ಭೂಮಿಯನ್ನು ಕ್ರಮವಾಗಿ ಶೇ.63 ಮತ್ತು ಶೇ.37ರ ಅನುಪಾತದಲ್ಲಿ ಹಂಚಿಕೊಳ್ಳಲು ನಿರ್ಧರಿಸಲಾಗಿತ್ತು. ಇದರಲ್ಲಿ ಆರ್ಯನ್‌ ಫೌಂಟೇನ್‌ ಸ್ಕ್ವೈರ್‌ ಮತ್ತು ಆರ್ಯನ್‌ ಗೋಲ್ಡನ್‌ ಅರೆನಾ ಎಂಬ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.

90 ಕೋಟಿ ರು. ದುರ್ಬಳಕೆ:

ಈ ಯೋಜನೆಗಳ ಅನುಷ್ಠಾನಕ್ಕಾಗಿ ಸಂಗ್ರಹಿಸಿದ್ದ 90 ಕೋಟಿ ರು. ಹಣವನ್ನು ಕಂಪನಿ ನಿರ್ದೇಶಕರು ಬೇರೆ ಉದ್ದೇಶಗಳಿಗೆ ಬಳಸಿಕೊಂಡು ಅಪಾರ್ಟ್‌ಮೆಂಟ್‌ ಖರೀದಿದಾರರು/ಹೂಡಿಕೆದಾರರಿಗೆ ಮೋಸ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ. ಅಪರಾಧದ ಮುಖಾಂತರ ಗಳಿಸಿದ ಹಣವನ್ನು ತಮ್ಮ ಕುಟುಂಬದ ಸದಸ್ಯರು ಹಾಗೂ ಅವರ ಒಡೆತನದಲ್ಲಿರುವ ಸಂಸ್ಥೆಗಳಿಗೆ ವರ್ಗಾಯಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೆಚ್ಚಿನ ತನಿಖೆಗೆ ಪ್ರಗತಿಯಲ್ಲಿದೆ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಿದೆ.