ಬೆಂಗಳೂರಿನಲ್ಲಿ ಓಲಾ ಆಟೋ ದರಗಳು ಸೆಡಾನ್‌ಗಳಿಗಿಂತ ಹೆಚ್ಚಾಗಿರುವುದು ಕಂಡುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಪ್ರಯಾಣಿಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬೇಡಿಕೆ ಮತ್ತು ಚಾಲಕರ ಲಭ್ಯತೆಯಂತಹ ಅಂಶಗಳು ದರಗಳ ಮೇಲೆ ಪರಿಣಾಮ ಬೀರುತ್ತವೆ.

ಬೆಂಗಳೂರು (ಜು.17): ರೈಡ್‌ ಹೇಲಿಂಗ್‌ ಅಪ್ಲಿಕೇಶನ್‌ಗಳು ಪ್ರಯಾಣಿಕರ ರಕ್ತ ಹೀರುತ್ತಿವೆ ಅನ್ನೋದಕ್ಕೆ ಸಾಕ್ಷಿ ಎನ್ನುವಂತೆ, ಬೆಂಗಳೂರಿನ ಪ್ರಯಾಣಿಕರಿಗೆ ಓಲಾ ಅಪ್ಲಿಕೇಶನ್‌ನಲ್ಲಿ ಒಂದು ಅಚ್ಚರಿಯನ್ನು ಕಂಡುಕೊಂಡಿದ್ದಾರೆ. ಓಲಾದಲ್ಲಿ ಆಟೋ ರಿಕ್ಷಾವನ್ನು ಬುಕ್‌ ಮಾಡೋದು ಎಷ್ಟು ದುಬಾರಿ ಎಂದರೆ, ಕೆಲವೊಮ್ಮೆ ಸೆಡಾನ್‌ ಕಾರ್‌ ಬುಕ್ಕಿಂಗ್‌ಗಿಂತಲೂ ಇದು ದುಬಾರಿ ಎಂದು ತೋರಿಸಿದೆ. ಈ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದ್ದು,ಪ್ರಯಾಣಿಕರಲ್ಲಿ ವ್ಯಾಪಕ ಚರ್ಚೆ ಹಾಗೂ ಹತಾಶೆ ಹುಟ್ಟುಹಾಕಿದೆ.

ಸೋಶಿಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ ರೆಡ್ಡಿಟ್ ಯೂಸರ್‌ ಒಬ್ಬರು ಓಲಾ ಅಪ್ಲಿಕೇಶನ್‌ನಿಂದ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಒಂದೇ ರೀತಿಯ ದೂರಕ್ಕೆ ಸೆಡಾನ್‌ ಕಾರ್‌ಗಳಿಂದ ಆಟೋ ರೈಡ್‌ನ ಬೆಲೆಯೇ ದುಬಾರಿಯಾಗಿದೆ ಎಂದು ತೋರಿಸಿದ್ದಾರೆ. ಈ ಪೋಸ್ಟ್‌ ಕ್ವಿಕ್‌ ಆಗಿ ವೈರಲ್‌ ಆಗಿದೆ. ಅನೇಕ ಯೂಸರ್‌ಗಳು ತಮಗೂ ಕೂಡ ಇದೇ ರೀತಿಯ ಅನುಭವ ಆಗಿದೆ ಎಂದು ಹೇಳಿದ್ದಾರೆ. ಒಬ್ಬ ರೆಡ್ಡಿಟರ್, "ಇದು ಇನ್ನು ಮುಂದೆ ಆಶ್ಚರ್ಯವೇನಿಲ್ಲ. ಅಪ್ಲಿಕೇಶನ್‌ಗಳಲ್ಲಿ ಆಟೋಗಳು ಕುಖ್ಯಾತವಾಗಿ ದುಬಾರಿಯಾಗಿವೆ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಇದು ಸಾಮಾನ್ಯ ಘಟನೆ. ನಾನು ಈಗ ಯಾವಾಗಲೂ ಸೆಡಾನ್ ಮತ್ತು ಆಟೋ ಬೆಲೆಗಳನ್ನು ಪರಿಶೀಲಿಸುತ್ತೇನೆ ಮತ್ತು ಆಗಾಗ್ಗೆ, ಸೆಡಾನ್ ಅಗ್ಗವಾಗಿರುತ್ತದೆ, ವಿಶೇಷವಾಗಿ ಪೀಕ್ ಅವರ್‌ನಲ್ಲಿ." ಎಂದು ಬರೆದಿದ್ದಾರೆ.

ಬೆಲೆ ನಿಗದಿಯಲ್ಲಿ ಆಗಿರುವ ವಿರೋಧಾಭಾಸವು ಕೇವಲ ಒಂದು ಬಾರಿಯ ದೋಷವಲ್ಲ. ಬದಲಾಗಿ ಇದು ಮೂಲದಲ್ಲೇ ಇರುವ ಸಮಸ್ಯೆಯಂತೇ ಕಾಣುತ್ತದೆ. ಸೆಡಾನ್‌ಗಳು ಎಸಿ ಹೊಂದಿರುತ್ತದೆ ಮತ್ತು ಹೆಚ್ಚಿನ ವೈಯಕ್ತಿಕ ಸ್ಥಳವನ್ನು ನೀಡುತ್ತವೆಯಾದರೂ, ಸಣ್ಣ, ಆರ್ಥಿಕ ಸವಾರಿಗಳಿಗೆ ಸಾಂಪ್ರದಾಯಿಕವಾದ ಆಟೋ-ರಿಕ್ಷಾವನ್ನೇ ಹೆಚ್ಚಿನ ಜನರು ಅವಲಂಬಿಸಿದ್ದಾರೆ. ಆದರೆ, ಈಗ ಆಟೋ ದರ ಸೆಡಾನ್‌ಗಿಂತಲೂ ದುಬಾರಿಯಾಗಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.

ಇದಕ್ಕೆ ಹಲವಾರು ಅಂಶಗಳು ಕೂಡ ಕಾರಣವಾಗಿರಬಹುದು. ರೈಡ್-ಹೇಲಿಂಗ್ ಅಪ್ಲಿಕೇಶನ್‌ಗಳಲ್ಲಿ ಸಾಮಾನ್ಯ ಲಕ್ಷಣವಾಗಿರುವ ಡೈನಾಮಿಕ್ ಬೆಲೆ ನಿಗದಿಯು ಬೇಡಿಕೆ, ದಟ್ಟಣೆ ಮತ್ತು ಚಾಲಕರ ಲಭ್ಯತೆಯ ಆಧಾರದ ಮೇಲೆ ದರಗಳನ್ನು ಸರಿಹೊಂದಿಸಲಾಗುತ್ತದೆ. ಪೀಕ್ ಸಮಯದಲ್ಲಿ ಅಥವಾ ಕಡಿಮೆ ಆಟೋಗಳು ಇದ್ದಾಗ, ಹೆಚ್ಚಿನ ಬೇಡಿಕೆ ಇರುವ ಪ್ರದೇಶಗಳಲ್ಲಿ, ಆಟೋ ದರಗಳು ಹೆಚ್ಚಾಗಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಸೆಡಾನ್‌ಗಳು ಹೆಚ್ಚಿನ ಚಾಲಕರನ್ನು ಹೊಂದಿದ್ದು ಅಥವಾ ಆಫ್-ಪೀಕ್ ಸಮಯದಲ್ಲಿ ಸವಾರರನ್ನು ಆಕರ್ಷಿಸಲು ಅವುಗಳ ಮೂಲ ದರಗಳನ್ನು ವಿಭಿನ್ನವಾಗಿ ರಚಿಸಬಹುದು, ಇದು ತುಲನಾತ್ಮಕ ವೆಚ್ಚಗಳನ್ನು ಕಡಿಮೆ ಮಾಡಲು ಕಾರಣವಾಗುತ್ತದೆ.

ಬೆಂಗಳೂರಿನ ತಂತ್ರಜ್ಞಾನ ಪ್ರಿಯರಲ್ಲಿ ಈ ವಿಷಯವು ಸಾಕಷ್ಟು ಚರ್ಚೆಗೆ ನಾಂದಿ ಹಾಡಿದೆ. ಕೆಲವು ಯೂಸರ್‌ಗಳು ಓಲಾ ಸೆಡಾನ್ ಬುಕಿಂಗ್‌ಗಳನ್ನು ಪ್ರೋತ್ಸಾಹಿಸುತ್ತಿರಬಹುದು ಎಂದು ಊಹಿಸಿದರೆ, ಇನ್ನು ಕೆಲವರು ಅಪ್ಲಿಕೇಶನ್ ಆಧಾರಿತ ಆಟೋ ದರಗಳಿಗೆ ನಿಯಂತ್ರಣದ ಕೊರತೆಯ ಬಗ್ಗೆ ಬೊಟ್ಟು ಮಾಡಿದ್ದಾರೆ. "ಬಹುಶಃ ಅವರು ಉತ್ತಮ ಲಾಭಕ್ಕಾಗಿ ಜನರನ್ನು ಸೆಡಾನ್‌ಗಳ ಕಡೆಗೆ ತಳ್ಳಲು ಬಯಸುತ್ತಿರಬಹುದು" ಎಂದು ಒಬ್ಬ ಯೂಸರ್‌ ಊಹಿಸಿದ್ದಾರೆ. "ಇದು ಕೈಗೆಟುಕುವ ಬೆಲೆಗೆ ಆಟೋ ಆಯ್ಕೆ ಮಾಡುವ ಉದ್ದೇಶವನ್ನು ಸೋಲಿಸುತ್ತದೆ" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಈ ನಿರ್ದಿಷ್ಟ ಬೆಲೆ ವ್ಯತ್ಯಾಸವನ್ನು ಪರಿಹರಿಸಲು ಓಲಾ ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡದಿದ್ದರೂ, ಪ್ರಯಾಣಿಕರಲ್ಲಿ ನಿರಾಶೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅನೇಕರು ಈಗ ಹೆಚ್ಚು ಪಾರದರ್ಶಕ ಬೆಲೆ ಮಾದರಿಗಳು ಮತ್ತು ಎಲ್ಲಾ ವಿಭಾಗಗಳಲ್ಲಿ ನ್ಯಾಯಯುತ ದರಗಳನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿದ ನಿಯಂತ್ರಕ ಮೇಲ್ವಿಚಾರಣೆಗಾಗಿ ಒತ್ತಾಯಿಸಿದ್ದಾರೆ. ಬೆಂಗಳೂರು ತನ್ನ ಸಂಚಾರ ಸಮಸ್ಯೆಗಳನ್ನು ಮುಂದುವರೆಸುತ್ತಿದ್ದಂತೆ, ಅಪ್ಲಿಕೇಶನ್ ಆಧಾರಿತ ಸಾರಿಗೆಯ ವೆಚ್ಚವು ಹಾಟ್‌ ಟಾಪಿಕ್‌ ಆಗಿ ಉಳಿದಿದೆ, ಸಾಧಾರಣ ಆಟೋರಿಕ್ಷಾ ಬೆಲೆಯಲ್ಲಿ ಅನಿಯಂತ್ರಿತವಾಗಿ ಏರಿಕೆಯಾಗಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.