ಬೆಂಗಳೂರು ಜನರಿಗೆ ತಾಳಲಾಗುತ್ತಿಲ್ಲ, ಬಿಬಿಎಂಪಿ ಮಾರ್ಷಲ್‌ಗಳ ಕಿರುಕುಳ; ವೃದ್ಧನ ಕಣ್ಣೀರಿಗೂ ಕರಗದ ಕಟುಕರು

ಬಿಬಿಎಂಪಿ ಮಾರ್ಷಲ್‌ಗಳು ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ ಬಳಿ ಹೋಗುತ್ತಿದ್ದ ವೃದ್ಧ ಬಡ ವ್ಯಾಪಾರಿಯನ್ನು ಹಿಡಿದು ಬ್ಯಾಗ್‌ಗಳನ್ನು ಕಿತ್ತುಕೊಂಡು ದಂಡ ವಿಧಿಸಲು ಮುಂದಾದ ಅಮಾನವೀಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Bengaluru BBMP marshals give harassment to poor trader at Jayanagar BDA Complex sat

ಬೆಂಗಳೂರು (ಮಾ.26): ಬೆಂಗಳೂರಿನ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ ಬಳಿ ವೃದ್ಧನೊಬ್ಬ ಎರಡೂ ಕೈಗಳಲ್ಲಿ ಬ್ಯಾಗ್‌ಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ವೇಳೆ ಬಿಬಿಎಂಪಿ ಮಾರ್ಷಲ್‌ಗಳು ಹಿಡಿದು, ಬಲವಂತವಾಗಿ ಬ್ಯಾಗ್‌ ಕಿತ್ತುಕೊಂಡು ದಂಡ ವಸೂಲಿಗೆ ಮುಂದಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೌದು, ಬೆಂಗಳೂರಿನಲ್ಲಿ ಕೋವಿಡ್‌ ವೇಳೆ ಮಾಸ್ಕ್‌ ಧರಿಸಿದ ಜನರಿಂದ ಕೋಟ್ಯಾಂತರ ರೂ. ದಂಡ ವಸೂಲಿ ಮಾಡಿದ ಬಿಬಿಎಂಪಿ ಮಾರ್ಷಲ್‌ಗಳು ಈಗ ಸಣ್ಣ, ಪುಟ್ಟ ವ್ಯಾಪಾರಿಗಳನ್ನು ಹಿಡಿದು ಸುಲಿಗೆ ಮಾಡುತ್ತಿರುವುದು ಘಟನೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ ಬಳಿ ನಡೆದಿದೆ. ಕಳೆದ ವರ್ಷ ಜಯನಗರದ ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್‌ ಬಳಿಯ ಎಲ್ಲ ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿ ಒಕ್ಕಲೆಬ್ಬಿಸಲಾಗಿದೆ. ನಂತರ, ಶಾಪಿಂಗ್ ಕಾಂಪ್ಲೆಕ್ಸ್‌ ಬಳಿ ಯಾವುದೇ ಫುಟ್‌ಪಾತ್ ವ್ಯಾಪಾರಿಗಳು ಬಾರದಂತೆ ಮಾರ್ಷಲ್‌ಗಳನ್ನು ನಿಯೋಜನೆ ಮಾಡಲಾಗಿದೆ. ಆದರೆ, ಈ ಮಾರ್ಷಲ್‌ಗಳು ಯಾವುದೇ ವ್ಯಾಪಾರಿಗಳು ಅಲ್ಲಿ ಸಾಮಗ್ರಿಗಳನ್ನು ಹೊತ್ತು ಸಾಗಿದರೂ ಅವರನ್ನು ಹಿಡಿದು ಸಾಮಗ್ರಿಗಳನ್ನೆಲ್ಲ ಕಿತ್ತುಕೊಂಡು ದಂಡ ವಿಧಿಸುತ್ತಿದ್ದಾರೆ.

ಬೆಂಗಳೂರು: ಬದುಕು ಕಿತ್ತುಕೊಂಡ ಜಾಗದಲ್ಲೇ ಚಪ್ಪಲಿ ಹೊಲೆಯುವ ಕೆಲಸ ಆರಂಭಿಸಿದ ವೃದ್ಧ ನಂಜುಡಪ್ಪ

ಕಳೆದ ಎರಡು ದಿನಗಳ ಹಿಂದೆ ಇದೇ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ ಬಳಿ ವೃದ್ಧ ವ್ಯಾಪಾರಿಯೊಬ್ಬ ಎರಡೂ ಕೈಗಳಲ್ಲಿ ಬ್ಯಾಗ್‌ಗಳನ್ನು ಹಿಡಿದುಕೊಂಡು ಅಲ್ಲಿ ಸಾಗಿದ್ದಾನೆ. ಆದರೆ, ಈ ವೃದ್ಧ ಫುಟ್‌ಪಾತ್‌ನಲ್ಲಿ ಎಲ್ಲಿಯೂ ಬ್ಯಾಗ್‌ಗಳನ್ನು ಇಟ್ಟುಕೊಂಡು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿಲ್ಲ. ಆದರೂ, ಮಾರ್ಷಲ್‌ಗಳು ಅಲ್ಲಿದ್ದ ವೃದ್ಧ ಬ್ಯಾಗ್ ವ್ಯಾಪಾರಿಯನ್ನು ಹಿಡಿದು, ಬ್ಯಾಗ್‌ಗಳನ್ನು ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಆಗ, ಬಡ ವ್ಯಾಪಾರಿ ಅಳುತ್ತಾ ದೈನೇಸಿ ಸ್ಥಿತಿಯಲ್ಲಿ ನನ್ನ ಬ್ಯಾಗ್‌ಗಳನ್ನು ಬಿಟ್ಟುಬಿಡಿ ಎಂದು ಮಾರ್ಷಲ್‌ಗಳಿಗೆ ಕೈ ಮುಗಿದು ಕೇಳಿಕೊಂಡಿದ್ದಾರೆ. ಇದೆಲ್ಲವನ್ನು ನೋಡಿದ ಅಲ್ಲಿನ ಜನರು ಕೂಡಲೇ ವೃದ್ಧ ಬಡ ವ್ಯಾಪಾರಿಯ ಪರವಾಗಿ ಮಾತನಾಡಿದ್ದಾರೆ.

ನೀವು ಆ ವೃದ್ಧ ವ್ಯಾಪಾರಿಯನ್ನು ಬಿಟ್ಟುಬಿಡಿ. ಅವರು ಪಾದಚಾರಿ ಮಾರ್ಗದಲ್ಲಿ ಬ್ಯಾಗ್ ಇಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿಲ್ಲ. ಅವರು ಬ್ಯಾಗ್‌ಗಳನ್ನು ಹೊತ್ತುಕೊಂಡು ಹೋಗಲು ಅವಕಾಶ ಇಲ್ಲವೇ. ಒಂದು ವೇಳೆ ಈ ಬೀದಿಗಳಲ್ಲಿ ಸಾಮಗ್ರಿಗಳನ್ನು ಹೊತ್ತು ಮಾರಿದರೂ ತಪ್ಪೇನಿದೆ. ನೀವು ಅವರನ್ನು ಬಿಡಿ, ಇಲ್ಲವೆಂದರೆ ಸಾರ್ವಜನಿಕರೆಲ್ಲ ಒಂದಾಗಿ ನಿಮ್ಮಿಂದ ಅವರನ್ನು ಬಿಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇಷ್ಟೆಲ್ಲಾ ನಡೆದರೂ ಯಾರ ಮಾತನ್ನೂ ಕೇಳದೆ ವೃದ್ಧನ ಕೈಯಲ್ಲಿದ್ದ ಬ್ಯಾಗ್‌ಗಳನ್ನು ಹಿಡಿದುಕೊಂಡ ಮಾರ್ಷಲ್ ಮಾತ್ರ ಜಪ್ಪಯ್ಯ ಎನ್ನುತ್ತಿಲ್ಲ. ನಂತರ, ಮತ್ತೊಬ್ಬ ಮಾರ್ಷಲ್‌ಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಆಗ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ನಂತರ ಅಲ್ಲಿಂದ ವೃದ್ಧನನ್ನು ಬಿಟ್ಟು ಕಳಿಸಿದ್ದಾರೆ.

ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌ ಫುಟ್‌ಪಾತ್ ಒತ್ತುವರಿ ವ್ಯಾಪಾರಿಗಳನ್ನು ತೆರವುಗೊಳಿಸಿದ ಬಿಬಿಎಂಪಿ!

ಮುಖ್ಯವಾಗಿ ಬಿಬಿಎಂಪಿಗೆ ಮಾರ್ಷಲ್‌ಗಳನ್ನು ನಿಯೋಜನೆ ಮಾಡಿಕೊಂಡ ಉದ್ದೇಶವೇ ಬೇರೆಯಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಡೆಯುವುದು, ಬ್ಲ್ಯಾಕ್‌ ಸ್ಪಾಟ್‌ಗಳ ನಿಯಂತ್ರಣ, ಮನೆಯಿಂದ ಕೊಡುವ ಕಸವನ್ನು ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ಕೊಡಲು ಜಾಗೃತಿ ಮೂಡಿಸುವುದು ಹಾಗೂ ಕಸ ಸಂಗ್ರಹಣೆ ಮಾಡುವ ಆಟೋ ಟಿಪ್ಪರ್‌ಗಳ ಸಮರ್ಪಕ ಕಾರ್ಯನಿರ್ವಹಣೆ ಬಗ್ಗೆ ನಿಗಾವಹಿಸಲು ಮಾರ್ಷಲ್‌ಗಳನ್ನು ನಿಯೋಜನೆ ಮಾಡಲಾಗಿತ್ತು. ಆದರೆ, ಈಗ ಮಾರ್ಷಲ್‌ಗಳ ನಿಯೋಜನೆ ಉದ್ದೇಶವೇ ಬೇರೆಯಾಗಿದೆ. ಈಗ ಬಹುತೇಕ ಮಾರ್ಷಲ್‌ಗಳು ಕೆರೆಗಳ ರಕ್ಷಣೆ, ಉದ್ಯಾನಗಳ ಭದ್ರತೆ, ಪ್ಲಾಸ್ಟಿಕ್ ಮಾರಾಟ ನಿಯಂತ್ರಣ, ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ನಿಯಂತ್ರಣ, ಶಾಪಿಂಗ್ ಕಾಂಪ್ಲೆಕ್ಸ್‌ಗಳ ಭದ್ರತೆ ಸೇರಿ ವಿವಿಧ ಕಾರ್ಯಗಳಿಗೆ ನಿಯೋಜನೆಗೊಂಡಿದ್ದಾರೆ.

Latest Videos
Follow Us:
Download App:
  • android
  • ios