ಬೆಂಗಳೂರಿನಲ್ಲಿ ರಾತ್ರಿ ವೇಳೆ ಕಿಟಕಿ ಮೂಲಕ ನುಗ್ಗಿದ ನಾಗರಹಾವೊಂದು ನಿದ್ದೆಯಲ್ಲಿದ್ದ ಅಣ್ಣ-ತಂಗಿಯ ದಿಂಬಿನ ಕೆಳಗೆ ಸೇರಿಕೊಂಡಿದೆ. ಇಲಿ ಎಂದು ನಿರ್ಲಕ್ಷಿಸಿದ್ದ ಮಕ್ಕಳು ಬೆಳಿಗ್ಗೆ ಎದ್ದು ನೋಡಿದಾಗ ಭೀಕರ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ನಂತರ ಉರಗ ತಜ್ಞ ನಾಗೇಂದ್ರ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದ್ದಾರೆ.
ಬೆಂಗಳೂರು (ಅ.22): ಕೇಳಿದರೆ ಮೈ ಜುಂ ಎನ್ನುವ, ನೆನೆಸಿಕೊಂಡರೇ ಎದೆಯೊಡೆದು ಹೋಗುವಂತಹ ನಡುಕ ಹುಟ್ಟಿಸುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಗಾಢ ನಿದ್ರೆಯಲ್ಲಿದ್ದ ಅಣ್ಣ ಮತ್ತು ತಂಗಿ ರಾತ್ರಿಯಿಡೀ ವಿಷಪೂರಿತ ನಾಗರಹಾವಿನ ಮೇಲೆಯೇ ಮಲಗಿ, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪುನರ್ಜನ್ಮ ಪಡೆದಿದ್ದಾರೆ!
ಬೆಂಗಳೂರಿನ ಬಾಗಲಗುಂಟೆ ಸಮೀಪದ ಭೈರವೇಶ್ವರ ನಗರದಲ್ಲಿ ಈ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ.
ಕಿಟಕಿ ಮೂಲಕ ರೂಮ್ ನುಗ್ಗಿದ್ದ ನಾಗರಹಾವು:
ಭೈರವೇಶ್ವರ ನಗರದ ನಿವಾಸಿಗಳ ಮನೆಯ ಬೆಡ್ರೂಂ ಕಿಟಕಿಯ ಮೂಲಕ ರಾತ್ರಿ ವೇಳೆ ಸುಮಾರು ನಾಲ್ಕೈದು ಅಡಿ ಉದ್ದದ ಭಯಂಕರ ವಿಷಕಾರಿ ನಾಗರಹಾವೊಂದು ನುಸುಳಿದೆ. ಆ ಸಮಯದಲ್ಲಿ ಕೋಣೆಯಲ್ಲಿ ಅಣ್ಣ ಮತ್ತು ತಂಗಿ ಗಾಢ ನಿದ್ರೆಯಲ್ಲಿದ್ದರು. ಕಿಟಕಿಯಿಂದ ಹಾಸಿಗೆಗೆ ಬಂದ ಆ ಸರ್ಪ, ನಿದ್ರೆಯಲ್ಲಿದ್ದ ಮಕ್ಕಳ ಮೈಮೇಲೆ ಓಡಾಡಿ ಕೊನೆಗೆ ಅವರು ತಲೆಯಿಟ್ಟು ಮಲಗಿದ್ದ ದಿಂಬಿನ ಕೆಳಭಾಗದಲ್ಲಿ ಸೇರಿಕೊಂಡಿದೆ.
ಇಲಿ ಇರಬೇಕೆಂದು ನಿರ್ಲಕ್ಷಿಸಿದ್ದ ಮಕ್ಕಳು!
ರಾತ್ರಿ ಮೈಮೇಲೆ ಏನೋ ಹರಿದಾಡಿದ ಅನುಭವವಾದರೂ, ಗಾಢ ನಿದ್ರೆಯಲ್ಲಿದ್ದ ಅಣ್ಣ-ತಂಗಿ ಮನೆಯಲ್ಲಿ "ಇಲಿ ಓಡಾಡುತ್ತಿರಬಹುದು" ಎಂದು ಭಾವಿಸಿ ನಿರ್ಲಕ್ಷ್ಯ ವಹಿಸಿ ನಿದ್ದೆ ಮುಂದುವರಿಸಿದ್ದಾರೆ. ಅಚ್ಚರಿಯೆಂದರೆ ರಾತ್ರಿಯಿಡೀ ಆ ನಾಗರಹಾವು ದಿಂಬಿನ ಕೆಳಗೆ ಹಾಗೂ ಹಾಸಿಗೆಯ ಅಂಚಿನಲ್ಲೇ ಇದ್ದರೂ ಮಕ್ಕಳಿಗೆ ಯಾವುದೇ ರೀತಿಯಲ್ಲೂ ಕಚ್ಚದೆ ಹಾಗೆಯೇ ಕಾಲ ಕಳೆದಿದೆ.
ಬೆಳಿಗ್ಗೆ ದಿಂಬು ಎತ್ತಿದಾಗ ಕಂಡಿತು ಭೀಕರ ದೃಶ್ಯ:
ಬೆಳಗ್ಗೆ ನಿದ್ದೆಯಿಂದ ಎದ್ದ ಮಕ್ಕಳು ಹಾಸಿಗೆ ಮಡಚಲು ಮುಂದಾಗಿದ್ದಾರೆ. ಈ ವೇಳೆ ದಿಂಬನ್ನು ಮೇಲಕ್ಕೆತ್ತಿದಾಗ, ಅದರ ಕೆಳಗೆ ಹೆಡೆ ಬಿಚ್ಚಿ ಮಲಗಿದ್ದ ಭೀಕರ ನಾಗರಹಾವನ್ನು ಕಂಡು ಮಕ್ಕಳು ಕಿರುಚಾಡುತ್ತಾ ಕೋಣೆಯಿಂದ ಹೊರಗೋಡಿ ಬಂದಿದ್ದಾರೆ. ಮಕ್ಕಳ ಚೀರಾಟ ಕೇಳಿ ಬಂದ ಪೋಷಕರು ದೃಶ್ಯ ಕಂಡು ದಂಗಾಗಿ ಬೆಚ್ಚಿಬಿದ್ದಿದ್ದಾರೆ. ರಾತ್ರಿಯಿಡೀ ಈ ನಾಗರಹಾವಿನ ಮೇಲೆಯೇ ಮಕ್ಕಳು ಮಲಗಿದ್ದರು ಎಂಬುದನ್ನು ಅರಿತ ಕುಟುಂಬಸ್ಥರು ನಡುಗಿ ಹೋಗಿದ್ದಾರೆ.
ಹಾವು ಹಿಡಿದು ರಕ್ಷಿಸಿದ ಉರಗ ತಜ್ಞ ನಾಗೇಂದ್ರ:
ತಕ್ಷಣವೇ ಕುಟುಂಬಸ್ಥರು ಖ್ಯಾತ ಉರಗ ಸಂರಕ್ಷಕ ನಾಗೇಂದ್ರ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ನಾಗೇಂದ್ರ ಅವರು, ಹಾಸಿಗೆಯಲ್ಲಿದ್ದ ನಾಗರಹಾವನ್ನು ಅತ್ಯಂತ ಚಾಣಾಕ್ಷತನದಿಂದ ಯಾವುದೇ ಅಪಾಯವಾಗದಂತೆ ಹಿಡಿದು ರಕ್ಷಿಸಿದ್ದಾರೆ. ಬಳಿಕ ಆ ಹಾವನ್ನು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.
ಯಾವುದೇ ಅನಾಹುತ ಸಂಭವಿಸದೆ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿರುವುದನ್ನು ಕಂಡು ಕುಟುಂಬಸ್ಥರು ಮತ್ತು ಸ್ಥಳೀಯರು 'ದೇವರೇ ಮಕ್ಕಳನ್ನು ಕಾಯ್ದಿದ್ದಾನೆ' ಎಂದು ನಿಟ್ಟುಸಿರು ಬಿಟ್ಟಿದ್ದಾರೆ.


