ಬೆಂಗಳೂರಿನ 227 ರಸ್ತೆಗಳ ಟ್ರಾಫಿಕ್ ನಿಯಂತ್ರಣಕ್ಕೆ BBMP ಸೂಪರ್ ಪ್ಲಾನ್; 337 ಕಿ.ಮೀ ಇನ್ನು ಆರಾಮಾದಾಯಕ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ನಿವಾರಣೆಗೆ ಬಿಬಿಎಂಪಿ 337 ಕಿ.ಮೀ ಉದ್ದದ 227 ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಚಿಂತಿಸಿದೆ. ಹೊರ ವಲಯದ 122 ರಸ್ತೆಗಳು ಸೇರಿದಂತೆ ಒಟ್ಟು 227 ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಮುಖ್ಯ ರಸ್ತೆಗಳ ಉದ್ದ 1682 ಕಿ.ಮೀಗೆ ಏರಿಕೆಯಾಗಲಿದೆ.
ವರದಿ: ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಅತಿ ಹೆಚ್ಚು ವಾಹನ ದಟ್ಟಣೆ ಇರುವ 337 ಕಿ.ಮೀ ಉದ್ದದ 227 ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದಕ್ಕೆ ಬಿಬಿಎಂಪಿ ಮುಂದಾಗಿದೆ.
ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, 1.04 ಲಕ್ಷಕ್ಕೂ ಅಧಿಕ ವಾಹನಗಳು ನೊಂದಣೆಗೊಂಡಿವೆ. ವಾಹನ ಸಂಖ್ಯೆ ಹೆಚ್ಚಾಗಿರುವುದರಿಂದ ರಸ್ತೆ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆ ವಲಯ ಮಟ್ಟದಲ್ಲಿ ನಿರ್ವಹಣೆ ಮಾಡುತ್ತಿರುವ ಆಯ್ದ ರಸ್ತೆಗಳನ್ನು ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳ ಅಧಿಕಾರ ವ್ಯಾಪ್ತಿಗೆ ಸೇರಿಸಿ ಮೌಲಸೌಕರ್ಯ ಒದಗಿಸುವುದು ಅವಶ್ಯಕವಾಗಿರುವ ಹಿನ್ನೆಲೆ 337 ಕಿ.ಮೀ ಉದ್ದದ 227 ರಸ್ತೆಗಳನ್ನು ಗುರುತಿಸಲಾಗಿದೆ.
ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳನ್ನು ನಿರ್ವಹಣೆ ಮತ್ತು ಕಾರ್ಯಾಚರಣೆ ನಡೆಸುತ್ತಿರುವ ಕಾರ್ಯಪಾಲಕ ಎಂಜಿನಿಯರ್ ಹಾಗೂ ವಲಯ ಮಟ್ಟದ ವಿಭಾಗೀಯ ಕಾರ್ಯಪಾಲಕ ಎಂಜಿನಿಯರ್ ಜಂಟಿ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳನ್ನು ತಪಾಸಣೆ ನಡೆಸಿದ ಶಿಫಾರಸು ಮಾಡಿದ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ.
ಹೊರ ವಲಯದ ಹೆಚ್ಚು ರಸ್ತೆ ಮೇಲ್ದರ್ಜೆಗೆ
ಮೇಲ್ದರ್ಜೆಗೆ ಗುರುತಿಸಲಾದ 227 ರಸ್ತೆಗಳ ಪೈಕಿ 122 ರಸ್ತೆಗಳು ಹೊರ ವಲಯಗಳಾದ ಆರ್‌ಆರ್‌ನಗರ, ಯಲಹಂಕ, ಬೊಮ್ಮನಹಳ್ಳಿ, ಮಹದೇವಪುರ ಹಾಗೂ ದಾಸರಹಳ್ಳಿ ವಲಯಕ್ಕೆ ಸೇರಿದ ರಸ್ತೆಗಳಾಗಿವೆ. 337.36 ಕಿ.ಮೀ ಉದ್ದದ ರಸ್ತೆಯಲ್ಲಿ 217.17 ಕಿ.ಮೀ ಉದ್ದದ ರಸ್ತೆಯು ಹೊರ ವಲಯಕ್ಕೆ ಸೇರಿದ ರಸ್ತೆಯಾಗಿದೆ.
ಉಳಿದಂತೆ 160.19 ಕಿ.ಮೀ ಉದ್ದದ 105 ರಸ್ತೆಗಳು ನಗರದ ಕೇಂದ್ರ ಭಾಗದ ಮೂರು ವಲಯಗಳಾದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯಕ್ಕೆ ಸೇರಿದ ರಸ್ತೆಗಳಾಗಿವೆ.
ಮುಖ್ಯ ರಸ್ತೆಗಳ ಉದ್ದ 1682 ಕಿ.ಮೀ ಏರಿಕೆ
ಸದ್ಯ ನಗರದಲ್ಲಿ 12,878.84 ಕಿ.ಮೀ ಉದ್ದ ರಸ್ತೆ ಜಾಲವಿದೆ. ಈ ಪೈಕಿ 1,344.84 ಕಿ.ಮೀ ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳಾಗಿದೆ. ಉಳಿದಂತೆ 11,543 ಕಿ.ಮೀ ಉದ್ದದ ರಸ್ತೆ ವಾರ್ಡ್ ರಸ್ತೆಗಳಾಗಿವೆ. ಇದೀಗ 337 ಕಿ.ಮೀ ಉದ್ದದ ವಾರ್ಡ್ ರಸ್ತೆಗಳನ್ನು ಉನ್ನತೀಕರಿಸುವುದರಿಂದ ಮುಖ್ಯ ರಸ್ತೆಯ ಉದ್ದ 1,682.10 ಕಿ.ಮೀಗೆ ಏರಿಕೆಯಾಗಲಿದೆ.
ಮೇಲ್ದರ್ಜೇಗೇರಿಸುವುದರಿಂದ ಲಾಭ ಏನು?
ವಾರ್ಡ್ ರಸ್ತೆಗಳ ಅಭಿವೃದ್ಧಿ ನೀಡುವ ಅನುದಾನಕ್ಕಿಂತ ಮುಖ್ಯ ರಸ್ತೆಗಳಿಗೆ ನೀಡುವ ಅನುದಾನ ಹೆಚ್ಚಾಗಿದೆ. ಜತೆಗೆ ರಾಜ್ಯ ಸರ್ಕಾರವೂ ನಗರದ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಹಾಗೂ ಮೂಲಸೌಕರ್ಯಕ್ಕೆ ವಿಶೇಷ ಯೋಜನೆಗಳಡಿ ಅನುದಾನ ನೀಡಲಿದೆ. ಈ ದೃಷ್ಟಿಯಲ್ಲಿ ಬಿಬಿಎಂಪಿಯು ಹೆಚ್ಚಿನ ವಾಹನ ದಟ್ಟಣೆ ಇರುವ ರಸ್ತೆಗಳನ್ನು ಗುರುತಿಸಿ ಮೇಲ್ದರ್ಜೇರಿಸುವುದಕ್ಕೆ ಮುಂದಾಗಿದೆ.
ಇದನ್ನೂ ಓದಿ: ಬೆಂಗಳೂರು: ಹೆಬ್ಬಾಳ- ಸಿಲ್ಕ್‌ಬೋರ್ಡ್ ಸುರಂಗ ರಸ್ತೆಗೆ ಸಿದ್ಧತೆ
ವಲಯವಾರು ಮುಖ್ಯ ರಸ್ತೆಯ ವಿವರ (ಕಿ.ಮೀ)
ವಲಯ | ಪ್ರಸ್ತುತ ರಸ್ತೆ | ಮೇಲ್ದರ್ಜೆಗೇರಿಸುವ ರಸ್ತೆ | ಒಟ್ಟು ರಸ್ತೆ |
ಪೂರ್ವ | 358.59 | 59.26 | 317.85 |
ಪಶ್ಚಿಮ | 133.41 | 34.73 | 168.14 |
ದಕ್ಷಿಣ | 218.1 | 26.20 | 244.30 |
ಆರ್‌ಆರ್ ನಗಗರ | 216.45 | 45.30 | 261.75 |
ಯಲಹಂಕ | 96.14 | 50.37 | 146.51 |
ಬೊಮ್ಮನಹಳ್ಳಿ | 134.7 | 39.33 | 174.63 |
ಮಹದೇವಪುರ | 166.95 | 58.15 | 225.10 |
ಕೆಆರ್ ಪುರ | 73.06 | 10.12 | 83.18 |
ದಾಸರಹಳ್ಳಿ | 47.34 | 13.30 | 60.64 |
ಒಟ್ಟು | 1344.74 | 334.36 | 1682.1 |
ಇದನ್ನೂ ಓದಿ: ರಸ್ತೆ ಅಗಲೀಕರಣ, ಗುಂಜೂರು-ವರ್ತೂರು ರೋಡ್‌ನ 143 ಆಸ್ತಿ ವಶಕ್ಕೆ ಪಡೆಯಲಿರುವ ಬಿಬಿಎಂಪಿ