ದೀಪಾವಳಿ ಹಬ್ಬಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಂಪರ್ ಆಫರ್ ಘೋಷಿಸಿದ್ದಾರೆ. ದಾಖಲೆ ಸಮಸ್ಯೆಗಳಿಂದ ಕೂಡಿದ್ದ ಮನೆಗಳನ್ನು ಸಕ್ರಮ ಮಾಡಲು ಅವಕಾಶ ನೀಡಲಾಗಿದೆ. ಜೊತೆಗೆ ಶುಲ್ಕವನ್ನು ಶೇಕಡಾ 50ರಷ್ಟು ಇಳಿಕೆ ಮಾಡಲಾಗಿದೆ.
ಬೆಂಗಳೂರು (ನ.09) ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಂಪರ್ ಆಫರ್ ನೀಡಿದ್ದಾರೆ. ಬಿಡಿಎ ನಿವೇಶನ ಪಡೆದು ಮನೆ ನಿರ್ಮಿಸಿದವರಿಗೆ ಬಿಗ್ ರಿಲೀಫ್ ಜೊತೆಗೆ ಅತ್ಯುತ್ತಮ ಅವಕಾಶ ನೀಡಲಾಗಿದೆ. 2008ಕ್ಕೂ ಮೊದಲು ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ನಿರ್ಮಿಸಿರುವ ಮನೆಗಳನ್ನು ಸಕ್ರಮ ಮಾಡಲು ಅವಕಾಶ ನೀಡಲಾಗಿದೆ. ಈ ಮೊದಲು ವಿಧಿಸಿದ್ದ ಶುಲ್ಕವನ್ನು ಅರ್ಧಕ್ಕೆ ಇಳಿಸಲಾಗಿದೆ. ಈ ಕುರಿತು ಸಿಎಂ ಡಿಕೆ ಶಿವಕುಮಾರ್ ಭರ್ಜರಿ ಆಫರ್ ನೀಡಲಾಗಿದೆ.
ಸಕ್ರಮದಿಂದ ಖಾತ, ಸಾಲ, ಮನೆ ಮಾರಾಟಕ್ಕೂ ಸುಲಭ
ಡಿಕೆ ಶಿವಕುಮಾರ್ ಮನೆ ಅಕ್ರಮ ಸಕ್ರಮ, ಶುಲ್ಕ ಕಡಿತ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ. ಮನೆಯ ಅಳತೆಗೆ ತಕ್ಕಂತೆ ವಿಧಿಸಲಾಗಿರುವ ಶುಲ್ಕದ 50% ಪಾವತಿಸಿದರೆ ಸಕ್ರಮ ಮಾಡಲಾಗುತ್ತದೆ ಎಂದಿದ್ದಾರೆ. ಇದರಿಂದ ಖಾತ, ಸಾಲ ಸೌಲಭ್ಯ, ಮಾರಾಟ ಮಾಡಲು ಉದ್ದೇಶಿಸಿರುವವರಿಗೆ ಅನುಕೂಲವಾಗಲಿದೆ. ಈ ಮೊದಲು ಸಕ್ರಮ ಶುಲ್ಕ ಹೆಚ್ಚಿದ್ದ ಕಾರಣ ಸಕ್ರಮಕ್ಕೆ ಮಾಲೀಕರು ಹಿಂದೇಟು ಹಾಕುತ್ತಿದ್ದರು. ಒಂದೆಡೆ ಶುಲ್ಕ ಹೆಚ್ಚಳ, ಮತ್ತೊಂದೆಡೆ ಸೂಕ್ತ ದಾಖಲೆಗಳಿಲ್ಲದ ಕಾರಣ ಮಾಲೀಕರು ಹಲವು ಸಮಸ್ಯೆ ಎದುರಿಸಿದ್ದರು.
ಸಮಸ್ಯೆಗೆ ಸ್ಪಂದಿಸಿದ ಡಿಕೆ ಶಿವುಕುಮಾರ್ ಬಿಡಿಎ ಜೊತೆ ಸುದೀರ್ಘ ಚರ್ಚಿಸಿದ್ದಾರೆ. ಪರಿಣಾಮ ಬಿಡಿಎ ಇದೀಗ ನಿಗದಿತ ಶುಲ್ಕವನ್ನು ಶೇಕಡಾ 50ರಷ್ಟು ಇಳಿಕೆ ಮಾಡಿದೆ. ಸಿಎಂ ಡಿಕೆಶಿ ಘೋಷಿಸಿರುವ ಹೊಸ ಶುಲ್ಕದಿಂದ ಜನರಿಗೆ ಭಾರೀ ಅನುಕೂಲವಾಗಲಿದೆ. ನಗರದಲ್ಲಿನ 1.11 ಲಕ್ಷ ಬಿಡಿಎ ಅನುಮೋದಿತ ಸೈಟ್ಗಳಿವೆ. ಈ ಮಾಲೀಕರಿಗೆ ಹೊಸ ನೀತಿ ಪ್ರಯೋಜನವಾಗಲಿದೆ. ಸೂಕ್ತ ದಾಖಲೆ ಇಲ್ಲದೆ ಅಡ್ಡಕತ್ತರಿಗೆ ಸಿಲುಕಿದ್ದ ಬಿಡಿಎ ಸೈಟ್ ಮಾಲೀಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
65 ಬಿಡಿಎ ಲೇಔಟ್ಗಳಿಗೆ ಆಫರ್ ಆನ್ವಯ
ಸದ್ಯ ಘೋಷಿಸಿರುವ ಸಕ್ರಮ ಹಾಗೂ ಶುಲ್ಕ 50ರ ಇಳಿಕೆ ಆಫರ್ ಬಿಡಿಎಯ 65 ಲೇಔಟ್ಗಳಿಗೆ ಮಾತ್ರ ಅನ್ವಯವಾಗಲಿದೆ. ಕೆಂಪೇಗೌಡ ಲೇಔಟ್, ಅರ್ಕಾವತಿ ಬಡಾವಣೆ, ಶಿವರಾಮ ಕಾರಂತ ಬಡಾವಣೆಗೆ ಈ ಯೋಜನೆ ಅನ್ವಯ ಆಗಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇಷ್ಟೇ ಅಲ್ಲ ಬಿಡಿಎ ಅನುಮೋದನೆ ಬಳಿಕ ಸೈಟ್ ಪಡೆದು ಖಾಲಿ ಬಿಟ್ಟಿದ್ದರೆ ಅನ್ವಯ ಆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿವೇಶನದ ಅಳತೆ ಪರಿಷ್ಕೃತ ಶುಲ್ಕ ವಿವರ
- 20x30 ಸೈಟ್ : ಹಿಂದಿನ ಶುಲ್ಕ 10% , ಹೊಸ ಶುಲ್ಕ 5%
- 20x30 to 30x40 ಸೈಟ್: ಹಿಂದಿನ ಶುಲ್ಕ 25%, ಹೊಸ ಶುಲ್ಕ : 12.5%
- 30x40 to 40x60 ಸೈಟ್: ಹಿಂದಿನ ಶುಲ್ಕ40% ,ಹೊಸ ಶುಲ್ಕ 20%
- 40x60 to 50x80 ಸೈಟ್: ಹಿಂದಿನ ಶುಲ್ಕ 50% ,ಹೊಸ ಶುಲ್ಕ 25%














