Gaur Dies at Bannerghatta Biological Park Due to Suspected Anesthesia Overdose During Transfer ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ, ಹೈದರಾಬಾದ್‌ಗೆ ಸ್ಥಳಾಂತರಿಸಲು ಸಿದ್ಧವಾಗಿದ್ದ ಕಾಡೆಮ್ಮೆಯೊಂದು ಸೆರೆಹಿಡಿಯುವ ವೇಳೆ ಮೃತಪಟ್ಟಿದೆ.
ಬನ್ನೇರುಘಟ್ಟ (ಅ.31): ಅರವಳಿಕೆ ಓವರ್‌ಡೋಸ್ ಕಾರಣದಿಂದಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಾಡೆಮ್ಮೆ ಸಿಬ್ಬಂದಿಗಳ ಸಮ್ಮುಖದಲ್ಲಿಯೇ ದಾರುಣ ಸಾವು ಕಂಡಿದೆ. ಸೆರೆ ಹಿಡಿಯುವ ವೇಳೆ ಕಾಡೆಮ್ಮೆ ಸಾವು ಕಂಡಿದೆ. ಬನ್ನೇರುಘಟ್ಟದಿಂದ ಹೈದರಾಬಾದ್ ಝೂಗೆ ಕಳುಹಿಸಲು ಸಿದ್ದತೆ ನಡೆದಿತ್ತು. ಪ್ರಾಣಿ ವಿನಿಮಯ ಯೋಜನೆ ಅಡಿಯಲ್ಲಿ ಕಾಡೆಮ್ಮೆ ಸ್ಥಳಾಂತರ ಮಾಡಲು ಮುಂದಾಗಿದ್ದರು. ಈ ವೇಳೆ ಕಾಡೆಮ್ಮೆ ಹಿಡಿಯಲು ಪಶುವೈದ್ಯರು, ಸಿಬ್ಬಂದಿಗಳು ಮುಂದಾಗಿದ್ದರು. ಕ್ವಾರಂಟೈನ್ ಆವರಣಕ್ಕೆ ಸ್ಥಳಾಂತರ ಮಾಡುವ ವೇಳೆ ಕಾಡೆಮ್ಮೆ ಸಾವು ಕಂಡಿದೆ. ಕಾಡೆಮ್ಮೆಯ ಮರಣೋತ್ತರ ಪರೀಕ್ಷೆಯನ್ನು ವೈದ್ಯರು ನಡೆಸಿದ್ದಾರೆ.
ವೃತ್ತಿಪರ ಅರವಳಿಕೆ ತಜ್ಞರಲ್ಲದವರು ಅರವಳಿಕೆ ನೀಡಿದ್ದಾರೆ ಎನ್ನುವ ಅನುಮಾನ ಈಗ ವ್ಯಕ್ತವಾಗಿದೆ. ಬಹುಶಃ ಓವರ್ ಡೋಸ್ ಆಗಿ ಕಾಡೆಮ್ಮೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ತರಾತುರಿಯಲ್ಲಿ ಕಾಡೆಮ್ಮೆ ಸೆರೆ ಹಿಡಿಯುವ ಅಗತ್ಯವೇನಿತ್ತು ಅನ್ನೋ ಪ್ರಶ್ನೆ ಎಲ್ಲರಲ್ಲಿದೆ. ತಾತ್ಕಲಿಕ ವೈದ್ಯರು ಪಾರ್ಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಖಾಯಂ ವೈದ್ಯರಿಲ್ಲದಿರುವುದರಿಂದ ಯಡವಟ್ಟಾಯ್ತಾ ಎನ್ನುವ ಪ್ರಶ್ನೆ ಎದ್ದಿದೆ.
ಕೆಲದಿನಗಳ ಹಿಂದೆ ಸಕ್ರೆಬೈಲಿನಲ್ಲೂ ಇದೇ ರೀತಿಯ ಘಟನೆ
ಕೆಲ ದಿನಗಳ ಹಿಂದೆ ಸಕ್ರೆಬೈಲು ಆನೆ ಬಿಡಾರದ ಬಾಲಣ್ಣ ಎಂಬ ಆನೆಗೆ ಕಾಲಿನ ನೋವಿಗೆ ನೀಡಿದ ಇಂಜೆಕ್ಷನ್ ಓವರ್ ಡೋಸ್ ಆಗಿತ್ತು. ಇದರಿಂದ ಆನೆ ಸೋಂಕಿಗೆ ಕೂಡ ತುತ್ತಾಗಿತ್ತು. ಈ ಘಟನೆ ಗಂಭೀರವಾಗಿ ಪರಿಗಣಿಸಿಸಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ, ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದರು. ಬಾಲಣ್ಣ ಆನೆಯ ಸ್ಥಿತಿಗೆ ಕಾರಣರಾದ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಶಿಸ್ತು ಕ್ರಮದ ಶಿಫಾರಸ್ಸಿನೊಂದಿಗೆ ವಾರದೊಳಗೆ ಸಮಗ್ರ ವರದಿ ಸಲ್ಲಿಸಲು ಸೂಚನೆ ನೀಡಿದ್ದರು.
ರಾಜ್ಯದಲ್ಲಿರುವ ಎಲ್ಲ ಆನೆ ಶಿಬಿರಗಳಲ್ಲಿ ಮತ್ತು ಮೃಗಾಲಯಗಳಲ್ಲಿ ಸಮರ್ಪಿತ ವೈದ್ಯಾಧಿಕಾರಿ ಇರಬೇಕು. ಸದ್ಯ ಪಶುವೈದ್ಯರ ಕೊರತೆ ಬಗ್ಗೆ ವರದಿಯಾಗಿದ್ದು, ಕೂಡಲೇ ಗುತ್ತಿಗೆ ಆಧಾರದ ಮೇಲೆ ಅಥವಾ ನಿಯೋಜನೆಯ ಮೂಲಕ ವೈದ್ಯರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದ್ದರು.
