ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಹೈಕೋರ್ಟ್‌ ಅನುಮತಿಯ ನಂತರ ಡಾ. ಶಿವರಾಮ ಕಾರಂತ ಬಡಾವಣೆಯ ನಿವೇಶನಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲು ಸಿದ್ಧತೆ ನಡೆಸಿದೆ. ಜುಲೈ ಅಂತ್ಯದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸ್ವೀಕಾರ ಆರಂಭವಾಗಲಿದ್ದು, ಭೂಮಾಲೀಕರು, ಕಂದಾಯ ನಿವೇಶನದಾರರು ಹಾಗೂ ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಪಾರದರ್ಶಕತೆಗಾಗಿ ಸಾಫ್ಟ್‌ವೇರ್‌ ಮೂಲಕ ನಡೆಯಲಿದೆ.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸುತ್ತಿರುವ ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲು ಹೈಕೋರ್ಟ್‌ ಅನುಮತಿ ನೀಡಿದ ಬೆನ್ನಲ್ಲೇ ಪ್ರಾಧಿಕಾರ ಅರ್ಜಿಗಳನ್ನು ಆಹ್ವಾನಿಸಲು ಮುಂದಾಗಿದೆ.

ಅರ್ಜಿಯ ಶುಲ್ಕ ಎಷ್ಟು?

ನಿವೇಶನ ಆಕಾಂಕ್ಷಿಗಳಿಂದ ಜುಲೈ ಅಂತ್ಯದೊಳಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲು ಯೋಜಿಸಿದೆ. ಈ ಕುರಿತು ಇತ್ತೀಚೆಗೆ ಪ್ರಾಧಿಕಾರದಲ್ಲಿ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 500 ರು.ಗಳು, ಸಾಮಾನ್ಯ ವರ್ಗದವರಿಗೆ 1,000 ರು., ನೋಂದಣಿ ಶುಲ್ಕ 2,000 ರು.ಗಳನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ. ಆದರೆ, ಅರ್ಜಿದಾರರಿಗೆ ನಿವೇಶನ ಹಂಚಿಕೆಯಾಗದಿದ್ದರೆ ಅರ್ಜಿಯ ಮೊತ್ತವನ್ನು ಅರ್ಜಿದಾರರಿಗೆ ಹಿಂದಿರುಗಿಸಲಾಗುವುದಿಲ್ಲ ಎನ್ನಲಾಗಿದೆ.

ಯಾರಿಗೆ ಎಷ್ಟು ನಿವೇಶನ?

ಈ ಯೋಜನೆಗೆ ಜಮೀನು ನೀಡಿದ ಭೂಮಾಲೀಕರು ಅಥವಾ ರೈತರಿಗೆ 18,400 ನಿವೇಶನಗಳು, ಕಂದಾಯ ನಿವೇಶನದಾರರಿಗೆ 3,200 ಹಾಗೂ ಸಾರ್ವಜನಿಕರಿಗೆ 2500 ನಿವೇಶನ ಹಂಚಲು ನಿರ್ಧರಿಸಲಾಗಿದೆ. ಕಳೆದ ವರ್ಷ ಒಂದು ಚದರ ಅಡಿಗೆ 4,900 ರು.ದರ ನಿಗದಿಪಡಿಸಲಾಗಿತ್ತು. ಸದ್ಯಕ್ಕೆ ದರ ಪರಿಷ್ಕರಣೆ ಕುರಿತು ಬಿಡಿಎ ತೀರ್ಮಾನ ಕೈಗೊಂಡಿಲ್ಲ. ಬಡಾವಣೆ ನಿರ್ಮಾಣಕ್ಕೆ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ 60:40 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನ ನೀಡಲಾಗುತ್ತದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಡಾವಣೆಯಲ್ಲಿ 80 ಅಡಿ ಮತ್ತು 100 ಅಡಿ ರಸ್ತೆಯಲ್ಲಿರುವ 140 ನಿವೇಶನಗಳನ್ನು ಹರಾಜು ಮಾಡಲು ನಿರ್ಧರಿಸಲಾಗಿದೆ. ಕೆಎಸ್‌ಆರ್‌ಸಿಎಎಸ್‌ ಮತ್ತು ಸಿಇಜಿ ಯುಎಲ್‌ಎಂಎಸ್‌ ಸಾಪ್ಟ್‌ವೇರ್‌ ಮೂಲಕ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಅರ್ಜಿಗಳನ್ನು ಸ್ವೀಕರಿಸಲು ಮತ್ತು ನಿವೇಶನಗಳನ್ನು ಹಂಚಿಕೆ ಮಾಡಲು ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗಿದೆ. ಹಂಚಿಕೆಯಲ್ಲಿ ಪಾರದರ್ಶಕತೆ ಕಾಪಾಡಲು ಎಲ್ಲವೂ ಆನ್‌ಲೈನ್‌ನಲ್ಲಿಯೇ ನಡೆಯಲಿದೆ.