ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿ ಮತ್ತು ಭಾವ ಡಾ. ವೈ ಮಂಜುನಾಥ್ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆತುರದ ಕ್ರಮ ಕೈಗೊಳ್ಳದಂತೆ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಹೈಕೋರ್ಟ್ ನಿರ್ದೇಶನ ನೀಡಿದೆ. ಏನಿದು ಪ್ರಕರಣ?

ಬೆಂಗಳೂರು (ಜು.16): ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸಹೋದರಿ ಮಹಾದೇವಿ ಮತ್ತು ಭಾವ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ. ವೈ ಮಂಜುನಾಥ್‌ ಸೇರಿದಂತೆ ಇತರರ ವಿರುದ್ಧ ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿ ಶೋಧ ಮತ್ತು ಜಪ್ತಿ ಸಂಬಂಧಿತ ಪ್ರಕ್ರಿಯೆಯಲ್ಲಿ ಆತುರದ ಕ್ರಮಕ್ಕೆ ಮುಂದಾಗದಂತೆ ಜಾರಿ ನಿರ್ದೇಶನಾಲಯ (ಇ.ಡಿ.)ಕ್ಕೆ ಹೈಕೋರ್ಟ್‌‌‌ ನಿರ್ದೇಶಿಸಿದೆ.

ಬಿಗಿ ‘ಇ.ಡಿ’ತದಿಂದ ಜಾರಕಿಹೊಳಿ ಭಾವ ನಿರಾಳ

 ಬೆಂಗಳೂರು ಮತ್ತು ಗೋವಾದ ಜಾರಿ‌ ನಿರ್ದೇಶನಾಲಯದ ಅಧಿಕಾರಿಗಳು ಜೂ.23ರಂದು‌ ಬೆಳಗಾವಿ ಸೇರಿದಂತೆ ಅರ್ಜಿದಾರರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ನಡೆಸಿರುವ ಶೋಧ ಮತ್ತು ಜಪ್ತಿ ಪ್ರಶ್ನಿಸಿ ಡಾ. ಮಂಜುನಾಥ್‌ ಮತ್ತು ಅವರ ಸಂಬಂಧಿಗಳು ಪ್ರತ್ಯೇಕವಾಗಿ ಸಲ್ಲಿಸಿರುವ ಮೂರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಇದನ್ನೂ ಓದಿ: Satish Jarkiholi: ಸಿದ್ದರಾಮಯ್ಯ ಜೊತೆ ಅಸಮಾಧಾನ, ರಾಜ್ಯದ ಸಮಸ್ಯೆ ಅಲ್ಲ, ನಮ್ಮ ಸಮಸ್ಯೆ- ಜಾರಕಿಹೊಳಿ

ಇದೇ ವೇಳೆ ಜಾರಿ‌‌ ನಿರ್ದೇಶನಾಲಯ ಭ್ರಷ್ಟಾಚಾರದ ವಿರುದ್ಧ ಸಮರ ಸೇನಾನಿಯಾಗಿರಬಹುದು. ಆದರೆ, ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಉತ್ಸಾಹ ಇದ್ದರೆ ಕಾನೂನಿನ ಪ್ರಕಾರ ನಡೆಸಬೇಕು.‌ ಯಾವುದೇ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ. ಹಾಗೆಯೇ, ಇ.ಡಿ. ಇಲ್ಲಿಗೆ ಬಂದು ಮೇಲ್ನೋಟಕ್ಕೆ ಸಮರ್ಥನೀಯವಲ್ಲದ ಕಾರ್ಯವನ್ನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ ಎಂದ ನ್ಯಾಯಪೀಠ, ಜಾರಿ ನಿರ್ದೇಶನಾಲಯ ಹಾಲಿ ಪ್ರಕರಣದಲ್ಲಿ ಮುಂದಿನ ವಿಚಾರಣೆಯವರೆಗೆ ಮುಂದುವರಿಯಬಾರದು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜ.22ಕ್ಕೆ ಮುಂದೂಡಿದೆ.

ಲೋಕಾಯುಕ್ತ ಕೆಲಸವನ್ನು ಇ.ಡಿ. ಮಾಡುತ್ತಿದೆಯೇ?

ಅರ್ಜಿ ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ಪೀಠ,‌ 25 ರು. ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವುದು ಅಪರಾಧ ಪ್ರಕ್ರಿಯೆಯಾಗುತ್ತದೆಯೇ? ಲಂಚ ಪಡೆದ ವ್ಯಕ್ತಿಯ ವಿರುದ್ಧ ಇ.ಡಿ. ಮುಂದುವರಿಯಬಹುದು. ಇದಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಗಳ ವಿರುದ್ಧ ಹೇಗೆ ಇ.ಡಿ. ಹೋಗುತ್ತದೆ? ಲೋಕಾಯುಕ್ತ ಒಳ್ಳೆಯ ಸಂಸ್ಥೆ ಇದೆ. ಲೋಕಾಯುಕ್ತ ಕೆಲಸವನ್ನು ಇ.ಡಿ. ಮಾಡುತ್ತದೆಯೇ ಎಂದು ಪ್ರಶ್ನಿಸಿತು.

ಹಾಗೆಯೇ, ಹಣ ವರ್ಗಾವಣೆಯಾಗಿರಬೇಕು.‌‌ ಸಂಬಂಧ ಇರುವುದು ಕಾಣಬೇಕು. ಇಲ್ಲಿ ಸಂಬಂಧವೇ ಇಲ್ಲದ ವ್ಯಕ್ತಿಗಳಿದ್ದಾರೆ. ಅಷ್ಟು ಸರಳವಾಗಿ ನೀವು ಅವರನ್ನು ಎಳೆದು ತರಲಾಗದು. ಯಾರ ಮನೆಯನ್ನಾದರೂ ಇ.ಡಿ. ಶೋಧಿಸಬಹುದು. ಆ ಪ್ರಕರಣದಲ್ಲಿ ವ್ಯಕ್ತಿ ಆರೋಪಿಯಾಗಿರಬೇಕು, ಇಲ್ಲವೇ ಆ ವ್ಯಕ್ತಿಗೆ ಹಣ ವರ್ಗಾವಣೆಯಾಗಿರಬೇಕು. ಇಲ್ಲಿನ ವ್ಯಕ್ತಿಗಳು ಯಾರು ಮತ್ತು ಜಗದೀಶ್‌ ನಾಯಕ್‌ ಯಾರು ಎಂದು ಪ್ರಶ್ನಿಸಿತು.

ಜಾರಿ ನಿರ್ದೇಶನಾಲಯ‌ ಪರ ವಕೀಲರು, ತನಿಖೆಯ ಸಂದರ್ಭದಲ್ಲಿ ಪತ್ತೆಯಾದ ಅಂಶಗಳ ಆಧಾರದಲ್ಲಿ ಇ.ಡಿ. ಕ್ರಮಕೈಗೊಂಡಿದೆ. ಈ ಸಂಬಂಧ ಮಾಹಿತಿ ಪಡೆಯಲು ಕಾಲಾವಕಾಶ ನೀಡಬೇಕು‌ ಎಂದು ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ ಏನು?

ಲೋಕಾಯುಕ್ತ ಪೊಲೀಸರು ಅಬಕಾರಿ ಉಪ ಆಯುಕ್ತರಾಗಿದ್ದ ಜಗದೀಶ್‌ ನಾಯಕ್‌ ಅವರು 25 ಲಕ್ಷ ರು. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು. ಇದರ ಭಾಗವಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್‌ 7ಎ ಅಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ತಾವು ಆರೋಪಿಗಳೂ ಅಲ್ಲ, ಅದಕ್ಕೆ ಸಂಬಂಧವನ್ನೂ ಹೊಂದಿಲ್ಲ. ಅದಾಗ್ಯೂ, ಜಾರಿ ನಿರ್ದೇಶನಾಲಯವು ಅಪರಾಧ ಪ್ರಕ್ರಿಯೆಯಾಗಿ ಮುಂದು ಮಾಡುತ್ತಿರುವುದು ಸರಿಯಲ್ಲ‌‌. ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆ ಸೆಕ್ಷನ್‌ 17ರ ಅಡಿ ಆರಂಭಿಸಿರುವ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.