ಬೆಂಗಳೂರಿಗೆ ಬರುವ ಅನ್ಯ ಭಾಷಿಗರೇ, ಕನ್ನಡ ಕಲೀರಿ, ಇಲ್ಲದಿದ್ದರೆ ನಮ್ಮ ಹೃದಯದಲ್ಲಿಲ್ಲ ಸ್ಥಾನ: ಪೋಸ್ಟ್ ವೈರಲ್
ವೈರಲ್ ಆದ ಪೋಸ್ಟೊಂದರಲ್ಲಿ ಸಿಲಿಕಾನ್ ಸಿಟಿ, ತಂತ್ರಜ್ಞಾನ ಸಂಸ್ಥೆಗಳ ರಾಜಧಾನಿ ಎನಿಸಿದ ಬೆಂಗಳೂರು ಕನ್ನಡಿಗರಿಗೆ ಸೇರಿದ್ದು ಎಂದಿದ್ದಾರೆ. ಲಕ್ಷ್ಮಿ ತನ್ಮಯ ಎಂಬುವವರು ಟ್ವಿಟ್ಟರ್‌ನಲ್ಲಿ ಮಾಡಿದ ಪೋಸ್ಟೊಂದು ಸಾಕಷ್ಟು ವೈರಲ್ ಆಗಿ ಈ ಕನ್ನಡಿಗರು ಹಾಗೂ ಹೊರಗಿನವರು ಎಂಬ ಚರ್ಚೆಗೆ ವೇದಿಕೆ ಒದಗಿಸಿದೆ. ಹಾಗಿದ್ರೆ ಲಕ್ಷ್ಮಿ ತನ್ಮಯ್ ಪೋಸ್ಟ್‌ನಲ್ಲಿ ಏನಿದೆ?
ಬೆಂಗಳೂರು: ಉದ್ಯಾನನಗರಿ ಬೆಂಗಳೂರು ಲಕ್ಷಾಂತರ ಜನ ವಲಸಿಗರಿಗೆ ಅನ್ನ ನೀರು ಬದುಕು ಕೊಟ್ಟಂತಹ ಊರು, ಹಲವು ದಶಕಗಳ ಹಿಂದೆ ಬೆಂಗಳೂರಿಗೆ ಬಂದು ಹೊರ ರಾಜ್ಯದ ಜನಗಳು ಕೂಡ ಇಲ್ಲಿನ ಸಂಸ್ಕೃತಿಯೊಂದಿಗೆ ಬೆರೆತು ಕನ್ನಡಿಗರೆನಿಸಿದ್ದಾರೆ(ಎಲ್ಲರಲ್ಲ ಕೆಲವರು ಮಾತ್ರ). ಆದರೆ ಈಗ ಬೆಂಗಳೂರಿನಲ್ಲಿ ಮೂಲನಿವಾಸಿಗರು ಹಾಗೂ ವಲಸಿಗರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವ್ಯಾಪಕವಾದ ಚರ್ಚೆಯೊಂದು ಮುನ್ನೆಲೆಗೆ ಬಂದಿದ್ದು, ನೆಟ್ಟಿಗರು ಇಂಟರ್‌ನೆಟ್‌ನಲ್ಲಿ ಕಚ್ಚಾಡುತ್ತಿದ್ದಾರೆ.
ವೈರಲ್ ಆದ ಪೋಸ್ಟೊಂದರಲ್ಲಿ ಸಿಲಿಕಾನ್ ಸಿಟಿ, ತಂತ್ರಜ್ಞಾನ ಸಂಸ್ಥೆಗಳ ರಾಜಧಾನಿ ಎನಿಸಿದ ಬೆಂಗಳೂರು ಕನ್ನಡಿಗರಿಗೆ ಸೇರಿದ್ದು ಎಂದಿದ್ದಾರೆ. ಲಕ್ಷ್ಮಿ ತನ್ಮಯ ಎಂಬುವವರು ಟ್ವಿಟ್ಟರ್‌ನಲ್ಲಿ ಮಾಡಿದ ಪೋಸ್ಟೊಂದು ಸಾಕಷ್ಟು ವೈರಲ್ ಆಗಿ ಈ ಕನ್ನಡಿಗರು ಹಾಗೂ ಹೊರಗಿನವರು ಎಂಬ ಚರ್ಚೆಗೆ ವೇದಿಕೆ ಒದಗಿಸಿದೆ. ಹಾಗಿದ್ರೆ ಲಕ್ಷ್ಮಿ ತನ್ಮಯ್ ಪೋಸ್ಟ್‌ನಲ್ಲಿ ಏನಿದೆ?
'ಬೆಂಗಳೂರಿಗೆ ಬರುವ ಪ್ರತಿಯೊಬ್ಬರಿಗೂ, ನೀವು ಬೆಂಗಳೂರಿನಲ್ಲಿ ಕನ್ನಡ ಮಾತನಾಡದಿದ್ದರೆ ಅಥವಾ ಕನ್ನಡ ಮಾತನಾಡುವ ಸಣ್ಣ ಪ್ರಯತ್ನ ವನ್ನೂ ಮಾಡದಿದ್ದರೆ ನಿಮ್ಮನ್ನು ಹೊರಗಿನವರಂತೆಯೇ ನಡೆಸಿಕೊಳ್ಳಲಾಗುವುದು. ಇದನ್ನು ಬರೆದಿಟ್ಟುಕೊಳ್ಳಿ ಹಾಗೂ ಎಲ್ಲರಿಗೂ ಹೇಳಿ. ನಾವು ತಮಾಷೆ ಮಾಡುತ್ತಿಲ್ಲ. ಬೆಂಗಳೂರು ಕನ್ನಡಿಗರಿಗೆ ಸೇರಿದ್ದು' ಎಂದು ಅವರು ಬರೆದುಕೊಂಡಿದ್ದಾರೆ.
ತಮಿಳು ನಟ ವಿಜಯ್‌ರ ತಮಿಳಗ ವೆಟ್ರಿ ಕಳಗಂ ಪಾರ್ಟಿ ಧ್ವಜ ಅನಾವರಣ; Copy cat ಎಂದ ಕನ್ನಡಿಗರು!
ಈ ಪೋಸ್ಟನ್ನು 5 ಮಿಲಿಯನ್ಗೂ ಹೆಚ್ಚು ಜನ ವೀಕ್ಷಿಸಿದ್ದರೆ, 6 ಸಾವಿರಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿ ದೊಡ್ಡ ಆನ್‌ಲೈನ್ ಕಾಳಗವನ್ನೇ ನಡೆಸಿದ್ದಾರೆ. ಮೂರುವರೆ ಸಾವಿರ ಜನ ಇದನ್ನು ರಿಟ್ವಿಟ್ ಮಾಡಿದರೆ 9 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿ ಒಂದುವರೆ ಸಾವಿರ ಜನ ಬುಕ್‌ಮಾರ್ಕ್ ಮಾಡಿದ್ದಾರೆ. ಇಲ್ಲಿ ಪರಸ್ಪರ ಪರ ವಿರೋಧದ ವಾಕ್ಸಮರ ನಡೆದಿದೆ.
ಬೆಂಗಳೂರು ಎಲ್ಲಾ ಭಾರತೀಯರಿಗೆ ಸೇರಿದ್ದು, ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವುದು ಒಂದು ವಿಚಾರ ಆದರೆ ಅದೇ ಪರಮಶ್ರೇಷ್ಠ ಎಂದು ನಟನೆ ಮಾಡುವುದನ್ನು ಸಹಿಸಲಾಗದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸ್ಥಳೀಯ ಭಾಷೆಯನ್ನು ಗೌರವಿಸುವುದು ಮಹತ್ವಪೂರ್ಣವಾದುದು. ಆದರೆ ಭಾಷೆಯ ಹೆಸರಿನಲ್ಲಿ ಜನರನ್ನು ಒಡೆಯುವುದು ಕೇವಲ ನಕರಾತ್ಮಕ ವಿಚಾರಗಳಿಗೆ ಇಂಧನ ಸುರಿದಂತೆ. ಬೆಂಗಳೂರು ನಗರವೂ ಅನಾದಿ ಕಾಲದಿಂದಲೂ ವೈವಿಧ್ಯತೆಗೆ ಹೆಸರಾದ ನಗರವಾಗಿದ್ದು, ಎಲ್ಲೆಡೆಯಿಂದ ಜನರನ್ನು ತನ್ನತ್ತ ಕೈ ಬೀಸಿ ಕರೆದುಕೊಂಡಿದೆ. ಹೀಗಾಗಿ ನಾವು ವೈವಿಧ್ಯತೆಯನ್ನು ಸಂಭ್ರಮಿಸಬೇಕು ಹೊರತು ಎಲ್ಲದಕ್ಕೆ ಮಿತಿಗಳನ್ನು ಹೇರುವುದಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಹಾಗೆಯೇ ಕೆಲವರು ಇಲ್ಲಿ ಬದುಕಲು ಸುಗಮವಾಗಿ ವ್ಯವಹರಿಸಲು ಕನ್ನಡ ಕಲಿಯುವಂತೆ ಕನ್ನಡಿಗರಲ್ಲದವರನ್ನು ಕೇಳಿದ್ದಾರೆ. ಬೆಂಗಳೂರಿನಲ್ಲಿ ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದಾಗ ಕೇವಲ 4 ತಿಂಗಳು ವಾಸವಿದ್ದೆ. ಈ ವೇಳೆ ನಾನು ನನ್ನ ಕಿವಿಗಳನ್ನು ತೆರೆದಿಟ್ಟು ಭಾಷೆ ಕಲಿಯುವ ಪ್ರಯತ್ನ ಮಾಡಿದೆ. ಜನರೊಂದಿಗೆ ಕನ್ನಡ ಮಾತನಾಡುವ ಪ್ರಯತ್ನ ಮಾಡಿದೆ. ಇದಕ್ಕಾಗಿ ಇಂಗ್ಲೀಷ್ ಕನ್ನಡ ಪಾಕೆಟ್ ಡಿಕ್ಷನರಿಯನ್ನು ತೆಗೆದುಕೊಂಡೆ. ಈಗ ನಾನು ಸ್ವಲ್ಪ ಕನ್ನಡ ಮಾತನಾಡಬಲ್ಲೆ, ನನಗೆ ಕೆಲವು ಕನ್ನಡ ಪದಗಳು ಬರುತ್ತವೆ. ಕುತೂಹಲ ಗೌರವ ಇವಿಷ್ಟೇ ಅವರು ನಿಜವಾಗಿಯೂ ಕೇಳುತ್ತಿರುವುದು ಎಂದು ಕನ್ನಡಿಗರಲ್ಲದವರೊಬ್ಬರು ತಾವು ಕನ್ನಡ ಕಲಿತ ರೀತಿ ಹಾಗೂ ಬೆಂಗಳೂರಿನ ಕನ್ನಡದ ಜನ ಬಯಸುವುದು ಏನನ್ನು ಎಂಬುದನ್ನು ಕನ್ನಡಿಗರಲ್ಲದವರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಅಲ್ಲದೇ ಫಿಟ್‌ನೆಸ್ ಕೋಚ್ ಪ್ರಿಯಾಂಕ ಲಹ್ರಿ ಎಂಬುವವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಬೆಂಗಳೂರಿನಲ್ಲಿ ನನಗೆ ಕನ್ನಡ ಬರದಿದ್ದರೂ ಯಾರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿಲ್ಲ, ಕಳೆದ 8 ವರ್ಷಗಳಿಂದ ನಾನು ಬೆಂಗಳೂರಿನಲ್ಲಿ ಇದ್ದೇನೆ. ನನಗೆ ಕನ್ನಡ ಕಲಿಯಲು ಬಹಳ ಕಷ್ಟವಾಗುತ್ತಿದೆ. ಆದರೆ ಎಲ್ಲ ರೀತಿಯ ಜನರು ಇರುತ್ತಾರೆ. ನೀವು ಮನೆಯಿಂದ ಹೊರಗೆ ಬಂದರೆ ಒಳ್ಳೆಯ ನಾಗರಿಕ ಕನ್ನಡಿಗರು ನಿಮಗೆ ಸಿಗುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಈ ಟ್ವಿಟ್ಟರ್ ಪೋಸ್ಟೊಂದು ದೊಡ್ಡ ಆನ್‌ಲೈನ್ ಕಾಳಗವನ್ನು ಟ್ವಿಟ್ಟರ್‌ನಲ್ಲಿ ಸೃಷ್ಟಿಸಿದ್ದು, ಕನ್ನಡ ಪ್ರೇಮಿಗಳು ಹಾಗೂ ಕನ್ನಡ ಕಲಿಯುವ ಮನಸ್ಸಿಲ್ಲದವರು ಪರಸ್ಪರ ಕಚ್ಚಾಡುತ್ತಿದ್ದಾರೆ.