ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡಲು 134 ಕಿ.ಮೀ ಉದ್ದದ ಅತ್ತಿಬೆಲೆ-ನೆಲಮಂಗಲ ರಸ್ತೆ ಯೋಜನೆಗೆ ರಾಜ್ಯ ಸಚಿವ ಸಂಪುಟ ₹1,118 ಕೋಟಿ ಹೆಚ್ಚುವರಿ ಅನುದಾನ ಮಂಜೂರು ಮಾಡಿದೆ. ಇದರಿಂದ ಐಟಿ ಹಬ್ ಮತ್ತು ವಿಮಾನ ನಿಲ್ದಾಣದ ಸಂಪರ್ಕ ಸುಗಮವಾಗಲಿದ್ದು, ಒಟ್ಟು ಯೋಜನಾ ವೆಚ್ಚ ₹3,409 ಕೋಟಿಗೆ ಏರಿಕೆಯಾಗಿದೆ.
ಬೆಂಗಳೂರು (ನ.05): ಬೆಂಗಳೂರಿನ ವಾಹನ ದಟ್ಟಣೆ (Traffic Congestion) ಸುಗಮಗೊಳಿಸುವ ಹಾಗೂ ನಗರದ ಹೊರವಲಯದ ಪ್ರಮುಖ ಭಾಗಗಳನ್ನು ಸಂಪರ್ಕಿಸುವ ಅತ್ಯಂತ ಮಹತ್ವದ 134 ಕಿಲೋಮೀಟರ್ ಉದ್ದದ ಅತ್ತಿಬೆಲೆ-ಸರ್ಜಾಪುರ-ಏರ್‌ಪೋರ್ಟ್-ನೆಲಮಂಗಲ ರಸ್ತೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ₹1,118 ಕೋಟಿ ಹೆಚ್ಚುವರಿ ಅನುದಾನಕ್ಕೆ ಮಂಜೂರಾತಿ ನೀಡಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿಈಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಚಿವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸಚಿವ ಸಂಪುಟದ ಈ ತೀರ್ಮಾನದಿಂದಾಗಿ, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಬೃಹತ್ ರಸ್ತೆ ಯೋಜನೆಗೆ ಈಗ ಹೊಸ ವೇಗ ಸಿಕ್ಕಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಯೋಜನೆಯ ಅಂದಾಜು ವೆಚ್ಚ ₹3,409 ಕೋಟಿಗೆ ಏರಿಕೆ
ಬೆಂಗಳೂರು ನಗರವನ್ನು ಸುತ್ತುವರಿಯುವ ಈ ಬೃಹತ್ ರಸ್ತೆ ಯೋಜನೆಯನ್ನು 2017ರಲ್ಲಿ ಮಂಜೂರು ಮಾಡಲಾಗಿತ್ತು. ಆಗ ಯೋಜನೆಯ ಅಂದಾಜು ವೆಚ್ಚ ₹2,290 ಕೋಟಿ ಆಗಿತ್ತು. ಆದರೆ, ಪ್ರಸ್ತುತ ಸಚಿವ ಸಂಪುಟವು ₹1,118 ಕೋಟಿ ಹೆಚ್ಚುವರಿ ನಿಧಿಗೆ ಅನುಮೋದನೆ ನೀಡಿರುವುದರಿಂದ, ಈ ಯೋಜನೆಯ ಒಟ್ಟು ವೆಚ್ಚವು ₹3,409 ಕೋಟಿಗೆ ಪರಿಷ್ಕರಣೆಗೊಂಡಿದೆ.
ಯೋಜನಾ ವೆಚ್ಚ ಹೆಚ್ಚಾಗಲು ಪ್ರಮುಖ ಕಾರಣಗಳು:
ಭೂಸ್ವಾಧೀನ ವೆಚ್ಚ ಹೆಚ್ಚಳ: ರಸ್ತೆ ಅಗಲೀಕರಣ ಹಾಗೂ ನಿರ್ಮಾಣಕ್ಕಾಗಿ ಅಗತ್ಯವಿದ್ದ ಭೂಮಿಯ ಪರಿಹಾರ ಧನ ಹೆಚ್ಚಾಗಿರುವುದು.
ಸಾಮಗ್ರಿಗಳ ಬೆಲೆ ಏರಿಕೆ: ಕಚ್ಚಾ ಸಾಮಗ್ರಿಗಳ ಹಾಗೂ ನಿರ್ಮಾಣ ಸಾಮಗ್ರಿಗಳ ವೆಚ್ಚದಲ್ಲಾಗಿರುವ ಏರಿಕೆ.
ಹೆಚ್ಚುವರಿ ಕಾಮಗಾರಿ ಹಾಗೂ ವಿಳಂಬ: ಅನುಷ್ಠಾನದ ಹಂತದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸೇರ್ಪಡೆಗೊಳಿಸಲಾದ ಹೆಚ್ಚುವರಿ ಕಾಮಗಾರಿಗಳು ಹಾಗೂ ಯೋಜನಾ ವಿಳಂಬ.
ಯಾವೆಲ್ಲಾ ಪ್ರಮುಖ ಪ್ರದೇಶಗಳಿಗೆ ಸಿಗಲಿದೆ ಕನೆಕ್ಟಿವಿಟಿ?
ಈ 134 ಕಿ.ಮೀ ಉದ್ದದ ರಸ್ತೆ ಮಾರ್ಗವು ಬೆಂಗಳೂರು ನಗರವನ್ನು ಸಂಪೂರ್ಣವಾಗಿ ಸುತ್ತುವರಿಯಲಿದ್ದು, ಐಟಿ ಹಬ್ ಹಾಗೂ ಪ್ರಮುಖ ಕೈಗಾರಿಕಾ ವಲಯಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ (KIA) ನೇರವಾಗಿ ಸಂಪರ್ಕಿಸಲಿದೆ.
ಪ್ರಮುಖ ಮಾರ್ಗಗಳು:
ಅತ್ತಿಬೆಲೆ ➔ ಸರ್ಜಾಪುರ ➔ ದೊಮ್ಮಸಂದ್ರ ➔ ಗುಂಜೂರು ➔ ವರ್ತೂರು ➔ ವೈಟ್‌ಫೀಲ್ಡ್ ➔ ಏರ್‌ಪೋರ್ಟ್ (ದೇವರನಹಳ್ಳಿ) ➔ ನೆಲಮಂಗಲ
ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ
ಸ್ಥಳ ಪರಿಶೀಲನೆ ನಡೆಸಿದ ನಂತರ, ಲೋಕೋಪಯೋಗಿ ಇಲಾಖೆಗೆ (PWD) ಹೆಚ್ಚುವರಿ ನಿಧಿಯ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ನಗರ ಬೆಳೆಯುತ್ತಿರುವ ವೇಗ ಹಾಗೂ ಭವಿಷ್ಯದ ವಾಹನ ದಟ್ಟಣೆಯ ಅಗತ್ಯತೆಯನ್ನು ಮನಗಂಡು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಈ ಅನುದಾನ ಮಂಜೂರಾತಿಯಿಂದಾಗಿ ಅತ್ತಿಬೆಲೆ, ಸರ್ಜಾಪುರ, ವೈಟ್‌ಫೀಲ್ಡ್, ದೇವನಹಳ್ಳಿ ಹಾಗೂ ನೆಲಮಂಗಲ ಭಾಗದ ಲಕ್ಷಾಂತರ ವಾಹನ ಸವಾರರು ಮತ್ತು ಐಟಿ-ಬಿಟಿ ಉದ್ಯೋಗಿಗಳಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದ್ದು, ಬೆಂಗಳೂರಿನ ಮೈಕ್ರೋ ಮಾರುಕಟ್ಟೆಗಳಲ್ಲಿ ರಿಯಲ್ ಎಸ್ಟೇಟ್ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೂ ಹೊಸ ಚೈತನ್ಯ ಸಿಗಲಿದೆ.






