ದುಬಾರಿ ಕಾಲದಲ್ಲೂ ಕೇವಲ 5 ರೂಪಾಯಿಗೆ ರುಚಿಕರವಾದ ಇಡ್ಲಿ ನೀಡುವ 70 ವರ್ಷದ ರಾಮಚಂದ್ರ ಅವರ ಸ್ಫೂರ್ತಿದಾಯಕ ಕಥೆ ಇದು. 5 ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಇವರು, ಊಟ ಜನರಿಗೆ ಕೈಗೆಟಕುವಂತೆ ಇರಬೇಕು ಎಂಬ ನಂಬಿಕೆಯನ್ನು ಪಾಲಿಸುತ್ತಿದ್ದಾರೆ.

ದುಬಾರಿ ದುನಿಯಾ! ಇವತ್ತಿನ ಕಾಲದಲ್ಲಿ ಐದು ರೂಪಾಯಿಗೇ ಒಂದು ಚಾಕಲೋಟ್ ಕೂಡ ಸಿಗೋದಿಲ್ಲ. ಅಂಥದ್ರಲ್ಲಿ ಹೊಟ್ಟೆ ತುಂಬುವಂತಹ ರುಚಿಕರವಾದ ಬಿಸಿಬಿಸಿ ಇಡ್ಲಿ ಕೇವಲ 5 ರೂಪಾಯಿಗೆ ಕೊಡ್ತಾರೆ ಅಂದ್ರೆ ನೀವು ನಂಬ್ತೀರಾ? ನಂಬಲೇಬೇಕು! ನಮ್ಮದೇ ರಾಜ್ಯದ ಈ ಪುಟ್ಟ ಹೋಟಲ್‌ನ ಕಥೆ ಇದು.

ಅದು ಬೆಂಗಳೂರಿನಿಂದ ಸುಮಾರು 2 ಗಂಟೆಗಳ ಕಾಲ ಜರ್ನಿ. ಎಷ್ಟೇ ಟ್ರಾಫಿಕ್ ಇರಲಿ, ಸಮಸ್ಯೆ ಏನೇ ಇರಲಿ. ಈ ಪುಟ್ಟ ಹೋಟೆಲ್‌ನಲ್ಲಿ ಇಡ್ಲಿ ಸವಿಯಬೇಕು ಎಂದೇ ಗಂಟೆಗಳ ಕಾಲ ಪ್ರಯಾಣ ಬೆಳಸಿ ಬರುತ್ತಾರೆ. ಅದಕ್ಕೆ ಕಾರಣ 70 ವರ್ಷದ ರಾಮಚಂದ್ರ ಅವರ ಕೈರುಚಿ ಮತ್ತು ಅವರ ನಿಸ್ವಾರ್ಥ ಸೇವೆ. ಕಳೆದ ಐದು ದಶಕಗಳಿಗೂ ಹೆಚ್ಚು ಕಾಲದಿಂದ ಜನರಿಗೆ ಅದೇ ಪ್ರೀತಿ, ಅದೇ ರುಚಿಯೊಂದಿಗೆ ಕೇವಲ ₹5ಕ್ಕೆ ಇಡ್ಲಿ ನೀಡುತ್ತಾ ಬಂದಿರುವ ರಾಮಚಂದ್ರ ಅವರ ಕಾಯಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ತಂದೆ ಕಲಿಸಿದ ವಿದ್ಯೆ, 50 ವರ್ಷಗಳ ಪರಂಪರೆ

ಈ ಹೋಟೆಲ್‌ನ ಕಥೆ ಆರಂಭವಾಗೋದು 1972ರಲ್ಲಿ. ರಾಮಚಂದ್ರ ತಂದೆ ಕೇವಲ 1 ರೂಪಾಯಿಗೆ 10 ಇಡ್ಲಿಗಳನ್ನು ಮಾರಿ ಈ ಸಣ್ಣ ಅಂಗಡಿ ಆರಂಭಿಸಿದ್ದರು. ಆಗ ರಾಮಚಂದ್ರ ಅವರಿಗೆ ಆಗ ಕೇವಲ 16 ವರ್ಷ. ತಂದೆಯ ಕೆಲಸ ನೋಡಿ ಹೋಟೆಲ್ ಕೆಲಸ ಕಲಿತುಕೊಂಡರು. ಕೇವಲ ಹಿಟ್ಟು ರುಬ್ಬುವುದು, ಇಡ್ಲಿ ಬೇಯಿಸುವುದಷ್ಟೇ ಅಲ್ಲದೆ.. ಪ್ರೀತಿಯಿಂದ ಜನರಿಗೆ ಊಟ ಬಡಿಸುವುದರ ಮಹತ್ವವನ್ನೂ ಕಲಿತುಕೊಂಡರು. ನಾನು ಇಂದಿಗೂ ಇಡ್ಲಿ ಹಿಟ್ಟು ರುಬ್ಬುವಾಗಲೆಲ್ಲ ನನ್ನ ತಂದೆ ನನ್ನ ಪಕ್ಕದಲ್ಲೇ ನಿಂತು ನೋಡುತ್ತಿರುವಂತೆ ಕಾಣುತ್ತದೆ ಎಂದು ಭಾವುಕರಾಗಿ ಇಂದಿಗೂ ಹೇಳುತ್ತಿರುತ್ತಾರೆ.

ಬೆಳಗ್ಗೆ 4 ಗಂಟೆಯಿಂದ ಕೆಲಸ

ಅಂದ್ಹಾಗೆ ರಾಮಚಂದ್ರ ಅವರ ದಿನಚರಿ ಬೆಳಗ್ಗೆ 4 ಗಂಟೆಯಿಂದ ಶುರುವಾಗುತ್ತದೆ. ಇಂದಿನ ಹೋಟೆಲ್‌ಗಳಂತೆ ಆಧುನಿಕ ಯಂತ್ರಗಳನ್ನು ಬಳಸದೆ, ಸಾಂಪ್ರದಾಯಿಕ ಶೈಲಿಯಲ್ಲೇ ತಮ್ಮ ಕೈಗಳಿಂದಲೇ ಹಿಟ್ಟು ರುಬ್ಬುತ್ತಾರೆ. ಪ್ರತಿದಿನ ಮುಂಜಾನೆಯಿಂದ ಸಂಜೆಯವರೆಗೆ ಸುಮಾರು 1,500 ಇಡ್ಲಿಗಳನ್ನು ಸಿದ್ಧಪಡಿಸುತ್ತಾರೆ. ಇಷ್ಟೆಲ್ಲಾ ಬೆಲೆ ಏರಿಕೆ ನಡುವೆ ಇಂದಿಗೂ ಒಂದು ಇಡ್ಲಿಗೆ ಕೇವಲ ₹5 ಪಡೆಯಲು ಕಾರಣವೇನು ಎಂದು ಕೇಳಿದರೆ.. ಅವರು ನೀಡುವ ಉತ್ತರ ಹೃದಯಕ್ಕೆ ತಟ್ಟುತ್ತದೆ. ಊಟ ಜನರ ಹೊಟ್ಟೆ ತುಂಬಿಸಬೇಕೇ ಹೊರತು, ಅವರ ಜೇಬು ಖಾಲಿ ಮಾಡಬಾರದು ಎನ್ನುತ್ತಾರೆ.

ದಶಕಗಳ ಹಿಂದೆ ಪೋಷಕರ ಕೈಹಿಡಿದು ಬರುತ್ತಿದ್ದ ಪುಟ್ಟ ಮಕ್ಕಳು, ಇಂದು ತಾವೇ ತಂದೆ-ತಾಯಿಯಾಗಿ ತಮ್ಮ ಮಕ್ಕಳನ್ನು ಕರೆದುಕೊಂಡು ಇಲ್ಲಿಗೆ ಬರುತ್ತಾರೆ. ರಾಮಚಂದ್ರಗೆ ಯಾವುದೇ ಪ್ರಶಸ್ತಿ-ಪುರಸ್ಕಾರಗಳಿಗಿಂತ ಗ್ರಾಹಕರ ಈ ನಿಷ್ಠೆ ಮತ್ತು ಪ್ರೀತಿಯೇ ದೊಡ್ಡದು. ಸದ್ಯ ಅವರ ಮಗ ಮತ್ತು ಸೊಸೆ ಕೂಡ ಅಂಗಡಿಯ ಕೆಲಸಗಳಲ್ಲಿ ಕೈಜೋಡಿಸುತ್ತಿದ್ದು, ಕುಟುಂಬದ ಈ ಪರಂಪರೆ ಮುಂದುವರಿಸುತ್ತಿದ್ದಾರೆ.

70 ವರ್ಷಗಳಾಗಿದ್ದರೂ ರಾಮಚಂದ್ರ ಅವರು ಪ್ರತಿದಿನ 12 ಗಂಟೆಗಳ ಕಾಲ ಅಂಗಡಿಯಲ್ಲೇ ಕಳೆಯುತ್ತಾರೆ. ಮನೆಯಲ್ಲಿ ಸುಮ್ಮನೆ ಕುಳಿತರೆ ಆಯಾಸವಾಗುತ್ತದೆ. ಅಂಗಡಿಗೆ ಬಂದು ನಿಂತರೆ ನನಗೆ ಹೊಸ ಚೈತನ್ಯ ಬರುತ್ತದೆ ಎಂದು ನಗುತ್ತಾ ಹೇಳುತ್ತಾರೆ. ವ್ಯಾಪಾರವನ್ನು ಕೇವಲ ಲಾಭದ ದೃಷ್ಟಿಯಿಂದ ನೋಡದೆ.. ಜನರ ಹಸಿವು ನೀಗಿಸುವುದೇ ಪರಮ ಧ್ಯೇಯವೆಂದು ನಂಬಿ ಬದುಕುತ್ತಿರುವ ರಾಮಚಂದ್ರ ಅವರ ಈ ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿ.