ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಹದಗೆಟ್ಟ ರಸ್ತೆಯಿಂದಾಗಿ ಸಂಭವಿಸಿದ ಅಪಘಾತದಲ್ಲಿ ಕೇರಳ ಮೂಲದ ಯುವತಿ ಮೃತಪಟ್ಟಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ರಸ್ತೆ ದುರಸ್ತಿಗೆ ಆಗ್ರಹಿಸಿದ್ದಾರೆ. ಅಧಿಕಾರಿಗಳು ಒಂದು ವಾರದೊಳಗೆ ತಾತ್ಕಾಲಿಕ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಆನೇಕಲ್ (ಆ.13): ರಸ್ತೆಯ ಗುಂಡಿ ಹಾಗೂ ಹದಗೆಟ್ಟ ರಸ್ತೆಯಿಂದಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳ ಮೂಲದ ಯುವತಿ ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಅನಂತನಗರದಲ್ಲಿ ನಡೆದಿದೆ. ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಹಾಗೂ ತಕ್ಷಣವೇ ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಸ್ಥಳದಲ್ಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ (ನಿನ್ನೆ) ಮೇಧಾ ಅವರು ಬೈಕ್‌ನಲ್ಲಿ ಹಿಂಬದಿ ಸವಾರೆಯಾಗಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮುಂದೆ ಸಾಗುತ್ತಿದ್ದ ಕಾರು ಚಾಲಕ ದಿಢೀರನೆ ಬ್ರೇಕ್ ಹಾಕಿದ್ದಾನೆ. ಪರಿಣಾಮ ಬೈಕ್ ಸವಾರ ಕೂಡ ಅಪಘಾತ ತಪ್ಪಿಸಲು ತಕ್ಷಣವೇ ಬ್ರೇಕ್ ಹಾಕಿದ್ದಾನೆ. ಆದರೆ, ಹದಗೆಟ್ಟಿದ್ದ ರಸ್ತೆಯ ಪರಿಣಾಮ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ. ಈ ವೇಳೆ ಹಿಂಬದಿ ಕುಳಿತಿದ್ದ ಮೇಧಾ ಅವರು ಕೆಳಗೆ ಬಿದ್ದ ತಕ್ಷಣವೇ, ಹಿಂದಿನಿಂದ ಬಂದ ಗೂಡ್ಸ್ ವಾಹನವೊಂದು ಅವರ ಮೇಲೆ ಹರಿದಿದೆ. ತೀವ್ರ ಗಾಯಗೊಂಡ ಮೇಧಾ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಸ್ಥಳೀಯರ ಆಕ್ರೋಶ, ಅಧಿಕಾರಿಗಳಿಗೆ ತರಾಟೆ!
ಘಟನೆಯಿಂದ ಆಕ್ರೋಶಗೊಂಡ ಅನಂತನಗರ ನಿವಾಸಿಗಳು ಹಾಗೂ ಸ್ಥಳೀಯರು, ಪ್ರದೇಶದಲ್ಲಿ ದಿನೇ ದಿನೇ ಹದಗೆಡುತ್ತಿರುವ ರಸ್ತೆಗಳೇ ಇಂತಹ ಸರಣಿ ಅಪಘಾತಗಳಿಗೆ ಮುಖ್ಯ ಕಾರಣ ಎಂದು ಆರೋಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು, "ಕೂಡಲೇ ಅಪಘಾತಕ್ಕೆ ಕಾರಣವಾಗುತ್ತಿರುವ ರಸ್ತೆಗಳನ್ನು ಸರಿಪಡಿಸಬೇಕು ಮತ್ತು ಮೃತ ಮಹಿಳೆಯ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕು" ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ದೂರು ಆಲಿಸಿದ ಅಧಿಕಾರಿಗಳು ಮಾತನಾಡಿ, "ಪ್ರಸ್ತುತ ಅನಂತನಗರದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವತಿಯಿಂದ ಒಳಚರಂಡಿ (UGD) ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಪೂರ್ಣ ಪ್ರಮಾಣದ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುವುದು" ಎಂದು ತಿಳಿಸಿದರು. ಅಲ್ಲದೆ, ತಾತ್ಕಾಲಿಕವಾಗಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ "ಒಂದು ವಾರದ ಒಳಗಾಗಿ ಹಾನಿಗೊಳಗಾಗಿರುವ ರಸ್ತೆಗಳನ್ನು ಸರಿಪಡಿಸಲಾಗುವುದು" ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.


