2023ರ ಕರ್ನಾಟಕ ಚುನಾವಣೆಗೆ ಮುನ್ನ, ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್, ಬಿಜೆಪಿ ಸರ್ಕಾರವು ಅಮುಲ್ ಅನ್ನು ಬೆಂಗಳೂರು ಮಾರುಕಟ್ಟೆಗೆ ಪ್ರವೇಶಿಸಲು ಅವಕಾಶ ನೀಡುವ ಮೂಲಕ ಕರ್ನಾಟಕದ ನಂದಿನಿ ಬ್ರ್ಯಾಂಡ್ ಮತ್ತು ಡೈರಿ ರೈತರ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿತ್ತು.
ಬೆಂಗಳೂರು (ಜೂ.17): ಕಳೆದ ವಿಧಾನಸಭೆ ಚುನಾವಣೆಯ ವೇಳೆ ಕಾಂಗ್ರೆಸ್ ನೇತೃತ್ವದ ವಿರೋಧಪಕ್ಷಗಳು ಆಡಳಿತಾರೂಢ ಬಿಜೆಪಿ ವಿರುದ್ಧ ಅಮೂಲ್-ವರ್ಸಸ್ ನಂದಿನಿ ಅಸ್ತ್ರವನ್ನು ಅತ್ಯಂತ ಯಶಸ್ವಿಯಾಗಿ ಬಳಸಿತ್ತು. ಕರ್ನಾಟಕದಲ್ಲಿ ಅಮೂಲ್‌ಗೆ ಪ್ರವೇಶ ನೀಡುವ ಮೂಲಕ ರಾಜ್ಯದ ನಂದಿನಿ ಬ್ರ್ಯಾಂಡ್‌ಹಾಗೂ ಡೈರಿ ರೈತರ ಹಿತಾಸಕ್ತಿಗಳೊಂದಿಜಗೆ ರಾಜ್ಯ ಸರ್ಕಾರ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಲಾಗಿತ್ತು. ಈಗ ತಮ್ಮದೇ ಮಾತಿಗೆ ಫುಲ್ ಉಲ್ಟಾ ಎನ್ನುವಂತೆ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಅಮುಲ್ ಮಳಿಗೆಗಳು ಸ್ಥಾಪನೆಯಾಗಲಿವೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಇತ್ತೀಚೆಗೆ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಅಥವಾ ಅಮುಲ್ ಜೊತೆ ನಿಲ್ದಾಣಗಳಲ್ಲಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಪರವಾನಗಿ ಒಪ್ಪಂದಕ್ಕೆ ಸಹಿ ಹಾಕಿದೆ.
2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅಮುಲ್ ಬೆಂಗಳೂರಿನಲ್ಲಿ ಪ್ರವೇಶಿಸುವ ನಿರ್ಧಾರ ರಾಜಕೀಯ ಗುದ್ದಾಟಕ್ಕೆ ಸಾಕ್ಷಿಯಾಗಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್, ಬಿಜೆಪಿ ನೇತೃತ್ವದ ಸರ್ಕಾರವು ಕರ್ನಾಟಕದ ಡೈರಿ ಪರಿಸರ ವ್ಯವಸ್ಥೆ ಮತ್ತು ಲಕ್ಷಾಂತರ ಸ್ಥಳೀಯ ರೈತರನ್ನು ಬಲಿಕೊಟ್ಟು ಗುಜರಾತ್ ಮೂಲದ ಅಮುಲ್ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿತ್ತು.
"ಈ ಕಿಯೋಸ್ಕ್‌ಗಳು ಅಮುಲ್‌ನ ಡೈರಿ ಉತ್ಪನ್ನಗಳು, ಚಾಕೊಲೇಟ್, ಆಲೂಗಡ್ಡೆ ಆಧಾರಿತ ತಿಂಡಿಗಳು, ಸಾವಯವ ಉತ್ಪನ್ನಗಳು ಮತ್ತು ಖಾದ್ಯ ತೈಲಗಳ ಸಂಪೂರ್ಣ ಶ್ರೇಣಿಯನ್ನು ಮಾರಾಟ ಮಾಡುತ್ತವೆ" ಎಂದು ಜೂನ್ 16 ರಂದು ಬಿಎಂಆರ್‌ಸಿಎಲ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. "ಈಗ ಮೆಟ್ರೋ ಪ್ರಯಾಣಿಕರು ಹಾಲು, ಚಾಕೊಲೇಟ್‌ಗಳು, ಐಸ್ ಕ್ರೀಮ್, ಇನ್‌ಸ್ಟಂಟ್ ಫುಡ್ ಪ್ರಾಡಕ್ಟ್ ಮತ್ತು ತಮ್ಮ ಆಯ್ಕೆಯ ತಿಂಡಿಗಳನ್ನು ಖರೀದಿಸಬಹುದು." ಎಂದು ತಿಳಿಸಲಾಗಿದೆ.
ಮೆಟ್ರೋ ಆವರಣದಲ್ಲಿ ವಿಶ್ವಾಸಾರ್ಹ ಡೈರಿ ಉತ್ಪನ್ನಗಳನ್ನು ಒದಗಿಸುವ ಮೂಲಕ ಪ್ರಯಾಣಿಕರ ಅನುಕೂಲವನ್ನು ಸುಧಾರಿಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಟ್ರಿನಿಟಿ, ಸರ್ ಎಂ ವಿಶ್ವೇಶ್ವರಯ್ಯ, ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್), ನ್ಯಾಷನಲ್ ಕಾಲೇಜು, ಜಯನಗರ ಮತ್ತು ಬನಶಂಕರಿಗಳಲ್ಲಿ ಕಿಯೋಸ್ಕ್‌ಗಳು ಆರಂಭವಾಗಲಿವೆ.
ಬಿಎಂಆರ್‌ಸಿಎಲ್ ಚಿಲ್ಲರೆ ಮಾರಾಟ ಮಳಿಗೆಗಳು, ರೈಲುಗಳು ಮತ್ತು ನಿಲ್ದಾಣಗಳಲ್ಲಿನ ಜಾಹೀರಾತುಗಳು, ಅರೆ-ನಾಮಕರಣ ಹಕ್ಕುಗಳು ಮತ್ತು ಇತರ ಸ್ಟ್ರೀಮ್‌ಗಳ ಮೂಲಕ ಶುಲ್ಕೇತರ ಆದಾಯವನ್ನು ಹೆಚ್ಚಿಸಲು ಕೆಲಸ ಮಾಡುತ್ತಿದೆ. ಬೆಂಗಳೂರು ಮೆಟ್ರೋ ಇತ್ತೀಚೆಗೆ ದರಗಳನ್ನು ಶೇಕಡಾ 71 ರಷ್ಟು ಹೆಚ್ಚಿಸಿದೆ.
ಅಮುಲ್ ಪ್ರವೇಶವನ್ನು ಕಾಂಗ್ರೆಸ್ ವಿರೋಧಿಸಿದರೂ, 'ನಂದಿನಿ' ಬ್ರಾಂಡ್ ಅಡಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್), ಅಮುಲ್‌ನ ಬೆಳೆಯುತ್ತಿರುವ ಹೆಜ್ಜೆಗುರುತನ್ನು ಎದುರಿಸಲು ಹಾಲು ಮತ್ತು ಮೊಸರಿನಂತಹ ಡೈರಿ ಉತ್ಪನ್ನಗಳನ್ನು ಪೂರೈಸುವ ಮೂಲಕ ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಿಗೆ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿತು.
ಹಿಂದೆ ಉಳಿದ ನಮ್ಮೂರ ನಂದಿನಿ: ಅಮೂಲ್ ಮಾಡಿಕೊಂಡಿರುವ ಇದೇ ಒಪ್ಪಂದವನ್ನು ರಾಜ್ಯದ ಹಾಲು ಒಕ್ಕೂಟ ಮಾಡಿಕೊಳ್ಳುವ ಎಲ್ಲಾ ಅವಕಾಶಗಳೂ ಇದ್ದವು. ಆದರೆ, ಅಮೂಲ್ ಇಂಥದ್ದೊಂದು ಒಪ್ಪಂದ ಮಾಡಿಕೊಳ್ಳುವವರೆಗೂ ಕೆಎಂಎಫ್‌ಗೆ ಈ ಯೋಚನೆ ಬರದಿರುವುದು ವಿಪರ್ಯಾಸವೇ ಸರಿ.
