ಬೆಂಗಳೂರಿನಲ್ಲಿ ಮರದ ಕೊಂಬೆ ಬಿದ್ದು ಮೃತಪಟ್ಟ ಅಕ್ಷಯ್ ಅವರ ತಂದೆ ಶಿವರಾಮ್ ಮಗನ ನೆನಪಿನಲ್ಲೇ ಕೊನೆಯುಸಿರೆಳೆದಿದ್ದಾರೆ. ಮಗನ ಸಾವಿನಿಂದ ತೀವ್ರವಾಗಿ ಮನನೊಂದಿದ್ದ ಶಿವರಾಮ್, ಡಯಾಲಿಸಿಸ್ ಪೇಷೆಂಟ್ ಆಗಿದ್ದರು.
ಬೆಂಗಳೂರು (ಜು.11): ಬೆಂಗಳೂರಿನ ದರಿದ್ರ ಪಾಲಿಕೆ ಬಿಬಿಎಂಪಿಯ ಅವ್ಯವಸ್ಥೆಗೆ ಬಾಳಿ ಬದುಕಬೇಕಾಗಿದ್ದ ಅಕ್ಷಯ್ ಎನ್ನುವ ಯುವಕ ಅನ್ಯಾಯವಾಗಿ ಸಾವು ಕಂಡಿದ್ದ. ಬನಶಂಕರಿ ಪ್ರದೇಶದಲ್ಲಿ ಮರದ ಕೊಂಬೆ ಬಿದ್ದು ಅಕ್ಷಯ್ ಎನ್ನುವ ಯುವಕ ಹಲವು ದಿನಗಳ ಕಾಲ ಜೀವನ್ಮರಣ ಹೋರಾಟ ಮಾಡಿ ಕೊನೆಗೆ ಪ್ರಾಣ ಬಿಟ್ಟಿದ್ದ. ಈಗ ಇದೇ ಅಕ್ಷಯ್ ಕುಟುಂಬಕ್ಕೆ ಮತ್ತೊಂದು ಶೋಕ ಎದುರಾಗಿದೆ. ಮಗನ ನೆನಪಿನಲ್ಲಿಯೇ ಆತನ ತಂದೆ ಕೂಡ ಸಾವು ಕಂಡಿದ್ದಾರೆ.
ಮರದ ಕೊಂಬೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಅಕ್ಷಯ್ ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋಮಾಕ್ಕೆ ಜಾರಿದ್ದ ಅಕ್ಷಯ್ ದಿನಗಳು ಕಳೆಯುತ್ತಿದ್ದ ಹಾಗೆ ಬ್ರೇನ್ ಡೆಡ್ ಎಂದು ಘೋಷಣೆ ಮಾಡಲಾಗಿತ್ತು. ಕೊನೆಗೆ ಜೂನ್ 19ಕ್ಕೆ ಅಕ್ಷಯ್ ಸಾವು ಕಂಡಿದ್ದ. ಈ ವೇಳೆ ಆತನ ಅಜ್ಜಿ, ಅಪ್ಪ, ಎಲ್ಲರೂ ಆಸ್ಪತ್ರೆಗೆ ಬಂದು ಕಣ್ಣೀರು ಹಾಕಿದ್ದು ಇಡೀ ಪ್ರಕರಣವನ್ನು ಭಾವುಕವನ್ನಾಗಿ ಮಾಡಿತ್ತು. ಈಗ ಮಗ ಸಾವು ಕಂಡ ಅಂದಾಜು 20 ದಿನಗಳ ಬಳಿಕ ತಂದೆ ಶಿವರಾಮ್ ಕೂಡ ಸಾವು ಕಂಡಿದ್ದಾರೆ.
ಶಿವರಾಮ್ ಮಂಗಳವಾರ ಸಾವು ಕಂಡಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. ಶಿವರಾಮ್ ಡಯಾಲಿಸಿಸ್ ಪೇಷೆಂಟ್ ಆಗಿದ್ದರು. ಅಕ್ಷಯ್‌ನ ದುಡಿಮೆಯಲ್ಲಿಯೇ ತಂದೆ ಶಿವರಾಮ್ ಗೆ ಚಿಕಿತ್ಸೆ ನಡಿಯುತಿತ್ತು. ಆದರೆ, ಪುತ್ರನ ಅಗಲುವಿಕೆಯ ಬಳಿಕ ಮಗ ನೆನಪಿನಲ್ಲಿಯೇ ಅವರು ಮತ್ತಷ್ಟು ಹಾಸಿಗೆ ಹಿಡಿದ್ದರು ಎನ್ನಲಾಗಿದೆ.
ಅಪ್ಪನಿಗೆ ಮಟನ್ ಇಷ್ಟ ಅನ್ನೋ ಕಾರಣಕ್ಕೆ ಜೂನ್ 15 ರಂದ ಭಾನುವಾರ ಅಕ್ಷಯ್ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಹೊರಗಡೆ ಹೋಗಿದ್ದ. ಮಟನ್ ತತೆಗೆದುಕೊಂಡು ವಾಪಾಸ್ ಬರುವಾಗ ಬನಶಂಕರಿಯ ಬ್ರಹ್ನ ಮಂದಿರದ ಬಳಿ ಮರದ ಕೊಂಬೆ ಮುರಿದು ಅಕ್ಷಯ್ ತಲೆ ಮೇಲೆ ಬಿದ್ದಿತ್ತು. ಇದರಿಂದಾಗಿ ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದ ಅಕ್ಷಯ್‌ನನ್ನು ಸ್ಥಳೀಯ ಪ್ರಶಾಂತ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ರಕ್ತ ಹರಿಯುತ್ತಿರೋದು ನಿಲ್ಲದ ಕಾರಣ ತ್ಯಾಗರಾಜನಗರದ ಪ್ರಶಾಂತ್ ಆಸ್ಪತ್ರೆಯಿಂದ ಜಯನಗರದ 3ನೇ ಬ್ಲಾಕ್ನಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅಕ್ಷಯ್ ಜೂನ್ 19ರಂದು ಮಧ್ಯಾಹ್ನ 1 ಗಂಟೆಗೆ ಸಾವು ಕಂಡಿದ್ದರು. ಸಾವು ಕಂಡ ಬಳಿಕ ಅವರ ಕುಟುಂಬ ಅಕ್ಷಯ್‌ನ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾದರಿಯಾಗಿದ್ದರು.
