ಸರ್ಕಾರಿ ಶಾಲಾ ಶಿಕ್ಷಕರು 1.10 ಲಕ್ಷ ರೂ. ಸಂಬಳ ಪಡೆದರೂ ವಾರದಲ್ಲಿ 5 ದಿನ ಶಾಲೆಗೆ ಬರುವುದಿಲ್ಲ ಎಂದು ಐಶ್ವರ್ಯಾ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಸಣ್ಣ ಕೊಡುಗೆಗಳಿಂದ ದೊಡ್ಡ ಬದಲಾವಣೆ ತರಬಹುದು ಎಂದು ಅವರು ಸಿಎಸ್ಆರ್ ಕಾರ್ಯಕ್ರಮದಲ್ಲಿ ತಿಳಿಸಿದರು.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎನ್ನುವುದಕ್ಕಿಂತ ಶಿಕ್ಷಕರ ಕಾರ್ಯಕ್ಷಮತೆ (efficiency) ಕಮ್ಮಿ. ಸರ್ಕಾರದವರು ನನ್ನನ್ನು ಬೈಕೋಬಹುದು, ಇದೇನು ಐಶ್ವರ್ಯಾ ಹೀಗೆ ಹೇಳ್ತಿದ್ದಾರೆ ಅಂತ. ಆದ್ರೆ, ನಾವು ದತ್ತು ಒಡೆದ ಶಾಲೆಯಲ್ಲಿ ಶಿಕ್ಷಕರಿಗೆ ಕೊಡ್ತಿದ್ದ ಸಂಬಳ 1.10 ಲಕ್ಷ ರೂ. ಆಗಿದ್ದರೂ, ಅವರು ವಾರದ 5 ದಿನ ಶಾಲೆಗೆ ಬರುತ್ತಿರಲಿಲ್ಲ. ಇದನ್ನು ಯಾರು ಚೆಕ್ ಮಾಡ್ತಾರೆ ಅಂದರೆ, ನಮ್ಮ ಬಳಿ ಅದನ್ನು ಚೆಕ್ ಮಾಡುವುದಕ್ಕೆ ಯಾವುದೇ ಹಕ್ಕು ಇರಲಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಶಿವಕುಮಾರ್ ಹೇಳಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ನಡೆದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (CSR) ಪ್ರತಿನಿಧಿಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಸರ್ಕಾರ ಶಾಲೆಗಳನ್ನು ದತ್ತು ನೀಡುವ ಕೆಲಸ ಮಾಡೋಕೆ ಹೊರಟಿದೆ. ನಾವು ಟ್ರಸ್ಟ್ ಮೂಲಕ ಈ ಕೆಲಸ ಮಾಡಿದ್ದೇವೆ. ನಮ್ಮ ಕೈಲಾದ ಸಹಾಯವನ್ನ ನಮ್ಮ ಮಕ್ಕಳಿಗೆ ಮಾಡಬಹುದು. ಒಂದು ಮಗುಗೆ ಸಹಾಯ ಮಾಡಿದ್ರೆ ಅವರ ಕುಟುಂಬಕ್ಕೆ ಸಹಾಯ ಮಾಡಿದಂತೆ. ನ್ಯಾಷನಲ್ ಎಜ್ಯುಕೇಷನ್ ಟ್ರಸ್ಟ್ ಕಳೆದ 25 ವರ್ಷಗಳಿಂದ 3 ಸ್ಕೂಲ್ ನಡೆಸುತ್ತಿದ್ದೇವೆ ಎಂದು ಹೇಳಿದರು.
₹1.10 ಲಕ್ಷ ಸಂಬಳ ತಗೊಂಡ್ರೂ 5 ದಿನ ಶಾಲೆಗೆ ಬರೋದಿಲ್ಲ!
ನನ್ನ ಸರ್ಕಾರದವರು ನನ್ನನ್ನು ಬೈಕೋಬಹುದು, ಇದೇನು ಐಶ್ವರ್ಯ ಬಂದು ಬೈಕೋತಾ ಇದಾಳೆ ಅಂತ, ಬಟ್ ನಿಜವಾಗಿಯೂ ಸರ್ಕಾರಿ ಶಾಲಾ ಶಿಕ್ಷಕರಿಗೆ efficiency ಕಮ್ಮಿ. 1.10 ಲಕ್ಷ ರೂ. ಸಂಬಳ ತೆಗೆದುಕೊಂಡರೂ ವಾರದಲ್ಲಿ ಐದು ದಿನವೂ ಶಾಲೆಗೆ ಬರೋದಿಲ್ಲ. ನಾವು ಈಗಾಗಲೇ ಹಣ ಕೊಡ್ತಿದ್ದರೂ ಅದನ್ನು ಸಮರ್ಪಕವಾಗಿ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಖಾಸಗಿ ಶಾಲೆಗಳು ಮತ್ತು ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡ ನಂತರ ಅಲ್ಲಿ ನೀವು ಎದುರಿಸಬೇಕಾದಂತಹ ವ್ಯವಸ್ಥೆಗಳನ್ನು ನಾನು ಬಿಚ್ಚಿಡುತ್ತಿದ್ದೇನೆ ಎಂದು ತಿಳಿಸಿದರು.
ಸ್ವಚ್ಛತೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆ
ಇನ್ನು ಶಾಲೆಗಳಲ್ಲಿ ಸ್ವಚ್ಛತೆ, ಶಿಸ್ತು ಕೂಡ ಇರುವುದಿಲ್ಲ. ಅಲ್ಲಿ ಮಕ್ಕಳಿಗೆ ಒಂದು ಸ್ವಚ್ಛವಾದ ಶೌಚಗೃಹ, ಡಸ್ಟ್ಬಿನ್, ಶೌಚಾಲಯಕ್ಕೆ ಸಮರ್ಪಕ ನೀರು ಇದ್ಯಾವುದೂ ಅಲ್ಲಿರುವುದಿಲ್ಲ. ಇದಕ್ಕೆಲ್ಲಾ ತುಂಬಾ ಏನು ಹಣ ಖರ್ಚಾಗುವುದಿಲ್ಲ. ಇದನ್ನು ಆರಂಭದಲ್ಲಿಯೇ ಒದಗಿಸುವ ಮೂಲಕ ಮಕ್ಕಳ ಹೈಜೀನ್ ಕಾಪಾಡುವುದಕ್ಕೆ ಆದ್ಯತೆ ನೀಡಬೇಕು ಎಂದರು.
ಶಾಲಾ ಬಸ್ಗಳ ಮರುಬಳಕೆ
ಸಣ್ಣ ಸಣ್ಣ ನಿರ್ಧಾರ ಮತ್ತು ಸಣ್ಣ ಕೊಡುಗೆಗಳನ್ನು ಸರ್ಕಾರಿ ಶಾಲೆಗೆ ಕೊಡುವುದರಿಂದ ದೊಡ್ಡ ಮಟ್ಟದ ಬದಲಾವಣೆ ಆಗಲಿದೆ. ದೊಡ್ಡ ಕಂಪ್ಯೂಟರ್ಗಳನ್ನು ಕೊಡುವುದರ ಬದಲು ಸಣ್ಣ ಪ್ರೊಜೆಕ್ಟರ್ಗಳನ್ನು ಕೊಟ್ಟರೆ ಸಾಕು. ಉದಾಹರಣೆಗೆ ನಮ್ಮ ಸಂಸ್ಥೆಯಲ್ಲಿ ಬಳಸಲಾದ ಬಸ್ಗಳನ್ನು ಅವಧಿ ಮುಗಿದ ನಂತರ ಅವುಗಳನ್ನು ಮಾರಾಟ ಮಾಡುವ ಬದಲು, ಫಿಟ್ನೆಸ್ ರಿನೀವಲ್ ಮಾಡಿ ಸರ್ಕಾರಿ ಶಾಲಾ ಮಕ್ಕಳಿಗೆ ಕೊಟ್ಟಿರುವುದು ಅನುಕೂಲ ಆಗುತ್ತಿದೆ. ಈ ಸ್ಕೂಲ್ ಬಸ್ಗಳನ್ನು ದಿನನಿತ್ಯ 4 ಟ್ರಿಪ್ ಮಾಡ್ತಿದ್ದೇವೆ. 200 ಮಕ್ಕಳು ಇದರ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳು ನಡೆದುಕೊಂಡು ಹೋಗುವುದು ಕೂಡ ತಪ್ಪುತ್ತದೆ. ನಾವು ಸಣ್ಣ ಕೊಡುಗೆ ನೀಡುವುದರಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತದೆ ಎಂದು ಶಿಕ್ಷಣ ಸಂಸ್ಥೆಗಳ ಮಾಲಕಿ ಐಶ್ವರ್ಯಾ ಶಿವಕುಮಾರ್ ತಿಳಿಸಿದರು.






