ಈಸ್ಟರ್ನ್ ಏರ್ ಕಮಾಂಡ್‌ನ ಮುಖ್ಯಸ್ಥರಾದ ಏರ್ ಮಾರ್ಷಲ್ ಇಂದರ್‌ಪಾಲ್ ಸಿಂಗ್ ವಾಲಿಯಾ ಅವರು ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಪೂರ್ವ ವಲಯದಲ್ಲಿ ಭಾರತೀಯ ವಾಯುಪಡೆಯ ವ್ಯೂಹಾತ್ಮಕ ಪಾತ್ರ, ಕಾರ್ಯಾಚರಣೆಯ ಸನ್ನದ್ಧತೆ, ಎದುರಿಸುತ್ತಿರುವ ಸವಾಲುಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.

ಬೆಂಗಳೂರು: ಈಸ್ಟರ್ನ್ ಏರ್ ಕಮಾಂಡ್ ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಏರ್ ಮಾರ್ಷಲ್ ಇಂದರ್‌ಪಾಲ್ ಸಿಂಗ್ ವಾಲಿಯಾ ಅವರು ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳೊಂದಿಗೆ ವಾಯುಪಡೆಯ ಕಾರ್ಯಚಟುವಟಿಕೆಗಳ ಕುರಿತು ಸಂವಾದ ನಡೆಸಿದರು.

ಭಾರತ ಸರ್ಕಾರದ ಬೆಂಗಳೂರಿನ ವಾರ್ತಾ ಶಾಖೆ ಮೇಘಾಲಯಕ್ಕೆ ಮಾಧ್ಯಮ ಪ್ರವಾಸ ಆಯೋಜಿಸಿದ್ದು, ಪ್ರವಾಸದ 3ನೇ ದಿನವಾದ ಇಂದು ಮಾಧ್ಯವಮ ತಂಡವು, ಪೂರ್ವ ವಲಯದಲ್ಲಿ ಭಾರತೀಯ ವಾಯುಪಡೆಯ ವ್ಯೂಹಾತ್ಮಕ ಪಾತ್ರ, ಕಾರ್ಯಾಚರಣೆಯ ಸನ್ನದ್ಧತೆ ಮತ್ತು ಸಂವಹನ ಚೌಕಟ್ಟಿನ ಬಗ್ಗೆ ತಿಳಿದುಕೊಳ್ಳಲು ಈ ಸಂವಾದದಲ್ಲಿ ಭಾಗವಹಿಸಿತ್ತು.

ವಿಶೇಷ ಕಾರ್ಯಾಚರಣೆಯ ಕಾರ್ಯತಂತ್ರಗಳ ಅಗತ್ಯತೆ

ಈಸ್ಟರ್ನ್ ಏರ್ ಕಮಾಂಡ್‌ನ ವ್ಯೂಹಾತ್ಮಕ ಪ್ರಾಮುಖ್ಯತೆ, ಪೂರ್ವ ವಲಯದಲ್ಲಿ ವಾಯು ಪ್ರಾಬಲ್ಯವನ್ನು ಖಚಿತಪಡಿಸುವಲ್ಲಿ ಅದರ ಪಾತ್ರ ಮತ್ತು ರಾಷ್ಟ್ರೀಯ ಭದ್ರತೆಗೆ ಅದರ ಪ್ರಮುಖ ಕೊಡುಗೆಯ ಕುರಿತು ವಿವರವಾಗಿ ತಿಳಿಸಲಾಯಿತು. ಕಾರ್ಯಾಚರಣೆಯ ಸನ್ನದ್ಧತೆ, ಕ್ಷಿಪ್ರ ಪ್ರತಿಕ್ರಿಯಾ ಸಾಮರ್ಥ್ಯ ಮತ್ತು ಸಶಸ್ತ್ರ ಪಡೆಗಳ ಇತರ ವಿಭಾಗಗಳೊಂದಿಗೆ ಸಮನ್ವಯಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಪೂರ್ವ ವಲಯದ ಕಠಿಣ ಭೂಪ್ರದೇಶ ಮತ್ತು ವೈವಿಧ್ಯಮಯ ಹವಾಮಾನ ಪರಿಸ್ಥಿತಿಗಳಲ್ಲಿ ನಿಖರ ಯೋಜನೆ, ವಿಶೇಷ ಕಾರ್ಯಾಚರಣೆಯ ಕಾರ್ಯತಂತ್ರಗಳ ಅಗತ್ಯತೆಯ ಕುರಿತು ಉಲ್ಲೇಖಿಸಲಾಯಿತು.

ಸಂವಾದದ ಸಮಯದಲ್ಲಿ, ಏರ್ ಮಾರ್ಷಲ್ ಇಂದರ್‌ಪಾಲ್ ಸಿಂಗ್ ವಾಲಿಯಾ ಅವರು ಸಾರ್ವಜನಿಕ ವಿಶ್ವಾಸ ಬೆಳೆಸುವುದು, ಸರಿಯಾದ ಮಾಹಿತಿಯ ಪ್ರಸಾರ, ಕಾರ್ಯಾಚರಣೆಯ ಸುರಕ್ಷತೆ ಕಾಪಾಡುವ ಜೊತೆಗೆ ಪಾರದರ್ಶಕತೆ ಬಲಪಡಿಸುವಲ್ಲಿ ಪರಿಣಾಮಕಾರಿ ವ್ಯೂಹಾತ್ಮಕ ಸಂವಹನದ ಪ್ರಾಮುಖ್ಯತೆಯನ್ನು ವಿವರಿಸಿದರು.

ಭಾರತೀಯ ವಾಯುಪಡೆ

ಪೂರ್ವ ವಲಯದಲ್ಲಿ ಬದಲಾಗುತ್ತಿರುವ ಭದ್ರತಾ ಪರಿಸ್ಥಿತಿಗಳು ಮತ್ತು ಭೂಪ್ರದೇಶ ಹಾಗೂ ಪರಿಸರದ ಸವಾಲುಗಳ ಹೊರತಾಗಿಯೂ ಹೆಚ್ಚಿನ ಕಾರ್ಯಾಚರಣೆಯ ಸನ್ನದ್ಧತೆಯನ್ನು ಕಾಯ್ದುಕೊಳ್ಳುವಲ್ಲಿ ಭಾರತೀಯ ವಾಯುಪಡೆಯ ನಿರಂತರ ಗಮನದ ಬಗ್ಗೆ ಮಾಹಿತಿ ನೀಡಲಾಯಿತು. ಇದು ಮಾಧ್ಯಮ ಪ್ರತಿನಿಧಿಗಳಿಗೆ ಹಿರಿಯ ಐಎಎಫ್ ಅಧಿಕಾರಿಗಳೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಮತ್ತು ಭಾರತೀಯ ವಾಯುಪಡೆಯ ಕಾರ್ಯಾಚರಣೆಯ ನೀತಿಗಳು, ವ್ಯೂಹಾತ್ಮಕ ಆದ್ಯತೆಗಳು ಮತ್ತು ಮಾಧ್ಯಮ ಪ್ರಭಾವದ ಉಪಕ್ರಮಗಳ ಬಗ್ಗೆ ಪ್ರತ್ಯಕ್ಷ ವಿವರಣೆ ಪಡೆಯಲು ಅವಕಾಶ ಮಾಡಿಕೊಟ್ಟಿತು.

ಈ ಸಂವಾದವು ಮಾಧ್ಯಮಗಳೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳುವ ಭಾರತೀಯ ವಾಯುಪಡೆಯ ಬದ್ಧತೆಯನ್ನು ಪುನರುಚ್ಚರಿಸಿತು ಮತ್ತು ರಾಷ್ಟ್ರೀಯ ರಕ್ಷಣೆ ಹಾಗೂ ಭದ್ರತಾ ವಿಷಯಗಳ ಬಗ್ಗೆ ಸಾರ್ವಜನಿಕ ತಿಳುವಳಿಕೆಯನ್ನು ಹೆಚ್ಚಿಸುವಲ್ಲಿ ಮಾಹಿತಿಪೂರ್ಣ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮದ ಪಾತ್ರವನ್ನು ಎತ್ತಿ ಹಿಡಿಯಲು ಸಹಕಾರಿಯಾಯಿತು.