ರಾಜ್ಯವನ್ನು ಉತ್ಪಾದನ ಕೇಂದ್ರವನ್ನಾಗಿ ಮಾಡಲು ಪೂರಕವಾಗಿ ಉದ್ಯಮದ ಪ್ರಮುಖರಿಂದ ಸಲಹೆ ಪಡೆಯಲು ಆಯೋಜಿಸಲಾಗಿದ್ದ ಉತ್ಪಾದನಾ ಮಂಥನದಲ್ಲಿ, 60ಕ್ಕೂ ಹೆಚ್ಚು ಸಂಸ್ಥೆಗಳು, 80ಕ್ಕೂ ಹೆಚ್ಚಿನ ಉದ್ಯಮಿಗಳು ಪಾಲ್ಗೊಂಡಿದ್ದರು
ಬೆಂಗಳೂರು : ರಾಜ್ಯ ಕೈಗಾರಿಕಾ ನೀತಿಗೆ ಪೂರಕವಾಗಿ ಮುಂದಿನ ಐದು ವರ್ಷಗಳಲ್ಲಿ 7.5 ಲಕ್ಷ ಕೋಟಿ ರು. ಹೂಡಿಕೆ ಆಕರ್ಷಿಸುವುದು ಹಾಗೂ 20 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಸಾಧಿಸುವುದು ಮತ್ತು ರಾಜ್ಯವನ್ನು ಉತ್ಪಾದನ ಕೇಂದ್ರವನ್ನಾಗಿ ಮಾಡಲು ಪೂರಕವಾಗಿ ಉದ್ಯಮದ ಪ್ರಮುಖರಿಂದ ಸಲಹೆ ಪಡೆಯಲು ಆಯೋಜಿಸಲಾಗಿದ್ದ ಉತ್ಪಾದನಾ ಮಂಥನದಲ್ಲಿ, 60ಕ್ಕೂ ಹೆಚ್ಚು ಸಂಸ್ಥೆಗಳು, 80ಕ್ಕೂ ಹೆಚ್ಚಿನ ಉದ್ಯಮಿಗಳು ಪಾಲ್ಗೊಂಡಿದ್ದರು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಕೈಗಾರಿಕಾ ಇಲಾಖೆಯಿಂದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆಸಲಾದ ಉತ್ಪಾದನಾ ಮಂಥನ ಕಾರ್ಯಕ್ರಮ ಕುರಿತು ಮಾಹಿತಿ ನೀಡಲು ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್, ಕರ್ನಾಟಕವನ್ನು ಭಾರತದ ಪ್ರಮುಖ ಉತ್ಪಾದನಾ ಕೇಂದ್ರವಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಅದರ ಜತೆ ನೂತನ ಕೈಗಾರಿಕಾ ನೀತಿಯಲ್ಲಿ ನಿಗದಿ ಮಾಡಿಕೊಳ್ಳಲಾಗಿರುವ 7.5 ಲಕ್ಷ ಕೋಟಿ ರು. ಹೂಡಿಕೆ ಹಾಗೂ 20 ಲಕ್ಷ ಉದ್ಯೋಗ ಸೃಷ್ಟಿ ಗುರಿ ಸಾಧಿಸಲು ಹಲವು ಉಪಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಅದರ ಭಾಗವಾಗಿ ಉತ್ಪಾದನಾ ಮಂಥನ ಆಯೋಜಿಸಲಾಗಿದೆ. ಇದರಲ್ಲಿ ವಿವಿಧ ಕ್ಷೇತ್ರಗಳ 60ಕ್ಕೂ ಹೆಚ್ಚಿನ ಉದ್ಯಮಗಳು, 80ಕ್ಕೂ ಹೆಚ್ಚಿನ ಉದ್ಯಮಿಗಳು, ತಜ್ಞರು ಪಾಲ್ಗೊಂಡು ಕರ್ನಾಟಕವನ್ನು ವಿಶ್ವದ ಉತ್ಪಾದನಾ ಕೇಂದ್ರವಾಗಿಸುವ ಕುರಿತು ಸಲಹೆಗಳನ್ನು ನೀಡಿದ್ದಾರೆ ಎಂದರು.
ಸಮಾವೇಶದಲ್ಲಿ ಉದ್ಯಮದ ನಾಯಕರೊಂದಿಗೆ ಚರ್ಚೆ ನಡೆಸಿ, ಸಲಹೆ ಪಡೆಯಲಾಗಿದೆ. ಕೈಗಾರಿಕಾ ಬೆಳವಣಿಗೆ, ರಾಜ್ಯದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಚಿಸಬೇಕಾದ ಮಾರ್ಗಸೂಚಿ ಬಗ್ಗೆಯೂ ಮಾರ್ಗದರ್ಶನ ಪಡೆಯಲಾಗಿದೆ. ಏರೋಸ್ಪೇಸ್, ರಕ್ಷಣೆ, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ರೋಬೋಟಿಕ್ಸ್, ವಿದ್ಯುತ್ ಚಾಲಿನ ವಾಹನಗಳು, ಎಂಎಂಎಫ್ ಆಧಾರಿತ ಜವಳಿ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಮುಂಚೂಣಿಗೆ ತರುವ ನಿಟ್ಟಿನಲ್ಲಿ ಶಿಫಾರಸುಗಳನ್ನು ಮಾಡಿದ್ದಾರೆ ಎಂದು ವಿವರಿಸಿದರು.
ಸಮಾವೇಶದಲ್ಲಿ ವ್ಯಕ್ತವಾದ ಅಭಿಪ್ರಾಯ, ಶಿಫಾರಸುಗಳನ್ನು ಕ್ರೋಡೀಕರಿಸಿ ಉತ್ಪಾದನಾ ಕ್ಷೇತ್ರದ ಪ್ರಗತಿಗಾಗಿ ಕಾರ್ಯತಂತ್ರ ರೂಪಿಸಲಾಗುವುದು. ರಫ್ತುಗಳನ್ನು ಸರಾಗಗೊಳಿಸಲು ಮಂಗಳೂರು ಮತ್ತು ಚೆನ್ನೈ ಬಂದರು ಸಂಪರ್ಕ ಸುಧಾರಿಸುವುದು, ಪ್ಲಗ್ ಆ್ಯಂಡ್ ಪ್ಲೇ ಮೂಲಸೌಕರ್ಯ ಒದಗಿಸುವುದು, ಆಧುನಿಕ ಸೌಲಭ್ಯಗಳೊಂದಿಗೆ ಸಮಗ್ರ ಕೈಗಾರಿಕಾ ಪಟ್ಟಣಗಳ ಅಭಿವೃದ್ಧಿ ಸೇರಿ ಮತ್ತಿತರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಉದ್ಯಮಿಗಳಾದ ಅರವಿಂದ್, ಪ್ರಶಾಂತ್ ಪ್ರಕಾಶ್ ಇತರರಿದ್ದರು.
