ಬೆಂಗಳೂರು (ನ.06):  ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದ 10ಕ್ಕೂ ಹೆಚ್ಚು ಉಪ ನೋಂದಣಾಧಿಕಾರಿಗಳ (ಸಬ್‌ ರಿಜಿಸ್ಟ್ರಾರ್‌) ಕಚೇರಿಗಳಲ್ಲಿ ಕೆಲಸದ ಅವಧಿ ಮುಗಿದ ಬಳಿಕ ರಾತ್ರಿ ವೇಳೆ ಕಂದಾಯ ನಿವೇಶನಗಳ ಅಕ್ರಮ ಪರಭಾರೆ ದಂಧೆ ನಡೆದಿದೆ ಎಂದು ಸಿಸಿಬಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತನ್ಮೂಲಕ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ‘ಕಾವೇರಿ’ ವೆಬ್‌ಸೈಟ್‌ ಬಳಸಿ ಇಲಾಖೆಯ ನೌಕರರೇ ನಡೆಸಿದ ಹಗರಣಕ್ಕೆ ಹೊಸ ತಿರುವು ಲಭಿಸಿದೆ.

ಬೆಂಗಳೂರು ಹಾಗೂ ಸುತ್ತಮುತ್ತಲಿನ ಕೆಲ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳು ರಾತ್ರಿ 7ರಿಂದ 10 ಗಂಟೆವರೆಗೆ ಕಾರ್ಯನಿರ್ವಹಿಸಿದ್ದು, ಈ ಅವಧಿಯಲ್ಲಿ ಕಾನೂನುಬಾಹಿರವಾಗಿ ಸುಮಾರು 400ಕ್ಕೂ ಹೆಚ್ಚು ಕಂದಾಯ ನಿವೇಶನಗಳ ಸೇಲ್‌ ಅಗ್ರಿಮೆಂಟ್‌ಗಳನ್ನು ಖರೀದಿದಾರರಿಗೆ ಮಾಡಿಕೊಡಲಾಗಿದೆ ಎಂದು ಸಿಸಿಬಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಆನೇಕಲ್‌, ಹೊಸಕೋಟೆ, ಲಗ್ಗೆರೆ, ದಾಸನಪುರ, ಮಾದನಾಯಕನಹಳ್ಳಿ, ಜಾಲ, ಲಗ್ಗೆರೆ, ಕೆಂಗೇರಿ, ಪೀಣ್ಯ ಹಾಗೂ ಬಿಡಿಎನ ಸಬ್‌ ರಿಜಿಸ್ಟ್ರಾರ್‌ಗಳ ಕಚೇರಿಗಳಲ್ಲಿ ಕಾವೇರಿ ವೆಬ್‌ಸೈಟ್‌ ತಿರುಚಿ ಅಕ್ರಮ ನಡೆದಿರುವ ಬಗ್ಗೆ ಪುರಾವೆಗಳು ಸಿಕ್ಕಿವೆ. ಈ ಕಚೇರಿಗಳ ಕೆಲ ಅಧಿಕಾರಿ ಮತ್ತು ಸಿಬ್ಬಂದಿ ಕೆಲಸದ ಅವಧಿ ಮುಗಿದ ಬಳಿಕ ರಾತ್ರಿ 7ರಿಂದ 10 ಗಂಟೆ ಅವಧಿಯಲ್ಲಿ ಕಚೇರಿಯಲ್ಲೇ ಉಳಿದು ಖಾಸಗಿ ವ್ಯಕ್ತಿಗಳಿಗೆ ನಿವೇಶನಗಳನ್ನು ಪರಭಾರೆ ಮಾಡಿಕೊಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಪ್ರಕರಣ ಸಂಬಂಧ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳ ಸುಮಾರು 30ಕ್ಕೂ ಹೆಚ್ಚಿನ ಕಂಪ್ಯೂಟರ್‌ ಆಪರೇಟರ್‌ಗಳನ್ನು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಸಬ್‌ ರಿಜಿಸ್ಟ್ರಾರ್‌ಗಳಿಂದ ಪಾಸ್‌ವರ್ಡ್‌ ದುರ್ಬಳಕೆ:

ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ವೆಬ್‌ಸೈಟ್‌ನಲ್ಲಿ ನಿವೇಶನಗಳ ಕುರಿತ ಮಾಹಿತಿ ಆಪ್‌ಲೋಡ್‌ ಮಾಡುವ ಸಲುವಾಗಿ ಸಬ್‌ ರಿಜಿಸ್ಟ್ರಾರ್‌ಗಳಿಗೆ ಇಲಾಖೆ ಪ್ರತ್ಯೇಕ ಲಾಗಿನ್‌ ಮತ್ತು ಪಾಸ್‌ವರ್ಡ್‌ ನೀಡಿದೆ. ಇದನ್ನು ಬಳಸಿಕೊಂಡು ಎಲ್ಲಿಂದ ಬೇಕಾದರೂ ಕಾವೇರಿ ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯಲು ಅವರಿಗೆ ಅವಕಾಶವಿದೆ. ಈ ಪಾಸ್‌ವರ್ಡ್‌ ದುರ್ಬಳಕೆ ಮಾಡಿಕೊಂಡ ಕೆಲ ಸಬ್‌ ರಿಜಿಸ್ಟ್ರಾರ್‌ಗಳು ಕಂದಾಯ ನಿವೇಶನಗಳ ಮಾಹಿತಿಯನ್ನು ಕದ್ದು ಖರೀದಿದಾರರಿಗೆ ಸೇಲ್‌ ಅಗ್ರಿಮೆಂಟ್‌ ಮಾಡಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

40 ನಿವೇಶನದಲ್ಲಿ ಅಪ್ಪ-ಮಗನ ಕೈಚಳಕ:

ಈ ಭೂ ಹಗರಣದಲ್ಲಿ ಮಾದನಾಯಕನಹಳ್ಳಿಯ ತಂದೆ ಮತ್ತು ಮಗನೊಬ್ಬನ ಪಾತ್ರ ಕಂಡುಬಂದಿದೆ. ಮಾದನಾಯಕನಹಳ್ಳಿಯಲ್ಲಿ ಭೂಮಿ ಖರೀದಿಸಿದ್ದ ಅವರು ಲಗ್ಗೆರೆಯಲ್ಲಿ ಸೇಲ್‌ ಅಗ್ರಿಮೆಂಟ್‌ ಮಾಡಿಸಿದ್ದಾರೆ. ಈ ಇಬ್ಬರು ಕಾವೇರಿ ವೆಬ್‌ಸೈಟ್‌ನಲ್ಲಿ ಮಾಹಿತಿ ತಿರುಚಿ ಸುಮಾರು 40 ನಿವೇಶನಗಳ ಸೇಲ್‌ ಅಗ್ರಿಮೆಂಟ್‌ ಮಾಡಿಸಿದ್ದರು ಎಂದು ಮೂಲಗಳು ಹೇಳಿವೆ.

ಈ ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿರುವ ತಂದೆ-ಮಗನಿಗೆ ಹುಡುಕಾಟ ನಡೆದಿದೆ. ಆರೋಪಿಗಳಿಗೆ ಲಗ್ಗೆರೆಯ ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಅಧಿಕಾರಿಗಳು ಸಹಕರಿಸಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಾಸನಪುರ ನಿವೇಶನ ಬಿಡಿಎನಲ್ಲಿ ನೋಂದಣಿ:

ದಾಸನಪುರದಲ್ಲಿರುವ ಕಂದಾಯ ನಿವೇಶನಗಳನ್ನು ಮತ್ತೊಬ್ಬ ವ್ಯಕ್ತಿ ಬಿಡಿಎ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ತನ್ನ ಹೆಸರಿಗೆ ನೋಂದಾಯಿಸಿಕೊಂಡಿದ್ದಾನೆ. ದಾಸನಪುರದ ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಮಾಹಿತಿಯನ್ನು ಬಿಡಿಎನಲ್ಲಿ ಕದ್ದು ಸೇಲ್‌ ಅಗ್ರಿಮೆಂಟ್‌ ಮಾಡಲಾಗಿದೆ. ಹೀಗೆ ಪ್ರತಿಯೊಂದು ಸೇಲ್‌ ಅಗ್ರಿಮೆಂಟ್‌ಗಳಲ್ಲಿ ಹತ್ತಾರು ನಿವೇಶನಗಳ ಪರಭಾರೆಯಾಗಿದೆ. ಈ ಕುರಿತು ತನಿಖೆ ನಡೆದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.