ನೆಲಮಂಗಲ: ಮೊಬೈಲ್ ಚಾರ್ಜರ್ ವೈರ್ ಬಳಸಿ ಮಹಿಳೆ ಕೊಲೆ
ಮೈಮೇಲಿದ್ದ ಆಭರಣಗಳ ದರೋಡೆ| ಮನೆಯಲ್ಲಿದ್ದ ಚಿನ್ನ, ನಗದು ಕಳುವಾಗಿಲ್ಲ| ಹಲವು ಸಂಶಯಗಳು ಸೃಷ್ಟಿ|ಘಟನಾ ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ|
ನೆಲಮಂಗಲ[ಅ.31]: ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿ ಬಡಾವಣೆಯಲ್ಲಿ ಮಹಿಳೆಯೊಬ್ಬರನ್ನು ಮೊಬೈಲ್ ಚಾರ್ಜರ್ ವೈರ್ ಬಳಸಿ ಕೊಲೆ ಮಾಡಿರುವ ಘಟನೆ ಬುಧವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಾಜಿ ಸೈನಿಕ ಶಿವಬಸಪ್ಪ ಎನ್ನುವವರ ಪತ್ನಿ ಶಾರದಾ (53) ಕೊಲೆಯಾಗಿರುವ ಮಹಿಳೆ. ಕೆಲ ವರ್ಷಗಳ ಹಿಂದೆ ಸೈನ್ಯದಿಂದ ನಿವೃತ್ತಿ ಪಡೆದಿದ್ದ ಶಿವಬಸಯ್ಯ ಖಾಸಗಿ ಸೆಕ್ಯೂರಿಟಿ ಏಜೆನ್ಸಿ ನಡೆಸುತ್ತಿದ್ದರು. ಬೆಳಗ್ಗೆ 8.30 ಗಂಟೆಗೆ ಮನೆಯಲ್ಲಿ ಬೆಳಗಿನ ಉಪಹಾರ ತಿಂದು, ಕ್ಯಾರಿಯರ್ ಬಾಕ್ಸ್ ತಿಂಡಿ ಹಾಕಿಕೊಂಡು ಎಂದಿನಂತೆ ತೆರಳಿದ್ದಾರೆ.
ಕರೆ ಮಾಡಿದ್ದರು:
ಬೆಂಗಳೂರಿನ ನಾಗರಬಾವಿ ಪಿಜಿಯಲ್ಲಿದ್ದು, ವ್ಯಾಸಂಗ ಮಾಡುತ್ತಿದ್ದ ಶಿವಬಸಯ್ಯ, ಶಾರದಾ ದಂಪತಿ ಪುತ್ರಿ ಚಂದ್ರಿಕಾ ಬುಧವಾರ ಬೆಳಗ್ಗೆ 9.15 ಗಂಟೆಗೆ ತಾನು ಮದುವೆಯಾಗಬೇಕಿದ್ದ ಭಾವಿ ಪತಿಯೊಂದಿಗೆ ಮನೆಗೆ ಬಂದಿದ್ದಾರೆ. ಬಾಗಿಲು ತಟ್ಟಿದರೂ ಮನೆಯೊಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಂದೆ ಶಿವಬಸಯ್ಯ ಅವರಿಗೆ ಕರೆ ಮಾಡಿದಾಗ ತಾಯಿ ಮನೆಯಲ್ಲಿಯೇ ಇರುವುದಾಗಿ ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದರಿಂದ ಅನುಮಾನಗೊಂಡ ಮಗಳು ನೆರೆಯವರ ಸಹಾಯ ಪಡೆದು ಮನೆಯೊಳಗೆ ಹೋಗಿ ನೋಡಿದಾಗ ತಾಯಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಡಿವೈಎಸ್ಪಿ ಮೋಹನ್‌ಕುಮಾರ್, ವೃತ್ತ ನಿರೀಕ್ಷಕ ಶಿವಣ್ಣ, ಎಸ್‌ಐ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸಂಶಯ:
ಕೊಲೆಯಾಗಿರುವ ಶಾರದಾ ಪತಿ ಶಿವಬಸಯ್ಯ ಎಂದಿನಂತೆ ಕೆಲಸಕ್ಕೆ ತೆರಳಿದ ಬಳಿಕ ಕೊಲೆ ನಡೆದಿದೆ. ಮನೆ ಮುಂಭಾಗದ ಬಾಗಿಲು ಹಾಕಿದ್ದು, ಹಿಂಬಾಗಿಲು ಹಾಗೂ ಡೂಪ್ಲೆಕ್ಸ್ ಮಹಡಿಯ ಮೇಲಿನ ಬಾಗಿಲು ತೆರೆದಿರುವುದು ಸಂಶಯಕ್ಕೆ ಎಡೆ ಮಾಡಿದೆ. ಮತ್ತೊಂದು ಅಂಶವೆಂದರೆ ಶಾರದಾ ಅವರ ಮೈಮೇಲಿದ್ದ ಚಿನ್ನದ ಸರ, ಕೈನಲ್ಲಿದ್ದ ಚಿನ್ನದ ಬಳೆಗಳು ಕಳುವಾಗಿದ್ದು, ಉಳಿದಂತೆ ಮನೆಯಲ್ಲಿದ್ದ ಇತರೆ ಚಿನ್ನಾಭರಣವಾಗಲೀ, ನಗದಾಗಲೀ ಕಳವು ಆಗಿಲ್ಲ.
ಮನೆಯೊಳಗೆ ಬಂದಿರುವ ಪರಿಚಿತ ವ್ಯಕ್ತಿಯಿಂದಲೇ ಕೊಲೆಯಾಗಿರಬಹುದು, ನಂತರ ಹಿಂಬಾಗಿಲಿನಿಂದ ಪರಾರಿಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಶ್ವಾನದಳ, ಬೆರಳಚ್ಚು ತಜ್ಞರ ಭೇಟಿ:
ಘಟನಾ ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಗಾರನ ಮಾಹಿತಿ ಸಂಗ್ರಹಿಸಿದ್ದಾರೆ.
4 ವರ್ಷಗಳ ಹಿಂದೆಯಷ್ಟೇ ಕಾವೇರಿ ಬಡಾವಣೆಯಲ್ಲಿ ಮನೆ ನಿರ್ಮಿಸಿಕೊಂಡು ಪತಿ, ಪತ್ನಿ ವಾಸವಿದ್ದರು. 2 ವರ್ಷಗಳ ಹಿಂದೆ ಮನೆಯಲ್ಲಿದ್ದ ಯಾರೂ ಇಲ್ಲದ ವೇಳೆ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದ ದುಷ್ಕರ್ಮಿಗಳು ಮನೆಯಲ್ಲಿದ್ದ ಬೆಲೆ ಬಾಳುವ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದರು ಎನ್ನಲಾಗಿದೆ.
ಮಗಳು ಚಂದ್ರಿಕಾ ಚಾರ್ಟೆಡ್ ಅಕೌಂಟ್ (ಸಿಎ) ಅಧ್ಯಯನ ಮಾಡುತ್ತಿದ್ದು, ಇತ್ತೀಚೆಗಷ್ಟೇ ವಿವಾಹ ನಿಶ್ಚಯವಾಗಿತ್ತು. ವಿವಾಹವಾಗಬೇಕಿದ್ದ ಭಾವಿ ಪತಿಯೊಂದಿಗೆ ಬರುತ್ತಿರುವುದಾಗಿ ತನ್ನ ಅಮ್ಮನಿಗೆ ಮೊಬೈಲ್‌ನಲ್ಲಿ ಕರೆ ಮಾಡಿ ತಿಳಿಸಿದ್ದ ಚಂದ್ರಿಕಾ ಬರುವ ದಾರಿಯಲ್ಲಿ ಮತ್ತೆ ಮೊಬೈಲ್‌ಗೆ ಕರೆ ಮಾಡಿದ್ದು, ಅದನ್ನು ತಾಯಿ ಸ್ವೀಕರಿಸಿರಲಿಲ್ಲ. ನಂತರ ಮನೆಗೆ ಬಾಗಿಲು ಬಡಿದರೂ ಪ್ರತಿಕ್ರಿಯೆ ಬಾರದಿದ್ದಾಗ ನೆರೆಯವರೊಂದಿಗೆ ಮನೆಯೊಳಗೆ ಹೋಗಿ ನೋಡಿದಾಗ ಮನೆಯ ಬೆಡ್ ರೂಮಿನಲ್ಲಿ ತಾಯಿ ಕೊಲೆಯಾಗಿರುವುದು ಗೊತ್ತಾಗಿದೆ.