ವೋಲ್ವೋ ಕಾರಿನ ಮೇಲೆ ಕಂಟೇನರ್ ಮಗುಚಿದ ಪ್ರಕರಣ: ಕಾರಿನಲ್ಲಿ ಜಾಗ ಸಿಗದೆ ಬಚಾವ್ ಆದ ವೀಣಾ
ತುಮಕೂರು-ಬೆಂಗಳೂರು ಹೆದ್ದಾರಿಯ ನೆಲಮಂಗಲದಲ್ಲಿ ನಡೆದ ಭೀಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಉದ್ಯಮಿ ಚಂದ್ರಮ್ ಯೇಗಪ್ಪಗೋಳ ಅವರ ಸಂಬಂಧಿ ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ತುಮಕೂರು-ಬೆಂಗಳೂರು ಹೆದ್ದಾರಿಯ ನೆಲಮಂಗಲದಲ್ಲಿ ನಡೆದ ಭೀಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಉದ್ಯಮಿ ಚಂದ್ರಮ್ ಯೇಗಪ್ಪಗೋಳ ಅವರ ಸಂಬಂಧಿ ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಚಂದ್ರಮ್ ಯೇಗಪ್ಪಗೋಳ ಅವರು ನನ್ನ ದೊಡ್ಡಪ್ಪನ ಮಗ ಅವರು, ನನಗೂ ಬಾ ಅಂತ ಕರೆದಿದ್ದರು. ಆದರೆ ಕಾರಿನಲ್ಲಿ ಜಾಗ ಇರಲಿಲ್ಲ, ಇವತ್ತು ಬೆಳಗ್ಗೆ ಫೋನ್ ಮಾಡಿದಾಗ ನಾವೂ ತುಮಕೂರು ದಾಟಿ ಹೋಗ್ತಿದ್ದೀವಿ ಅಂದಿದ್ದರು. ಹಾಗಾಗಿ ನಾನು ಸಂಜೆ ಬಸ್‌ಗೆ ಹೋಗ್ತೀನಿ ಅಂತ ಇದ್ದೆ, ಆದರೆ ಹೀಗೆ ಆಗಿದೆ. ಅವರು ಕ್ರಿಸ್ಮಸ್ ರಜೆ ಅಂತ ಊರಿಗೆ ಹೋಗ್ತಾ ಇದ್ದರೂ, ವಿಜಯಪುರದವರಾದ ಇವರು ಕಳೆದ 20 ವರ್ಷದಿಂದ ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರಿನಲ್ಲಿ ಒಂದು ಕಂಪನಿಯಿದೆ, ಹಾಗೂ ಪುಣೆಯಲ್ಲಿ ಹೊಸದಾಗಿ ಶುರು ಮಾಡಿದ್ರು. ಮೃತರು ನನ್ನ ಅಣ್ಣ ಹಾಗೂ ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳು ಎಂದು ಅವರು ಮಾಹಿತಿ ನೀಡಿದ್ದಾರೆ.
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರು ತುಮಕೂರು ಎನ್ ಎಚ್ 48ರ ತಿಪ್ಪಗೊಂಡನಹಳ್ಳಿ ಬಳಿ ಈ ಅಪಘಾತ ಸಂಭವಿಸಿದೆ. ಬೆಂಗಳೂರು ಕಡೆಯಿಂದ ತುಮಕೂರು ಕಡೆಗೆ ಈಚರ್ ಕ್ಯಾಂಟರ್ ಹೋಗುತ್ತಿತ್ತು. ಇದೇ ಕ್ಯಾಂಟರ್‌ನ ಹಿಂದೆ ಚಂದ್ರಮ್ ಅವರ ವೋಲ್ವೋ ಕಾರು ಹೋಗುತ್ತಿತ್ತು. ಇನ್ನು ಪಕ್ಕದ ರಸ್ತೆಯಲ್ಲಿ ಬೆಂಗಳೂರು ಕಡೆಗೆ ಕಂಟೈನರ್ ಲಾರಿಯೊಂದು ವೇಗವಾಗಿ ಹೋಗುತ್ತಿತ್ತು. ನಿಯಂತ್ರಣ ತಪ್ಪಿದ ಕಂಟೇನರ್ ಚಾಲಕ ರಸ್ತೆಯ ಮಧ್ಯದ ಡಿವೈಡರ್ ಮೇಲೆ ಗಾಡಿ ಹತ್ತಿಸಿದ್ದಾರೆ. ಪಕ್ಕದ ರಸ್ತೆಗೆ ಇಳಿದ ಕಂಟೇನರ್ ತುಮಕೂರು ಕಡೆ ಹೋಗ್ತಿದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದೆ. ಕ್ಯಾಂಟರ್‌ಗೆ ಢಿಕ್ಕಿಯಾದ ಕಂಟೇನರ್, ಅದರ ಹಿಂದೆಯೇ ಬರುತ್ತಿದ್ದ ವೋಲ್ವೋ ಕಾರ್‌ನ ಮೇಲೆ ಏಕಾಏಕಿ ಬಿದ್ದಿದೆ. ಕಂಟೇನರ್ ಬಿದ್ದ ಪರಿಣಾಮಕ್ಕೆ ಇಡೀ ವೋಲ್ವೋ ಕಾರ್ ಅಪ್ಪಚ್ಚಿಯಾಗಿದೆ. ಆಗ ಕಾರಿನಲ್ಲಿದ್ದ 6 ಜನ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಲಾರಿ ಹಾಗೂ ಕ್ಯಾಂಟರ್ ಚಾಲಕ ಇಬ್ಬರಿಗೂ ಸಣ್ಣಪುಟ್ಟ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಲ್ಲಿ ಐಎಎಸ್‌ಟಿ ಕಂಪನಿಯ ಮಾಲೀಕ 48 ವರ್ಷದ ಚಂದ್ರಮ್ ಯೇಗಪ್ಪಗೋಳ, 42 ವರ್ಷದ ಗೌರಾಬಾಯಿ, 12 ವರ್ಷದ ದೀಕ್ಷಾ, 16 ವರ್ಷದ ಗ್ಯಾನ್, ಹಾಗೂ ಯೇಗಪ್ಪಗೋಳ ಅವರ ಸಹೋದರಿ 36 ವರ್ಷದ ವಿಜಯಲಕ್ಷ್ಮೀ ಹಾಗೂ ಅವರ ಆರು ವರ್ಷದ ಮಗ ಆರ್ಯ ಸಾವು ಕಂಡಿದ್ದಾರೆ. ಚಂದ್ರಮ್ ಯೇಗಪ್ಪಗೋಳ ಅವರು ಆಟೋ ಮೊಬೈಲ್ ಇಂಡಸ್ಟ್ರಿ ಗೆ ಸಾಫ್ಟ್‌ವೇರ್ ಪ್ರೊಗ್ರಾಮಿಂಗ್ ಮಾಡಿಕೊಡ್ತಿದ್ದ IAST ಕಂಪನಿಯ ಮಾಲೀಕರಾಗಿದ್ದರು. ಹೊಸ ಆಫೀಸ್ ಓಪನ್ ಮಾಡಲು ನಿರ್ಧರಿಸಿದ್ದ ಚಂದ್ರಮ್ ಇದರ ನಿಟ್ಟಿನಲ್ಲಿಯೇ ಓಡಾಟ ನಡೆಸುತ್ತಿದ್ದರು. ಹೊಸ ಆಫೀಸ್ ಕೆಲಸವು ಕೂಡ ನಡೆಯುತ್ತಿತ್ತು. ಶುಕ್ರವಾರ ರಾತ್ರಿ ಸಿಬ್ಬಂದಿಗಳ ಜೊತೆ ಮೀಟಿಂಗ್ ಮಾಡಿದ್ದ ಚಂದ್ರಮ್, ಕೆಲ ದಿನಗಳು ಬರೋದಿಲ್ಲ ಎಂದು ಹೇಳಿ ಹೋಗಿದ್ದರು. ಆದರೆ, ಈಗ ಬಾರದ ಲೋಕಕ್ಕೆ ಹೋಗಿದ್ದಾರೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಕಂಪನಿಯ ಪ್ರಧಾನ ಕಚೇರಿಯಿದ್ದು, 200 ಮಂದಿ ಕೆಲಸ ಮಾಡುತ್ತಿದ್ದಾರೆ. ಯುರೋಪ್, ಚೀನಾ ಸೇರಿದಂತೆ ವಿವಿಧ ದೇಶಗಳ ಕ್ಲೈಂಟ್ಸ್‌ಗಳಿಗೆ ಸೇವೆ ನೀಡುತ್ತಿದ್ದರು.