ಹೊಸಕೋಟೆ [ನ.05]:  30 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಎಂಟಿಬಿ ನಾಗರಾಜ್‌, ಸಮ್ಮಿಶ್ರ ಸರ್ಕಾರದಲ್ಲಿ ಕ್ಷೇತ್ರಕ್ಕೆ ಬೇಕಾದ ಯೋಜನೆಗಳನ್ನು ಮಾಡಿಸಲು ಸಾಧ್ಯವಾಗದೆ ಆ ಪಕ್ಷದ ಎಲ್ಲ ಮುಖಂಡರಿಗೂ ಮೂರು ಮೂರು ಸಾರಿ ಹೇಳಿ ರಾಜಿನಾಮೆ ಕೊಟ್ಟು ಬಂದೆ.

ನನ್ನ ರಾಜಕೀಯ ಜೀವನದಲ್ಲಿ ಹಣಕ್ಕೆ ಆಸೆ ಪಟ್ಟವನಲ್ಲ. ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೀನಿ. ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಪ್ರಸ್ತಾವನೆ ಇಟ್ಟತಕ್ಷಣ 40 ಕೋಟಿ ರು. ಬಿಡುಗಡೆ ಮಾಡಿದ್ದಾರೆ. ಕೆ.ಸಿ. ವ್ಯಾಲಿ, ಎಚ್‌.ಎನ್‌. ವ್ಯಾಲಿ ಯೋಜನೆಯಲ್ಲಿ ಇನ್ನಷ್ಟುಕೆರೆಗಳು ತುಂಬಿಸಬೇಕಿದೆ. ಇನ್ನೂ 20 ಎಂಎಲ್‌ಡಿ ನೀರು ಸರಭರಾಜಿಗೆ ಅನುಮತಿ ಕೊಡಬೇಕು.

65 ಕೋಟಿ ರು. ವೆಚ್ಚದಲ್ಲಿ ಹೊಸಕೋಟೆಗೆ ನಾಲ್ಕನೇ ಹಂತದ ಕಾವೇರಿ ನೀರು ಕೊಡಬೇಕು. ಮಲ್ಲಸಂದ್ರ ರೈಲ್ವೇ ಕ್ರಾಸಿಂಗ್‌ ಬಳಿ ಬಿಡ್ಜ್‌ ನಿರ್ಮಾಣ ಹಾಗೂ ಕಾಡುಗೋಡಿಯಿಂದ ಹೊಸಕೋಟೆಗೆ ಮೆಟ್ರೋ ರೈಲು ತರುವ ಯೋಜನೆಗೆ ಕೇಂದ್ರದ ಒಪ್ಪಿಗೆ ಕೊಡಿಸಬೇಕು.

ಎಲ್ಲಿಗಾದ್ರೂ ಹೋಗ್ತೀವಿ, ಕೇಳೋಕೆ ಕಾಂಗ್ರೆಸ್‌ಗೇನು ಹಕ್ಕು?: ಅನರ್ಹ ಶಾಸಕ...

ಕುರುಬರಹಳ್ಳಿ ಬಳಿ 8 ಎಕರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ 2 ಸಾವಿರ ಮನೆಗಳ ನಿರ್ಮಾಣ ಪ್ರಸ್ತಾವನೆಗೆ ಅನುಮೋದನೆ ಕೊಡಬೇಕು ಎಂದು ಬೇಡಿಕೆ ಸಲ್ಲಿಸಿದರು.

ಕಾವೇರಿಗಾಗಿ ಪ್ರತಿಭಟನೆ:

ವೇದಿಕೆಯಲ್ಲಿ ಯಡಿಯೂರಪ್ಪ ಬಾಷಣ ಮಾಡುತ್ತಿರುವಾಗ ವೇದಿಕೆಯ ಹೊರಭಾಗದಲ್ಲಿ ಕಾವೇರಿ ನೀರು ಹೊಸಕೋಟೆಗೆ ಬೇಕು ಎಂದು ಕೆಲವರು ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಸಿಎಂ ಕಾರ್ಯಕ್ರಮ ಮುಗಿಸಿ ಹೊರಡುವಾಗಲೂ ಭಿತ್ತಿಪತ್ರಗಳನ್ನು ಹಿಡಿದು ಜನರು ಕಾವೇರಿ ನೀರು ಕೊಡಿ ಎಂದು ಕೂಗಿದರು.

ಸಂಸದ ಬಿ.ಎನ್‌.ಬಚ್ಚೇಗೌಡ ಗೈರು:

ಬಿಜೆಪಿಯನ್ನು ಕ್ಷೇತ್ರದಲ್ಲಿ ಕಟ್ಟಿಬೆಳೆಸಿದ ಶರತ್‌ ಬಚ್ಚೇಗೌಡರನ್ನು ಬಿಟ್ಟು ಎಂಟಿಬಿಗೆ ಬಿಜೆಪಿ ನಾಯಕರು ಮಣೆಹಾಕುತ್ತಿರುವುದರಿಂದ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅಸಮಧಾನ ವ್ಯಕ್ತವಾಗುತ್ತಿರುವ ಬೆನ್ನಲೇ ನಡೆದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರ ಸಂಸದ ಬಿ.ಎನ್‌. ಬಚ್ಚೇಗೌಡರ ಗೈರು ಎದ್ದುಕಾಣುತ್ತಿತ್ತು.

ಮಾಧ್ಯಮದವರ ಬಹಿಷ್ಕಾರ

ವೇದಿಕೆಯ ಮುಂಭಾಗದಲ್ಲಿ ಮಾಧ್ಯಮದವರು ಕ್ಯಾಮೆರಾಗಳನ್ನು ಅಧಿಕಾರಿಗಳು ತೆಗೆಯಿಸಲು ಮುಂದಾದಗ, ಈ ಅನುಚಿತ ವರ್ತನೆ ಖಂಡಿಸಿ ಪ್ರಶ್ನಿಸಿದರು. ಈ ವೇಳೆ ಮುಖಂಡರು ಕ್ಯಾಮೆರಾಮ್ಯಾನ್‌ಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಆರೋಪಿಸಿ ದೃಶ್ಯ ಮಾಧ್ಯಮದವರು ಕಾರ್ಯಕ್ರಮ ಬಹಿಷ್ಕರಿಸಿ ಹೊರ ನಡೆದರು. ಜಿಲ್ಲಾಧಿಕಾರಿ ರವೀಂದ್ರ, ಮುಖಂಡರಾದ ಚಿ.ನಾ. ರಾಮು, ಜಯರಾಜ್‌ ಸೇರಿದಂತೆ ಆನೇಕ ಮುಖಂಡರು ಕಾರ್ಯಕರ್ತರು ಹಾಜರಿದ್ದರು