Asianet Suvarna News Asianet Suvarna News

ಬೆಳಗಾವಿ: ಕಿತ್ತೂರು ಉತ್ಸವದಲ್ಲಿ ಮೆರಗು ತಂದ ಮಹಿಳೆಯರು

ಉತ್ಸವಕ್ಕೆ ಉತ್ಸಾಹ, ಮೆರಗು ತಂದ ಮಹಿಳೆಯರು| ವಿಚಾರ ಸಂಕಿರಣ, ಕವಿಗೋಷ್ಠಿಯಲ್ಲಿ ಉತ್ತಮ ಅಂಶಗಳನ್ನೇ ಮನದಟ್ಟು ಮಾಡಿದ ಮಹಿಳೆಯರು| ಆಟೋಟಗಳಲ್ಲಿ ಸಂತೋಷದಿಂದ ಪಾಲ್ಗೊಂಡ ಗೃಹಿಣಿಯರು|

Woman's Participate in Channammana Utsava in Kittur
Author
Bengaluru, First Published Oct 26, 2019, 9:04 AM IST

ಸೋಮಶೇಖರ ಕುಪ್ಪಸಗೌಡ್ರ 

ಚನ್ನಮ್ಮನ ಕಿತ್ತೂರು(ಅ.26): ಸೂರ್ಯ ಮುಳುಗದ ಸಾಮಾಜ್ರ್ಯವೆಂದು ಬೀಗುತ್ತಿದ್ದ ಬ್ರಿಟಿಷರಿಗೆ ವೀರಮಾತೆ ಚನ್ನಮ್ಮಾಜೀ ಸೋಲಿನ ರುಚಿ ಉಣಿಸಿದ್ದು ಇತಿಹಾಸ. ಈಗ ಚನ್ನಮ್ಮನ ಉತ್ಸವದಲ್ಲಿಯ ಎಲ್ಲ ರಂಗದಲ್ಲಿ ವಿಶೇಷವಾಗಿ ಕವಿಗೋಷ್ಠಿ ಹಾಗೂ ವಿಚಾರ ಸಂಕಿರಣದಲ್ಲಿ ಮಹತ್ವದ ವಿಷಯಗಳನ್ನು ಮಹಿಳೆಯರು ಗಮನ ಸೆಳೆಯುವ ಮೂಲಕ ಉತ್ಸವಕ್ಕೆ ತುಸು ಉತ್ಸಾಹವನ್ನೇ ತಂದುಕೊಟ್ಟಿದ್ದಾರೆ.
ಬೈಲಹೊಂಗಲದ ಚನ್ನಮ್ಮಾಜೀ ಸ್ಥಳದಿಂದ ಹೊರಡುವ ವಿಜಯಜ್ಯೋತಿ ಬೀಳ್ಕೊಡುವುದರಿಂದ ಆರಂಭವಾದ ಮಹಿಳೆಯರ ಕಾರ್ಯವು ಉತ್ಸವದ ಎಲ್ಲ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಮಹಿಳೆಯರ ಶಕ್ತಿ ಸಾಬೀತು ಮಾಡಿತು.

ಮಹಿಳಾ ಗಣ್ಯರ ಸಿಂಹಪಾಲು:

ಜನಪದ ಕಲಾವಾಹಿನಿ ಉದ್ಘಾಟನೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸಿದರೆ, ಜೊತೆಗೆ ಜಿಪಂ ಅಧ್ಯಕ್ಷೆ ಆಶಾ ಐಹೊಳೆಯೂ ಉಪಸ್ಥಿತರಿದ್ದರು. ಗೌರವನ್ವಿತ ಅಥಿಗಳಾಗಿ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಶಾಸಕಿ ಅಂಜಲಿ ನಿಂಬಾಳಕರ ಮತ್ತು ಲಕ್ಷ್ಮೀ ಹೆಬ್ಬಾಳಕರ ಭಾಗವಹಿಸಬೇಕಾಗಿತ್ತಾದರೂ ಕಾರಣಾಂತರಗಳಿಂದ ಉದ್ಘಾಟನೆಯಲ್ಲಿ ಹಾಜರಿರಲಿಲ್ಲ. ಇನ್ನು ತಾಪಂ ಅಧ್ಯಕ್ಷೆ ನೀಲವ್ವ ಫಕೀರಣ್ಣವರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಉದ್ಘಾಟನೆ ವೇಳೆ ಭಾಗವಹಿಸಿ ವೇದಿಕೆ ಗೌರವ ಹೆಚ್ಚಿಸಿದರು.

ಅರ್ಥಪೂರ್ಣ ವಿಚಾರ ಸಂಕಿರಣ:

ಈ ಬಾರಿ ಉತ್ಸವದಲ್ಲಿ ಅರ್ಥಪೂರ್ಣವಾದ ವಿಚಾರ ಸಂಕಿರಣಗಳು ನಡೆದವು. ಈ ಪೈಕಿ ಧಾರವಾಡದ ಪತ್ರಾಗಾರ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಅವರ ವೀರಮಾತೆ ಚನ್ನಮ್ಮಾಜಿಗೆ ಸಂಬಂಧಪಟ್ಟದಾಖಲೆಗಳು ಚದುರಿ ಹೋಗಿದ್ದು, ಅವುಗಳನ್ನು ಒಂದೆಡೆ ಕ್ರೋಡೀಕರಿಸುವ ಕಾರ್ಯವಾಗಬೇಕು ಎಂಬ ಹಕ್ಕೋತ್ತಾಯ ಸಮಯೋಚಿತವಾಗಿತ್ತು. ಪ್ರಕೃತಿ ವಿಕೋಪಕ್ಕೊಳಗಾದ ಜನರ ಪರಿಸ್ಥಿತಿಯನ್ನು ಅರಿತು 2005 ರಲ್ಲಿ ವಿಕೋಪ ತಜ್ಞರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಮನವರಿಕೆ ಮಾಡಿದ ಪರಿಣಾಮ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸರ್ಕಾರ ವಿಕೋಪ ನಿರ್ವಹಣಾ ಪ್ರಾಧಿಕಾರವನ್ನು ಹುಟ್ಟುಹಾಕಿತು. ಅದರ ಉಪಯೋಗವಾಗಬೇಕು ಎಂಬ ಬೈಲಹೊಂಗಲದ ಪತ್ರಿ ಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಅವರ ವಾದ ಕೂಡ ಮೆಚ್ಚುಗೆಗೆ ಪಾತ್ರವಾಯಿತು.

ಗಮನ ಸೆಳೆದ ಮಹಿಳೆಯರ ಕಲಾ ತಂಡ:

ಬೆಳಗಾವಿಯ ಯಮನವ್ವ ಮಾದರ ಹಾಗೂ ರಾಮದುರ್ಗದ ಶಂಕರವ್ವ ಮುಗಳಿ, ಶಿವಮೊಗ್ಗ ಜಿಲ್ಲೆಯ ಮಹೇಶ್ವರಿ ಕಣಕಲಾ ಮಹಿಳಾ ಡೊಳ್ಳು, ಗೊರವನಕೊಳ್ಳ ಗಂಗವ್ವ ಮಾದರ ಅವರ ಕೋಲಾಟ, ಸವಿತಾ ಚಿರುಕನಯ್ಯ ಅವರ ಪೂಜಾ ಕುಣಿತ, ರಾಮದುರ್ಗದ ರೇಣುಕಾ ಲಮಾಣಿಯವರ ಲಂಬಾಣಿ ನೃತ್ಯ, ಹುಕ್ಕೇರಿಯ ಶೈಲಾ ಕೈತಾಳರ ವೀರಗಾಸೆ, ಚಿಕ್ಕಮಗಳೂರಿನ ಮೋನಿಕಾ ಕಣಾಕಲಾ ಅವರ ಗೊಂಬೆ ಬಳಗ, ಮೆರವಣಿಗೆಯುದ್ದಕ್ಕೂ ನೋಡುಗರ ಗಮನ ಸೆಳೆದು ಮಹಿಳೆಯರ ಉಪಸ್ಥಿಯನ್ನು ಪ್ರದರ್ಶಿಸಿದವು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಿಂಚು:

ಐತಿಹಾಸಿಕ ಉತ್ಸವದ ಉದ್ಘಾಟನೆಯ ದಿನದಂದು ಧಾರವಾಡದ ಜ್ಯೋತಿ ಗಲಗಲಿಯವರ ಭರತನಾಟ್ಯ, ಬಾಗಲಕೋಟೆಯ ಮಂಜುಳಾ ಸಂಬಾಳಮಠರ ವಚನ ಗಾಯನ, ಬೆಂಗಳೂರಿನ ಚೇತನಾ ತಂಡದವರಿಂದ ಕಥಕ್‌ ನೃತ್ಯ ರೂಪಕ, ಮೈಸೂರಿನ ಸುಮಾ ರಾಜಕುಮಾರ ಅವರ ಮತನಾಡುವ ಗೊಂಬೆ, ನೋಡುಗರ ಗಮನ ಸೆಳೆದವು. ಅಲ್ಲದೆ ರಸಮಂಜರಿ ಕಾರ್ಯಕ್ರಮದಲ್ಲಿ ಸರಿಗಮಪ ಕಾರ್ಯಕ್ರಮದ ಸಾಕ್ಷಿ ಕಲ್ಲೂರ, ಗಾಯಕಿ ಸುಹಾನಾ ಸೈಯದ್‌, ನಯನಾ, ಅವರ ರಸಮಂಜರಿ ಕಾರ್ಯಕ್ರವೂ ನೋಡುಗರಿಗೆ ರಸದೌತಣ ನೀಡಿತು.

ಅಲ್ಲದೇ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳವಡಿಯ ಸ್ವಾತಿ ಕಿಡದಾಳರ ಕ್ರಾಂತಿ ಗೀತೆಗಳು, ಬೆಳಗಾವಿಯ ನೈನಾ ಗಿರಿಗೌಡರ ನೀಡಿದ ಭಾವಗೀತೆಗಳು, ಗೋಕಾಕದ ಮರೆವ್ವ ಮುತ್ತೆಪ್ಪಗೋಳರ ಡೊಳ್ಳಿನ ಪದಗಳು, ಧಾರವಾಡದ ವಿಧೂಸಿ ಸುಜಾತ ಗುರುವ ಅವರ ಸುಗಮ ಸಂಗೀತ, ಬೆಂಗಳೂರಿನ ಅಶ್ವಿನಿ ಸುರೇಶ ತಂಡದ ಸಮೂಹ ನೃತ್ಯ, ಮಂಗಳೂರಿನ ದಿವ್ಯಾ ರಾಮಚಂದ್ರನರ ರಸಮಂಜರಿ ಕಾರ್ಯಕ್ರಮ ನೋಡುಗರ ಗಮನ ಸೆಳೆದವು.

ಉತ್ಸವದ ಜಂಜಾಟದಲ್ಲಿಯೂ ಜಿಲ್ಲಾಡಳಿತ ಮಹಿಳೆಯರಿಗೆ ತೆರೆಮರೆಯಲ್ಲಿ ನಡೆಸುವ ಆಟೋಟಗಳಿಗೆ ಸ್ಫೂರ್ತಿ ತುಂಬುವ ಕಾರ್ಯ ಮಾಡುತ್ತಿದೆ. ಕಾರಣ ಗೃಹಿಣಿಯರು ಸಂತೋಷದಿಂದ ಆಟೋಟಗಳಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ ಶಾಸಕ ಮಹಾಂತೇಶ ದೊಡಗೌಡರ ಧರ್ಮಪತ್ನಿ ಮಂಜುಳಾ ದೊಡಗೌಡರ ಈ ಬಾರಿಯ ಆಟೋಟದಲ್ಲಿ ಪಾಲ್ಗೊಂಡಿದ್ದು ನಮ್ಮೆಲ್ಲರಿಗೂ ಸಂತೋಷ ಇನ್ನಷ್ಟುಇಮ್ಮಡಿ ಗೊಳಿಸಿದೆ ಎಂದು ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಉಮಾದೇವಿ ಬಿಕ್ಕಣ್ಣವರ ಅವರು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

Follow Us:
Download App:
  • android
  • ios