ಬೆಳಗಾವಿ(ಅ.10): ರಾಜ್ಯದಲ್ಲಿ ಯಡಿಯೂರಪ್ಪ ಅವರಷ್ಟು ಸ್ಟ್ರಾಂಗ್‌(ಪ್ರಬಲ) ನಾಯಕರು ಬೇರಾರೂ ಇಲ್ಲ. ಅವರೇ ನಮ್ಮ ನಾಯಕರು, ನಮ್ಮ ಮುಖ್ಯಮಂತ್ರಿಗಳು,ಅವರ ವಿರುದ್ಧ ಯಾರೂ ಷಡ್ಯಂತ್ರ ಮಾಡಿಲ್ಲ ಎಂದು ಕೇಂದ್ರ ಸಚಿವ ಸುರೇಶ್‌ ಅಂಗಡಿ ಎಂದು ಸ್ಪಷ್ಟಪಡಿಸಿದ್ದಾರೆ. 

ನಗರದಲ್ಲಿ ಬುಧವಾರ ಮಾತನಾಡಿದ ಅವರು, ರಾಜ್ಯದಲ್ಲಿ ನಾನು, ಪ್ರಹ್ಲಾದ ಜೋಶಿ, ಸದಾನಂದ ಗೌಡರು ಮತ್ತು ನಿರ್ಮಲಾ ಸೀತಾರಾಮನ್‌ ಸೇರಿದಂತೆ ನಾಲ್ವರು ಕೇಂದ್ರ ಸಚಿವರಿದ್ದೇವೆ. ನಾವು ಯಾರೂ ಯಡಿಯೂರಪ್ಪ ಅವರ ವಿರುದ್ಧ ಷಡ್ಯಂತ್ರ ಮಾಡಿಲ್ಲ. ಯಾರು ಷಡ್ಯಂತ್ರ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ. 

ಯತ್ನಾಳ್‌ ಅವರನ್ನೇ ಕೇಳಿ: 

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಹಿರಿಯ ನಾಯಕರು. ವಾಜಪೇಯಿ ಅವರ ಕಾಲದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದವರು. ಅವರು ಯಾಕೆ ಈ ರೀತಿ ಹೇಳಿಕೆ ನೀಡಿದ್ದಾರೊ ಗೊತ್ತಿಲ್ಲ. ಯತ್ನಾಳ ಅವರ ಹೇಳಿಕೆ ಬಗ್ಗೆ ಅವರನ್ನೇ ನೀವು ಕೇಳಿ. ಅವರೇ ನಿಮಗೆ ಸರಿಯಾದ ಉತ್ತರ ಕೊಡುತ್ತಾರೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರವಾಹ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನ್ಯಾಯ ಮಾಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಅಂಗಡಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿಲ್ಲ. ಈಗಾಗಲೇ 1200 ಕೋಟಿ ಪರಿಹಾರ ನೀಡಿದೆ. ಬಿಜೆಪಿ ಶಿಸ್ತಿನ ಪಕ್ಷ. ಯಾವುದೇ ರೀತಿಯ ಗೊಂದಲ ನಮ್ಮಲ್ಲಿ ಇಲ್ಲ. ಎಲ್ಲ ಊಹಾಪೋಹಗಳು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದ್ದಾರೆ.